ಯುಗಾದಿ; ಹಿನ್ನೆಲೆ ಏನು? ಹಬ್ಬದ ಆಚರಣೆ ಹೇಗೆ?

ಯುಗಾದಿಯ ಬಗ್ಗೆ ನಾವು ಹೊಸತಾಗಿ ತಿಳಿಯುವುದು ಏನೂ ಇಲ್ಲ. ಪರಂಪರಾನುಗತವಾಗಿ, ಸಾಧ್ಯವಿದ್ದವರೆಲ್ಲಾ ಹೊಸ ಬಟ್ಟೆ ತೊಟ್ಟು, ಮನೆಗೆ ಮಾವಿನ ತೋರಣ ಕಟ್ಟಿ, ಬೇವು – ಬೆಲ್ಲ ಬೆರೆಸಿ ತಿಂದು ಸಂಭ್ರಮಿಸುವ ಹಬ್ಬವಿದು. ಈ ಸಂಭ್ರಮಕ್ಕೆ ಕಾರಣವೇನು? ಎಂದು ಹುಡುಕುತ್ತಾ ಹೊರಟರೆ, ಹಲವಾರು ಕಥೆಗಳೂ ಪ್ರಕೃತಿಯ ವಿಸ್ಮಯವೂ ನಮ್ಮೆದುರು  ತೆರೆದುಕೊಳ್ಳುತ್ತವೆ ~ ಸಾ.ಹಿರಣ್ಮಯೀ

ಯುಗಾದಿ ‘ಕಾಲ’ದ ಹಬ್ಬ. ಯಾವುದು ಹುಟ್ಟುತ್ತಲೇ ಅಳಿದೂ ಹೋಗುತ್ತದೆಯೋ, ಅಳಿವಿನೊಂದಿಗೇ ಮತ್ತೆ ಹುಟ್ಟುತ್ತದೆಯೋ, ಆ ನಿರಂತರ ನವ ತತ್ತ್ವಕ್ಕೊಂದು ಎಣಿಕೆಯ ಚೌಕಟ್ಟು ತೊಡಿಸಿ ಸಂಭ್ರಮಿಸುವ ಹಬ್ಬ. ಹಿಡಿತಕ್ಕೆ ಸಿಗದ ಕಾಲವನ್ನು ಎಣಿಕೆಯಲ್ಲಿ ಕೂಡಿಟ್ಟು ನಾವು ತ್ರುಟಿಯಿಂದ ಹಿಡಿದು ಮಹಾಕಲ್ಪದವರೆಗೆ ಮಾಪನ ಮಾಡುತ್ತಾ ಹೋಗುತ್ತೇವೆ, ಈ ಮಾಪನದ ಒಂದು ಕೊಂಡಿ – ‘ಸಂವತ್ಸರ’.

ಒಂದು ಸಂವತ್ಸರ ಮುಗಿದು, ಇನ್ನೊಂದರ ಆದಿಯೇ ‘ಯುಗಾದಿ’. ಆದ್ದರಿಂದ ಇದು ಕಾಲದ ಹಬ್ಬ.

ಯುಗಾದಿಯನ್ನು ಒಂದು ಹಬ್ಬವನ್ನಾಗಿ ಆಚರಿಸುವುದರ ಹಿಂದೆ ಹಲವು ಕಥನ – ಕಾರಣಗಳಿವೆ. ಇದು ಬ್ರಹ್ಮದೇವನು ವಿಶ್ವವನ್ನು ಸೃಷ್ಟಿಸಿದ ದಿನವಾಗಿದೆ ಎಂಬುದು ಅವುಗಳಲ್ಲೊಂದು. ಕಮಲಾಕರ ಭಟ್ಟನ ‘ನಿರ್ಣಯ ಸಿಂಧು’ವಿನಲ್ಲಿ ಹೇಳಿರುವಂತೆ, ‘ಬ್ರಹ್ಮನು ಈ ಜಗತ್ತನ್ನು ಚೈತ್ರ ಶುದ್ಧ ಪ್ರತಿಪದೆಯಂದು ಸೂರ್ಯೋದಯ ಕಾಲಕ್ಕೆ ಸರಿಯಾಗಿ ಸೃಷ್ಟಿಸಿದ. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷ, ವರ್ಷಾಧಿಪತಿಗಳನ್ನೂ ಸೃಷ್ಟಿಸಿ, ಕಾಲಗಣನೆ ಆರಂಭಿಸಿದ’.

ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ ಪ್ರಥಮೇಽಹನಿ – “ಬ್ರಹ್ಮದೇವನು ಚೈತ್ರಮಾಸದ ಮೊದಲನೇಯ ದಿನದಂದೇ ಜಗತ್ತನು ಸೃಷ್ಟಿಮಾಡಿದನು” ಎಂದು ಇತರ ಶಾಸ್ತ್ರಗ್ರಂಥಗಳೂ ಹೇಳುತ್ತವೆ. ಆದ್ದರಿಂದ ಚೈತ್ರ ಮಾಸದ ಮೊದಲನೇ ದಿನವನ್ನು “ಯುಗವು ಆರಂಭಗೊಂಡ ದಿನ – ಯುಗಾದಿ” ಎಂಬರ್ಥದಲ್ಲಿಯೂ ಆಚರಿಸಲಾಗುತ್ತದೆ.

