ಕ್ರೋಧವಿಲ್ಲದ ಯುದ್ಧ । ಓಶೋ ರಜನೀಶ್ ಹೇಳಿದ ಕಥೆ

ಓಶೋ ರಜನೀಶ್ ಹೇಳಿದ ಒಮರ್ ಖಲೀಫನ ಒಂದು ಕಥೆ ಇಲ್ಲಿದೆ… । ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮರ್ ಖಲೀಫ್ ನ ಬದುಕಿನಲ್ಲಿ ನಡೆದ ಘಟನೆ ಇದು. ಒಮರ್ ತನ್ನ ಬದುಕಿನ 30 ವರ್ಷಗಳನ್ನು ವೈರಿಯೊಂದಿಗಿನ ಹೋರಾಟದಲ್ಲಿ ಕಳೆದ. ವೈರಿ ಬಹಳ ಶಕ್ತಿಶಾಲಿಯಾಗಿದ್ದ ಕಾರಣ ಈ ಯುದ್ಧ ಜೀವಮಾನದ ಯುದ್ಧ ಎಂದು ಕರೆಯಲ್ಪಟ್ಟಿತು. ಒಮ್ಮೆ ಯುದ್ಧದಲ್ಲಿ ಹೀಗಾಯಿತು. ಭೀಕರವಾಗಿ ಹೋರಾಡುತ್ತಿದ್ದ ವೈರಿ ತನ್ನ ಕುದುರೆಯಿಂದ ಜಾರಿ ಕೆಳಗೆ ಬಿದ್ದ. ತಕ್ಷಣವೇ ಕೆಳಗೆ ಉರುಳಿದ ವೈರಿಯ ಮೇಲೆ ತನ್ನ ಕಠಾರಿಯೊಂದಿಗೆ ಒಮರ್ ಮುಗಿಬಿದ್ದ. ಇನ್ನೇನು ಒಂದು ಕ್ಷಣದಲ್ಲಿ ಒಮರ್ ನ ಕಠಾರಿ ವೈರಿಯ ಎದೆಯನ್ನು ಇರಿದು ಎಷ್ಟೋ ದಿನಗಳಿಂದ ನಡೆಯುತ್ತಿದ್ದ ಯುದ್ಧ ಕೊನೆಯಾಗಲಿತ್ತು. ಆದರೆ ಈ ಒಂದು ಕ್ಷಣದ ಅಂತರದಲ್ಲಿ ವೈರಿ ವಿಲಕ್ಷಣವಾಗಿ ವರ್ತಿಸಿದ. ವೈರಿ ಒಮರ್ ನ ಮುಖದ ಮೇಲೆ ಉಗುಳಿ ಬಿಟ್ಟ. ವೈರಿಯ ಈ ವಿಚಿತ್ರ ಆಕ್ರಮಣದಿಂದ ಅವಾಕ್ಕಾದ ಒಮರ್ ವೈರಿಯ ಎದೆಯಿಂದ ತನ್ನ ಕಠಾರಿಯನ್ನು ಹಿಂದೆ ತೆಗೆದುಕೊಂಡು ಎದ್ದು ನಿಂತ “ ಇವತ್ತು ಸಾಕು, ನಾಳೆ ಮತ್ತೆ ಯುದ್ಧ ಮುಂದುವರೆಸೋಣ “

ಒಮರ್ ನಡೆಯಿಂದ ವೈರಿಗೆ ಆಶ್ಚರ್ಯವಾಯಿತು. “ ಯಾಕೆ ಏನಾಯಿತು? ಇಂಥ ಒಂದು ಗಳಿಗೆಗಾಗಿ ನಾನು ನೀನು ವರ್ಷಗಳಿಂದ ಕಾಯುತ್ತಿದ್ದೆವು. ನಿನ್ನ ಎದೆಯ ಮೇಲೆ ಕುಳಿತು ನನ್ನ ಕಠಾರಿಯಿಂದ ನಿನ್ನ ಎದೆಯನ್ನು ಚುಚ್ಚಿ ಕೊಂದು ಈ ಯುದ್ಧವನ್ನು ಗೆಲ್ಲಬೇಕೆಂದು ನಾನು ಎಷ್ಟೋ ವರ್ಷಗಳಿಂದ ಕಾಯ್ದಿದ್ದೆ. ಆದರೆ ಆ ಅವಕಾಶ ನನಗೆ ಒದಗಿ ಬರಲಿಲ್ಲ ಇವತ್ತು ನಿನಗೆ ಅವಕಾಶ ಕೂಡಿ ಬಂದಿತ್ತು, ಕ್ಷಣಾರ್ಧದಲ್ಲಿ ನೀನು ಕೊಂದು ಬಿಡಬಹುದಾಗಿತ್ತು. ಯಾಕೆ ನೀನು ಯುದ್ಧ ನಿಲ್ಲಿಸಿದೆ ? “

ವೈರಿ ಕುತೂಹಲದಿಂದ ಒಮರ್ ನನ್ನು ಪ್ರಶ್ನೆ ಮಾಡಿದ.

