‘ಗೊತ್ತಿಲ್ಲ’ ಅನ್ನೋದು ಅತ್ಯಂತ ಆಪ್ತ ಕಾರಣ… | ಓಶೋ ವ್ಯಾಖ್ಯಾನ

ಝೆನ್ ಪ್ರಕಾರ ಮನುಷ್ಯ ಒಂದು ಏಣಿ ಇದ್ದ ಹಾಗೆ. ಅತೀ ಕೆಳಗಿನ ಹಣಿಗೆ ಬದ್ಧಿ-ಮನಸ್ಸು (mind) ಹಾಗು ಅತಿ ಮೇಲಿನ ಹಣಿಗೆ ಶೂನ್ಯ ಭಾವ (no mind). ಝೆನ್ ನಲ್ಲಿ ನೋ ಮೈಂಡ್ ಸ್ಥಿತಿಯನ್ನ ಪ್ರವೇಶ ಮಾಡಿರುವ ಮನುಷ್ಯ ಮಾತ್ರ ಎತ್ತರದ ಜಾಗವನ್ನು ಏರಬಲ್ಲ ಮತ್ತು ಮನುಷ್ಯರ ಜೊತೆ ಮಾತನಾಡಲು ಅಧಿಕಾರ ಸಾಧಿಸಬಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಈ ಝೆನ್ ಕಥೆ ಗಮನಿಸಿ.

ಮೇಲಿನ ಸ್ಥಾನಕ್ಕೆ ಏರುತ್ತ ಡೋಜನ್ ಝೆಂಜಿ ಒಂದು ಘಟನೆಯ ಬಗ್ಗೆ ಹೇಳಿದರು,

ಝೆನ್ ಮಾಸ್ಟರ್ ಹೋಜನ್, ಮಾಸ್ಟರ್ ಕೈಶಿನ್ ಝೆಂಜಿಯ ಹತ್ತಿರ ಅಭ್ಯಾಸ ಮಾಡಿದ್ದ. ಒಮ್ಮೆ ಮಾಸ್ಟರ್ ಕೈಶಿನ್, ಹೋಜನ್ ನ ಕೇಳಿದ,

“ಜೋಝಾ, ಎಲ್ಲಿಗೆ ಹೋಗುತ್ತಿದ್ದೀಯ?”

“ ನಾನು ತೀರ್ಥಯಾತ್ರೆ ಮಾಡುತ್ತಿದ್ದೇನೆ ಗೊತ್ತು ಗುರಿಯಿಲ್ಲದೆ.” ಹೋಜನ್ ಉತ್ತರಿಸಿದ.

“ನಿನ್ನ ತೀರ್ಥಯಾತ್ರೆಯ ಕಾರಣ ಏನು?” ಮಾಸ್ಟರ್ ಕೈಶಿನ್ ಝೆಂಜಿ ಮತ್ತೆ ಕೇಳಿದ.

“ ನನಗೆ ಗೊತ್ತಿಲ್ಲ” ಹೋಜನ್ ನ ಉತ್ತರ.

“ ಗೊತ್ತಿಲ್ಲ ಅನ್ನೋದು ಅತ್ಯಂತ ಆಪ್ತ ಕಾರಣ” ಮಾಸ್ಟರ್ ಕೈಶಿನ್ ಝೆಂಜಿಗೆ ತುಂಬ ಖುಶಿಯಾಯ್ತು.

ಕೈಶಿನ್ ಝೆಂಜಿಯ ಮಾತು ಕೇಳುತ್ತಿದ್ದಂತೆಯೇ, ಹೋಜನ್ ಗೆ ಜ್ಞಾನೋದಯವಾಯಿತು.


