ಓದಿಗಿಂತ ಅನುಭವ ಮುಖ್ಯ: ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಹಿತೋಪದೇಶದಿಂದ…

ಯೋ ಯತ್ರ ಕುಶಲಃ ಕಾರ್ಯೇ ತಂ ತತ್ರ ವಿನಿಯೋಜಯೇತ್ ।
ಕರ್ಮಸ್ವಧೃಷ್ಟಕರ್ಮಾ ಯಚ್ಛಾಸ್ತ್ರಜ್ಞೋಪಿ ವಿಮುಹ್ಯತಿ ॥ ಹಿತೋಪದೇಶ, ವಿಗ್ರಹ – 52 ॥
ಅರ್ಥ: ಯಾರು ಯಾವ ಕೆಲಸದಲ್ಲಿ ನಿಪುಣರೋ ಅವರನ್ನು ಆ ಕೆಲಸಕ್ಕೇ ನೇಮಿಸಬೇಕು. ಆದರ ಬದಲು ಶಾಸ್ತ್ರ ಬಲ್ಲವನೆಂದು ಯಾವುದೇ ವ್ಯಕ್ತಿಯನ್ನು ಅವರಿಗೆ ಪರಿಚಯವಿಲ್ಲದ ಕೆಲಸಕ್ಕೆ ನೇಮಿಸಬಾರದು. ಹಾಗೇನಾದರೂ ಮಾಡಿದರೆ ಕೆಲಸ ಕೆಡುವುದಷ್ಟೇ.  

ತಾತ್ಪರ್ಯ: ನಮ್ಮ ವ್ಯವಸ್ಥೆಯಲ್ಲಿ ಬಹಳ ಸಲ ಇಂಥಾ ತಪ್ಪು ನಡೆಯುತ್ತದೆ. ನಾವು ಕೂಡಾ ನಮ್ಮ ನಮ್ಮ ನಿಲುಕಿನಲ್ಲಿ ಇದನ್ನು ಮಾಡಿರುತ್ತೇವೆ. ಯಾವುದೇ ವ್ಯಕ್ತಿ ಬುದ್ಧಿವಂತರಾದ ಮಾತ್ರಕ್ಕೆ ಅವರು ಎಲ್ಲ ಕೆಲಸಕ್ಕೂ ಅರ್ಹರೆಂದು ಭಾವಿಸಿಬಿಡುತ್ತೇವೆ. ಈ ಕಾರಣದಿಂದಲೇ ಅಂಕಪಟ್ಟಿಯಲ್ಲಿ ಮೊದಲಿಗರಾದವರಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು, ಯಾವುದೇ ಕೆಲಸವನ್ನಾದರೂ ಅವರಿಗೆ ಅಂಕದ ಆಧಾರದ ಮೇಲೆ ನೀಡುವುದು ಇತ್ಯಾದಿ ನಡೆಯುತ್ತದೆ. ಆದರೆ, ವ್ಯಕ್ತಿಯ ಬೌದ್ಧಿಕತೆಗೂ ಅವರ ಕೌಶಲ್ಯ, ಅನುಭವ ಮತ್ತು ಕಾರ್ಯಕ್ಷಮತೆಗೂ ಬಹುತೇಕ ಹೊಂದಾಣಿಕೆ ಇರುವುದಿಲ್ಲ. ಬುದ್ಧಿವಂತಿಕೆ ಮುಖ್ಯವೇ ಆದರೂ, ಯಾವುದೇ ವ್ಯಕ್ತಿಗೆ ವಹಿಸಲಾಗುವ ಕೆಲಸದ ಬಗ್ಗೆ ಅವರಿಗೆ ಸ್ವಲ್ಪವಾದರೂ ಅರಿವು ಇರಬೇಕು. ಅನುಭವ ಇಲ್ಲದಿದ್ದರೂ ಆ ಕಾರ್ಯಕ್ಷೇತ್ರದ ಪರಿಚಯ ಇರಬೇಕು. ಇಲ್ಲವಾದರೆ ಆ ವ್ಯಕ್ತಿಯೂ ಹಾದಿ ತಪ್ಪುತ್ತಾರೆ, ಆ ಕೆಲಸವೂ ಕೆಟ್ಟುಹೋಗುತ್ತದೆ.

Leave a Reply