ನಮ್ಮ ಪೂರ್ವಾಗ್ರಹಗಳಿಗೆ, ಕಲಿಕೆಗೆ, ಭಯಗಳಿಗೆ, ಭರವಸೆಗಳಿಗೆ ಅನುಗುಣವಾಗಿ ನಾವು ಸದಾ ನಿಜವನ್ನು ಅನುವಾದ ಮಾಡುತ್ತಲೇ, ಹೊಸ ಹೊಸ ಅರ್ಥಗಳನ್ನು ಕೊಡುತ್ತಲೇ ಇರುತ್ತೇವೆ ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜದ ಬಗ್ಗೆ ತನ್ನ ಅಭಿಪ್ರಾಯಗಳನ್ನು ಹೇಳುವ ಬುದ್ಧಿ-ಮನಸ್ಸು (mind) ಸಂಕುಚಿತವಾದದ್ದು, ಸೀಮಿತವಾದದ್ದು ಮತ್ತು ಘಾತಕವಾದದ್ದು….. ನಿಜವನ್ನು ನೀವು ಒಂದು ಬಗೆಯಲ್ಲಿ ಅನುವಾದ ಮಾಡಿದರೆ ನಾನು ಇನ್ನೊಂದು ರೀತಿಯಲ್ಲಿ ಅನುವಾದ ಮಾಡಬಹುದು. ಆದರೆ ನಿಜವನ್ನು ಅನುವಾದಕ್ಕೆ ಗುರಿಮಾಡುವುದು, ಅದನ್ನು ಅದು ಇರುವ ಹಾಗೆ ನೋಡಲಿಕ್ಕೆ ಮತ್ತು ಈ ಬಗ್ಗೆ ನಾವು ಏನಾದರೂ ಒಂದು ನಿರ್ಧಾರ ಮಾಡಲಿಕ್ಕೆ ಅಡ್ಡಿ ಮಾಡುವಂಥ ಒಂದು ಶಾಪ.
ನಾನು ಮತ್ತು ನೀವು ವಾಸ್ತವದ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಕುರಿತು ಚರ್ಚೆ ಮಾಡುವಾಗ ಆ ವಾಸ್ತವದ ಬಗ್ಗೆ ಏನೂ ಮಾಡುತ್ತಿರುವುದಿಲ್ಲ ; ಬಹುಶಃ ಆ ವಾಸ್ತವಕ್ಕೆ ನೀವು ನನಗಿಂತ ಹೆಚ್ಚಿನ ವಿಸ್ತಾರಗಳನ್ನು, ಸೂಕ್ಷ್ಮಗಳನ್ನೂ, ಒಳ ನೋಟಗಳನ್ನೂ ಸೇರಿಸಬಹುದು. ಆದರೆ ಆ ನಿಜವನ್ನು, ವಾಸ್ತವವನ್ನು ಅದು ಇರುವ ಹಾಗೆ ವ್ಯಾಖ್ಯಾನ ಮಾಡುವುದು ಸಾಧ್ಯವಿಲ್ಲ ; ನಾನು ವಾಸ್ತವದ ಬಗ್ಗೆ ಅಭಿಪ್ರಾಯಗಳನ್ನು ಹೇಳುವುದು ಸಾಧ್ಯವಿಲ್ಲ ಮತ್ತು ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವುದು ಮೈಂಡ್ ಗೆ ಸಾಧ್ಯವಿಲ್ಲ.
ನಮ್ಮ ಪೂರ್ವಾಗ್ರಹಗಳಿಗೆ, ಕಲಿಕೆಗೆ, ಭಯಗಳಿಗೆ, ಭರವಸೆಗಳಿಗೆ ಅನುಗುಣವಾಗಿ ನಾವು ಸದಾ ನಿಜವನ್ನು ಅನುವಾದ ಮಾಡುತ್ತಲೇ, ಹೊಸ ಹೊಸ ಅರ್ಥಗಳನ್ನು ಕೊಡುತ್ತಲೇ ಇರುತ್ತೇವೆ. ನಾನು ಮತ್ತು ನೀವು ವಾಸ್ತವವನ್ನು ಅದು ಇರುವ ಹಾಗೆ ನಮ್ಮ ಯಾವ ಅಭಿಪ್ರಾಯ, ಅನುವಾದಗಳನ್ನು ಹೇರದೇ, ಬೇರೆ ಯಾವ ಹೆಚ್ಚಿನ ಮಹತ್ವವನ್ನು ನೀಡದೇ ನೋಡುವುದು ಸಾಧ್ಯವಾದಾಗ ಆ ನಿಜ, ಆ ವಾಸ್ತವ ಇನ್ನೂ ಹೆಚ್ಚು ಜೀವಂತವಾಗುತ್ತದೆ – ಹೆಚ್ಚು ಜೀವಂತ ಅಲ್ಲ ಅದಕ್ಕೆ ಇರುವಷ್ಟು ಜೀವಂತಿಕೆಯಿಂದ ಹೆಚ್ಚು ಸ್ಪಷ್ಟವಾಗುತ್ತದೆ. ಮತ್ತು ಆಗ ಆ ನಿಜ ತನ್ನ ಸ್ವಂತ ಶಕ್ತಿಯಿಂದ ನಮ್ಮನ್ನು ಸರಿ ದಾರಿಯಲ್ಲಿ ಮುನ್ನಡೆಸುತ್ತದೆ\
(ಮುಖಪುಟ ಚಿತ್ರ : ಜಿಡ್ಡು ಕೃಷ್ಣಮೂರ್ತಿಯವರ ವಿಚಾರಗಳ ಇಂಡೋನೇಶಿಯನ್ ಕಾಮಿಕ್ ಪುಸ್ತಕದ ಮುಖಪುಟ)