ಝೆನ್ ಗೆ ಹೋಲಿಸುವಂಥದ್ದು ಇನ್ನೊಂದಿಲ್ಲ, ಅಷ್ಟು ವಿಶಿಷ್ಟ, ಅಷ್ಟು ಅನನ್ಯವಾದದ್ದು ಝೆನ್. ವಿಶಿಷ್ಟ ಎಂದರೆ ಅತೀ ಸಾಧಾರಣ ಮತ್ತು ಆದ್ದರಿಂದಲೇ ಮನುಷ್ಯ ಪ್ರಜ್ಞೆಗೆ ಸಾಧ್ಯವಾದ ಅಸಾಧಾರಣ ವಿದ್ಯಮಾನ. ಯಾಕೆ ಸಾಧಾರಣ ಎಂದರೆ ವಿಷಯ ಜ್ಞಾನದ ಬಗ್ಗೆ ಝೆನ್ ಗೆ ನಂಬಿಕೆಯಿಲ್ಲ, ಬುದ್ಧಿ-ಮನಸ್ಸುಗಳಲ್ಲಿ ನಂಬಿಕೆಯಿಲ್ಲ. ಝೆನ್ ತತ್ವಜ್ಞಾನ, ಧರ್ಮ ಕೂಡ ಅಲ್ಲ. ಝೆನ್ ಎಂದರೆ ಸಾಧಾರಣ ಅಸ್ತಿತ್ವದ ಪರಿಪೂರ್ಣ ಸ್ವೀಕಾರ ಇಡಿಯಾಗಿ ಯಾವ ಬೇರೆ ಬೇರೆ ಜಗತ್ತಿನ ಬಯಕೆಗಳಿಲ್ಲದೆ.

ನೀರಸವಾದದ್ದನ್ನ ಪವಿತ್ರವಾಗಿಸುವಲ್ಲಿಯೇ ಝೆನ್ ನ ಮಾಂತ್ರಿಕತೆ ಅಡಗಿದೆ. ಈ ಬಗೆಯಿಂದ ಬದುಕನ್ನ ಯಾರೂ ಸಮೀಪಿಸಿರಲಿಲ್ಲ, ಈ ಥರ ಬದುಕನ್ನ ಯಾರೂ ಗೌರವಿಸಿರಲಿಲ್ಲ.

ಝೆನ್, ಬುದ್ಧ ಮತ್ತು ಲಾವೋತ್ಸು ಇಬ್ಬರನ್ನೂ ಮೀರಿ ಹೋಗುವಂಥದು. ಇದು ಭಾರತೀಯ ಮತ್ತು ಚೀನೀ ಜಿನೀಯಸ್ ಗಳ ಸಂಕರ ಮತ್ತು ಮೀರುವಿಕೆಯೂ ಹೌದು. ಭಾರತಿಯ ಪ್ರತಿಭೆ ತನ್ನ ತುತ್ತ ತುದಿಯನ್ನ ಗೌತಮ ಬುದ್ಧನಲ್ಲಿ ಕಂಡರೆ, ಚೀನಾ ತನ್ನ ಅತ್ಯುನ್ನತ ತಾತ್ವಿಕತೆಯನ್ನ ಲಾವೋತ್ಸು ನಲ್ಲಿ ಗುರುತಿಸಿತು. ಬುದ್ಧ ಮತ್ತು ಲಾವೋತ್ಸುನ ತಿಳುವಳಿಕೆಯ ತಿರುಳು ಒಂದು ಧಾರೆಯಲ್ಲಿ ಎಷ್ಟು ಆಳವಾಗಿ ಒಂದಾದವೆಂದರೆ ಇನ್ನು ಇವನ್ನು ಬೇರೆ ಬೇರೆಯಾಗಿ ಗುರುತಿಸುವುದು ಸಾಧ್ಯವೇ ಇಲ್ಲ. ಝೆನ್ ತಿಳುವಳಿಕೆಯಲ್ಲಿ ಯಾವುದು ಬುದ್ಧನಿಗೆ ಸೇರಿದ್ದು ಯಾವುದು ಲಾವೋತ್ಸುನ ಭಾಗ ಎಂದು ಗುರುತಿಸಲಿಕ್ಕಾಗುವುದೇ ಇಲ್ಲ. ಹಾಗಾಗಿ ಝೆನ್, ಬುದ್ಧಿಸ್ಟ್ ಅಲ್ಲ ತಾವೋಯಿಸ್ಟ್ ಕೂಡ ಅಲ್ಲ ಆದರೂ ಈ ಎರಡೂ ಹೌದು.