“ ಇದು ನನಗೆ ಸಾಧಾರಣ ಯುದ್ಧ ಅಲ್ಲ . ನನಗೆ ನಾನೊಂದು ವಚನ ಕೊಟ್ಟುಕೊಂಡಿದ್ದೇನೆ. ಇದು ಸೂಫಿಗಳ ವಚನ. ನನ್ನೊಳಗೆ ಕ್ರೋಧ, ಸಿಟ್ಟು ತುಂಬಿಕೊಂಡಿರುವಾಗ ನಾನು ಯಾವತ್ತೂ ಯುದ್ಧ ಮಾಡುವುದಿಲ್ಲವೆಂದು. ಕಳೆದ ಮೂವತ್ತು ವರ್ಷಗಳಿಂದ ನಾನು ಎಲ್ಲ ಸಿಟ್ಟನ್ನೂ ತ್ಯಜಿಸಿ ನಿನ್ನೊಂದಿಗೆ ಯುದ್ಧ ಮಾಡುತ್ತಿದ್ದೇನೆ. ಆದರೆ ಈ ಕ್ಷಣದಲ್ಲಿ ನನ್ನೊಳಗೆ ಸಿಟ್ಟು ತುಂಬಿಕೊಂಡಿದೆ. ನೀನು ನನ್ನ ಮುಖದ ಮೇಲೆ ಉಗುಳಿದಾಗ ನನ್ನ ಇಡೀ ದೇಹ ಸಿಟ್ಟಿನಿಂದ ಕಂಪಿಸಿತು. ನಿನ್ನ ಕೊಂದುಬಿಡುವಷ್ಟು ಸಿಟ್ಟು ಬಂದಿತ್ತು. ನಾನು ನಿನ್ನ ವೈಯಕ್ತಿಕವಾಗಿ ದ್ವೇಷಿಸತೊಡಗಿದ್ದೆ. ನನ್ನ ಅಹಂಗೆ ಪೆಟ್ಟಾಗಿತ್ತು. ಇಷ್ಟು ವರ್ಷ ನಾನು ನಿನ್ನ ಜೊತೆ ಒಂದು ಉದ್ದೇಶಕ್ಕಾಗಿ ಹೋರಾಡುತ್ತಿದ್ದೆನೇ ಹೊರತು ಯಾವ ದ್ವೇಷದ ಕಾರಣಕ್ಕೆ ಅಲ್ಲ. ನೀನು ವೈಯಕ್ತಿಕವಾಗಿ ನನಗೆ ವೈರಿಯಾಗಿರಲಿಲ್ಲ, ನಿನ್ನ ಕೊಲ್ಲುವ ಯಾವ ಉದ್ದೇಶವೂ ನನಗಿರಲಿಲ್ಲ. ನನ್ನ ಉದ್ದೇಶ ಗೆಲ್ಲಬೇಕು ಎನ್ನುವುದು ಮಾತ್ರ ನನ್ನ ಬಯಕೆಯಾಗಿತ್ತು. ಆದರೆ ಈ ಕ್ಷಣದಲ್ಲಿ ನನ್ನೊಳಗೆ ನಿನ್ನ ಬಗ್ಗೆ ದ್ವೇಷ ಇದೆ, ನೀನು ನನ್ನ ವೈಯಕ್ತಿಕ ವೈರಿಯಾಗಿರುವಿ, ನಿನ್ನ ಕೊಂದುಬಿಡಬೇಕು ಎನ್ನುವಷ್ಟು ಸಿಟ್ಟು ನನ್ನಲ್ಲಿದೆ. ನನ್ನ ಯುದ್ಧದ ಉದ್ದೇಶ ನನಗೆ ಮರೆತು ಹೋಗಿದೆ. ಇಂಥ ಸ್ಥಿತಿಯಲ್ಲಿ ನನಗೆ ನಾನು ಕೊಟ್ಟುಕೊಂಡಿರುವ ವಚನದ ಪ್ರಕಾರ ನಾನು ನಿನ್ನೊಡನೆ ಯುದ್ಧ ಮಾಡುವಂತಿಲ್ಲ. ನನ್ನ ಈ ಸ್ಥಿತಿಯಿಂದ ಹೊರಬರಲು ನನಗೆ ಸ್ವಲ್ಪ ಸಮಯ ಬೇಕು. ಹಾಗಾಗಿ ನಾವು ನಾಳೆ ಯುದ್ಧ ಮುಂದುವರೆಸೋಣ. “

ಒಮರ್ ತಾನು ಯುದ್ಧ ಮುಂದುಹಾಕಿದ ಕಾರಣವನ್ನು ವೈರಿಯ ಜೊತೆ ಹಂಚಿಕೊಂಡ.

ಆದರೆ ಮುಂದೆ ಯುದ್ಧ ಮುಂದುವರೆಯಲೇ ಇಲ್ಲ. ವೈರಿ ಒಮರ್ ನ ಗೆಳೆಯನಾಗಿಬಿಟ್ಟಿದ್ದ, ಅವ ಒಮರ್ ನ ಬೇಡಿಕೊಂಡ,

“ ನಾನೂ ನಿನ್ನ ಹಾಗೆ ಯಾವ ಕ್ರೋಧವನ್ನೂ ಹೊಂದದೇ ಯುದ್ಧ ಮಾಡುವಂತಾಗಬೇಕು. ನಾನು ನಿನ್ನ ಶಿಷ್ಯನಾಗಲು ಸಿದ್ಧ ಒಮರ್. ನನಗೂ ಈ ಸ್ವಭಾವ ಕಲಿಸು“

Leave a Reply