ಸಂತರ ಜಾತಿಯ ಕೇಳಬೇಡ, ಅವರ ಜ್ಞಾನವನು ನೋಡು!

ಮಾಂಸದಂಗಡಿಯ ಧರ್ಮವ್ಯಾಧನಿಂದ ಆತ್ಮಬೋಧೆ ಪಡೆದ ಕೌಶಿಕ ಎಂಬ ಋಷಿಯೊಬ್ಬನ ಕಥೆ ನಮ್ಮ ಪ್ರಾಚೀನ ಸಾಹಿತ್ಯದಲ್ಲಿ  ಬರುತ್ತದೆ. ಝೆನ್ ಬುದ್ಧಿಸಮ್ ನಲ್ಲಿ ಜನಪ್ರಿಯವಾದ `ಸರಹ’ನ ಕಥೆಯೂ ಇಂಥದ್ದೇ. ಇಲ್ಲಿ ಋಷಿ ಕುಮಾರನೊಬ್ಬನು ಬಾಣದ ಮೊನೆ ತಯಾರಿಸುವ ಹೆಣ್ಣಿನಿಂದ ಬೋಧೆ ಪಡೆಯುತ್ತಾನೆ. ಶಂಕರಾಚಾರ್ಯರು ಚಾಂಡಾಲನಿಂದ ತಾವೇ ಪ್ರತಿಪಾದಿಸುತ್ತಿದ್ದ ಅದ್ವೈತ ತತ್ತ್ವದ ಅನ್ವಯವನ್ನು ಅರಿಯುತ್ತಾರೆ. ನಮ್ಮ ಪರಂಪರೆಯುದ್ದಕ್ಕೂ ಇಂಥಾ ಅಸಂಖ್ಯಾತ ಸಂತರ ಉದಾಹರಣೆಗಳನ್ನು ನಾವು ಕಾಣುತ್ತೇವೆ. ~ ಸಾ.ಹಿರಣ್ಮಯಿ

ಹುಶಃ ಜಾತಿಯ ವಿಷಯದಲ್ಲಿ ನಡೆಯುವಷ್ಟು ಜಿಜ್ಞಾಸೆ ನಮ್ಮ ದೇಶದಲ್ಲಿ ಇನ್ಯಾವುದರ ಕುರಿತೂ ನಡೆಯುವುದಿಲ್ಲ. ಜಾತಿ, ಆಹಾರ ಪದ್ಧತಿ, ಮಡಿ ಮೈಲಿಗೆ ಮತ್ತು ಅವುಗಳನ್ನು ಅನುಸರಿಸಿದ ಮೇಲು ಕೀಳುಗಳು ಸಮಾಜವನ್ನು ಒಡೆಯುವಷ್ಟು ಪ್ರಬಲವಾಗಿವೆ. ಇದನ್ನು ಕಂಡು ಬೇಸತ್ತ ಸ್ವಾಮಿ ವಿವೇಕಾನಂದರು `ನಿಮ್ಮ ಅಡುಗೆಮನೆ ಧರ್ಮವನ್ನು ಬದಿಗಿಡಿ. ಮನುಷ್ಯತ್ವವನ್ನು ಬೆಳೆಸಿಕೊಳ್ಳಿ` ಎಂದು ಗುಡುಗಿದ್ದರು. ಆ ಕಾಲದಲ್ಲಿ ಅಸ್ಪೃಷ್ಯತೆ ಆಚರಣೆಯ ವಿಕೃತಿಯ ತುದಿ ಮುಟ್ಟಿದ್ದ ಕೇರಳವನ್ನು ಹುಚ್ಚರ ಸಂತೆ ಎಂದು ಕರೆದು ತರಾಟೆಗೆ ತೆಗೆದುಕೊಂಡಿದ್ದರು.

