ಶಿಷ್ಯ ಜನ್ಮಜನ್ಮಾಂತರಗಳ ಕತ್ತಲನ್ನು ಹೊತ್ತು ತಂದಿದ್ದಾನೆ. ಅವು ಆಷಾಢದ ಕಪ್ಪು ಮೋಡಗಳು. ಅವುಗಳ ಮಧ್ಯೆ ಗುರು ಚಂದಿರನಂತೆ ಹೊಳೆಯುತ್ತಿದ್ದಾನೆ, ಆ ಅಂಧಕಾರದ ನಡುವೆಯೂ ಬೆಳಕನ್ನು ಬೀರುತ್ತಿದ್ದರೆ ಅವನೇ ಗುರು. ಹಾಗಾಗಿ ಆಷಾಢದ ಹುಣ್ಣಿಮೆ ಗುರು-ಶಿಷ್ಯರ ಸಮ್ಮಿಲನದ ರೂಪಕವಾಗಿದೆ | ಓಶೋ, ಭಾವಾನುವಾದ: ಸ್ವಾಮಿ ಧ್ಯಾನ್ ಉನ್ಮುಖ್
ಜೀವನವನ್ನು ಎರಡು ರೀತಿ ನೋಡಬಹುದು-ಒಂದು ಗಣಿತದಂತೆ , ಇನ್ನೊಂದು ಕಾವ್ಯದಂತೆ. ಗಣಿತ ಹಾದಿಯಲ್ಲಿ ಸಾಗಿದಾಗ ವಿಜ್ಞಾನವನ್ನು ತಲುಪುವಿರಿ ಹಾಗೇ ಕಾವ್ಯದ ಮಾರ್ಗದಲ್ಲಿ ಸಾಗಿದಾಗ ಪರಮೋಚ್ಛ ಕಾವ್ಯವಾದ ಪರಮಾತ್ವನ್ನು ತಲುಪುವಿರಿ.ಆದರೆ ಕಾವ್ಯದ ಭಾಷೆ ಅರ್ಥಮಾಡಿಕೊಳ್ಳುವುದು ಕ್ಲಿಷ್ಟಕರ, ನಿಮ್ಮ ಜೀವನದ ಎಲ್ಲಾ ಭಾಷೆಗಳು ಗಣಿತದ ಭಾಷೆಯಾಗಿದೆ. ನಿಮಗೆ ಗಣಿತದ ಭಾಷೆ ಪರಿಚಯವಿದೆ, ಕಾವ್ಯದ ಭಾಷೆ ಹೊಸದು ಅದರ ಪರಿಚಯವಿಲ್ಲ.ಇಲ್ಲಿ ಎರಡು ತಪ್ಪಾಗುವ ಸಾಧ್ಯತೆಯಿದೆ. ಮೊದಲನೇಯ ತಪ್ಪು ಕಾವ್ಯದ ಭಾಷೆಯನ್ನು ಕಾಲ್ಪನಿಕ ಕವಿತೆ ಎಂದು ಪರಿಭ್ರಮಿಸುವುದು.ಅಥವಾ ಕಾವ್ಯದ ಭಾಷೆಯನ್ನು ಗಣಿತದಂತೆ ಅದನ್ನೇ ಸತ್ಯವೆಂದು ಸ್ವೀಕರಿಸುವುದು . ಈ ಎರಡನ್ನು ಮೀರಿದವರು ಮಾತ್ರ ‘ಗುರುಪೂರ್ಣಿಮೆʼ ರಹಸ್ಯವನ್ನು ಅರಿಯಬಲ್ಲರು. ಕಾವ್ಯದ ಭಾಷೆ ಸತ್ಯಕ್ಕೆ ಸಂಬಂಧಿಸಿದ್ದಲ್ಲ, ರಹಸ್ಯಕ್ಕೆ ಸಂಬಂಧಿಸಿದ್ದು.ಒಬ್ಬ ಪ್ರೇಮಿ ತನ್ನ ಪ್ರೇಯಸಿಯ ಮುಖವನ್ನು ಚಂದಿರನೊಂದಿಗೆ ಹೋಲಿಸಿದರೆ ಅದು ಸತ್ಯವಲ್ಲ ಹಾಗೆ ನಿರರ್ಥಕವೂ ಅಲ್ಲ, ಯಾರ ಮುಖವೇ ಆಗಲಿ ಚಂದ್ರನನ್ನು ಹೋಲಲು ಹೇಗೆ ಸಾಧ್ಯ?
