ಪ್ರಸ್ತುತದಲ್ಲಿ ಬದುಕಲು ಕಲಿಯಿರಿ, ನೀವು ನೀವಾಗಿರಿ … ~ ಓಶೋ, ‘ದ ಬುಕ್ ಆಫ್ ಮ್ಯಾನ್’ #2

“ಒಂದು ಮಲ್ಲಿಗೆ ಹೂವು, ಅದು ಮಲ್ಲಿಗೆ ಹೂವು ಬಿಟ್ಟರೆ ಬೇರೇನು ಆಗಲು ಸಾಧ್ಯವಿಲ್ಲ. ಒಂದು ದಾಸವಾಳ ಹೂವು, ಅದು ದಾಸವಾಳ ಬಿಟ್ಟರೆ ಬೇರೇನು ಆಗಲು ಸಾಧ್ಯವಿಲ್ಲ. ಮಲ್ಲಿಗೆ ಎಂದು ತಾನು ದಾಸವಾಳವಾಗಬೇಕೆಂದು ಪ್ರಯತ್ನಿಸುವುದಿಲ್ಲ. ದಾಸವಾಳ ಎಂದು ತಾನು ಮಲ್ಲಿಗೆಯಾಗಬೇಕೆಂದು ಯೋಚಿಸುವುದಿಲ್ಲ. ಅವು ಅತ್ತ್ಯಂತ ಆನಂದವಾಗಿ ತಮ್ಮ ಪ್ರಸ್ತುತವನ್ನು, ತಮ್ಮ ಇರುವಿಕೆಯನ್ನು ಅನುಭವಿಸುತ್ತವೆ. ಇದು ಪ್ರಕೃತಿಯ ನಿಯಮ. ಮನುಷ್ಯ ಮಾತ್ರ ಈ ನಿಯಮವನ್ನು ಅನುಸರಿಸದೆ ಪ್ರಸ್ತುತವನ್ನು ಮರೆತು ಬದುಕನ್ನು ಸಂಕೀರ್ಣ ಮಾಡಿಕೊಳ್ಳುತ್ತಾನೆ” ಅನ್ನುತ್ತಾರೆ ಓಶೋ ರಜನೀಶ್ | ದ ಬುಕ್ ಆಫ್ ಮ್ಯಾನ್ ; ಕನ್ನಡ ಸಾರಾಂಶ ~ ಪ್ರಣವ ಚೈತನ್ಯ

ನಮ್ಮನ್ನು ನಾವು ಏಕೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುತ್ತಿಲ್ಲ? ನಮ್ಮನ್ನು ನಾವು ಅರ್ಥಮಾಡಿಕೊಳುವುದು ಈ ಪ್ರಪಂಚದಲ್ಲೆ ಅತ್ಯಂತ ಸುಲಭವಾದ ಕೆಲಸ. ಆದರೆ ನಾವು ಅದನ್ನು ಅತ್ಯಂತ ಕಷ್ಟ ಮಾಡಿಕೊಂಡಿದ್ದೇವೆ. ಇಂದಿನ ದಿನಗಳಲ್ಲಿ ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದು ಅಸಾಧ್ಯಕರವಾದ ಕೆಲಸವಾಗುತ್ತಿದೆ. ಏಕೆ ಒಬ್ಬ ಮನುಷ್ಯನಿಗೆ ತನ್ನನ್ನು ತಾನು ಅರ್ಥಮಾಡಿಕೊಳ್ಳುವುದು ಇಷ್ಟೊಂದು ಕಷ್ಟವಾಗುತ್ತಿದೆ ಎಂದು ಓಶೋ ರಜನೀಶ್ ತಮ್ಮ ‘ಬುಕ್ ಆಫ್ ಮ್ಯಾನ್’ನಲ್ಲಿ ವಿವರಿಸಿದ್ದಾರೆ.