ಯುಗಾದಿ ಕಾಲದ ಹಬ್ಬ ಹೇಗೋ, ಹಾಗೇ ಪ್ರಕೃತಿಯ ಹಬ್ಬವೂ ಹೌದು. ಚೈತ್ರ ಮಾಸದಲ್ಲಿ ನಮ್ಮ ಭೂಭಾಗ ಹೊಸ ಚಿಗುರಿಗೆ ಮುನ್ನುಡಿ ಬರೆಯುತ್ತದೆ. ಮನುಷ್ಯನ ಮನಸ್ಸು ನಿಸರ್ಗದ ಕನ್ನಡಿಯಂತೆ. ಪ್ರಕೃತಿಯ ಹೊಸ ಚಿಗುರು, ಮನುಷ್ಯರ ಮನಸ್ಸಿನಲ್ಲೂ ಹೊಸ ಆಶಾ ಆಭವನೆಯನ್ನು ತುಂಬಿ ಉಲ್ಲಸಿತರನ್ನಾಗಿಸುತ್ತದೆ. ಶಿವರಾತ್ರಿಯ ವೇಳೆಗೆ ಕರಗುತ್ತ ಹೋಗುವ ಚಳಿ, ಚೈತ್ರದ ಹೊಸ್ತಿಲಲ್ಲಿ ಸಂಪೂರ್ಣ ಇಲ್ಲವಾಗಿ ಸೂರ್ಯನ ಕಿರಣಗಳು ಪ್ರಖರವಾಗುತ್ತ ಸಾಗುವ ಹೊತ್ತು. ಬೇಸಿಗೆಯಾದರೂ, ಬಿಸಿಲೆಂದರೆ ಲವಲವಿಕೆ. ಈ ಲವಲವಿಕೆಯ ಸಂಕೇತವೂ ಹಬ್ಬವಾಗುತ್ತದೆ.

ಚೈತ್ರ ಮಾಸವು ಋತುಗಳಲ್ಲೇ ಅತ್ಯಂತ ಸುಂದರವಾದ ವಸಂತ ಋತುವನ್ನು ಕರೆತರುವ ಮಾಸವೂ ಹೌದು. ಭಗವದ್ಗೀತೆಯ ‘ವಿಭೂತಿ ಯೋಗ’ದಲ್ಲಿ ಶ್ರೀಕೃಷ್ಣನು ‘ಋತುಗಳಲ್ಲಿ ವಸಂತವು ನಾನು’ (ಋತೂನಾಂ ಕುಸುಮಾಕರಃ) ಎಂದು ಘೋಷಿಸಿಕೊಂಡಿದ್ದಾನೆ. ಅಷ್ಟು ಮಹತ್ವವಿದೆ ಈ ಋತುವಿಗೆ. ಆದ್ದರಿಂದ, ಅದರ ಸ್ವಾಗತಕ್ಕಾಗಿಯೂ ಯುಗಾದಿ ಆಚರಿಸಲ್ಪಡುತ್ತದೆ.

ಹಾಗೆಯೇ ಯುಗಾದಿಯ ಆಚರಣೆಗೆ ಮತ್ತೂ ಒಂದು ಕಾರಣ ರಾಮಾಯಣದಲ್ಲಿ ಅಡಗಿದೆ. ಶ್ರೀರಾಮ ಚಂದ್ರನು ಅಯೋಧ್ಯೆಗೆ ಮರಳಿ ಪಟ್ಟಾಭಿಷಿಕ್ತನಾಗಿ ರಾಜ್ಯಾಡಳಿತದಲ್ಲಿ ತೊಡಗಿದ ದಿನವಿದು ಎಂದು ಪ್ರತೀತಿ ಇದೆ. ಅದರ ಸಂಭ್ರಮಾಚರಣೆಯೇ ಯುಗಾದಿ.

ಹೀಗೆ ಕಾರಣಗಳು ಏನೇ ಇರಲಿ. ಯುಗಾದಿ ಆಚರಣೆಯಲ್ಲಿ ಐದು ಸಂಗತಿಗಳು ಮುಖ್ಯವಾಗುತ್ತವೆ. ಯಾವ ಕಾರಣಕ್ಕೆ ಹಬ್ಬವನ್ನು ಆಚರಿಸಿದರೂ ಹಿಂದೂಗಳ ಶಾಸ್ತ್ರಗ್ರಂಥ ‘ಧರ್ಮ ಸಿಂಧು’ವಿನ ನಿರ್ದೇಶನದಂತೆ ತೈಲಾಭ್ಯಂಜನ (ಎಣ್ಣೆ ನೀರು), ದೇವತಾ ಸ್ತುತಿ, ಧರ್ಮ ಧ್ವಜಾರೋಹಣ, ನಿಂಬಕುಸುಮ ಭಕ್ಷಣ (ಬೇವಿನೆಲೆಯ ಸೇವನೆ) ಮತ್ತು ಪಂಚಾಂಗ ಶ್ರವಣ – ಇವಿಷ್ಟನ್ನು ಸರ್ವೇ ಸಾಮಾನ್ಯವಾಗಿ ನಡೆಸಲಾಗುತ್ತದೆ. ಅದರಲ್ಲೂ ಮಕ್ಕಳಿರುವ ಮನೆಯಲ್ಲಿ ಎಣ್ಣೆ ಸ್ನಾನವೇ ಒಂದು ಹಬ್ಬ!

ಒಟ್ಟಾರೆ ಹೇಳುವುದಾದರೆ, ಯುಗಾದಿ ಹಲವು ಹಬ್ಬಗಳ ಮೊತ್ತ. ಇದು ಕಟ್ಟಿಕೊಡುವ ಉಲ್ಲಾಸದ ಬುತ್ತಿ ವರ್ಷಪೂರ್ತಿ ನಮ್ಮನ್ನು ಕಾಯಲಿ. ‘ಹಬ್ಬ ಎಲ್ಲರಿಗಾಗಲಿ’….

Leave a Reply