ಶಂಕರಂ ಲೋಕ ಶಂಕರಂ : ಮಂಗಳ ಉಂಟು ಮಾಡುವ ಶಾಂಕರ ಸಿದ್ಧಾಂತ

ಇಂದು ಶಂಕರ ಜಯಂತಿ. ವೈಶಾಖ ಶುದ್ಧ ಪಂಚಮಿ ಆದಿ ಶಂಕರರು ಹುಟ್ಟಿದ ದಿನ. ಅದ್ವೈತ ತತ್ತ್ವವನ್ನು ಅಲ್ಪಾವಧಿಯಲ್ಲೇ ಪ್ರಚುರಪಡಿಸಿ ಜನಪ್ರಿಯಗೊಳಿಸಿದ ಕೀರ್ತಿ ಶಂಕರರಿಗೆ ಸಲ್ಲುತ್ತದೆ. ಸಕಲವೂ ಪರಬ್ರಹ್ಮವೇ ಎಂದು ಒತ್ತಿ ಹೇಳುವ ಮೂಲಕ ಬೇಧ ಬುದ್ಧಿ ಸಲ್ಲದು, ತಾರತಮ್ಯ ಕೂಡದು ಎಂದು ಶಂಕರರು ಪ್ರತಿಪಾದಿಸಿದರು ಅವರ ಚಿಂತನೆಗಳ ಕಿರು ಪರಿಚಯ ಇಲ್ಲಿದೆ …| ಆನಂದಪೂರ್ಣ

ಶ್ರೀ ಶಂಕರಾಚಾರ್ಯರು 8ನೇ ಶತಮಾನದಲ್ಲಿ ಆಗಿ ಹೋದ ದಿವ್ಯ ವ್ಯಕ್ತಿತ್ವ. ಅವರ ಅಪಾರ ಪಾಂಡಿತ್ಯ ಮತ್ತು ತೇಜಸ್ಸಿನ ಪ್ರಖರತೆ ಇಂದಿಗೂ ಜ್ಞಾನದ ಬೆಳಕು ಬೀರುತ್ತ ಅದ್ವೈತ ಮಾರ್ಗದ ದೀಪಸ್ತಂಭವಾಗಿ ನಿಂತಿದೆ.
ಏಳನೇ ಶತಮಾನದಲ್ಲಿ ಜೀವಿಸಿದ್ದ ಗೌಡಪಾದಮುನಿಗಳು ಮಾಡೂಕ್ಯ ಕಾರಿಕೆಯ ಮೂಲಕ ಮೊಟ್ಟಮೊದಲಿಗೆ ಅದ್ವೈತ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಪ್ರತಿಪಾದಿಸಿದರು. ಅವರ ಶಿಷ್ಯರೇ ಗೋವಿಂದ ಭಗವತ್ಪಾದರು. ಶ್ರೀ ಶಂಕರಾಚಾರ್ಯರು ಗೋವಿಂದ ಭಗವತ್ಪಾದರ ಶಿಷ್ಯರು. ಶಂಕರರು ತಮ್ಮ ಗುರುಪರಂಪರೆಯಿಂದ ಬಂದ ಅದ್ವೈತ ತತ್ವ ಸಿದ್ಧಾಂತಕ್ಕೆ ಸ್ಪಷ್ಟ ರೂಪಕೊಟ್ಟು ಜಗತ್ತಿನ ಮನ್ನಣೆ ಸಿಗುವಂತೆ ಮಾಡಿದರು.
ಕೇವಲ ಮೂವತ್ತೆರಡು ವರ್ಷಗಳ ಜೀವಿತಾವಧಿಯಲ್ಲಿ ಭರತ ಖಂಡದ ಉದ್ದಗಲ ಸಂಚರಿಸಿ ಅದ್ವೈತ ಮತ ಪ್ರಚಾರ ನಡೆಸಿದ ಶಂಕರರು ನೂರಾರು ಗ್ರಂಥಗಳನ್ನೂ ರಚಿಸಿದ್ದಾರೆ.