ಝೆನ್ ಬುದ್ಧಿಸಂ ಎಂದು ಕರೆಯವುದು ಸರಿ ಅಲ್ಲ.
ಬುದ್ಧ, ಝೆನ್ ನಷ್ಟು ನೆಲಕ್ಕೆ ಹತ್ತಿರ ಅಲ್ಲ, ಲಾವೋತ್ಸು ಅಪ್ಪಟ ನೆಲದ ಮನುಷ್ಯ. ಆದರೆ ಝೆನ್ ಕೇವಲ ನೆಲಕ್ಕಷ್ಟೇ ಹತ್ತಿರವಲ್ಲ ಅದರ ನೋಟ ನೆಲವನ್ನು ಸ್ವರ್ಗವನ್ನಾಗಿಸಬಲ್ಲದು. ಲಾವೋತ್ಸು ನೆಲ, ಬುದ್ಧ ಸ್ವರ್ಗ ಹಾಗಾಗಿ ಝೆನ್ ದ್ಯಾವಾಪೃಥ್ವಿ. ನೆಲ ಮತ್ತು ಸ್ವರ್ಗ ಎರಡೂ ಆಗಿರುವುದರಿಂದಲೇ ಝೆನ್ ಒಂದು ಅಸಾಧಾರಣ ವಿದ್ಯಮಾನ. ಪೂರ್ವ ಪಶ್ಚಿಮಗಳನ್ನು ಬೆಸೆಯಬಲ್ಲ ಏಕೈಕ ಭರವಸೆ ಝೆನ್.

ಈಗ ಮೇಲಿನ ಸುಂದರ ಝೆನ್ ಕಥೆಗೆ ಬರೋಣ.

ಈ ಕಥೆಯ ಪ್ರತೀ ಶಬ್ದವನ್ನೂ ಧ್ಯಾನಿಸಿ. ಈ ಪುಟ್ಟ ಘಟನೆಯಲ್ಲಿ ಜಗತ್ತಿನ ಮಹಾನ್ ಶಾಸ್ತ್ರಗಳ ಸಾರ ಅಡಗಿದೆ.

ಮೇಲಿನ ಸ್ಥಾನಕ್ಕೆ ಏರುತ್ತ ……

ಇದು ಸಾಂಕೇತಿಕ, ಮಹತ್ತರವಾದುದನ್ನ ವ್ಯಕ್ತಮಾಡುವ ಒಂದು ರೂಪಕ. ಝೆನ್ ಪ್ರಕಾರ ಮನುಷ್ಯ ಒಂದು ಏಣಿ ಇದ್ದ ಹಾಗೆ. ಅತೀ ಕೆಳಗಿನ ಹಣಿಗೆ ಬದ್ಧಿ-ಮನಸ್ಸು (mind) ಹಾಗು ಅತಿ ಮೇಲಿನ ಹಣಿಗೆ ಶೂನ್ಯ ಭಾವ (no mind). ಝೆನ್ ನಲ್ಲಿ ನೋ ಮೈಂಡ್ ಸ್ಥಿತಿಯನ್ನ ಪ್ರವೇಶ ಮಾಡಿರುವ ಮನುಷ್ಯ ಮಾತ್ರ ಎತ್ತರದ ಜಾಗವನ್ನು ಏರಬಲ್ಲ ಮತ್ತು ಮನುಷ್ಯರ ಜೊತೆ ಮಾತನಾಡಲು ಅಧಿಕಾರ ಸಾಧಿಸಬಲ್ಲ.

