ಅರಿತು ನಡೆಯಿರಿ… । ಇಂದಿನ ಸುಭಾಷಿತ

ಇಂದಿನ ಸುಭಾಷಿತ, ‘ನ್ಯಾಯ ರತ್ನಾಕರ’ದಿಂದ…

ದೃಷ್ಟಿಪೂತಂ ನ್ಯಸೇತ್‌ ಪಾದಂ ವಸ್ತ್ರಪೂತಂ ಪಿಬೇಜ್ಜಲಂ
ಶಾಸ್ತ್ರಪೂತಾಂ ವದೇದ್ವಾಚಂ ಮನಃಪೂತಂ ಸಮಾಚರೇತ್‌ ॥ನ್ಯಾಯರತ್ನಾಕರ : 22 ॥

ಅರ್ಥ: ಕಣ್ಣಿಂದ ನೋಡಿ ದೋಷರಹಿತವಾದ ಹೆಜ್ಜೆಯನ್ನಿಡಬೇಕು. ಬಟ್ಟೆಯಿಂದ ಶೋಧಿಸಿದ ನೀರನ್ನು ಕುಡಿಯಬೇಕು. ಶಾಸ್ತ್ರಸಮ್ಮತವಾದ (ತರ್ಕಬದ್ಧವಾದ) ಮಾತನ್ನಾಡಬೇಕು. ಮನಸ್ಸಿಗೆ ಸರಿ ಅನಿಸಿದ್ದನ್ನು ಆಚರಿಸಬೇಕು.

ತಾತ್ಪರ್ಯ: ನಾವು ಹೆಜ್ಜೆ ಇಡುವಾಗ ದಾರಿಯನ್ನು ಸರಿಯಾಗಿ ಗಮನಿಸಿ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಕಲ್ಲು ಮುಳ್ಳು ಚುಚ್ಚಿಯೋ, ಕೊರಕಲಿಗೆ ಬಿದ್ದೋ ಗಾಯವಾಗುವುದು ಖಚಿತ. ಹಾಗೆಯೇ ಬಟ್ಟೆಯಿಂದ ಶೋಧಿಸಿದ ಶುದ್ಧ ನೀರನ್ನು ಕುಡಿಯಬೇಕು. (ಈ ಕಾಲದಲ್ಲಿ ಫಿಲ್ಟರ್`ಗೆ ಹಾಕಿ ಶೋಧಿಸಿದ ನೀರು ಎಂದು ಇದನ್ನು ಅರ್ಥ ಮಾಡಿಕೊಳ್ಳಬೇಕು). ಇಲ್ಲವಾದರೆ ಖಾಯಿಲೆ ಖಚಿತ. ಅದೇ ರೀತಿ, ತರ್ಕಬದ್ಧವಾಗಿ, ಸುಸಂಬದ್ಧ ಉಲ್ಲೇಖಗಳೊಡನೆ ಮಾತನಾಡುವುದು ಉತ್ತಮ. ಇದು ನಾವು ಆಡುವ ಮಾತಿಗೊಂದು ಅಧಿಕೃತತೆ ತಂದುಕೊಡುತ್ತದೆ. ಕೊನೆಯದಾಗಿ, ನಮ್ಮ ಮನಸ್ಸಿಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನು ಮಾಡಬೇಕು. ಯಾರ ಒತ್ತಡಕ್ಕಾಗಲೀ, ಇತರ ಆಮಿಷಕ್ಕಾಗಲೀ ಬಲಿಯಾಗದೆ, ನಮ್ಮ ಮನ್ಸ್ಸಾಕ್ಷೀಗೆ ತಕ್ಕಂತೆ, ಅದು ಹೇಳಿದ ದಾರಿಯಲ್ಲಿ ನಡೆಯಬೇಕು. 

Leave a Reply