ಅವರ ಈ ಯಶೋಗಾಥೆಯನ್ನು
ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರ ವಿತ್ |
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||
ಅರ್ಥಾತ್; ಎಂಟು ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು ಮೂವತ್ತೆರಡನೇ ವರ್ಷದಲ್ಲಿ ಹೊರಟು ಹೋದರು – ಎಂದು ಸ್ತುತಿಸಲಾಗಿದೆ.
ಸೃಷ್ಟಿಯಲ್ಲಿನ ಜಡ ಚೇತನಗಳೆಲ್ಲವೂ ಒಂದೇ; ಅದು ಪರಬ್ರಹ್ಮ” ಎಂದು ಸಾರಿದ ಶಂಕರರು ತರತಮವಿಲ್ಲದ ಅಧ್ಯಾತ್ಮ ಚಿಂತನೆಗೆ ದಾರಿ ಹಾಕಿಕೊಟ್ಟರು. ಅವರು ಪ್ರತಿಪಾದಿಸಿದ ಅದ್ವೈತ ಚಿಂತನೆಯನ್ನು ಅವು ಇರುವಂತೆಯೇ ಬಳಸಿಕೊಂಡರೆ ಜೀವಿಗಳೆಲ್ಲರನ್ನೂ ಸಮಾನವಾಗಿ ಕಾಣುವ, ಗೌರವಿಸುವ ಸ್ವಸ್ಥ ಸುಂದರ ಸಮಾಜ ಸಾಕಾರಗೊಳ್ಳುವುದು. ಶಂಕರರು ಬೋಧಿಸಿದ ಅಧ್ಯಾತ್ಮ ಮಾರ್ಗ ಈ ಮೂಲಕ ಲೌಕಿಕಕ್ಕೂ ಸಲ್ಲುವುದು.
“ಈ ಜಗತ್ತಿಗೆ ತನ್ನದೇ ಆದ ಸ್ವತಂತ್ರ ಅಸ್ತಿತ್ವವಿಲ್ಲ. ಅರಿವಿನ ಕಣ್ಣಿನಿಂದ ನೋಡಿದರೆ ಇರುವುದೆಲ್ಲವೂ ಬ್ರಹ್ಮವೆಂದು ತಿಳಿಯುತ್ತದೆ. ಅನಾದಿಯಾದ ಅಜ್ಞಾನವೆಂಬ ಮಾಯಾ ಪ್ರಭಾವದಿಂದ ಎಲ್ಲವೂ ಬೇರೆ ಬೇರೆಯಾಗಿ ಕಾಣುತ್ತವೆಯಷ್ಟೆ. ಈ ಅಜ್ಞಾನದ ಆವರಣವನ್ನು ಕಿತ್ತೆಸೆದರೆ ಸಾಕು, ಭೇದವೆಲ್ಲ ಅಳಿದು ಹೋಗಿ ಬ್ರಹ್ಮ ಸಾಕ್ಷಾತ್ಕಾರವಾಗುತ್ತದೆ. ಅದುವೇ ಮೋಕ್ಷ, ಅದುವೇ ಪರಮ ಪುರುಷಾರ್ಥ” ಇದು ಶಾಂಕರ ಸಿದ್ಧಾಂತದ ಸಾರ.
ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ || ಬ್ರಹ್ಮವು ಸತ್ಯ ; ಜಗತ್ತು ಮಿಥ್ಯ ; ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ – ಎಂದು ಶಾಂಕರ ಬೋಧನೆಯನ್ನು ಒಂದು ವಾಕ್ಯದಲ್ಲಿ ಕಟ್ಟಿಕೊಡಲಾಗಿದ್ದು, ಈ ಹೇಳಿಕೆ ಅತ್ಯಂತ ಜನಪ್ರಿಯವಾಗಿದೆ.