ಝೆನ್ ಮಾಸ್ಟರ್ ಹೋಜನ್, ಮಾಸ್ಟರ್ ಕೈಶಿನ್ ಝೆಂಜಿಯ ಜೊತೆ ಅಭ್ಯಾಸ ಮಾಡಿದ್ದ. ಒಮ್ಮೆ ಮಾಸ್ಟರ್ ಕೈಶಿನ್, ಹೋಜನ್ ನ ಕೇಳಿದ,

“ ಜೋಝಾ, ಎಲ್ಲಿಗೆ ಹೋಗುತ್ತಿದ್ದೀಯ? “

ಇದು ಝೆನ್ ನ ಮಾತಿನ ವರಸೆ. ಇಲ್ಲಿ ಮೂರು ಮುಖ್ಯ ಪ್ರಶ್ನೆಗಳು. ಎಲ್ಲಿಗೆ ಹೋಗುತ್ತಿದ್ದೀಯ ಎಂದರೆ, ನಿನ್ನ ಗುರಿ ಏನು ? ಜೊತೆಯೇ ಇನ್ನೊಂದು ಪ್ರಶ್ನೆ ನಿನ್ನ ಬದುಕಿನ ಮೂಲ ಸ್ರೋತ ಯಾವುದು ? ಮತ್ತು ನೀನು ಯಾರು ?

….ಮಾಸ್ಟರ್ ಕೈಶಿನ್, ಹೋಜನ್ ನ ಕೇಳಿದ,

“ ಜೋಝಾ, ಎಲ್ಲಿಗೆ ಹೋಗುತ್ತಿದ್ದೀಯ?”

“ ನಾನು ತೀರ್ಥಯಾತ್ರೆ ಮಾಡುತ್ತಿದ್ದೇನೆ ಗೊತ್ತು ಗುರಿಯಿಲ್ಲದೆ.” ಹೋಜನ್ ಉತ್ತರಿಸಿದ…..

ಈ ಉತ್ತರದಲ್ಲಿನ ಸೌಂದರ್ಯ ಗಮನಿಸಿ. ನೀವು ಕಾಶಿ, ಕಾಬಾ, ಜೆರುಸಲೇಂ ಗೆ ಹೋಗುತ್ತಿರುವಿರಾದರೆ ಅದು ತೀರ್ಥಯಾತ್ರೆ ಅಲ್ಲ. ನಿಮ್ಮ ಯಾತ್ರೆಗೆ ಒಂದು ಗುರಿ, ಒಂದು ಉದ್ದೇಶವಿರುವಾಗ ಅಲ್ಲಿ ಬುದ್ಧಿ ಮನಸ್ಸಿನ ಹಾಜರಾತಿ ಖಚಿತ ಮತ್ತು ಮೈಂಡ್ ಹಾಗು ಬಯಕೆಯನ್ನು ಹೊತ್ತು ಯಾವ ತೀರ್ಥಯಾತ್ರೆಯೂ ಸಾಧ್ಯವಾಗುವುದಿಲ್ಲ. ಸುಮ್ಮನೇ ಒಣಗಿದ ಎಲೆ ಗಾಳಿ ಕರೆದುಕೊಂಡು ಹೋದಲ್ಲೆಲ್ಲ ಹೋಗುವ ಹಾಗೆ ನಿಮ್ಮ ಯಾತ್ರೆಯಲ್ಲಿ ಗುರಿ, ಉದ್ದೇಶ ಇಲ್ಲದಾಗ ಮಾತ್ರ ಅದು ತೀರ್ಥ ಯಾತ್ರೆ.

“ ನಿನ್ನ ತೀರ್ಥಯಾತ್ರೆಯ ಕಾರಣ ಏನು?” ಮಾಸ್ಟರ್ ಕೈಶಿನ್ ಝೆಂಜಿಯ ಮತ್ತೆ ಕೇಳಿದ….

