“ಯಾಕೆ ಬುದ್ಧ ನಿನಗೆ ಈ ಮರ ಕಡಿಯುವವನ ಮೇಲೂ ನಂಬಿಕೆ ಇಲ್ಲವೆ? ಎರಡು ಮೈಲಿ ಆದ ಮೇಲೆ ನಾವು ಹಳ್ಳಿ ಮುಟ್ಟುವುದಿಲ್ಲವೆ?” ಆನಂದ ಆಶ್ಚರ್ಯ ಮತ್ತು ಕುತೂಹಲದಿಂದ ಬುದ್ಧನನ್ನು ಪ್ರಶ್ನೆ ಮಾಡಿದ | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
That’s what I have been doing my whole life, telling people, ‘Just a little more. Soon you will be reaching.’ – Osho
ಬುದ್ಧ ಮತ್ತು ಅವನ ಪ್ರಧಾನ ಶಿಷ್ಯ ಆನಂದ ಒಮ್ಮೆ ಕಾಡಿನಲ್ಲಿ ದಾರಿ ಕಳೆದುಕೊಂಡು ಓಡಾಡುತ್ತಿದ್ದಾಗ ಅಲ್ಲಿಯೇ ಕಟ್ಟಿಗೆ ಒಟ್ಟು ಮಾಡುತ್ತಿದ್ದ ಒಬ್ಬ ಮುದುಕಿಯನ್ನು ಕಂಡು ಮಾತನಾಡಿಸಿ ತಾವು ಹೋಗಬೇಕಾಗಿದ್ದ ಹಳ್ಳಿಗೆ ದಾರಿ ವಿಚಾರಿಸಿದರು.
“ ಮಕ್ಕಳಾ ಆ ಹಳ್ಳಿ ದೂರವೇನಿಲ್ಲ ಕೇವಲ ಎರಡು ಮೈಲಿ, ಹೀಗೆ ನೇರವಾಗಿ ಹೋಗಿ” ಅಜ್ಜಿ ದಾರಿ ತೋರಿಸಿದಳು.
ಅಜ್ಜಿ ಹೇಳಿದ ದಿಕ್ಕಿನಲ್ಲಿಯೇ ಎರಡು ಮೈಲಿ ಕ್ರಮಿಸಿದ ಬುದ್ಧ ಮತ್ತು ಆನಂದ ಇನ್ನೂ ಹಳ್ಳಿಯ ಸುಳಿವು ಕಾಣದಿದ್ದಾಗ ಅಲ್ಲಿಯೇ ಮರ ಕಡಿಯುತ್ತಿದ್ದ ಮನುಷ್ಯನನ್ನು ವಿಚಾರಿಸಿದರು.
“ ಹಳ್ಳಿ ಇಲ್ಲಿಂದ ಎಷ್ಟು ದೂರ? ನಾವೇನಾದರೂ ಮತ್ತೆ ದಾರಿ ಕಳೆದುಕೊಂಡಿದ್ದೀವಾ ?”
“ ಇಲ್ಲ ಇಲ್ಲ ಸರಿ ದಾರಿಯಲ್ಲೇ ಇದ್ದೀರಿ, ಹೀಗೇ ಮುಂದೆ ಹೋಗಿ ಕೇವಲ ಎರಡು ಮೈಲಿ ದಾಟಿದರೆ ಹಳ್ಳಿ” ಮರ ಕತ್ತರಿಸುತ್ತಿದ್ದ ವ್ಯಕ್ತಿ ದಾರಿ ಪಕ್ಕಾ ಮಾಡಿದ.
ಮರ ಕಡಿಯುವವನ ಮಾತು ಕೇಳಿ ಆನಂದನಿಗೆ ಆಶ್ಚರ್ಯವಾಯಿತು, “ ಬುದ್ಧ ದೇವ, ಅಜ್ಜಿ ಹೇಳಿದ 2 ಮೈಲಿ ದಾಟಿ ಬಂದ ಮೇಲೆ ಮತ್ತೆ ಈ ಮನುಷ್ಯ ಇನ್ನೂ ಎರಡು ಮೈಲಿ ದೂರ ಇದೆ ಹಳ್ಳಿ ಎನ್ನುತ್ತಿದ್ದಾನಲ್ಲ, ಅಜ್ಜಿ ಹೇಳಿದ್ದು ಸುಳ್ಳಾ? ಏನಿದು ವಿಚಿತ್ರ?”
