ಒಂಟೆಗಳ ಲೆಕ್ಕ ಮತ್ತು ಲೋಕ ಜ್ಞಾನ

ಬದುಕಿಗೆ ಪುಸ್ತಕದ ಜ್ಞಾನಕ್ಕಿಂತ ಲೋಕ ಜ್ಞಾನ ಹೆಚ್ಚು ಉಪಯುಕ್ತ. ಅನುಭವಗಳ ಮೂಸೆಯಲ್ಲಿ ಪುಸ್ತಕದ ಜ್ಞಾನ, ಲೋಕಜ್ಞಾನವಾಗಿ ಪಕ್ವವಾಗಬೇಕು. ಆಗಲೇ ಈ ತಿಳುವಳಿಕೆಗೆ ಒಂದು ಅರ್ಥ ಇಲ್ಲವಾದರೆ ಕಲಿಕೆಯೆಲ್ಲ ವ್ಯರ್ಥ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

Wisdom is practical, knowledge impractical. Knowledge is abstract, wisdom is earthly; knowledge is just words, wisdom is experience – Osho.

ಮೊನ್ನೆ ಒಂದು ಕಥೆ ಓದುತ್ತಿದ್ದೆ ಅದು ಅರೇಬಿಯಾದ ಕಥೆ.

ಒಬ್ಬ ಮನುಷ್ಯ ತೀರಿಕೊಂಡ. ಅವನ ಹತ್ತಿರ ಹದಿನೇಳು ಒಂಟೆಗಳಿದ್ದವು. ಅವನಿಗೆ ಮೂರು ಜನ ಮಕ್ಕಳು. ಅಪ್ಪ ತೀರಿಹೋದ ಮೇಲೆ ಮಕ್ಕಳು ಅಪ್ಪ ಬರೆದಿಟ್ಟಿದ್ದ ವಿಲ್ ಪೆಟ್ಟಿಗೆಯಿಂದ ಹೊರ ತೆಗೆದು ಓದಿದರು. ಅಪ್ಪ ಹದಿನೇಳು ಒಂಟೆಗಳನ್ನ ತನ್ನ ಮಕ್ಕಳಲ್ಲಿ ಹೀಗೆ ಹಂಚಿ ವಿಲ್ ಮಾಡಿದ್ದ. ಹದಿನೇಳು ಒಂಟೆಗಳಲ್ಲಿ ಎರಡನೇಯ ಒಂದು ಭಾಗ ಹಿರಿಯ ಮಗನಿಗೆ, ಮೂರನೇಯ ಒಂದು ಭಾಗ ಎರಡನೇಯ ಮಗನಿಗೆ ಮತ್ತು ಒಂಭತ್ತನೇಯ ಒಂದು ಭಾಗ ಕೊನೆಯ ಮಗನಿಗೆ.

ಹದಿನೇಳು ಒಂಟೆಗಳನ್ನು ಅಪ್ಪ ಹೇಳಿದ ಲೆಕ್ಕದಲ್ಲಿ ಹೇಗೆ ಹಂಚಿಕೊಳ್ಳುವುದು. ಅಪ್ಪನ ವಿಲ್ ಓದಿ ಮಕ್ಕಳು ಗಲಿಬಿಲಿಗೆ ಒಳಗಾದರು. ಒಂಟೆಗಳನ್ನು ಕೊಂದರೆ ಮಾತ್ರ ಹೀಗೆ ಹಂಚಿಕೊಳ್ಳಬಹುದು.

ಸಮಸ್ಯೆ ಬಗೆಹರಿಯದೇ ಮಕ್ಕಳು ಆ ಊರಿನಲ್ಲಿ ಒಳ್ಳೆಯ ವಿದ್ವಾಂಸ, ಗಣಿತಜ್ಞನೆಂದು ಹೆಸರಾಗಿದ್ದ ಒಬ್ಬ ಮುಲ್ಲಾನ ಬಳಿ ಹೋಗಿ ಅವನ ಎದುರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಮಲ್ಲಾ ಸುಮಾರು ಹೊತ್ತು ಹದಿನೇಳು ಒಂಟೆಗಳನ್ನು 1/2 : 1/3 : 1/9 ರ ಅನುಪಾತದಲ್ಲಿ ಹೇಗೆ ಹಂಚುವುದು ಎಂದು ಗಣಿತದ ಎಲ್ಲ ಫಾರ್ಮುಲಾಗಳನ್ನು ಬಳಸಿ ಲೆಕ್ಕ ಹಾಕಿ ಸೋತು ಸುಸ್ತಾದ. ಒಂಟೆಗಳನ್ನು ಕೊಲ್ಲದೇ ಈ ಸಮಸ್ಯೆ ಬಗೆಹರಿಯದು ಎಂದು ಕೈಚೆಲ್ಲಿದ. ಒಂಟೆಗಳನ್ನು ಹೀಗೆ ಹಂಚುವುದು ನನ್ನ ಗಣಿತದ ಪ್ರಕಾರವಂತೂ ಸಾಧ್ಯವಿಲ್ಲ ಎಂದು ತೀರ್ಮಾನ ಹೇಳಿದ.