ಝೆನ್ ಮಾಸ್ಟರ್ ಮತ್ತೆ ಕೇಳುತ್ತಿದ್ದಾನೆ ತೀರ್ಥಯಾತ್ರೆಗೆ ಕಾರಣ, ಏಕೆಂದರೆ ಹೋಜನ್ ಸುಮ್ಮನೇ ಮಾತಿನ ಭರದಲ್ಲಿ ‘ಗೊತ್ತುಗುರಿ’ ಇಲ್ಲದೆಯೆ ಅಂತ ಹೇಳಿರಬಹುದು. ಅಥವಾ ಯಾವುದಾದರು ಝೆನ್ ಪುಸ್ತಕ ಓದಿ ಆ ವಿಷಯ ಜ್ಞಾನದ ನೆನಪಿನಲ್ಲಿ ಹೇಳಿರಬಹುದು. ಈ ಥರದ ಉತ್ತರಗಳಿಂದ ಪ್ರಯೋಜನವಿಲ್ಲ. ಉತ್ತರ ಅತ್ಯಂತ ಪ್ರಾಮಾಣಿಕವಾಗಿ ಅವನ ಆಂತರ್ಯದಿಂದ ಸಾಧ್ಯವಾಗಿರಬೇಕು. ಆದ್ದರಿಂದಲೇ ಮಾಸ್ಟರ್ ಮತ್ತೆ ಪ್ರಶ್ನೆ ಕೇಳುತ್ತಿದ್ದಾನೆ

“ ನಿನ್ನ ತೀರ್ಥಯಾತ್ರೆಯ ಕಾರಣ ಏನು?” ಮಾಸ್ಟರ್ ಕೈಶಿನ್ ಝೆಂಜಿಯ ಮತ್ತೆ ಕೇಳಿದ.

“ ನನಗೆ ಗೊತ್ತಿಲ್ಲ” ಹೋಜನ್ ನ ಉತ್ತರ.

ಹೋಜನ್ ಝೆನ್ ಪುಸ್ತಕ ಓದಿ ಗಿಳಿಪಾಠ ಒಪ್ಪಿಸುತ್ತಿದ್ದಾನಾದರೆ ಅವನು ಮತ್ತೆ ಅದೇ ಉತ್ತರ ಕೊಡುತ್ತಿದ್ದ ಅಥವಾ ಅದೇ ಉತ್ತರವನ್ನ ಇನ್ನೊಂದು ರೀತಿಯಲ್ಲಿ ಹೇಳುತ್ತಿದ್ದ. ಆದರೆ ಹೋಜನ್ ನ ಉತ್ತ ನೋಡಿ ಎಷ್ಟು ಪ್ರಾಮಾಣಿಕ, “ನನಗೆ ಗೊತ್ತಿಲ್ಲ” ಗೊತ್ತುಗುರಿಯಿಲ್ಲದೇ ನೀವು ತೀರ್ಥಯಾತ್ರೆ ಮಾಡುತ್ತಿರುವಿರಾದರೆ, ತೀರ್ಥಯಾತ್ರೆಯ ಉದ್ದೇಶ ನಿಮಗೆ ಗೊತ್ತಿರುವುದು ಹೇಗೆ ಸಾಧ್ಯ?

“ ಗೊತ್ತಿಲ್ಲ ಅನ್ನೋದು ಅತ್ಯಂತ ಆಪ್ತ ಕಾರಣ”

ವಿಷಯ ಜ್ಞಾನ ನಿಮ್ಮ ಮತ್ತು ನಿಜದ ನಡುವೆ ಒಂದು ಅಂತರವನ್ನು ಸೃಷ್ಟಿ ಮಾಡುತ್ತದೆ. ನಿಮ್ಮ ವಿಷಯ ಜ್ಞಾನ ಹೆಚ್ಚಾದಂತೆಲ್ಲ ಈ ಅಂತರವೂ ಹೆಚ್ಚಾಗುತ್ತದೆ. ಯಾವಾಗ ನಿಮಗೆ ಏನೂ ಗೊತ್ತಿಲ್ಲವೋ, ವಿಷಯದ ಬಗ್ಗೆ ಜ್ಞಾನ ಇಲ್ಲವೋ ಆಗ ನಿಮ್ಮ ಮತ್ತು ನಿಜದ ನಡುವೆ ಒಂದು ಆಪ್ತ ಗೆಳೆತನ, ಒಂದು ಮಧುರ ಪ್ರೇಮ ಸಂಬಂಧ ಸಾಧ್ಯವಾಗುತ್ತದೆ. ಈಗ ನೀವು ನಿಜವನ್ನು ಅಪ್ಪಿಕೊಂಡಿದ್ದೀರಿ ಮತ್ತು ನಿಜ ನಿಮ್ಮೊಳಗೆ ದಾಖಲಾಗಿದೆ, ಪ್ರೇಮಿಗಳು ಒಬ್ಬರನ್ನೊಬ್ಬರು ಕೂಡಿಕೊಳ್ಳುವಂತೆ. ಈಗ ನಿಮ್ಮಿಬ್ಬರ ನಡುವೆ ಯಾವ ವಿಭಜನೆ ಇಲ್ಲ. ವಿಷಯ ಜ್ಞಾನ ನಿಮ್ಮನ್ನ ಬೇರೆ ಮಾಡಿದರೆ ‘ಗೊತ್ತಿಲ್ಲ’ ಎನ್ನುವುದು ನಿಮ್ಮನ್ನು ಒಂದು ಮಾಡುತ್ತದೆ.