ಶ್ರೀ ಶಂಕರರು ತಮ್ಮ ಅದ್ವೈತ ಸಿದ್ಧಾಂತಕ್ಕೆ ನಾಲ್ಕು ವೇದಗಳಿಂದ ಪ್ರತಿಯೊಂದರಿಂದಲೂ ಒಂದೊಂದು ವಾಕ್ಯವನ್ನು ಆಯ್ದು ಕೊಂಡಿದ್ದಾರೆ. ಋಗ್ವೇದದಿಂದ (ಐತರೇಯ ಉಪನಿಷತ್) ಪ್ರಜ್ಞಾನಂ ಬ್ರಹ್ಮ : ಸಾಕ್ಷಿಯೇ ಬ್ರಹ್ಮ; ಯಜುರ್ವೇದದಿಂದ (ಬೃಹದಾರಣ್ಯಕ) ಅಹಂ ಬ್ರಹ್ಮಾಸ್ಮಿ : ನಾನು ಬ್ರಹ್ಮನೇ ಆಗಿದ್ದೇನೆ ; ಸಾಮವೇದದಿಂದ (ಛಾಂದೋಗ್ಯ) ತತ್ವಮಸಿ : ನೀನು ಅದೇ ಆಗಿದ್ದೀಯೆ ; ಮತ್ತು ಅಥರ್ವ ವೇದದಿಂದ (ಮಾಂಡೂಕ್ಯ ಉಪನಿಷತ್) ಅಯಮಾತ್ಮಾ ಬ್ರಹ್ಮ : ಈ ಆತ್ಮವು ಬ್ರಹ್ಮ ವಾಗಿದೆ – ಇವೇ ಆ ಸುಪ್ರಸಿದ್ಧ ಬೋಧನೆಗಳು.

ಸ್ವಯಂ ಮಾದರಿ

lach
ಎಲ್ಲವೂ ಬ್ರಹ್ಮವೇ ಅಂದಮೇಲೆ ಪ್ರಪಂಚದಲ್ಲಿ ಭೇದವೆಲ್ಲಿಯದು? ಈ ಚಿಂತನೆಯನ್ನು ಪ್ರತಿಪಾದಿಸಿದ ಶಂಕರರೇ ಒಮ್ಮೆ ಮಾಯೆಗೆ ಒಳಗಾಗಿ ಕ್ಷಣಕಾಲ ಭೇದಬುದ್ಧಿ ತೋರ್ಪಡಿಸುತ್ತಾರೆ. ಕಾಶಿಯ ಬೀದಿಯಲ್ಲಿ ನಡೆದುಹೋಗುವಾಗ ಚಾಂಡಾಲನೊಬ್ಬ ಎದುರಾಗುತ್ತಾನೆ. ಆಗ ಶಂಕರರು ಆತನಿಗೆ ದೂರ ಸರಿದು ನಿಲ್ಲಲು ಸೂಚಿಸುತ್ತಾರೆ. ಅದನ್ನು ಕೇಳಿದ ಚಾಂಡಾಲನು “ನೀವು ಹೇಳಿದ್ದು ಯಾರಿಗೆ ? ದೇಹಕ್ಕೋ? ಆತ್ಮಕ್ಕೋ?” ಎಂದು ಕೇಳುತ್ತಾನೆ. ಈ ಮೂಲಕ ತಮ್ಮಿಬ್ಬರೊಳಗೆ ಇರುವ ಆತ್ಮವು ಒಂದೇ – ಪರಬ್ರಹ್ಮ ಸ್ವರೂಪಿಯಾದದ್ದು ಎಂಬುದನ್ನು ಧ್ವನಿಸುತ್ತಾನೆ. ತತ್ ಕ್ಷಣ ಜಾಗರೂಕರಾಗುವ ಶಂಕರರು ತಮ್ಮ ತಪ್ಪನ್ನು ಮನ್ನಿಸುವಂತೆ ಕೇಳಿಕೊಳ್ಳುತ್ತಾರೆ. ಮತ್ತು ತನ್ನೊಳಗೆ ತರತಮದ ಲವಲೇಷವೂ ಉಳಿಯದಂತೆ ಮಾಡಿದ ಚಾಂಡಾಲನನ್ನು ಸ್ತುತಿಸಿ, ‘ಮನೀಷಾಪಂಚಕ’ ರಚಿಸುತ್ತಾರೆ.
