ಬುದ್ಧ, ಬದುಕು ಮತ್ತು ಮರಳಿನ ಕೋಟೆ

ನಿಮ್ಮ ಎಲ್ಲ ಹೋರಾಟ, ಗಂಭೀರತೆ ಇಂಥ ಮರಳಿನ ಕೋಟೆಗಳ ಬಗ್ಗೆ. ಒಂದು ದಿನ ನೀವೇ ಇದನ್ನೆಲ್ಲ ಮುರಿದು ದೂರ ಹೋಗುತ್ತೀರಿ ಮತ್ತು ನೀವು ಹಿಂತಿರುಗಿ ನೋಡುವುದಿಲ್ಲ ಕೂಡ – ಅನ್ನುತ್ತಾರೆ ಓಶೋ | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

All your seriousness is about sandcastles. And you yourself will leave them one day, trampling them down, and you will not look back – OSHO.

ಝೆನ್, ಬದುಕನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಝೆನ್ ಗೆ ಬದುಕು ಎಂದು ಉತ್ಸವ, ಸಮುದ್ರದ ದಂಡೆಯಲ್ಲಿ ಮಕ್ಕಳು ಹಾಡುತ್ತ, ಕುಣಿಯುತ್ತ ಕಪ್ಪೆಚಿಪ್ಪುಗಳನ್ನ, ಬಣ್ಣ ಬಣ್ಣದ ಕಲ್ಲುಗಳನ್ನ ಸಂಗ್ರಹಿಸಿ ಮರಳಿನಲ್ಲಿ ಮನೆ ಕಟ್ಟುವಂತೆ. ನಮ್ಮ ಬದುಕು ಇದಕ್ಕಿಂತ ಒಂದಿಷ್ಟೂ ಮಹತ್ವದಲ್ಲ ಯಾವ ಗಂಭೀರತೆಗೂ ಅರ್ಹವಲ್ಲ.

ಒಮ್ಮೆ ಗೌತಮ ಬುದ್ಧ ಸಮುದ್ರದ ದಂಡೆಯಲ್ಲಿದ್ದ ಒಂದು ಪುಟ್ಟ ಹಳ್ಳಿಯನ್ನ ಪ್ರವೇಶಿಸುತ್ತಾನೆ. ಸಮುದ್ರ ತೀರದಲ್ಲಿ ಕೆಲ ಮಕ್ಕಳು ಮರಳಿನಲ್ಲಿ ತುಂಬ ಗಂಭೀರರಾಗಿ ಕೋಟೆಯನ್ನ ಕಟ್ಟುತ್ತ ಆಟ ಆಡುತ್ತಿರುವುದನ್ನ ಗಮನಿಸುತ್ತಾನೆ. ಯಾವನಾದರೂ ಹುಡುಗ ಕೋಟೆ ಕಟ್ಟಲು ಅಡ್ಡಿಯಾದರೆ ಅಥವಾ ಕಟ್ಟಿದ ಕೋಟೆಯನ್ನ ಕಲ್ಲು ಎಸೆದು ಭಗ್ನ ಮಾಡಿದರೆ ಹುಡುಗರು ಜೋರಾಗಿ ಜಗಳಾಡುತ್ತ ಕೆಲವೊಮ್ಮೆ ಹೊಡೆದಾಟಕ್ಕೂ ಇಳಿಯುವುದನ್ನ ಬುದ್ಧ ಮರೆಯಲ್ಲಿ ನಿಂತು ನೋಡುತ್ತಾನೆ. ಹುಡುಗರು ತಾವು ಮರಳಿನಲ್ಲಿ ಕಟ್ಟಿದ ಕೋಟೆಯ ರಕ್ಷಣೆಗಾಗಿ ಗಂಭೀರವಾಗಿ ಪ್ರಯತ್ನ ಮಾಡುತ್ತಿರುವುದನ್ನ ಕಂಡು ಆಶ್ಚರ್ಯಪಡುತ್ತಾನೆ.

ಸಂಜೆ ಸೂರ್ಯ ಮುಳುಗುತ್ತಿದ್ದಂತೆಯೇ, ಮಕ್ಕಳ ತಾಯಂದಿರ ಕೂಗು ಕೇಳಿಸುತ್ತದೆ, “ ಮಕ್ಕಳಾ ಸಂಜೆ ಆಯ್ತು ಮನೆಗೆ ಊಟಕ್ಕೆ ಬನ್ನಿ ” ಅಮ್ಮಂದಿರ ದನಿ ಕೇಳಿಸುತ್ತಿದ್ದಂತೆಯೇ ಮಕ್ಕಳು ತಾವು ಇಷ್ಟು ಹೊತ್ತು ಜೋಪಾನವಾಗಿ ಕಟ್ಟಿ, ರಕ್ಷಣೆ ಮಾಡುತ್ತಿದ್ದ ಮರಳಿನ ಕೋಟೆಗಳ ಮೇಲೆ ಜಿಗಿಯುತ್ತ, ಅವನ್ನೆಲ್ಲ ಧ್ವಂಸ ಮಾಡಿ ಹಿಂದೆ ನೋಡದೆಯೇ ತಮ್ಮ ತಮ್ಮ ಮನೆಗಳತ್ತ ಓಡಿ ಹೋದುದನ್ನ ನೋಡಿ ಬುದ್ಧ, ತನ್ನ ಶಿಷ್ಯರಿಗೆ ಹೇಳುತ್ತಾನೆ,

“ನೋಡಿ ಬದುಕು ಈ ಮಕ್ಕಳಾಟದಂತೆ ಒಂದಿಷ್ಟೂ ಹೆಚ್ಚು ಮಹತ್ವದ್ದಲ್ಲ”!

ನಿಮ್ಮ ಎಲ್ಲ ಹೋರಾಟ, ಗಂಭೀರತೆ ಇಂಥ ಮರಳಿನ ಕೋಟೆಗಳ ಬಗ್ಗೆ. ಒಂದು ದಿನ ನೀವೇ ಇದನ್ನೆಲ್ಲ ಮುರಿದು ದೂರ ಹೋಗುತ್ತೀರಿ ಮತ್ತು ನೀವು ಹಿಂತಿರುಗಿ ನೋಡುವುದಿಲ್ಲ ಕೂಡ. ಇಂಥ ಆಟವನ್ನ ಕಷ್ಟಪಟ್ಟು ಆಡುವವರು ಆಟದ ಸೌಂದರ್ಯವನ್ನ ಕಳೆದುಕೊಳ್ಳುತ್ತಾರೆ.

Osho, Nansen : The Point of Departure, Ch 6 (excerpt)

Leave a Reply