ಇಂದಿನ ಸುಭಾಷಿತ, ನೀತಿ ಶತಕದಿಂದ…
ಕೇಯೂರಾಣಿ ನ ಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾ
ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ |
ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ
ಕ್ಷಿಯಂತೇsಖಿಲಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ ||
ಅರ್ಥ : ವಂಕಿ, ಬಳೆ, ಕಿವಿಗೆ ಓಲೆ- ಕರ್ಣಕುಂಡಲ, ಸೊಂಟಕ್ಕೆ ಡಾಬು, ತೋಳಬಂಧಿ, ಕೊರಳಲ್ಲಿ ಪ್ರಕಾಶಮಾನವಾಗಿ ಧರಿಸುವ ಹೊಳೆವ ಬಿಳಿಯ ಮುತ್ತಿನಹಾರ, ಚಂದ್ರಹಾರ, ಇವು ಯಾವುವೂ ಮನುಷ್ಯರನ್ನು ಸುಂದರವಾಗಿ ತೋರುವ ಅಲಂಕಾರಗಳಾಗಲಾರವು. ಯಾರಿಗೇ ಆದರೂ ತಿಳಿವಿನಿಂದ ತುಂಬಿದ ಮಾತುಗಳೇ ಸೌಂದರ್ಯ ಹೆಚ್ಚಿಸುವ ಅಲಂಕಾರಗಳಾಗಿರುತ್ತವೆ.
ತಾತ್ಪರ್ಯ : ಒಬ್ಬ ಜ್ಞಾನಿಗೆ ಅಥವಾ ವಿದ್ವಾಂಸನಿಗೆ ಸುಸಂಸ್ಕೃತವಾದ ಅಂದರೆ ಸಂಸ್ಕಾರಗೊಂಡ ಮಾತೇ ಅಲಂಕಾರ…(ವಾಗ್ಭೂಷಣಂ ಭೂಷಣಂ)… ರಾಮಾಯಣದಲ್ಲಿ ಹನುಮಂತನನ್ನು ಒಂದು ಕಡೆ “ಲಕ್ಷ್ಮಣ” ಎಂದು ವಾಲ್ಮೀಕಿ ಸಂಬೋಧಿಸುತ್ತಾರೆ. “ಲಕ್ಷ್ಮಣ” ಅಂದರೆ ಲಕ್ಷಣವಾಗಿ ಒಂದೂ ಅಪಶಬ್ದ ಬಾರದಂತೆ ಸ್ವಚ್ಛವಾಗಿ ಮಾತನಾಡುವವನು ಎಂದರ್ಥ. ಆದ್ದರಿಂದ ಯಾರಿಗೇ ಆದರೂ ತಿಳಿವಿನ ಮಾತುಗಳೇ ನಿಜವಾದ ಆಭರಣ; ಉಳಿದೆಲ್ಲ ಲೋಹದ ಆಭರಣಗಳು ಒಂದಲ್ಲ ಒಂದು ಬಗೆಯಲ್ಲಿ ನಷ್ಟವಾಗುವವು. ಆದರೆ ಜ್ಞಾನದಿಂದ ಹೊಮ್ಮಿದ ನುಡಿಮುತ್ತುಗಳು ಎಂದೂ ನಾಶವಾಗದ ಆಭರಣಗಳು.
ಕಲಿಕೆ : ನಾವು ಎಷ್ಟೇ ಸುಂದರವಾಗಿ ಅಲಂಕರಿಸಿಕೊಂಡಿದ್ದರೂ ಅಸಂಬದ್ಧವೂ ಆತಾರ್ಕಿಕವೂ ಆಗಿ ಮಾತನಾಡಿದರೆ ನಮ್ಮ ಮರ್ಯಾದೆಗೆ ಕುಂದುಂಟಾಗುವುದು ಖಚಿತ. ನಾವು ಯಾವ ಅಲಂಕಾರವನ್ನೂ ಮಾಡಿಕೊಳ್ಳದೆಯೂ ಉತ್ತಮವಾದ, ಅರ್ಥಪೂರ್ಣವಾದ ಮಾತುಗಳನ್ನಾಡಿದರೆ, ಅವು ನಮ್ಮ ವ್ಯಕ್ತಿತ್ವವು ಕಂಗೊಳಿಸುವಂತೆ ಮಾಡುತ್ತವೆ.