ವಾತಾಪಿ ಜೀರ್ಣೋಭವ : ಅಗಸ್ತ್ಯ ಋಷಿಗಳು ವಾತಾಪಿಯನ್ನು ತಿಂದು ಜೀರ್ಣಿಸಿಕೊಂಡ ಕಥೆ!

ಮಿತಿಮೀರಿ ಊಟ ಮಾಡಿದಾಗ, ಭೂರೀ ಭೋಜನ ನಡೆಸಿದಾಗ ಕೆಲವರು ಹೊಟ್ಟೆ ಸವರಿಕೊಳ್ಳುತ್ತಾ ‘ವಾತಾಪಿ ಜೀರ್ಣೋಭವ’ ಎನ್ನುವುದುಂಟು. ಏನು ತಿಂದರೂ ಜೀರ್ಣವಾಗುತ್ತದೆ ಅನ್ನುವ ಆಶಯ ವ್ಯಕ್ತಪಡಿಸಲೂ ಇದನ್ನೊಂದು ನುಡಿಗಟ್ಟಾಗಿ ಬಳಸುವುದುಂಟು. ಇದಕ್ಕೆ ಹಿನ್ನೆಲೆಯಾಗಿ ಒಂದು ಸ್ವಾರಸ್ಯಕರ ಕಥೆಯಿದೆ. ಅದೇನು ಗೊತ್ತೇ?


ಅಸುರ ಸಹೋದರರಾದ ಇಲ್ವಲ, ವಾತಾಪಿಯರಿಗೆ ಅಗಸ್ತ್ಯ ಋಷಿಗಳ ಮೇಲೆ ವಿಪರೀತ ಕೋಪ. ಅಸುರರ ಅಟ್ಟಹಾಸಕ್ಕೆ ಅಗಸ್ತ್ಯರು ದೊಡ್ಡ ತಡೆಯಾಗಿ ನಿಂತಿದ್ದರು. ಏನಾದರೂ ಮಾಡಿ ಅವರನ್ನು ಮಟ್ಟಹಾಕಬೇಕೆಂದು ಈ ಸಹೋದರರು ಯೋಚಿಸುತ್ತಿದ್ದರು.
ಮಾಯಾವಿಗಳಾಗಿದ್ದ ಆ ಸಹೋದರರು ಸುತ್ತಮುತ್ತಲಿನ ಬಹುತೇಕ ಋಷಿಗಳನ್ನು ಮೋಸದಿಂದ ಕೊಂದುಹಾಕಿದ್ದರು. ವಾತಾಪಿ ಹೋತದ ರೂಪ ಧರಿಸುವುದು, ಇಲ್ವಲ ಅದನ್ನು ಕೊಂದು ಅಡುಗೆ ಮಾಡುವುದು; ಅತಿ ವಿನಯದಿಂದ ಋಷಿಗಳ ಬಳಿ ತೆರಳಿ ‘ನಮ್ಮ ಮನೆಗೆ ಭೋಜನಕ್ಕೆ ದಯಮಾಡಿಸಬೇಕು. ನಮ್ಮನ್ನು ಧನ್ಯರನ್ನಾಗಿ ಮಾಡಬೇಕು,’ ಎಂದು ಆಹ್ವಾನಿಸುವುದು; ಋಷಿಗಳಿಗೆ ಹೋತದ ಅಡುಗೆಯನ್ನು ಉಣಬಡಿಸುವುದು; ಅನಂತರ ಇಲ್ವಲ “ವಾತಾಪಿ ಹೊರಗೆ ಬಾ” ಅನ್ನುವುದು; ವಾತಾಪಿ ಊಟ ಮಾಡಿದ ಋಷಿಯ ಹೊಟ್ಟೆ ಬಗೆದು ಹೊರಬರುವುದು – ಅವರಿಗೆ ಇದೊಂದು ಮೋಜಿನ ಆಟವಾಗಿಹೋಗಿತ್ತು.
ಇಲ್ವಲ – ವಾತಾಪಿಯರ ಉಪಟಳ ಅಗಸ್ತ್ಯರ ಕಿವಿಗೂ ಬಿತ್ತು. ಇವರಿಗೊಂದು ಪಾಠ ಕಲಿಸಲೇಬೇಕೆಂದು ನಿರ್ಧರಿಸಿ ಅವರು ಅಸುರ ಸಹೋದರರ ಬಳಿ ಹೋದರು. “ನೀವು ಅಪಾರ ಸಂಪತ್ತಿರುವವರು. ನನಗೆ ಒಳ್ಳೆಯ ಒಡವೆಗಳು ಬೇಕು. ನಿಮ್ಮಲ್ಲಿರುವ ಒಡವೆಗಳಲ್ಲಿ ಕೆಲವನ್ನು ಕೊಡಿ ಎಂದು ದಾನ ಕೇಳುವುದಕ್ಕೆ ಬಂದೆ” ಎಂದರು.
ಇಲ್ವಲ, ವಾತಾಪಿಯರಿಗೆ ತಾವು ಕಾಯುತ್ತಿದ್ದ ವ್ಯಕ್ತಿ ತಾನಾಗಿಯೇ ಬಂದಿರುವುದು ವಿಪರೀತ ಸಂತಸ ತಂದಿತು. ಅಗಸ್ತ್ಯರನ್ನು ಸತ್ಕರಿಸಿ, ನಿಮಗೇನು ಬೇಕೋ ಎಲ್ಲವನ್ನೂ ಕೊಡುತ್ತೇವೆ ಎಂದು ನಯವಾಗಿ ಮಾತನಾಡುತ್ತಾ ಭೋಜನಕ್ಕೆ ಆಹ್ವಾನಿಸಿದರು. ಅಗಸ್ತ್ಯರು ಒಪ್ಪಿದರು.
ಅಡುಗೆ ಸಿದ್ಧವಾಯಿತು. ಅಗಸ್ತ್ಯರು ಸಂತೋಷವಾಗಿ ಊಟ ಮುಗಿಸಿದರು. ಅನಂತರ ಇಲ್ವಲನನ್ನು ಕುರಿತು. “ಇಂತಹ ಭೋಜನವನ್ನು ನಾನು ಇದುವರೆಗೂ ಉಂಡಿರಲಿಲ್ಲ” ಎಂದು ಹೊಟ್ಟೆಯ ಮೇಲೆ ಕೈಯ್ಯಾಡಿಸುತ್ತಾ “ತೃಪ್ತಿಯಾಯಿತು, ವಾತಾಪಿ ಜೀರ್ಣೋಭವ” ಎಂದು ಒಂದು ಸಲ ತೇಗಿದರು.
ಅವರ ಮಾತು ಕೇಳಿ ಇಲ್ವಲನಿಗೆ ಆತಂಕವಾಯಿತು. ಗಾಬರಿಯಿಂದ “ವಾತಾಪಿ! ಹೊರಗೆ ಬಾ!!” ಎಂದು ವಾಡಿಕೆಯಂತೆ ತಮ್ಮನನ್ನು ಕರೆದನು. ತಮ್ಮನ ಸದ್ದೇ ಇಲ್ಲ! ಮತ್ತೊಮ್ಮೆ ಕರೆದ, ಮಗದೊಮ್ಮೆ ಕರೆದ… ಉಹುಂ, ಎಷ್ಟು ಕರೆದರೂ ಪ್ರಯೋಜನವಿಲ್ಲ! ಅಗಸ್ತ್ಯರ ಹೊಟ್ಟೆಯಲ್ಲಿ ವಾತಾಪಿ ಜೀರ್ಣವಾಗಿಹೋಗಿದ್ದ. ಅವನು ಹೊರಗೆ ಬರಲು ಹೇಗೆ ಸಾಧ್ಯ!?
ಇಲ್ವಲ ಕೋಪಗೊಂಡು ಅಗಸ್ತ್ಯರ ಮೇಲೆರಗಿದನು. ತಮ್ಮ ತಪೋಬಲದ ಹೂಂಕಾರ ಮಾತ್ರದಿಂದಲೇ ಅವರು ಅವನನ್ನು ಕೊಂದುಹಾಕಿದರು. ಹೀಗೆ ಲೋಕಕಂಟಕರಾಗಿದ್ದ ಅಣ್ಣ ತಮ್ಮಂದಿರನ್ನು ಶಿಕ್ಷಿಸಿ ಅಗಸ್ತ್ಯರು ಲೋಕವನ್ನು ರಕ್ಷಿಸಿದರು.