“ ಗೊತ್ತಿಲ್ಲ ಅನ್ನೋದು ಅತ್ಯಂತ ಆಪ್ತ ಕಾರಣ” ಮಾಸ್ಟರ್ ಕೈಶಿನ್ ಝೆಂಜಿಗೆ ತುಂಬ ಖುಶಿಯಾಯ್ತು.

ಕೈಶಿನ್ ಝೆಂಜಿಯ ಮಾತು ಕೇಳುತ್ತಿದ್ದಂತೆಯೇ, ಹೋಜನ್ ಗೆ ಜ್ಞಾನೋದಯವಾಯಿತು.

ಹೋಜನ್ ನ ಉತ್ತರಗಳನ್ನ ಗಮನಿಸಿದರೆ ಬಹುಶಃ ಆತ ಜ್ಞಾನೋದಯಕ್ಕೆ ತುಂಬ ಹತ್ತಿರ ಇದ್ದಿರಬಹುದು. ಯಾವಾಗ ಮಾಸ್ಟರ್ ಕೈಶಿನ್ ಝೆಂಜಿ , ಹೋಜನ್ ನ ಉತ್ತರವನ್ನ ಖುಶಿಯಿಂದ ಅನುಮೋದಿಸುತ್ತಾನೋ ಆ ಕ್ಷಣದಲ್ಲಿ ಹೋಜನ್ ಗಡಿ ದಾಟಿ ಜ್ಞಾನೋದಯವನ್ನು ಪ್ರವೇಶ ಮಾಡುತ್ತಾನೆ.

ಜ್ಞಾನೋದಯ ಯಾವಾಗಲೂ ಥಟ್ಟನೇ ಆಗುವಂಥದು ಏಕೆಂದರೆ ಅದು ಒಂದು ಸಾಧನೆಯಲ್ಲ. ಅದು ಈಗಾಗಲೇ ನಮ್ಮೊಳಗೆ ಇರುವಂಥದು, ನಾವು ನೆನಪಿಸಿಕೊಳ್ಳಬೇಕಷ್ಟೇ, ಇದು ಕೇವಲ ನೆನಪಿಸುವಂಥದು, ನಾವು ಗುರುತಿಸಿಕೊಳ್ಳುವಂಥದು. ನೀವು ಈಗಾಗಲೇ ಜ್ಞಾನೋದಯವನ್ನ ಹೊಂದಿದವರು ನಿನಗೆ ಅದರ ಅರಿವಾಗಬೇಕಷ್ಟೇ.

ಈ ಸುಂದರ ಘಟನೆಯನ್ನ ಧ್ಯಾನಿಸಿ. ‘ಗೊತ್ತಿಲ್ಲ ಅನ್ನೋದು ಅತ್ಯಂತ ಆಪ್ತ’ ಈ ತಿಳುವಳಿಕೆ ನಿಮ್ಮ ಅಸ್ತಿತ್ವದ ತುಂಬ ಅನುರಣಿಸಲಿ.

Osho, Ah this, Talks on Zen stories. (Excerpt)


Leave a Reply