ಮಕ್ಕಳ ಸಮಸ್ಯೆ ತಿಳಿದ ಒಬ್ಬ ಮನುಷ್ಯ, ಊರ ಹೊರಗೆ ಒಬ್ಬ ಒಂಟೆಯ ವ್ಯಾಪಾರಿ ಇದ್ದಾನೆ, ನೀವು ಅವನ ಹತ್ತಿರ ಹೋಗಿ, ಅವನು ನಿಮಗೆ ಸಹಾಯ ಮಾಡಬಹುದು ಎಂದು ಸಲಹೆ ನೀಡಿದ. ಮಕ್ಕಳು ಒಂಟೆಯ ವ್ಯಾಪಾರಿಯ ಹತ್ತಿರ ಬಂದರು. ಆ ವ್ಯಾಪಾರಿ ಹಣ್ಣು ಹಣ್ಣು ಮುದುಕ, ಅನಕ್ಷರಸ್ಥ ಆದರೆ ಮಹಾ ಅನುಭವಿ. ಮಕ್ಕಳು ಅವನೆದರು ತಮ್ಮ ಸಮಸ್ಯೆ ಹೇಳಿಕೊಂಡರು.

ಮಕ್ಕಳ ಮಾತು ಕೇಳಿ ಮುದುಕ ಜೋರಾಗಿ ನಕ್ಕುಬಿಟ್ಟ.

“ಇದೇನು ಅಂಥ ಮಹಾ ಸಮಸ್ಯೆ ಅಲ್ಲ. ನಾನು ನಿಮಗೆ ಒಂದು ಒಂಟೆ ಸಾಲ ಕೊಡತ್ತೇನೆ. ಆಗ ನಿಮ್ಮ ಹತ್ತಿರ ಒಟ್ಟು ಹದಿನೆಂಟು (17+1) ಒಂಟೆಗಳು. ಈ ಹದಿನೆಂಟು ಒಂಟೆಗಳಲ್ಲಿ ನಿಮ್ಮ ಅಪ್ಪನ ವಿಲ್ ಪ್ರಕಾರ ಎರಡನೇಯ ಒಂದು ಭಾಗ (18/2) ಹಾಗೆಂದರೆ ಒಂಭತ್ತು ಒಂಟೆಗಳು ಹಿರಿಯ ಮಗನಿಗೆ, ಮೂರನೇಯ ಒಂದು ಭಾಗ (18/3) ಅಂದರೆ ಆರು ಒಂಟೆಗಳು ಎರಡನೇಯವನಿಗೆ ಮತ್ತು ಒಂಭತ್ತನೇಯ ಒಂದು ಭಾಗದ (18/9) ಪ್ರಕಾರ ಎರಡು ಒಂಟೆಗಳು ಕೊನೆಯವನಿಗೆ. ನಿಮ್ಮ ಅಪ್ಪನ ಲೆಕ್ಕ ಈಗ ಸರಿಯಾಯಿತು. ಹೀಗೆ ನಿಮಗೆ ಒಂಟೆಗಳನ್ನು ಹಂಚಿದ ಮೇಲೆ ಇನ್ನೂ ಒಂದು ಒಂಟೆ ಉಳಿದಿದೆ ( 18-9-6-2=1) ಅದು ನಾನು ನಿಮಗೆ ಸಾಲ ಕೊಟ್ಟ ಒಂಟೆ, ಅದನ್ನು ನಾನು ಇಟ್ಟುಕೊಳ್ಳುತ್ತೇನೆ. ಈಗ ನೀವು ಹೋಗಬಹುದು “

ಬದುಕಿಗೆ ಪುಸ್ತಕದ ಜ್ಞಾನಕ್ಕಿಂತ ಲೋಕ ಜ್ಞಾನ ಹೆಚ್ಚು ಉಪಯುಕ್ತ. ಅನುಭವಗಳ ಮೂಸೆಯಲ್ಲಿ ಪುಸ್ತಕದ ಜ್ಞಾನ, ಲೋಕಜ್ಞಾನವಾಗಿ ಪಕ್ವವಾಗಬೇಕು. ಆಗಲೇ ಈ ತಿಳುವಳಿಕೆಗೆ ಒಂದು ಅರ್ಥ ಇಲ್ಲವಾದರೆ ಕಲಿಕೆಯೆಲ್ಲ ವ್ಯರ್ಥ.

Osho, Come Follow To You, Vol 1, Ch 4, Q 1 (excerpt)


Leave a Reply