ಇದು ಶಂಕರರು ತಮ್ಮ ತತ್ತ್ವಚಿಂತನೆಯನ್ನು ಅನುಸರಿಸಿ ತೋರಿದ ಸ್ವಯಂ ಮಾದರಿಗೆ ಉದಾಹರಣೆ. ಅದ್ವೈತವೆಂದರೆ ಭೇದಬುದ್ಧಿಯನ್ನು ತೊಲಗಿಸಿ ಸರ್ವಸ್ವವನ್ನೂ ಏಕತ್ರವಾಗಿ ಕಾಣುವುದು. ಶಂಕರರು ತಮ್ಮ ಈ ಚಿಂತನೆಯನ್ನು ಚಾಂಡಾಲನ ಪ್ರಕರಣದಿಂದ ಮತ್ತಷ್ಟು ಗಟ್ಟಿಗೊಳಿಸಿಕೊಂಡರು.

ಶ್ರೀ ಶಂಕರರ ಕೃತಿಗಳು
ಶಂಕರಾಚಾರ್ಯರು ತಮ್ಮ ಅಲ್ಪಾವಧಿ ಆಯುಷ್ಯದ ಬಹುಪಾಲನ್ನು ಪರ್ಯಟನೆಯಲ್ಲಿ ಕಳೆದರು. ಉಳಿದ ಸಮಯ ಗ್ರಂಥ ರಚನೆಗೆ ಮೀಸಲಿಟ್ಟರು. ಹೀಗೆ ಶಂಕರರು 300ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆಂದು ಹೇಳಲಾಗಿದೆ. ಅವುಗಳಲ್ಲಿ ಅಧಿಕೃತವಾಗಿ ಶಂಕರರದೇ ಎಂದು ನಂಬಲಾಗಿರುವ 56 ಕೃತಿಗಳ ಹೆಸರು ಇಲ್ಲಿದೆ :
೧. ಬ್ರಹ್ಮಸೂತ್ರ ಭಾಷ್ಯ
೨. ಐತರೇಯ ಉಪನಿಷದ್ಭಾಷ್ಯ ( ಋಗ್ವೇದ )
೩. ಬೃಹದಾರಣ್ಯಕ ಉಪನಿಷದ್ಭಾಷ್ಯ ( ಶುಕ್ಲ ಯಜುರ್ವೇದ )
೪. ಈಶಾವಾಸ್ಯೋಪನಿಷದ್ಭಾಷ್ಯ ( ಶುಕ್ಲ ಯಜುರ್ವೇದ )
೫. ತೈತ್ತಿರೀಯೋಪನಿಷದ್ಭಾಷ್ಯ ( ಕೃಷ್ಣ ಯಜುರ್ವೇದ )
೬. ಶ್ವೇತಾಶ್ವತರೋಪನಿಷದ್ಭಾಷ್ಯ ( ಕೃಷ್ಣ ಯಜುರ್ವೇದ )
೭. ಕಾಠಕೋಪನಿಷದ್ಭಾಷ್ಯ ( ಕೃಷ್ಣ ಯಜುರ್ವೇದ )
೮. ಕೇನೋಪನಿಷದ್ಭಾಷ್ಯ ( ಸಾಮವೇದ )
೯. ಛಾ೦ದೋಗ್ಯ ಉಪನಿಷದ್ಭಾಷ್ಯ ( ಸಾಮವೇದ )
೧೦. ಮಾಂಡೂಕೋಪನಿಷದ್ಭಾಷ್ಯ ( ಅಥರ್ವಣವೇದ )
೧೧. ಪ್ರಶ್ನೋಪನಿಷದ್ಭಾಷ್ಯ ( ಅಥರ್ವಣವೇದ )
೧೨. ಶ್ರೀಮದ್ಭಗವದ್ಗೀತಾ ಭಾಷ್ಯ
೧೩. ಶ್ರೀ ವಿಷ್ಣು ಸಹಸ್ರ ಭಾಷ್ಯ
೧೪. ಸನತ್ಸುಜಾತೀಯ