4 Comments

  1. ಅದು ಹೀಗೂ ಇರಬಹುದು. ವಾತಾಪಿ ಅನ್ನೋದು ವಾತ ಪಿತ್ಥ ಕಫ ಎಂಬ ತ್ರಿವಿಧ ಕೋಷ್ಠಕದ ಮೊದಲ ಶಬ್ದ ವಾತ ಅಂದರೆ ಗಾಳಿಯ ಕುರಿತು. ವಾತವೂ ಜೀರ್ಣವಾಗಲಿ ಅಂದರೆ ಅಪಾನ ಆಗದ ಹಾಗೆ ಜೀರ್ಣವಾಗು ಎಂದೂ ಹೇಳಿರಬಹುದು. ಇನ್ನು ಋಷಿಗಳು ಮಾಂಸ ತಿನ್ನುತ್ತಿದ್ದರೆ ಎನ್ನುವುದು ಪ್ರಶ್ನೆ‌

    1. ಆಗಿನ ಕಾಲದಲ್ಲಿ ಯಜ್ಞಗಳಲ್ಲಿ ಪ್ರಾಣಿಬಲಿ ಸಾಮಾನ್ಯವಾಗಿತ್ತು. ಮಾಂಸಾಹಾರದ ವಿರುದ್ಧವಿರುವ ಹೇಳಿಕೆಗಳು ನಮ್ಮ ವೇದಪುರಾಣಗಳಲ್ಲಿ ವಿರುಳವೇ ಸರಿ. ಖುಷಿಗಳು ಖಂಡಿತವಾಗಿಯೂ ಮಾಂಸ ತಿನ್ನುತ್ತಿದ್ದರು.

Leave a Reply