ಅದಕ್ಕೂ ಮುನ್ನ, ಶತಶತಮಾನಗಳಿಂದಲೂ ಭಾರತದಲ್ಲಿ ಆಗಿಹೋದ ಸಂತರು ಜಾತಿ ಮತ ಪಂಥಗಳ ಪಂಜರದಿಂದ ಹೊರಬರುವಂತೆ ಕರೆನೀಡುತ್ತಲೇ ಬಂದಿದ್ದಾರೆ. ನಮ್ಮ ನೆಲದ ಸರ್ವಜ್ಞ `ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ? ಜಾತಿ ವಿಜಾತಿ ಎನಬೇಡ, ದೇವನೊಲಿದಾತನೇ ಜಾತ’ ಎಂದಿದ್ದಾನೆ. ಕನಕದಾಸರು `ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?’ ಎಂದು ಪ್ರಶ್ನಿಸಿದ್ದಾರೆ. ಉತ್ತರ ಭಾರತದಲ್ಲಿ ಈ ಘರ್ಷಣೆಯು ಧರ್ಮವೊಂದರ ಒಳಪಂಗಡಗಳ ತಾರತಮ್ಯವಷ್ಟೇ ಅಲ್ಲದೆ, ಧರ್ಮ – ಧರ್ಮಗಳ ನಡುವಿನ ಸಮಸ್ಯೆಯಾಗಿಯೂ ಉಲ್ಬಣಿಸಿತ್ತು. ಈ ಹಿನ್ನೆಲೆಯಲ್ಲಿಯೇ ಸಂತ ಕಬೀರರು `ಸಂತರ ಜಾತಿಯ ಕೇಳಬೇಡ, ಅವರ ಜ್ಞಾನವನು ನೋಡು‘ ಎಂದು ಹಾಡಿದ್ದು.

ಸಂತರ ಧರ್ಮ ಸಮನ್ವಯ
ಬಂಗಾಳದಲ್ಲಿ ಆಗಿಹೋದ ಚೈತನ್ಯ ಮಹಾಪ್ರಭುವಿಗೆ ಹಿಂದೂ – ಮುಸಲ್ಮಾನರೆರಡೂ ಧರ್ಮಗಳ ಅಸಂಖ್ಯಾತ ಶಿಷ್ಯರಿದ್ದರು. ಸಿಖ್ ಧರ್ಮ ಪ್ರವರ್ತಕರಾದ ಗುರು ನಾನಕರಿಗೂ ಅಷ್ಟೇ. ಶಿಶುನಾಳ ಷರೀಫರು ಗೋವಿಂದ ಗುರುಗಳ ಶಿಷ್ಯತ್ವ ಪಡೆದು ಜಾತ್ಯತೀತರಾಗಿ ನಿಂತು ಸಾಧನೆ ನಡೆಸಿದರು. ಗುಜರಾತಿನ ಸಂತ ದಾದೂ ದಯಾಲರದ್ದೂ ಇಂಥದ್ದೇ ಕಥೆ. ಸಾಬರ್‍ಮತಿಯ ತೀರದಲ್ಲಿ ದೊರೆತ ಶಿಶುವನ್ನು ಬ್ರಾಹ್ಮಣ ದಂಪತಿ ಸಾಕುತ್ತಾರೆ. ವಯಸ್ಕನಾದ ಮೇಲೆ ಈತ ಅಧ್ಯಾತ್ಮದತ್ತ ಒಲವು ತಳೆದು ಮನೆ ತೊರೆಯುತ್ತಾನೆ. ಪಿಂಜಾರ ವೃತ್ತಿ ಹಿಡಿಯುತ್ತಾನೆ. ಆತ್ಮಬೋಧೆ ಹೊಂದಿ ಸಂತ ಎನ್ನಿಸಿಕೊಳ್ಳುತ್ತಾನೆ. ಕೆಲವರು ದಾದೂ ದಯಾಲರನ್ನು ಬ್ರಾಹ್ಮಣ ಎಂದರೆ, ಕೆಲವರು ಪಿಂಜಾರ ಕುಲದವರು ಎನ್ನುತ್ತಾರೆ. ಮತ್ತೆ ಕೆಲವು ಮುಸಲ್ಮಾನನೆಂದರೆ, ಮತ್ತೆ ಕೆಲವರು ಮೋಚಿ ಜನಾಂಗದವರೆಂದು ಅಭಿಪ್ರಾಯ ಪಡುತ್ತಾರೆ. ಆದರೆ ಹುಟ್ಟು ಜಾತಿಯನ್ನರಿಯದ ದಾದೂ ದಯಾಲ್ ಈ ಎಲ್ಲವನ್ನು ಮೀರಿ ಜಾತ್ಯತೀತ ಸಂತರಾಗಿ ನಮ್ಮ ನಡುವೆ ಉಳಿದಿದ್ದಾರೆ. ಇನ್ನು ನಮ್ಮ ಶರಣ ಪರಂಪರೆ, ದಾಸ ಪರಂಪರೆ ಹಾಗೂ ಭಕ್ತಿ ಚಳವಳಿಗಳಂತೂ ಅಧ್ಯಾತ್ಮ ಸಾಧನೆಗೆ ಮತ್ತು ಬೋಧನೆಗೆ ಜಾತೀಯತೆಯ ಸೋಂಕು ಇರಲಾರದೆಂದು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ.