ತೀರದಲ್ಲಿ ಎರಡು ತರಹದ ಜನರು ಇರುವರು, ಅವರು ಮುಳುಗು ಹಾಕಲು ಸಿದ್ಧರಿಲ್ಲ. ಒಬ್ಬರು ಅದನ್ನು ಸತ್ಯವೆಂದು ಸಾಧಿಸಲು ನಿಂತಿದ್ದಾರೆ, ಮತ್ತೊಬ್ಬರು ಅದನ್ನು ಸುಳ್ಳೆಂದು ಸಾಬೀತು ಪಡಿಸಲು ನಿಂತಿದ್ದಾರೆ. ಈರ್ವರೂ ಮೂರ್ಖರಾಗಿದ್ದಾರೆ, ಕಾರಣ ಇಬ್ಬರ ನಿಲುವು ಒಂದೇ ಆಗಿದೆ. ಇಬ್ಬರ ತಪ್ಪು ಒಂದೇ ಆಗಿದೆ ಕಾವ್ಯದ ಭಾಷೆಯನ್ನು ಸತ್ಯವೆಂದು ನಂಬಿರುವುದು, ಅಥವಾ ಅದನ್ನು ಸುಳ್ಳೆಂದು ಸಾಧಿಸಲು ಹೊರಟಿರುವುದು.ಅವರು ವಿರುದ್ಧ ದೃವಗಳಂತೆ ಕಂಡರೂ , ಒಂದೇ ನಾಣ್ಯದ ಎರಡು ಮುಖಗಳಾಗಿದ್ದಾರೆ.
ಧರ್ಮವೆಂಬುದು ಮಹಾಕಾವ್ಯ. ಇದು ನಿಮಗೆ ಆರ್ಥವಾದಲ್ಲಿ ಆಷಾಢದ ಪೂರ್ಣಿಮೆ ಅರ್ಥವಾಗುವುದು. ಅಷಾಡದಲ್ಲಿ ಆಕಾಶ ಮೋಡಗಳಿಂದ ಆವೃತಗೊಂಡಿರುವುದು, ಈ ಹುಣ್ಣಿಮೆಯಲ್ಲಿ ಚಂದ್ರ ಕಾಣುವ ಸಾಧ್ಯತೆ ಕಡಿಮೆಯಿದೆ, ಚಂದಿರನ ಕಿರಣಗಳು ಸಹ ಪೂರ್ತಿಯಾಗಿ ಭೂಮಿಯನ್ನು ಚುಂಬಿಸುವುದದಿಲ್ಲ. ಹಾಗಾದರೆ ಶರದ್ ಹುಣ್ಣಿಮೆಯನ್ನು ಏಕೆ ಆಯ್ದುಕೊಳ್ಳಲಿಲ್ಲ? ಇದು ಹೆಚ್ಚು ತಾರ್ಕಿಕವಾಗಿದೆ.ಆದರೆ, ಯಾರು ಇದನ್ನು ಆಯ್ದುಕೊಂಡಿರುವರೋ ಅದರ ಹಿಂದೆ ಒಂದು ಉದ್ದೇಶವಿದೆ, ಅಂತರ್ದೃಷ್ಠಿ ಇದೆ. ಇಲ್ಲಿ ಗುರು ಹುಣ್ಣಿಮೆಯಾದರೆ ಶಿಷ್ಯಂದರು ಆಷಾಢದ ಮೋಡದಂತೆ. ಶರದ್ ಹುಣ್ಣಿಮೆ ಖಾಲಿ ಆಗಸದ ಕಾರಣದಿಂದಾಗಿ ಸುಂದರವಾಗಿರಬಹದು.ಆದರೆ, ಅಲ್ಲಿ ಶಿಷ್ಯಂದರಿಲ್ಲ, ಗುರು ಏಕಾಂಗಿಯಾಗಿದ್ದಾನೆ. ಆಷಾಢದ ಹುಣ್ಣಿಮೆಗೆ ಅದರದೇ ಆದ ಸೊಬಗಿದೆ, ಗುರು-ಶಿಷ್ಯರ ಇಬ್ಬರ ಉಪಸ್ಥಿತಿ ಇದೆ.