ಯಾವಾಗ ಒಬ್ಬ ಮನುಷ್ಯನು ತನ್ನಲ್ಲಿ ತಾನೆ ಬಿರುಕು ಮೂಡಿಸಿಕೊಳ್ಳುತ್ತಾನೋ, ಆಗ ಅವನಿಗೆ ತಾನೇನು ಎಂದು ತಿಳಿದಿರುವುದಿಲ್ಲ. ಈ ಬಿರುಕು ನಾವು ಮೂಡಿಸಿಕೊಳ್ಳುವುದಾದರು ಆಗಿರಬಹುದು ಅಥವಾ ಸಮಾಜ ನಮ್ಮಲ್ಲಿ ಈ ಬಿರುಕನ್ನು ಮೂಡಿಸಬಹುದು. ನಮ್ಮಲ್ಲಿನ ಬಿರುಕನ್ನು ಹೋಗಿಸಿಕೊಳ್ಳುವುದು ಬಹಳ ಸುಲಭ. ಆದರೆ ನಾವು ಅದನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಅಷ್ಟೆ. ಮೊದಲು ನಾವು ನಮಗೆ ಈ ಸಮಾಜವು ಕೊಟ್ಟಿರುವ ವ್ಯಕ್ತಿತ್ವದಿಂದ ಹೊರಬರಬೇಕು. ನಮ್ಮ ವ್ಯಕ್ತಿತ್ವವನ್ನು ನಾವೆ ಕಂಡುಕೊಳ್ಳಬೇಕು. ಸಮಾಜವು ನೀನು ಹೇಗೆ ಇರಬೇಕು ಎಂದು ಮಾತ್ರ ಹೇಳುತ್ತದೆ ವಿನಹಃ ನೀನು ನಿಜವಾಗಿಯು ಯಾರು? ಎಂದು ತಿಳಿಸಿಕೊಡುವುದಿಲ್ಲ. ಅದನ್ನು ನಾವೆ ಕಂಡುಕೊಳ್ಳಬೇಕು. ಇದನ್ನು ತಿಳಿದುಕೊಳ್ಳಬೇಕೆಂದರೆ ನಮ್ಮಲ್ಲಿನ ಬಿರುಕನ್ನು ನಾವೇ ನಾಶ ಮಾಡಿಕೊಳ್ಳಬೇಕು.

ನಮಗೆ ಯಾವಗಲೂ ಭವಿಷ್ಯದ ಚಿಂತೆ ಅದೆಷ್ಟಿರುತ್ತದೆ ಅಂದರೆ, ನಾವು ನಮ್ಮ ವಾಸ್ತವದ ಬದುಕನ್ನೆ ಮರೆತುಬಿಟ್ಟಿದ್ದೇವೆ. ನಾವು ಯಾವಾಗಲು ಮುಂದೆ ಏನು ಮಾಡಬೇಕು?, ಏನು ಓದಬೇಕು?, ಯಾವ ಭಾಷೆ ಕಲಿಯಬೇಕು?, ಯಾರನ್ನು ಪ್ರೀತಿಸಬೇಕು? ಯಾರನ್ನು ಮದುವೆಯಾಗಬೇಕು? ಎಲ್ಲಿ ಮನೆ ಕಟ್ಟಬೇಕು? ಎಂದೆಲ್ಲ ಯೋಚನೆ ಮಾಡುತ್ತೇವೆ. ಆದರೆ ‘ಈ ಕ್ಷಣದ ಬದುಕು’ ಅನ್ನುವ ಪದವೇ ನಮಗೆ ತಿಳಿದಿಲ್ಲ! ನಾವು ಈ ಕ್ಷಣ ಏನು ಮಾಡುತ್ತಿರುತ್ತೇವೊ ಅದೇ ಪ್ರಸ್ತುತ. ಅದೇ ಸುಂದರ ಹಾಗು ನಮ್ಮ ಮನಸ್ಸಿಗೆ ಶಾಂತಿಯನ್ನು ತರುವಂಥದ್ದು.

ಒಂದು ಮಲ್ಲಿಗೆ ಹೂವು, ಅದು ಮಲ್ಲಿಗೆ ಹೂವು ಬಿಟ್ಟರೆ ಬೇರೇನು ಆಗಲು ಸಾಧ್ಯವಿಲ್ಲ. ಒಂದು ದಾಸವಾಳ ಹೂವು, ಅದು ದಾಸವಾಳ ಬಿಟ್ಟರೆ ಬೇರೇನು ಆಗಲು ಸಾಧ್ಯವಿಲ್ಲ. ಮಲ್ಲಿಗೆ ಎಂದು ತಾನು ದಾಸವಾಳವಾಗಬೇಕೆಂದು ಪ್ರಯತ್ನಿಸುವುದಿಲ್ಲ. ದಾಸವಾಳ ಎಂದು ತಾನು ಮಲ್ಲಿಗೆಯಾಗಬೇಕೆಂದು ಯೋಚಿಸುವುದಿಲ್ಲ. ಅವು ಅತ್ತ್ಯಂತ ಆನಂದವಾಗಿ ತಮ್ಮ ಪ್ರಸ್ತುತವನ್ನು, ತಮ್ಮ ಇರುವಿಕೆಯನ್ನು ಅನುಭವಿಸುತ್ತವೆ. ಇದು ಪ್ರಕೃತಿಯ ನಿಯಮ. ಬರಿ ಮನುಷ್ಯನು ಮಾತ್ರ ಈ ನಿಯಮವನ್ನು ಅನುಸರಿಸದೆ ಮುಂದಿನ ಯೋಚನೆ ಮಾಡಿ, ಪ್ರಸ್ತುತವನ್ನು ಮರೆತು, ತನ್ನಲ್ಲೆ ತಾನೊಂದು ಬಿರುಕನ್ನು ಮೂಡಿಸಿಕೊಂಡು ತನ್ನ ಮೇಲೇ ವೈರತ್ವವನ್ನು ಬೆಳೆಸಿಕೊಂಡಿದ್ದಾನೆ.

