ಚಕ್ರದ ಕೀಲಿಗೆ ಎಣ್ಣೆ ಬಿಡುವಂತೆ ಆಹಾರ, ಸಂಪತ್ತು… । ಇಂದಿನ ಸುಭಾಷಿತ

ಅಧಿಕವಾಗಿ ಕೂಡಿಹಾಕುವುದು ನೀತಿಯಲ್ಲ . ಹಾಗಾದರೆ ಅಧಿಕವೆಂದರೆ ಎಷ್ಟು? ತನ್ನ ಸುತ್ತಮುತ್ತ ತನ್ನ ಊರಲ್ಲಿ, ತನ್ನ ದೇಶದಲ್ಲಿ ಇರತಕ್ಕ ಜನಸಾಮಾನ್ಯರ ಸುಖಸಾಮಗ್ರಿಗಿಂತ ಅಧಿಕ. ಅವರಿಗಿಂತ ಹೆಚ್ಚಾಗಿ ಕೂಡಿಹಾಕಿ, ಅವರು ಹೊಟ್ಟೆಗಿಲ್ಲದೆ ನವೆಯುತ್ತಿರುವಾಗ ತಾನು ಸುಖದಲ್ಲಿ ಓಲಾಡುವುದು ಸಲ್ಲದು. ಬಡಜನರೆದುರಿಗೆ ಶ್ರೀಮಂತಿಕೆಯನ್ನು ತೋರಿಸುವುದು ಬಡಜನತೆಯನ್ನು ಹಂಗಿಸಿದಂತೆ, ಅಣಕವಾಡಿದಂತೆ...  ~ ಎನ್.ರಂಗನಾಥ ಶರ್ಮರ ವ್ಯಾಖ್ಯಾನ  । ಕೃಪೆ : ಸೂಕ್ತಿ ವ್ಯಾಪ್ತಿ
ಭಾರಸ್ಯೋದ್ವಾಹನಾರ್ಥಂ ಚ ರಥಾಕ್ಸೋsಭ್ಯಜ್ಯತೇ ಯಥಾ | 
ಭೋಜನಂ ಪ್ರಾಣಯಾತ್ರಾರ್ಥಂ ತದ್ವದ್‌ ವಿದ್ವಾನ್ನಿಷೇವತೇ ॥

ಅರ್ಥ: ಭಾರವನ್ನೆಳೆಯಲು ಅನುಕೂಲವಾಗಲೆಂದು ರಥದ ಅಚ್ಚಿಗೆ ಎಣ್ಣೆಯನ್ನು ಲೇಪಿಸುತ್ತಾರೆ. ಹಾಗೆಯೇ ಪ್ರಾಣಯಾತ್ರೆ ಸಾಗಲೆಂದು ವಿದ್ವಾಂಸರು (ಬುದ್ಧಿಯುಳ್ಳವರು) ಆಹಾರವನ್ನು ಸೇವಿಸುತ್ತಾರೆ.

ತಾತ್ಪರ್ಯ: ಗಾಡಿಯ ಅಚ್ಚಿಗೆ ಎಣ್ಣೆ ಹಾಕುವ ಉದ್ದೇಶ ಗಾಲಿ ಚೆನ್ನಾಗಿ ತಿರುಗಲಿ, ಭಾರ ಮುಂದಕ್ಕೆ ಸಾಗಲಿ ಎಂದು. ಎಣ್ಣೆ ಇದೆಯೆಂದು ಡಬ್ಬಗಟ್ಟಲೆ ಯಾರೂ ಅದಕ್ಕೆ ಸುರಿಯುವುದಿಲ್ಲ. ಸುರಿದರೆ ಎಣ್ಣೆಯೂ ಹಾಳು, ಗಾಲಿಯೂ ಹಾಳು. ಅದು ನಯವಾಗಿ ತಿರುಗಲೂ ಆಗದು. ಹಾಗೆಯೇ ಮನುಷ್ಯನ ಪ್ರಾಣಯಾತ್ರೆ ಸಾಗಲೆಂಬುದು ಊಟದ ಉದ್ದೇಶ. ತಿನ್ನುವುದೇ ಉದ್ದೇಶವಲ್ಲ. ಹೆಚ್ಚಾಗಿ ತಿಂದರೆ ಆಹಾರವು ಹಾಳಾಗುವುದರ ಜೊತೆಗೆ ಆರೋಗ್ಯಕ್ಕೂ ಕೇಡು.