ಶಿಷ್ಯ ಜನ್ಮಜನ್ಮಾಂತರಗಳ ಕತ್ತಲನ್ನು ಹೊತ್ತು ತಂದಿದ್ದಾನೆ. ಅವು ಆಷಾಢದ ಕಪ್ಪು ಮೋಡಗಳು. ಅವುಗಳ ಮಧ್ಯೆ ಗುರು ಚಂದಿರನಂತೆ ಹೊಳೆಯುತ್ತಿದ್ದಾನೆ, ಆ ಅಂಧಕಾರದ ನಡುವೆಯೂ ಬೆಳಕನ್ನು ಬೀರುತ್ತಿದ್ದರೆ ಅವನೇ ಗುರು. ಹಾಗಾಗಿ ಆಷಾಢದ ಹುಣ್ಣಿಮೆ ಗುರು-ಶಿಷ್ಯರ ಸಮ್ಮಿಲನದ ರೂಪಕವಾಗಿದೆ. ಗುರು-ಶಿಷ್ಯನ ಸಮ್ಮಿಲನವೇ ಸಾರ್ಥಕತೆಯಾಗಿದೆ.ಇದು ಕಾವ್ಯಾತ್ಮಕ ಅಭಿವ್ಯಕ್ತಿ ಎಂದು ನಿಮಗೆ ಅರಿವಾದರೆ-ನೀವು ಆಷಾಢದ ಕಪ್ಪು ಮೋಡವೆಂದು ಅರಿವಾಗುವುದು. ಜನ್ಮಜನ್ಮಂತರಗಳ ಕಾಮನೆಗಳನ್ನು , ಸಂಸ್ಕಾರಗಳನ್ನು ಹೊತ್ತು ತಿರುಗುತ್ತಿರುವಿರಿ.ನಿಮ್ಮ ಗಾಢಾಂಧಾಕಾರ ಛೇದಿಸಬೇಕು, ಭೇದಿಸಬೇಕು.ಕತ್ತಲೆ ತುಂಬಿದ ಹೃದಯಲ್ಲಿ ಬೆಳಕನ್ನು ತರಬೇಕು. ಅದಕ್ಕೆ ಹುಣ್ಣಿಮೆಯ ಅವಶ್ಯಕತೆ ಇದೆ.ಪೂರ್ಣ ಚಂದಿರನಲ್ಲಿ ಒಂದು ಶೀಥಲತೆಯಿದೆ.ಹಾಗಾಗಿ ಚಂದ್ರನನ್ನು ಗುರುವಾಗಿ ಆರಿಸಿಕೊಳ್ಳಲಾಗಿದೆ, ಸೂರ್ಯನನ್ನು ಆಯ್ದುಕೊಂಡಿದ್ದರೆ ಸತ್ಯಕ್ಕೆ ಹತ್ತಿರವಾಗಿರುತ್ತಿತ್ತು. ಏಕೆಂದರೆ ಚಂದ್ರನಿಗೆ ಸ್ವಂತ ಬೆಳಕಿಲ್ಲ. ಸೂರ್ಯನಿಗೆ ತನ್ನದೇ ಆದ ಸ್ವಂತ ಬೆಳಕಿದೆ.ಹಾಗಾಗಿ ನಾವು ಸೂರ್ಯನನ್ನು ಆಯ್ದುಕೊಂಡಿಲ್ಲ, ಸೂರ್ಯ ಕೊಂಚ ದುಬಾರಿ; ಶಿಷ್ಯನ ಸಾಮರ್ಥ್ಯಕ್ಕೆ ಮೀರಿದವನು. ಹಾಗಾಗಿ ಚಂದ್ರನನ್ನು ಆಯ್ದುಕೊಂಡಿದ್ದಾರೆ.
