ರಾಮತೀರ್ಥರು ಹೇಳುವ ಐದು ವಿಧದ ಮನುಷ್ಯರು… : ನಿಮ್ಮದು ಯಾವ ವಿಧ, ಕಂಡುಕೊಳ್ಳಿ!

ಜಗತ್ತಿನಲ್ಲಿ ನಮಗೆ ಐದು ವಿಧದ ಮನುಷ್ಯರು ಸಿಗುತ್ತಾರೆ. ಯಾರು ಈ ಐದು ವಿಧದ ಮನುಷ್ಯರು? ಅವರನ್ನು ಧರ್ಮದಿಂದಾಗಲಿ ದುಡ್ಡಿನಿಂದಾಗಲಿ ಬೇರೆ ಮಾಡಿ ಹೇಳಲಾಗುವುದಿಲ್ಲ, ಅವರ ಗುಣಗಳನ್ನು ಪರಿಶೀಲಿಸಿದ ನಂತರ ಈ ವರ್ಗಗಳನ್ನು ರಾಮತೀರ್ಥರು ಮಾಡಿದ್ದಾರೆ. ಅವರ ವಿವರಣೆಯನ್ನು ಓದಿ; ನೀವು ಯಾವ ವಿಧದವರು, ಯಾವ ವಿಧವನ್ನು ಆಯ್ದುಕೊಳ್ಳಬೇಕು, ನೀವೇ ನಿರ್ಧರಿಸಿ!! ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು

ಈ ಭೂಮಂಡಲದಲ್ಲಿ ಮನುಷ್ಯರು ಅತ್ಯಂತ ಬುದ್ಧಿವಂತ ಜೀವಿಗಳು. ಮನುಷ್ಯರಲ್ಲಿ ಹಲವಾರು ಗುಣಗಳ ಮನುಷ್ಯರು ನಮಗೆ ಸಿಗುತ್ತಾರೆ. ಸಂತ ರಾಮತೀರ್ಥರು ತಮ್ಮ ಒಂದು ಪ್ರವಚನದಲ್ಲಿ ಮನುಷ್ಯರನ್ನು ಗುಣಗಳಿಂದ 5 ವಿಧಗಳನ್ನಾಗಿ ಗುರುತಿಸಿ ವಿವರಿಸಿದ್ದಾರೆ.

ಮೊದಲನೆಯ ತರಹದ ಮನುಷ್ಯರು ನಮಗೆ ಭೂಮಿಯಲ್ಲಿ ದೊರಕುವ ಚಿನ್ನ, ವಜ್ರಗಳಂತೆ. ಈ ವರ್ಗಕ್ಕೆ ಅತ್ಯಂತ ಸ್ವಾರ್ಥಿಗಳು ಬರುತ್ತಾರೆ. ಇವರು ಬರೀ ತನ್ನ ಜೀವನವನ್ನು ತಾನು ನೋಡಿಕೊಂಡು ಬೇರೆಯವರು ಸತ್ತರೂ ತೊಂದರೆಯಿಲ್ಲ ಎಂದು ಬದುಕುತ್ತಾರೆ, ಬೇರೆಯವರನ್ನು ಸಾಯಿಸಿ ತಾನು ಬದುಕಿದರು ತೊಂದರೆಯಿಲ್ಲ ಎಂದು ಬದುಕುತ್ತಾರೆ. ಇವರನ್ನು ರಾಮತೀರ್ಥರು ವಜ್ರ, ಚಿನ್ನಕ್ಕೆ ಏಕೆ ಹೋಲಿಸಿದ್ದಾರೆಂದರೆ; ಈ ಮನುಷ್ಯರು ಅತ್ಯಂತ ಬೆಲೆ ಬಾಳಿದರೂ ಜೀವವಿಲ್ಲದಂತೆ; ಅವರಿಗೆ ಮನುಷತ್ವವಿರುವುದಿಲ್ಲ. ಹಾಗೆಂದು ಅವರನ್ನು ಮೃಗಗಳಿಗೆ ಹೋಲಿಸಲು ಆಗುವುದಿಲ್ಲ. ಏಕೆಂದರೆ ಅವರು ಭುದ್ಧಿವಂತರು, ಶಕ್ತಿವಂತರು, ಆದರೆ ಅತ್ಯಂತ ಸ್ವಾರ್ಥಿಗಳು.

