ಜ್ಞಾನೋದಯ ಕೇವಲ ತಕ್ಷಣ ಘಟಿಸುವ ಘಟನೆ ಮಾತ್ರ ಅಲ್ಲ ಅದು ಸಾಂಕ್ರಾಮಿಕವೂ ಹೌದು ಅನ್ನುತ್ತಾರೆ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಮಂಜುಶ್ರೀ ಮತ್ತು ಸಮಂತಭದ್ರ ಗೌತಮ ಬುದ್ಧ ಬದುಕಿರುವಾಗಲೇ ಜ್ಞಾನೋದಯವನ್ನು ಅನುಭವಿಸಿದ ಬುದ್ಧನ ಇಬ್ಬರು ಪ್ರಸಿದ್ಧ ಶಿಷ್ಯರು. ಮುಂಜುಶ್ರೀ ದಿನಗಟ್ಟಲೇ ಮರದ ಕೆಳಗೆ ಧ್ಯಾನದಲ್ಲಿ ಮಗ್ನನಾಗಿ ಕುಳಿತುಬಿಡುತ್ತಿದ್ದ. ಒಂದು ದಿನ, ರಾತ್ರಿ ತೀರುತ್ತಿದ್ದಂತೆಯೇ ಅದು ಹೂ ಬಿಡುವ ಋತುವಲ್ಲವಾದರೂ ಮರ ಅಚಾನಕ್ ಆಗಿ ಅರಳಿ ನಿಂತು ಹೂಗಳು ಧಾರಾಕಾರ ಮಳೆಯಂತೆ ಕೆಳಗೆ ಉದುರತೊಡಗಿದವು.
ಮಧುಕಾಮಿನಿ ಮರ ಹೂ ಬಿಡುವುದು ಮಳೆಗಾಲದ ರಾತ್ರಿಯಲ್ಲಿ, ಸಾವಿರಾರು ಹೂಗಳು ಒಮ್ಮೆಲೇ ಮರದಲ್ಲಿ ಕಾಣಿಸಿಕೊಳ್ಳುತ್ತವೆ. ಬೆಳಕು ಹರಿಯುತ್ತಿದ್ದಂತೆಯೇ ಮರದ ಕೆಳಗೆ ಸಾವಿರಾರು ಸುಗಂಧದ ಹೂವುಗಳ ಹಾಸು. ಸುತ್ತಲಿನ ಇಡೀ ವಾತಾವರಣಕ್ಕೆ ದಿವ್ಯದ ಕಳೆ.
ಬುದ್ಧನ ಸಾವಿರಾರು ಶಿಷ್ಯರು ಒಮ್ಮೆ ಮರವನ್ನು ಒಮ್ಮೆ ಮಂಜುಶ್ರೀಯನ್ನು ನೋಡುತ್ತ ಕೌತುಕಕ್ಕೆ ಈಡಾಗಿದ್ದರು. ಮಳೆಗಾಲವಲ್ಲದಿದ್ದರೂ ಮರ ಹೂ ಬಿಟ್ಟು ಸಂಭ್ರಮಿಸುತ್ತಿರುವುದನ್ನ ನೋಡಿ ಅಚ್ಚರಿಪಡುತ್ತಿದ್ದರು.
“ ನೀವು ಕೇವಲ ಮರವನ್ನ ಹೂಗಳನ್ನ ನೋಡುತ್ತಿದ್ಜೀರಿ ಆದರೆ ಒಮ್ಮೆ ಮಂಜುಶ್ರೀಯನ್ನು ನೋಡಿ, ಮಂಜುಶ್ರೀಯ ಸ್ಥಿತಿಯನ್ನೊಮ್ಮೆ ಗಮನಿಸಿ. ಮಂಜುಶ್ರೀಯ ಅಂತರಗದ ಸದ್ದುಗಳನ್ನ ಮರ ಕೇಳಿಸಿಕೊಂಡಿದೆ. ಮಂಜುಶ್ರೀ ಮರದೊಂದಿಗೆ ಒಂದಾಗಿಬಿಟ್ಟಿದ್ದಾನೆ. ಮಂಜುಶ್ರೀ ಅರಳಲು ತೊಡಗಿದಂತೆ ಅದು ಅರಳುವ ಸಮಯವಲ್ಲವಾದರೂ ಮರ ಕೂಡ ಅರಳಿ ನಿಂತಿದೆ. “
ಬುದ್ಧ ಪ್ರಕೃತಿಯ ಈ ಅನಿರೀಕ್ಷಿತ ವೈಭವವನ್ನು ಶಿಷ್ಯರಿಗೆ ವಿವರಿಸಿ ಹೇಳಿದ.
ಮಂಜುಶ್ರೀ ಮುಂದಿನ ಏಳು ದಿನ ಸತತವಾಗಿ ಮೌನವನ್ನು ಆವರಿಸಿಕೊಂಡು ಧ್ಯಾನದಲ್ಲಿ ಮರದ ಕೆಳಗೆ ಕುಳಿತುಕೊಂಡಿದ್ದ. ಏಳನೇ ದಿನದ ಕೊನೆಗೆ ಬುದ್ಧನೇ ಮಂಜುಶ್ರೀಯನ್ನು ಮಾತನಾಡಿಸಿದ.
“ ಮಂಜುಶ್ರೀ ಎದ್ದೇಳು ಏಳು ದಿನಗಳಾದವು, ನಿನಗಾದ ಅನುಭವವನ್ನು ನಿನ್ನ ಸಹಯಾತ್ರಿಗಳೊಂದಿಗೆ ಹಂಚಿಕೋ.”
ಮರವನ್ನು ನೋಡಬೇಡಿ ಮಂಜುಶ್ರೀಯನ್ನ ಗಮನಿಸಿ ಎಂದು ಬುದ್ಧ ಹೇಳಿದಾಗ, ಸಮಂತಭದ್ರ ಮಂಜುಶ್ರೀಯನ್ನ ನೋಡಿದ, ನೋಡಿದ ತಕ್ಷಣ ಸಮಂತಭದ್ರನೂ ನಿರ್ವಾಣವನ್ನು ಅನುಭವಿಸಿದ. ಅಲ್ಲಿ ಸಾವಿರಾರು ಜನ ಇದ್ದರೂ ಸಮಂತಭದ್ರ ಮಾತ್ರ ಜ್ಞಾನೋದಯಕ್ಕೆ ಒಳಗಾದ ವೈಚಿತ್ರ್ಯವನ್ನು ಗಮನಿಸಿ , ಜ್ಞಾನೋದಯ ಕೇವಲ ತಕ್ಷಣ ಘಟಿಸುವ ಘಟನೆ ಮಾತ್ರ ಅಲ್ಲ ಅದು ಸಾಂಕ್ರಾಮಿಕವೂ ಹೌದು.