ಇದಕ್ಕಾಗಿ ಕಬೀರ್ ಹೇಳುತ್ತಾರೆ “ಗುರು ಹಾಗೂ ಗೋವಿಂದ (ದೇವರು) ಇಬ್ಬರು ಪ್ರತ್ಯಕ್ಷವಾದಾಗ ನಾನು ಯಾರ ಕಾಲಿಗೆ ನಮಸ್ಕರಿಸಲಿ? ಅಂತಹ ಸಂದರ್ಭ ಬಂದರೆ ನಾನು ಗುರುವಿನ ಕಾಲಿಗೆ ಮೊದಲು ಬೀಳುವೆ ಎನ್ನುತ್ತಾರೆ ಕಬೀರ್. ಏಕೆಂದರೆ ಗೋವಿಂದನ ಕಡೆಗೆ ನನಗೆ ಮಾರ್ಗ ತೋರಿದವರು ಗುರು ಅಲ್ಲವೇ. ಗುರು ದರ್ಪಣದಂತೆ ಕೆಲಸ ಮಾಡುವನು. ಯಾವುದು ಅಸಂಭವವೋ ಅದನ್ನು ಸಾಧ್ಯವಾಗಿಸಿವ. ದೂರದ ಬೆಳಕನ್ನು, ಅಂಗೈಯಲ್ಲಿ ತಂದುಕೊಟ್ಟವ. ಗುರು ಮಾಧ್ಯಮವಾಗಿದ್ದಾನೆ ಹಾಗಾಗಿ ಚಂದಿರನನ್ನು ಆಯ್ದುಕೊಂಡಿದ್ದೇವೆ.
ಗುರುವಿನ ಬಳಿ ಸ್ವಂತದ್ದು ಏನು ಇಲ್ಲ. ಕಬೀರ್ ಹೇಳುತ್ತಾರೆ ʼನನ್ನದು ಎಂಬುದು ನನ್ನ ಬಳಿ ಏನು ಇಲ್ಲʼಎಂದು. ಯಾರು ಶೂನ್ಯರಾಗಿದ್ದಾರೋ ಅವರೇ ಗುರು.ಅವರ ಬಳಿ ಏನಾದರೂ ಇದ್ದರೆ ಅದು ಪರಮಾತ್ಮನ ಪ್ರತಿಬಿಂಬ ಮಾತ್ರ.ಅದು ಸಹ ಶುಧ್ಧವಾಗಿಲ್ಲ. ಚಂದ್ರನ ಬಳಿಯು ಅವನದೇ ಆದ ಸ್ವಂತ ಬೆಳಕಿಲ್ಲ , ಅವನು ಸೂರ್ಯನಿಂದ ಪಡೆಯುತ್ತಿದ್ದಾನೆ. ಅವನು ಮಾಧುರ್ಯಕ್ಕೆ ಜನ್ಮ ನೀಡುವ ಮಾಧ್ಯಮ.ಗುರುವನ್ನು ಸೂರ್ಯನಿಗಿಂತ ಚಂದ್ರನಿಗೆ ಹೋಲಿಸುವುದು ಹೆಚ್ಚು ಸಾರ್ಥಕ. ಇದಕ್ಕಾಗಿ ಚಂದ್ರನಿಗೆ ಹೋಲಿಸಲಾಗಿದೆ. ಸೂರ್ಯ ಸದಾ ಒಂದೇ ರೀತಿ ಇರುವನು. ಅವನ ಆಕಾರ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ.ಗುರು, ಗುರುವಾಗುವ ಮೊದಲು ಒರ್ವ ಶಿಷ್ಯನಾಗಿದ್ದ. ಅವನು ನಿಮ್ಮಷ್ಟೇ ಅಂಧಕಾರ, ತಮಸ್ಸಿನಿಂದ ಕೂಡಿದ್ದ. ಸೂರ್ಯ ಸದಾ ಒಂದೇ ರೀತಿ ಇರುವನು.