‘ಬದುಕುವುದಕ್ಕಾಗಿ ತಿನ್ನು, ತಿನ್ನುವುದಕ್ಕಾಗಿ ಬದುಕಬೇಡ’ ಎಂಬ ಗಾದೆಯುಂಟು. ‘ದೇಹಕ್ಕೆ ಬೇಕಾದ್ದಕ್ಕಿಂತ ಹೆಚ್ಚಾಗಿ ತಿನ್ನುವುದು ಇನ್ನೊಬ್ಬರ ಅನ್ನವನ್ನು ಕಿತ್ತುಕೊಂಡಂತೆ. ಅದು ಪಾಪ’ ಎಂದು ಮಹಾತ್ಮಾ ಗಾಂಧಿಯವರು ಹೇಳುತ್ತಿದ್ದರು.

ಊಟ, ಧಾನ್ಯ, ಧನ -ಎಲ್ಲ ಒಂದೇ, ಇವು ಭೋಗಸಾಮಗ್ರಿಯ ನಾನಾರೂಪ. ಅಧಿಕವಾಗಿ ಕೂಡಿಹಾಕುವುದು ನೀತಿಯಲ್ಲ ಎಂಬುದೇ ಮೂಲತತ್ತ್ವ. ಅಧಿಕವೆಂದರೆ ಎಷ್ಟು? ತನ್ನ ಸುತ್ತಮುತ್ತ ತನ್ನ ಊರಲ್ಲಿ, ತನ್ನ ದೇಶದಲ್ಲಿ ಇರತಕ್ಕ ಜನಸಾಮಾನ್ಯರ ಸುಖಸಾಮಗ್ರಿಗಿಂತ ಅಧಿಕ. ಅವರಿಗಿಂತ ಹೆಚ್ಚಾಗಿ ಕೂಡಿಹಾಕಿ, ಅವರು ಹೊಟ್ಟೆಗಿಲ್ಲದೆ ನವೆಯುತ್ತಿರುವಾಗ ತಾನು ಸುಖದಲ್ಲಿ ಓಲಾಡುವುದು ಸಲ್ಲದು. ಬಡಜನರೆದುರಿಗೆ ಶ್ರೀಮಂತಿಕೆಯನ್ನು ತೋರಿಸುವುದು ಬಡಜನತೆಯನ್ನು ಹಂಗಿಸಿದಂತೆ, ಅಣಕವಾಡಿದಂತೆ.

ಇನ್ನೊಂದು ನೀತಿಶ್ಲೋಕ ಹೀಗನ್ನುತ್ತದೆ : “ನಿನ್ನಲ್ಲಿ ನೂರು ಹಸುಗಳು  ಇರಬಹುದು, ನೀನು ಕುಡಿಯುವುದು ಒಂದು ಹಸುವಿನ ಹಾಲಿನಲ್ಲಿ ಒಂದು ಪಾವನ್ನು ಮಾತ್ರ. ಒಂದು ಖಂಡುಗ ಅಕ್ಕಿ ಇರಬಹುದು, ನಿನಗೆ ಬೇಕಾದ್ದು ಒಂದು ಪಾವು  ಅಕ್ಕಿ. ದೊಡ್ಡ ಬಂಗಲೆಯೇ ನಿನ್ನದಿರಬಹುದು, ನೀನು ಮಲಗುವುದು ಒಂದು ಕೋಣೆಯ, ಒಂದು ಮಂಚದ ಒಂದು ಮಗ್ಗುಲಲ್ಲಿ! ಉಳಿದುದೆಲ್ಲ ಪರರಿಗೆ ಸೇರಿದ್ದು.

“ಅತಿ ಆಸೆ ಗತಿಗೇಡು’ ಎನ್ನುವುದು ಇದಕ್ಕಾಗಿ. ಇದು ನಿರಾಶಾವಾದವಲ್ಲ. “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬುದರ ತಿರುಳು ಈ ನುಡಿಯಲ್ಲಿದೆ.

Leave a Reply