“ ಈ ಎರಡು ಮೈಲಿ ದಾಟಿದ ಮೇಲೆ ಮತ್ತೆ ದೂರ ವಿಚಾರಿಸು” ಬುದ್ಧ ನಗುತ್ತ ಆನಂದನಿಗೆ ಉತ್ತರಿಸಿದ.
“ಯಾಕೆ ಬುದ್ಧ ನಿನಗೆ ಈ ಮರ ಕಡಿಯುವವನ ಮೇಲೂ ನಂಬಿಕೆ ಇಲ್ಲವೆ? ಎರಡು ಮೈಲಿ ಆದ ಮೇಲೆ ನಾವು ಹಳ್ಳಿ ಮುಟ್ಟುವುದಿಲ್ಲವೆ?” ಆನಂದ ಆಶ್ಚರ್ಯ ಮತ್ತು ಕುತೂಹಲದಿಂದ ಬುದ್ಧನನ್ನು ಪ್ರಶ್ನೆ ಮಾಡಿದ.
“ ಇಲ್ಲ ನಾನು ಈ ಇಬ್ಬರನ್ನೂ ನಂಬುವುದಿಲ್ಲ ಆದರೆ ಈ ಇಬ್ಬರೂ ಮಹಾ ಅಂತಃಕರುಣಿಗಳು, ಅವರು ಕೇವಲ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ. ಹಳ್ಳಿ ಇರುವ ದೂರ ಹತ್ತು ಮೈಲಿ ಎಂದು ಹೇಳಿದರೆ ನಾವು ಎಲ್ಲಿ ಹತಾಶರಾಗಿಬಿಡುತ್ತೇವೆಯೋ ಎಂದು ಅವರು ನಮ್ಮನ್ನು ಚಿಕ್ಕ ಚಿಕ್ಕ ಗುರಿ ಹೇಳಿ ಹುರಿದುಂಬಿಸುತ್ತಿದ್ದಾರೆ” ಬುದ್ಧ, ಆನಂದನಿಗೆ ಆ ಇಬ್ಬರ ವರ್ತನೆಯ ಹಿಂದಿನ ಕರುಣೆಯನ್ನು ವಿವರಿಸಿ ಹೇಳಿದ.
ಬುದ್ಧ ಹೇಳಿದಂತೆ ಹಳ್ಳಿ ಸರಿಯಾಗಿ ಹತ್ತು ಮೈಲಿ ದೂರದಲ್ಲಿತ್ತು, ಮತ್ತು ಪ್ರತೀ ಬಾರಿ ದಾರಿಯಲ್ಲಿ ಅವರು ದೂರ ವಿಚಾರಿಸಿದಾಗ, ಪ್ರತೀ ಹಳ್ಳಿಯ ಮನುಷ್ಯನೂ “ ದೂರ ಕೇವಲ ಎರಡು ಮೈಲಿ, ತುಂಬ ಹತ್ತಿರ” ಎಂದೇ ಉತ್ತರಿಸುತ್ತಿದ್ದರು.
ಅವರು ಹಳ್ಳಿ ಮುಟ್ಟಿದಾಗ ಆನಂದ ಪ್ರಶ್ನೆ ಮಾಡಿದ, “ ಹಳ್ಳಿ ಹತ್ತು ಮೈಲಿ ದೂರ ಇರುವ ವಿಷಯ ನಿನಗೆ ಹೇಗೆ ಗೊತ್ತಾಯ್ತು ?”
ಬುದ್ಧ ನಗುತ್ತ ಉತ್ತರಿಸಿದ, “ ನನ್ನದೂ ಕೂಡ ಇಂಥ ವ್ಯವಹಾರವೇ. ನನ್ನ ಇಡೀ ಬದುಕಿನಲ್ಲಿ ನಾನು ಜನರಿಗೆ ಹೀಗೆಯೇ ಭರವಸೆ ಕೊಡುತ್ತಿದ್ದೇನೆ, ‘ಇನ್ನೂ ಸ್ವಲ್ಪ ದೂರ ಮಾತ್ರ , ಆದಷ್ಟು ಬೇಗ ನೀವು ಗುರಿ ಮುಟ್ಟುತ್ತೀರಿ, ಹತಾಶರಾಗದೇ ಮುನ್ನಡೆಯಿರಿ’ ಎಂದು.”
Osho, The Sword & the Lotus – Talks in the Himalayas, Ch 15, W1 (excerpt)