ಆದ್ದರಿಂದ ಸೂರ್ಯನ ಹೋಲಿಕೆ ಸರಿ ಹೊಂದುವುದಿಲ್ಲ. ಗುರು ನಿಮ್ಮ ಹಾಗೆಯೇ ಹುಡುಕಾಟದಲ್ಲಿದ್ದವರು, ದಾರಿ ತಪ್ಪಿದವರು, ನೀವು ಮಾಡಿದ್ದ ತಪ್ಪಗಳೇ ಅವರು ಮಾಡಿದ್ದರು. ಹಾಗಾಗಿ ಅವನು ನಿಮಗೆ ನೆರವಾಗಬಲ್ಲ. ಯಾರು ತಪ್ಪೇ ಮಾಡಿಲ್ಲವೋ ಅವನು ಹೇಗೆ ತಾನೇ ಸಹಾಯ ಮಾಡಬಲ್ಲ. ಅವನು ನಿಮ್ಮ ತಪ್ಪುಗಳನ್ನು ಅರಿಯಲಾರ. ಯಾರು ಆ ಹಾದಿಯಲ್ಲಿ ಸಾಗಿದ್ದಾರೋ; ಯಾರು ಅಂಧಕಾರದಲ್ಲಿ ಕಳೆದು ಹೋಗಿದ್ದಾರೋ, ಯಾರು ತಪ್ಪಾದ ಬಾಗಿಲಗಳನ್ನು ತಟ್ಟಿ ಬಂದಿದ್ದಾರೋ, ಯಾರು ಬದುಕಿನ ಎಲ್ಲಾ ವಿಕಾರಗಳನ್ನು ನೋಡಿದ್ದಾರೋ, ಯಾರಿಗೆ ಜೀವನದ ಎಲ್ಲಾ ವಿಕೃತಿಗಳ ಪರಿಚಯವಿದೆಯೋ-ಅವನು ಮಾತ್ರ ನಿಮ್ಮೊಳಗಿನ ಸ್ಥಿತಿಯನ್ನು ಅರಿಯಬಲ್ಲ.
ಸೂರ್ಯ ನಿಮ್ಮನ್ನು ಅರಿಯಲು ಸಾಧ್ಯವಿಲ್ಲ, ಚಂದ್ರ ನಿಮ್ಮನ್ನು ಅರಿಯಬಹುದು. ಚಂದ್ರ ಕತ್ತಲ ಹಾದಿಯಲ್ಲಿ ಸಾಗಿದ್ದಾನೆ; ಅರ್ಧ ಜೀವನ ಕತ್ತಲೆಯಲ್ಲಿ ಕಳೆದಿದ್ದಾನೆ. ಚಂದ್ರನಿಗೆ ಅಮಾವಾಸ್ಯೆ ಮತ್ತು ಹುಣ್ಣಿಮೆ ಎರಡರ ಪರಿಚಯವಿದೆ.ಭಯಂಕರ ಅಂಧಕಾರದ ಪರಿಚಯವು ಇದೆ, ಬದುಕಿನ ವಿಕೃತಿಯ ಪರಿಚಯವು ಇದೆ, ನೇರವಾಗಿ ಪರಮಾತ್ಮನನ್ನು ಏನು ಕಂಡುಕೊಂಡಿಲ್ಲ. ಚಂದ್ರ ಒಬ್ಬ ಯಾತ್ರಿಕನಂತೆ, ಸೂರ್ಯ ತಟಸ್ಥವಾಗಿ ಅಲ್ಲಿಯೇ ಇದ್ದಾನೆ, ಯಾವುದೇ ಚಲನೆಯಿಲ್ಲ.ಅಪೂರ್ಣತೆಯಿಂದ ಆರಂಭಿಸಿ ಪೂರ್ಣವಾಗಿದ್ದಾನೆ ಗುರು , ಚಂದ್ರನಂತೆ ಹಂತ ಹಂತವಾಗಿ ಬೆಳೆಯುತ್ತ ಬಂದಿದ್ದಾನೆ.
ಗುರು ನೀವು ಸಾಗುತ್ತಿರುವ ಹಾದಿಯಲ್ಲಿದ್ದಾರೆ ; ನಿಮಗಿಂತ ಮುಂದಿದ್ದಾರೆ ಆದರೆ ದಾರಿ ಮಾತ್ರ ಅದೇ.ಪರಮಾತ್ಮ ನಿಮಗೆ ಸಹಾಯ ಮಾಡಲಾರ.ಈ ಮಾತು ಜೀರ್ಣಿಸಿಕೊಳ್ಳುವುದು ಕಷ್ಟ. ಏಕೆಂದರೆ ಅವನು ಈ ಮಾರ್ಗದಲ್ಲಿ ಪ್ರಯಾಣಿಸಿಲ್ಲ, ಅವನು ಎಂದಿಗೂ ದಾರಿ ತಪ್ಪಿಲ್ಲ. ಹಾಗಾಗಿ ಅವನು ನಿಮ್ಮನ್ನು ಅರಿಯಲಾರ.ಅವನು ನಿಮ್ಮಿಂದ ತುಂಬಾ ದೂರವಿದ್ದಾನೆ, ಈ ಅಂತರ ಅನಂತವಾದುದ್ದು.ನಿಮ್ಮ ಹಾಗೂ ದೇವರ ನಡುವೆ ಯಾವುದೇ ಸೇತು ನಿರ್ಮಿಸಲಾಗದು.