ಸಂತತನ ಅಥವಾ ಆಧ್ಯಾತ್ಮಿಕ ಜ್ಞಾನ ಜಾತಿ ಧರ್ಮಗಳ ಮಿತಿಗೆ ಅತೀತವಾದದ್ದು ಎನ್ನುವುದನ್ನು ನಮ್ಮ ಪುರಾಣಗಳೂ ಸಾರುತ್ತವೆ. ಮಾಂಸದಂಗಡಿಯ ಧರ್ಮವ್ಯಾಧನಿಂದ ಆತ್ಮಬೋಧೆ ಪಡೆದ ಕೌಶಿಕ ಎಂಬ ಋಷಿಯೊಬ್ಬನ ಕಥೆ ನಮ್ಮ ಪ್ರಾಚೀನ ಸಾಹಿತ್ಯದಲ್ಲಿ  ಬರುತ್ತದೆ. ಝೆನ್ ಬುದ್ಧಿಸಮ್ ನಲ್ಲಿ ಜನಪ್ರಿಯವಾದ `ಸರಹ’ನ ಕಥೆಯೂ ಇಂಥದ್ದೇ. ಇಲ್ಲಿ ಋಷಿ ಕುಮಾರನೊಬ್ಬನು ಬಾಣದ ಮೊನೆ ತಯಾರಿಸುವ ಹೆಣ್ಣಿನಿಂದ ಬೋಧೆ ಪಡೆಯುತ್ತಾನೆ. ಶಂಕರಾಚಾರ್ಯರು ಚಾಂಡಾಲನಿಂದ ತಾವೇ ಪ್ರತಿಪಾದಿಸುತ್ತಿದ್ದ ಅದ್ವೈತ ತತ್ತ್ವದ ಅನ್ವಯವನ್ನು ಅರಿಯುತ್ತಾರೆ. ನಮ್ಮ ಪರಂಪರೆಯುದ್ದಕ್ಕೂ ಇಂಥಾ ಅಸಂಖ್ಯಾತ ಸಂತರ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಆದರೆ ಜಾತೀಯತೆಯನ್ನೆ ಹೊದ್ದಿರುವ ಬಹುತೇಕರು ಈ ಸಂತರ ಸಾಲಿನಲ್ಲಿ ಒಬ್ಬರಲ್ಲ ಒಬ್ಬರ ಅನುಯಾಯಿಯಾಗಿದ್ದುಕೊಂಡೇ ಅವರ ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ, ತಮ್ಮ ಜಾತೀಯತೆಯನ್ನು ಗೆಲ್ಲಿಸಿಕೊಳ್ಳುವುದಕ್ಕಾಗಿ ಆ ಮಹಾತ್ಮರ ಚಿಂತನೆಯನ್ನೇ ತಿರುಚಿ ವ್ಯಾಖ್ಯಾನ ನೀಡುತ್ತಾರೆ.