ನಾವು ನಮ್ಮನ್ನು ಬಿಟ್ಟು ಬೇರೇನೂ ಆಗಲು ಸಾಧ್ಯವಿಲ್ಲ ಎಂದು ಯಾವಾಗ ಒಬ್ಬ ಮನುಷ್ಯ ಅರ್ಥಮಾಡಿಕೊಳ್ಳುತ್ತಾನೋ, ಆಗ ತನ್ನಲ್ಲಿದ್ದ ಬಿರುಕು ತಾನಾಗೆ ಮಾಯವಾಗುತ್ತದೆ. ಯಾವಾಗಿ ಈ ಸತ್ಯವು ಅವನ ಹೃದಯದಾಳದಲ್ಲಿ ಹೋಗಿ ಸೇರುತ್ತದೆಯೊ, ಆಗ ಅವನು ಪ್ರಸ್ತುತದಲ್ಲಿ ಬದುಕಲು ಶುರುಮಾಡುತ್ತಾನೆ. ನಾವು ಯಾವಾಗಲೂ ನಮ್ಮೊಂದಿಗೆ ಇರಬೇಕು, ನಮ್ಮನ್ನು ನಾವು ನೋಡಿಕೊಳ್ಳಬೇಕು. ಬೇರೆಯವರು ಬಂದು ನಮಗೆ ಸಹಾಯ ಮಾಡುವರು ಎಂದು ಅಪೇಕ್ಷಿಸಬಾರದು.

ಯಾವ ಜೀವಿಗೂ ತಾನು ಯಾವಾಗಲೂ ಖುಷಿಯಿಂದಲೆ ಇರಲು ಆಗುವುದಿಲ್ಲ. ಮನುಷ್ಯ ಭಾವನೆಗಳ ಭಂಡಾರ. ಹೀಗಾಗಿ ನಮಗೆ ಒಮ್ಮೊಮ್ಮೆ ಕೋಪ ಬರುತ್ತದೆ ಆಗ ನಮಗೆ ನಾವೆ ಸಮಾಧಾನ ಮಾಡಿಕೊಳ್ಳಬೇಕೆ ಹೊರತು ಬೇರೆಯವರು ಬಂದು ನಮ್ಮನ್ನು ಸಮಾಧಾನ ಮಾಡುತ್ತಾರೆ ಎಂದು ಅಂದುಕೊಳ್ಳಬಾರದು. ಅದಕ್ಕಾಗಿ ಕಾಯುತ್ತ ಕೂರಬಾರದು. ನಮಗೆ ಬೇಜಾರಾದಾಗಲು ಅಷ್ಟೆ, ಇನ್ನೊಬ್ಬರು ಬಂದು ನಮ್ಮ ಗೋಳನ್ನು ಕೇಳುತ್ತಾರೆ ಎನ್ನುವ ಯೋಚನೆಯನ್ನು ಮಾಡಬಾರದು. ಇಂತಹ ಯೋಚನೆಗಳನ್ನು ಮಾಡದಿದ್ದಾಗ ನಾವು ಎಂತಹ ಪರಿಸ್ಥಿತಿಯಲ್ಲಿದ್ದರೂ ನಮ್ಮ ಮುಖದಮೇಲೆ ನಗುವಿರುತ್ತದೆ. ನಮಗೆ ಯಾರ ಅಗತ್ಯವಿರುವುದಿಲ್ಲ. ಏಕೆಂದರೆ ನಾವು ನಾವಾಗಿರುತ್ತೇವೆ. ಪ್ರಸ್ತುತದಲ್ಲಿ ಬದುಕಲು ನಾವು ನಾವಾಗಿದ್ದರೆ ಸಾಕು, ಅಷ್ಟೇ.

(ಹಿಂದಿನ ಭಾಗ ಇಲ್ಲಿ ಓದಿ : https://aralimara.com/2019/06/21/osho-22/)

1 Comment

Leave a Reply