ಇನ್ನು ಎರಡನೆಯ ತರಹದ ಮನುಷ್ಯರನ್ನು ರಾಮತೀರ್ಥರು ಮರಕ್ಕೆ ಹೋಲಿಸುತ್ತಾರೆ. ಏಕೆಂದರೆ ಈ ಮನುಷ್ಯರು ತಮ್ಮ ಸಂಸಾರಕ್ಕಾಗಿ ಮಾತ್ರ ಬದುಕುತ್ತಾರೆ. ತಮಗಾಗಿ, ತಮ್ಮ ಹೆಂಡತಿ ಮಕ್ಕಳಿಗಾಗಿ ಮಾತ್ರ ಬದುಕುತ್ತಾರೆ, ಅವರು ಬೇರೆ ಸಂಸಾರದ ಬಗ್ಗೆಯಾಗಲಿ, ಬೇರೆ ಮನುಷ್ಯರ ಬಗ್ಗೆಯಾಗಲಿ ಯೋಚಿಸುವುದಿಲ್ಲ. ಈ ಮನುಷ್ಯರೂ ಸ್ವಾರ್ಥಿಗಳೇ; ಆದರೆ ತಮ್ಮ ಸ್ವಾರ್ಥವನ್ನು ತಾವು ಪ್ರೀತಿಸುವವರೊಂದಿಗೆ ವಿಸ್ತರಿಸಿಕೊಂಡಿರುತ್ತಾರೆ. ಈ ಮನುಷ್ಯರನ್ನು ಮರಕ್ಕೆ ಯಾವ ಕಾರಣದಿಂದ ಹೋಲಿಸಲಾಗಿದೆ ಎಂದರೆ, ಈ ಮನುಷ್ಯರು ಸಹ ಮರಗಳ ತರಹ ಒಂದೇ ದಿಕ್ಕಿನಲ್ಲಿ ಬದುಕುತ್ತಾರೆ. ಅವರಿಗೆ ತಮ್ಮ ಸಂಸಾರವೇ ಒಂದು ದಿಕ್ಕು.

ಇನ್ನು ಮೂರನೆ ತರಹದ ಮನುಷ್ಯರು… ಇವರು ತಮ್ಮ ಧರ್ಮಕ್ಕಾಗಿ ಬದುಕುವರು. ಈ ಮನುಷ್ಯರು ಅತ್ಯಂತ ಒಳ್ಳೆಯವರೇ, ಆದರೆ ಇವರೂ ಒಂದು ರೀತಿಯ ಸ್ವಾರ್ಥಿಗಳು. ತಮ್ಮ ಧರ್ಮ, ತಮ್ಮ ಜಾತಿಯವರಿಗೆ ಮಾತ್ರ ಒಳ್ಳೆಯದನ್ನು ಮಾಡುತ್ತಾರೆ. ಇಂತಹ ಮನುಷ್ಯರು ಬೇರೆ ಜಾತಿ ಅಥವಾ ಧರ್ಮದವರ ಮೇಲೆ ಅಸಹಿಷ್ಣುತೆ ತೋರಿಸಿದಾಗ ರಕ್ತಪಾತಗಳು ಬೇಕಾದರೂ ಆಗಬಹುದು. ಇಂಥಾ ರಕ್ತಪಾತದ ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ಸಾಕಷ್ಟಿದೆ. ಈ ಮನುಷ್ಯರು ತಮ್ಮ ಸ್ವಾರ್ಥವನ್ನು ತಮ್ಮ ಜಾತಿ ಧರ್ಮದೊರೆಗೆ ವಿಸ್ತರಿಸಿಕೊಂಡಿರುತ್ತಾರೆ.

