ಯಾಕಾದರೂ ಅಧರ್ಮ ಆಚರಿಸಬೇಕು! : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಹಿತೋಪದೇಶದಿಂದ…

ಆಧಿವ್ಯಾಧಿಪರಿತಾಪಾದದ್ಯ ಶೋ ವಾ ವಿನಾಶಿನೇ ।
ಕೋ ಹಿ ನಾಮ ಶರೀರಾಯ ಧರ್ಮಾಪೇತಂ ಸಮಾಚರೇತ್ ॥ ಹಿತೋಪದೇಶ, ಸಂಧಿ – 133 ॥
ಅರ್ಥ: ಮನಸ್ಸಿನ ಕಾಯಿಲೆಯಿಂದಲೋ ದೇಹದ ಅನಾರೋಗ್ಯದಿಂದಲೋ ಅಥವಾ ಮತ್ಯಾವುದರಿಂದಲೋ ಇಂದಲ್ಲ ನಾಳೆ ನಾಶವಾಗುವ ದೇಹಕ್ಕಾಗಿ (ದೇಹದ ಸುಖಕ್ಕಾಗಿ) ಯಾರು ತಾನೆ ಅಧರ್ಮವನ್ನು ಆಚರಿಸಿಯಾರು? 

ತಾತ್ಪರ್ಯ: ನಾವೆಲ್ಲ ಪ್ರತಿದಿನ ನೋಡುತ್ತಲೂ ಅನುಭವಿಸುತ್ತಲೂ ಇರುವಂತೆ, ಒಂದಲ್ಲ ಒಂದು ಕಾರಣಕ್ಕೆ ಅನಾರೋಗ್ಯವೋ ಸಾವೋ ಎರಗುತ್ತಲೇ ಇದೆ. ಹೀಗಿರುವಾಗ ಆದಷ್ಟೂ ನಾವು ನಮ್ಮ ಬದುಕನ್ನ ಶುದ್ಧವಾಗಿ, ಶುಭ್ರವಾಗಿ, ಒಳ್ಳೆಯ ಚಿಂತನೆಯಿಂದ, ಸ್ನೇಹ – ಪ್ರೇಮಗಳಿಂದ ಕಳೆಯುವುದಕ್ಕೆ ಒತ್ತುಕೊಡಬೇಕೇ ಹೊರತು ಅಧರ್ಮ ಅನಿಸುವಂತ ಕೆಲಸಗಳನ್ನು ಮಾಡಿ ಹಾಳುಮಾಡಿಕೊಳ್ಳುವುದು ಮೂರ್ಖತನ. ದಿನವೂ ಸಾವು ನೋವನ್ನು ನೋಡುವ ಜನರು ಹೇಗಾದರೂ ಇಂಥಾ ಅಧರ್ಮ ಕೆಲಸಗಳನ್ನ ಮಾಡಲು ಮುಂದಾಗುತ್ತಾರೆ ಅನ್ನುವ ಆಶ್ಚರ್ಯ ಮತ್ತು ತಾನು ಹಾಗೆ ಮಾಡಲಾರೆ ಅನ್ನುವ ಸಮಜಾಯಿಷಿ; ಜೊತೆಗೇ ಹಾಗೆ ಮಾಡಕೂಡದು ಅನ್ನುವ ಪಾಠ ಈ ಸುಭಾಷಿತದಲ್ಲಿದೆ.

ಇಲ್ಲಿ ಅಧರ್ಮ ಅಂದರೆ ಕಳ್ಳತನ, ಕೊಲೆ, ಸುಲಿಗೆ ಇತ್ಯಾದಿ. ಧರ್ಮ ಅನ್ನುವ ಪದಕ್ಕೆ ವ್ಯಾಪಕ ಅರ್ಥವಿದೆ. ಧರ್ಮ ಅಂದರೆ ಆಚರಣೆ. ಅದು ದೇವರನ್ನು ನಂಬುವ ಅಥವಾ ಬಿಡುವ ಸಂಗತಿಯಲ್ಲ. ಧರ್ಮ ಅಂದರೆ ಪ್ರತಿಯೊಬ್ಬ ವ್ಯಕ್ತಿಯೂ ಅನುಸರಿಸಬೇಕಾದ ಜೀವನ ವಿಧಾನ. ಇಂದಲ್ಲ ನಾಳೆ ಮಣ್ಣಾಗುವ ದೇಹದ ಸುಖಕ್ಕಾಗಿ, ಅದನ್ನು ತೃಪ್ತಿಪಡಿಸಲಿಕ್ಕಾಗಿ ಇಂಥಾ ವಿಧಾನವನ್ನು ಯಾರಾದರೂ ಹೇಗೆ ಬಿಟ್ಟಾರು ಅನ್ನುವ ಚಿಂತನೆ ಈ ಸುಭಾಷಿತದ ಅಂತರಾರ್ಥ.

Leave a Reply