೧೫. ಶ್ರೀ ಗಾಯತ್ರೀ ಮಂತ್ರ ಭಾಷ್ಯ
೧೬. ವಿವೇಕ ಚೂಡಾಮಣಿ
೧೭. ಉಪದೇಶಸಹಸ್ರಿ
೧೮. ಶತಶ್ಲೋಕೀ
೧೯. ದಶ ಶ್ಲೋಕೀ
೨೦. ಏಕಶ್ಲೋಕೀ
೨೧. ಪಂಚೀಕರಣ
೨೨. ಆತ್ಮ ಬೋಧ
೨೩. ಅಪರೋಕ್ಷಾನುಭೂತಿ
೨೪. ಸಾಧನಾ ಪಂಚಕಮ್
೨೫. ನಿರ್ವಾಣ ಶತಕಮ್
೨೬. ಮನೀಶ ಪಂಚಕಮ್
೨೭. ಯತಿ ಪಂಚಕಮ್
೨೮. ವಾಕ್ಯಸುಧಾ
೨೯. ತತ್ತ್ವ ಬೋಧ
೩೦. ವಾಕ್ಯವೃತ್ತಿ
೩೧. ಸಿದ್ಧಾಂತ ತತ್ತ್ವ ಬಿಂದು
೩೨. ನಿರ್ಗುಣ ಮಾನಸ ಪೂಜಾ
೩೩. ಪ್ರಶ್ನೋತ್ತರ ರತ್ನ ಮಾಲಿಕಾ
೩೪. ಪ್ರಬೋಧ ಸುಧಾಕರ
೩೫. ಸ್ವಾತ್ಮ ಪ್ರಕಾಶಿಕಾ
೩೬. ಸೌಂದರ್ಯ ಲಹರಿ
೩೭. ಶ್ರೀ ಗಣೇಶ ಪಂಚರತ್ನಂ
೩೮. ಶ್ರೀ ಅನ್ನಪೂರ್ಣಾಷ್ಟಕಂ
೩೯. ಶ್ರೀ ಕಾಲಭೈರವಾಷ್ಟಕಂ
೪೦. ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ
೪೧. ಶ್ರೀ ಕೃಷ್ಣಾಷ್ಟಕಮ್
೪೨. ಶ್ರೀ ನಾಮ ರಾಮಾಯಣಮ್
೪೩. ಭಜ ಗೋವಿಂದಂ
೪೩. ಶ್ರೀ ಶಿವಾನಂದಲಹರಿ
೪೪. ಶ್ರೀ ಲಕ್ಷ್ಮೀನರಸಿಂಹ ಕರಾವಲಂಬ ಸ್ತೋತ್ರಂ
೪೫. ಶ್ರೀ ಶಾರದಾ ಭುಜಂಗಮ್
೪೬. ಶ್ರೀ ಕನಕಧಾರಾ ಸ್ತೋತ್ರಂ
೪೭. ಶ್ರೀ ಭವಾನಿ ಅಷ್ಟಕಂ
೪೮. ಶ್ರೀ ಶಿವ ಮಾನಸ ಪೂಜಾ
೪೯. ಶ್ರೀ ಪಾಂಡುರಂಗಾಷ್ಟಕಮ್
೫೦. ಶ್ರೀ ಸುಬ್ರಹ್ಮಣ್ಯ ಭುಜಂಗಮ್
೫೧. ಕಾಶೀ ಪಂಚಕಂ
೫೨. ಶ್ರೀ ಮಹಿಷಾಸುರಮರ್ದಿನೀ ಸ್ತೋತ್ರಂ
೫೩. ಶ್ರೀ ಮೀನಾಕ್ಷೀ ಪಂಚರತ್ನಂ
೫೪. ಆತ್ಮ ಶತಕಂ
೫೫. ಯೋಗಸೂತ್ರ
೫೬. ಸೂತ್ರತ್ರಯೀ ಭಾಷ್ಯ

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.