ನಿಮ್ಮ ಹಾಗೂ ಗುರುವಿನ ನಡುವೆ ಎಷ್ಟೇ ಅಂತರವಿರಲಿ ಸೇತುವೆ ನಿರ್ಮಿಸಬಹದು. ಅಮಾವಾಸ್ಯೆ ಚಂದಿರ ಹಾಗೂ ಹುಣ್ಣಿಮೆಯ ಚಂದಿರನ ನಡುವೆ ಎಷ್ಟೊಂದು ಅಂತರವಿದೆ ನೋಡಿ, ಆದರೂ ಅಲ್ಲೊಂದು ಸೇತು ನಿರ್ಮಿಸಬಹದು. ಅಮಾವಾಸ್ಯೆ ಕತ್ತಲಲ್ಲೂ ಚಂದ್ರನಿದ್ದ, ಚಂದ್ರ ಈಗಲೂ ಇದ್ದಾನೆ. ಆದರೆ ಅಲ್ಲಿ ರೂಪಾಂತರಣೆ ಆಗಿದೆ, ಕ್ರಾಂತಿ ಘಟಿಸಿದೆ.ಆದ್ದರಿಂದ ಗುರು ನಿಮ್ಮನ್ನು ಅರ್ಥಮಾಡಿಕೊಳ್ಳಬಲ್ಲ. ಯಾರು ನಿಮ್ಮ ತಪ್ಪುಗಳನ್ನು ಕ್ಷಮಿಸುವರು ಅವರನ್ನೇ ಗುರು ಎಂದು ಸ್ವೀಕರಿಸಿ. ಯಾವ ಗುರುವಿಗೆ ಕ್ಷಮಿಸಲಾಗದೋ, ಬಹುಶಃ ಅವನು ಜೀವನವನ್ನು ಇಡೀಯಾಗಿ ಬದುಕಿಯೇ ಇಲ್ಲ.
ಹಾಗಾಗಿ ಮಹಾಗುರುಗಳು ನಿಮ್ಮ ತಪ್ಪಗಳನ್ನು ತಕ್ಷಣವೇ ಕ್ಷಮಿಸುತ್ತಾರೆ. ಇದು ಮನುಷ್ಯನ ಸ್ವಭಾವ ಎಂದು ಅವರಿಗೆ ಗೊತ್ತು.ಸ್ವತಃ ಈ ತಪ್ಪಗಳನ್ನು ಮಾಡಿದ್ದಾರೆ, ಬೇರೆಯವರಲ್ಲಿ ದೋಷ ಕಾಣುವುದಿಲ್ಲ. ಅವರಲ್ಲಿ ಕಾರುಣ್ಯ ಹೊರತುಪಡಿಸಿ ಯಾವುದೇ ನಿಂದನೆ ಇರುವುದಿಲ್ಲ.
