(ಸಂಗ್ರಹ ಮತ್ತು ನಿರೂಪಣೆ : ಚಿದಂಬರ ನರೇಂದ್ರ)
ಒಬ್ಬ ಝೆನ್ ಮಾಸ್ಟರ್ ಗೆ ಒಬ್ಬ ಅತೃಪ್ತ ಶಿಷ್ಯನಿದ್ದ. ಆತ ಒಂದಿಲ್ಲೊಂದು ಕಾರಣದಿಂದ ಸದಾ ದುಃಖಿಯಾಗಿರುತ್ತಿದ್ದ. ಒಂದು ದಿನ ಶಿಷ್ಯ ಮಾಸ್ಟರ್ ಹತ್ತಿರ ಹೋಗಿ ಕೇಳಿಕೊಂಡ.
“ಮಾಸ್ಟರ್, ನನ್ನ ಮೇಲೆ ನಿಮ್ಮ ಆಶೀರ್ವಾದವಿರಲಿ, ನನಗೂ ನಿಮ್ಮ ತಿಳಿವನ್ನು ದಯಪಾಲಿಸಿ, ನನಗೆ ದುಃಖದಿಂದ ಮುಕ್ತಿ ಬೇಕು, ಆನಂದವನ್ನು ಹುಡುಕಬೇಕು ನಾನು”
ಮಾಸ್ಟರ್, ಆ ಅತೃಪ್ತ ಶಿಷ್ಯನಿಗೆ ಒಂದು ಮುಷ್ಟಿ ಉಪ್ಪನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ, ಕರಗಿಸಿ, ಕುಡಿಯಲು ಹೇಳಿದರು.
ಒಂದು ಗುಟುಕು ಉಪ್ಪಿನ ನೀರು ಬಾಯಿಗೆ ಬೀಳುತ್ತಲೇ ಶಿಷ್ಯ, ವ್ಯಾಕ್ ಎನ್ನುತ್ತ ಎಲ್ಲ ಉಗುಳಿ ಬಿಟ್ಟ.
“ಯಾಕೆ? ಹೇಗಿದೆ ರುಚಿ ?” ಕೇಳಿದರು ಮಾಸ್ಟರ್.
“ದರಿದ್ರವಾಗಿದೆ” ಎಂದ ಶಿಷ್ಯ.
ಮಾಸ್ಟರ್, ಶಿಷ್ಯನ ಕೈ ಹಿಡಿದುಕೊಂಡು ದರದರನೇ ಎಳೆದುಕೊಂಡು ಸಮೀಪದ ಕೊಳದ ಹತ್ತಿರ ಬಂದರು.
“ಈ ಕೊಳದಲ್ಲಿ ಒಂದು ಮುಷ್ಟಿ ಉಪ್ಪು ಹಾಕು ನೋಡೋಣ” ಎಂದರು.
ಶಿಷ್ಯ, ಮಾಸ್ಟರ್ ಹೇಳಿದಂತೆ ಮಾಡಿದ.
“ಈಗ ಕೊಳದ ನೀರು ಕುಡಿದು ಹೇಳು, ರುಚಿ ಹೇಗಿದೆ? ಮೊದಲಿನ ಹಾಗೆ ಉಪ್ಪು ಉಪ್ಪಾಗಿದೆಯಾ?”
ಶಿಷ್ಯ, ಕೊಳದಿಂದ ಒಂದು ಬೊಗಸೆ ನೀರು ಕುಡಿದು ಹೇಳಿದ “ಇಲ್ಲ ಮಾಸ್ಟರ್, ರುಚಿಯಾಗಿದೆ”
ಶಿಷ್ಯನನ್ನು ಕೊಳದ ದಂಡೆಯ ಮೇಲೆ ಕೂರಿಸಿ, ಕೈ ಹಿಡಿದುಕೊಂಡು ಮಾಸ್ಟರ್ ಹೇಳಿದರು.
“ಬದುಕಿನಲ್ಲಿ ದುಃಖದ ಪ್ರಮಾಣ ಒಂದು ಮುಷ್ಟಿ ಉಪ್ಪಿನಷ್ಟೇ. ಆದರೆ ಅದನ್ನು ಅನುಭವಿಸುವಾಗ, ನೀನು ಗ್ಲಾಸಿನಷ್ಟಾಗಬೇಡ, ಕೊಳದಷ್ಟಾಗು. ದುಃಖವನ್ನು, ಭರಿಸುವ ನಿನ್ನ ಅರಿವಿನ ವ್ಯಾಪ್ತಿ ಕೊಳದಷ್ಟು ವಿಶಾಲವಾಗಲಿ. ಆಗ ನಿನಗೆ ಕೊಳದ ನೀರಿನಂತೆ ಎಲ್ಲ ರುಚಿಯಾಗೇ ಇರುವುದು”.