ಇನ್ನು ನಾಲ್ಕನೆಯ ವಿಧದ ಮನುಷ್ಯರ ವಿಷಯಕ್ಕೆ ಬಂದರೆ; ಈ ಮನುಷ್ಯರು ಬಹಳ ಒಳ್ಳೆಯವರು, ಶಕ್ತಿಶಾಲಿಗಳು, ವೀರರು. ತಾವು ಬದುಕುವ ನೆಲದಲ್ಲಿ ಬದುಕುವ ಬೇರೆಲ್ಲಾ ಮನುಷ್ಯರು ಚೆನ್ನಾಗಿರಲಿ ಎಂದು ಭಾವಿಸುವರು, ತಮ್ಮ ದೇಶಕ್ಕೆ ಒಳ್ಳೆಯದನ್ನು ಮಾಡುವವರು, ಇವರನ್ನು ನಾವು ದೇಶಭಕ್ತರು ಎಂದು ಹೇಳಬಹುದು. ಆದರೆ ಈ ಮನುಷ್ಯರು ಕೂಡಾ ಸ್ವಾರ್ಥಿಗಳೆ, ಈ ಮನುಷ್ಯರಿಗೆ ಬೇರೆ ನೆಲದಲ್ಲಿ ಬದುಕುತ್ತಿರುವ ಮನುಷ್ಯರ ಮೇಲೆ ಅಸಹಿಷ್ಣುತೆ ಶುರುವಾದರೆ ಇಲ್ಲಿಯು ಸಹ ರಕ್ತಪಾತ ನಿಶ್ಚಿತ. ಈ ಮನುಷ್ಯರು ತಮ್ಮ ಸ್ವಾರ್ಥವನ್ನು ತಾವು ಬದುಕುವ ದೇಶದವರೆಗೂ ವಿಸ್ತರಿಸಿಕೊಂಡಿರುತ್ತಾರೆ, ದೇಶ ರಕ್ಷಣೆಗಾಗಿ ತಮ್ಮ ಸ್ವಾರ್ಥವನ್ನು ವಿಸ್ತರಿಸಿಕೊಂಡಿರುತ್ತಾರೆ.

ಇನ್ನು ನಾವು ಕೊನೆಯ ವಿಧದ ಮನುಷ್ಯರ ವಿಷಯಕ್ಕೆ ಬಂದರೆ, ಈ ಮನುಷ್ಯರಿಗೆ ಯಾವ ಸಂಸಾರ, ಜಾತಿ, ಧರ್ಮ, ದೇಶದ ಯೋಚನೆಯು ಇರುವುದಿಲ್ಲ, ಎಲ್ಲಾ ಜೀವಿಗಳು ಒಂದೇ ಎಂದುಕೊಂಡು ಬದುಕುತ್ತಾರೆ, ಇವರಿಗೆ ಸ್ವಾರ್ಥವೆ ಇರುವುದಿಲ್ಲ ಏಕೆಂದರೆ ಈ ಮನುಷ್ಯರು ತಮ್ಮ ಆತ್ಮದಲ್ಲಿರುವ ಆ ಪರಮಾತ್ಮನ್ನು ಎಚ್ಚರಿಸಿಕೊಂಡಿರುತ್ತಾರೆ, ಒಳ್ಳೆಯ ವಿಷಯಗಳನ್ನು ಬೇರೆಯವರಿಗೆ ತಿಳಿಸುತ್ತಾ ತಮ್ಮ ಜೀವನವನ್ನು ಸಾಗಿಸುತ್ತಾರೆ. ಇಂತಹ ಮನುಷ್ಯರನ್ನು ದೇವತಾ ಮನುಷ್ಯರು ಎಂದರೆ ತಪ್ಪಿಲ್ಲ. ಏಕೆಂದರೆ ಅವರಿಗೆ ತಮ್ಮೊಳಗೆ ಇರುವ ಪರಮಾತ್ಮನ ಅರಿವಾಗಿರುತ್ತದೆ.

ಇಷ್ಟು ವಿವರಿಸುವ ರಾಮತೀರ್ಥರು, “ನಾನು ನನ್ನೊಳಗಿನ ಪರಮಾತ್ಮನನ್ನು ಕಂಡುಕೊಂಡಿದ್ದೇನೆ. ನೀವು ಯಾವ ವಿಧದ ಮನುಷ್ಯರು?” ಎಂದು ಜಗತ್ತಿಗೆ ಪ್ರಶ್ನಿಸುತ್ತಾರೆ.

Leave a Reply