ಚಂದ್ರನ ಹಿಂದೆ ಯಾತ್ರೆಯ ಅನುಭವವಿದೆ. ಯಾವುದೆಲ್ಲ ಮನುಷ್ಯನೊಂದಿಗೆ ಘಟಿಸಲು ಸಾಧ್ಯವೋ , ಅದೆಲ್ಲಾ ಚಂದ್ರನೊಂದಿಗೆ ಘಟಿಸಿದೆ.ಯಾರು ಮನುಷ್ಯನ ಅನಂತ ರೂಪಗಳಲ್ಲಿ ಜೀವಿಸಿದ್ದಾನೋ ಅವನೇ ಸದ್ಗುರು, ಅವನಿಗೆ ಶುಭ-ಅಶುಭ, ಒಳ್ಳೆಯದು-ಕೆಟ್ಟದು, ಸುಂದರ-ಕುರೂಪ ಎಲ್ಲಾದರ ಪರಿಚಯವಿದೆ.ಅವನು ನರಕವನ್ನೂ ನೋಡಿದ್ದಾನೆ, ಜೀವನದಲ್ಲಿ ಸ್ವರ್ಗವೂ ಕಂಡಿದ್ದಾನೆ. ಅವನಿಗೆ ಸುಖ-ದುಖಃಗಳ ಎದುರಿಸಿ ಪ್ರಬುದ್ಧತೆಯನ್ನು ಸಾಧಿಸಿದ್ದಾನೆ. ಸಂಚಿತ ಕರ್ಮವನ್ನು ಕಳೆದು ಪೂರ್ಣಚಂದಿರನಾಗಿದ್ದಾನೆ.
ಈ ಎಲ್ಲಾ ಕಾರಣಗಳಿಂದಾಗಿ ಚಂದ್ರನನ್ನು ಗುರು ಎನ್ನುವರೇ ಹೊರತು ಸೂರ್ಯನನ್ನಲ್ಲ. ಚಂದ್ರನಲ್ಲಿಯ ಬೆಳಕು ತಂಪಾಗಿದೆ, ಸೂರ್ಯನ ಬೆಳಕಿಗೆ ಪ್ರಖರತೆ ಜಾಸ್ತಿ ಅವನು ಸುಟ್ಟು ಬಿಡುವನು. ಚಂದಿರನ ಬೆಳಕು ಹೂಮಳೆಯಂತೆ ಸುರಿಯುವುದು.
ಗುರು ಹುಣ್ಣಿಮೆಯ ಚಂದ್ರ. ನೀವು ಎಷ್ಟೇ ಗಾಢಾಂಧಕರದಲ್ಲಿಯೇ ಇರಿ , ಎಷ್ಟೇ ದೂರದಲ್ಲಿರಿ ಯಾವುದೇ ವ್ಯತ್ಯಾಸವಿಲ್ಲ, ನಿಮ್ಮ ಗುರು ಕ್ರಮಿಸಿದ ಹಾದಿಯಲ್ಲಿಯೇ ಸಾಗುತ್ತಿರುವಿರಿ.ಆದ್ದರಿಂದ ಗುರುವಿಲ್ಲದೆ ಪರಮಾತ್ಮನನ್ನು ಅನ್ವೇಷಿಸುವುದು ಅಸಂಭವ. ಪರಮಾತ್ಮನ ನೇರ ಸಾಕ್ಷತ್ಕಾರ ಸುಟ್ಟು ಹಾಕುವುದು. ಸೂರ್ಯನತ್ತ ಕಣ್ಣೆತ್ತಿಯೂ ನೋಡದಿರಿ. ಮೊದಲು ಚಂದ್ರನೊಂದಿಗೆ ಸಾಂಗತ್ಯ ಬೆಳಿಸಿ. ಚಂದ್ರನೊಂದಿಗೆ ರಾಜಿಮಾಡಿಕೊಳ್ಳಿ. ಚಂದ್ರನೇ ನಿಮಗೆ ಸೂರ್ಯನತ್ತ ಬೊಟ್ಟು ಮಾಡುವನು. ಗೋವಿಂದನನ್ನು ತೋರಿದ ಗುರುವಿನ ಬಲಿದಾನ ದೊಡ್ಡದು. ಹಾಗಾಗಿ ಆಷಾಢ ಪೂರ್ಣಿಮೆ ಗುರು ಪೂರ್ಣಿಮೆ ಎನ್ನುವರು. ಇದು ಕಾವ್ಯತ್ಮಕ ಅಭಿವ್ಯಕ್ತಿಯಾಗಿದೆ. ಇದನ್ನು ಯಾವುದೇ ಶಾಸ್ತ್ರ-ಪುರಾಣಗಳಲ್ಲಿ ಹುಡುಕಲು ಹೋಗದಿರಿ. ನನಗೆ ಕಂಡಿದ್ದನ್ನು ಹೇಳುತ್ತಿದ್ದೇನೆ.