ಸಬ್ ಕಾ ಮಾಲಿಕ್ ಏಕ್…
ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ಆಗಿಹೋದ ಸಂತ ಶಿರಡಿಯ ಸಾಯಿ ಬಾಬಾ ಅವರ ಜಾತಿ ಕುರಿತ ಪ್ರಶ್ನೆಗಳು ಇತ್ತೀಚೆಗೆ ಮತ್ತೆ ಚರ್ಚೆಗೆ ಬಂದಿದ್ದವು. ಈ ಚರ್ಚೆ ಹೊಸತೇನಲ್ಲ. ಬಾಬಾ ಅವರು ನಿಧನರಾದಾದಗಲೂ ಯಾವ ಜಾತಿಪದ್ಧತಿಯ ಅನುಸಾರ ಅಂತ್ಯಕ್ರಿಯೆ ಮಾಡಬೇಕು ಎನ್ನುವ ಭಾರೀ ಜಿಜ್ಞಾಸೆ ಏರ್ಪಟ್ಟಿತ್ತು. ವಾಸ್ತವದಲ್ಲಿ ಸಾಯಿ ಬಾಬಾ ಅವರ ಜನ್ಮ ಸ್ಥಳ, ಜಾತಿ, ತಾಯ್ತಂದೆಯರ ಬಗ್ಗೆ ನಿಖರ ಮಾಹಿತಿ ಇಲ್ಲ. ಈ ಕುರಿತು ಬಾಬಾ ಏನನ್ನೂ ಹೇಳಿರಲಿಲ್ಲವೆಂದು ಅವರ ಒಡನಾಟದಲ್ಲಿದ್ದ ನೇರ ಭಕ್ತರು ಹೇಳಿದ್ದಾರೆ.

ಸಿಂಧೀ ಸಂತರೊಬ್ಬರು ಬರೆದ `ಭೈರಾಗರ್’ ಕೃತಿಯಲ್ಲಿ ಬಾಬಾ ಅವರನ್ನು ಸಿಂಧಿ ಎಂದು ಹೇಳಲಾಗಿದೆ. ಮತ್ತೊಂದು ಕಥೆಯ ಪ್ರಕಾರ, ಉತ್ತರ ಭಾರತದ ಹಿಂದೂ ಕುಟುಂಬದಲ್ಲಿ ಜನಿಸಿದ ಬಾಬಾ ಅವರನ್ನು ಸಿಂಧ್‍ನ ಸೂಫಿ ಫಕೀರನೊಬ್ಬ ಕರೆದೊಯ್ದು ಅಧ್ಯಾತ್ಮ ದೀಕ್ಷೆ ಕೊಟ್ಟ. ಅಲ್ಲಿಂದ ಮುಂದೆ ಹದಿನಾಲ್ಕು ವರ್ಷಗಳ ಕಾಲ ಬಾಬಾ ವಿವಿಧ ಗುರುಗಳಿಂದ ಬೋಧನೆ ಪಡೆದು ಆತ್ಮ ಸಾಕ್ಷಾತ್ಕಾರ ಮಾಡಿಕೊಂಡರು. ಮತ್ತೆ ಕೆಲವರು ಬಾಬಾ ಅವರನ್ನು ಮುಸಲ್ಮಾನರೆಂದೂ ಹಿಂದೂ ಗುರುಗಳಿಂದ ಅಧ್ಯಾತ್ಮ ಬೋಧೆ ಪಡೆದರೆಂದೂ ಹೇಳುತ್ತಾರೆ. ಈ ಊಹಾಪೋಹಗಳೇನೇ ಇದ್ದರೂ ಬಾಬಾ ಯಾವೊಂದು ನಿರ್ದಿಷ್ಟ ಜಾತಿಗೆ ಅಂಟಿಕೊಂಡು ಜೀವಿಸಲಿಲ್ಲ. ಸ್ವತಃ ಸಮನ್ವಯದ ಬದುಕನ್ನು ಬಾಳುತ್ತಾ `ಸಬ್ ಕಾ ಮಾಲಿಕ್ ಏಕ್ ಹೈ’ ಎಂದು ಸಾರಿದರು.

ಎಲ್ಲ ಧರ್ಮಗಳೂ ಜೀವಿಗಳ ನಡುವೆ ಪ್ರೇಮ ಇರಬೇಕು, ಅದೇ ನಿಜಧರ್ಮ ಎಂದೇ ಬೋಧಿಸುತ್ತವೆ. ಜಾತಿ ಯಾವುದಾದರೇನು, ನೀತಿ ಮುಖ್ಯ. ಅದರಂತೆ ಬಾಳಿದರೆ ಸದ್ಗತಿ ನಿಶ್ಚಿತ. ಇಷ್ಟು ಸಾಕಲ್ಲವೆ ಮಾನವ ಜೀವಿತಕ್ಕೆ?

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.