ಮಾರಣಾಂತಿಕ ಏಕರೂಪತೆಯ ಕುರಿತು ‘ಕೇಶವ ಮಳಗಿ’ ಬರಹ

ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಜನಗಳು ಒಂದೆಡೆ ಕೂಡಿಕೊಂಡಾಗ ಅದನ್ನೊಂದು ರಾಷ್ಟ್ರವೆಂದು ಪರಿಗಣಿಸಬಹುದು. ಈ ಯಾಂತ್ರಿಕ ಕಾರಣದಿಂದ ಸಮುದಾಯಗಳು ಒಂದುಗೂಡಿರುತ್ತವೆ. ಯಾವುದೇ ಕಾರಣಕ್ಕೂ ಜನಾಂಗೀಯ, ಪ್ರಾದೇಶಿಕ, ಭಾಷಿಕ ಮತ್ತು ಸಾಂಸ್ಕೃತಿಕ ಅಂಶಗಳು ರಾಷ್ಟ್ರೀಯತೆಯಲ್ಲಿ ಸೇರಿರಬಾರದು । ಕೇಶವ ಮಳಗಿ; ಕಥೆಗಾರರು, ಚಿಂತಕರು

ಏ ಕೇಚಿ ಪಾನಾ ಭೂತತ್ತಿ ತಸಾ ವಾ ತಾವರಾ ವಾ ಅನವ ಸೇಸಾ
ದಿಟ್ಟಿತಾ ಯೇವ ಅದಿಟ್ಟಿತಾ ಏತ ದೂರೆ ವಸಂತಿ ಅವದೂರೆ
ಭೂತಾ ವಾ ಸಂಭವೇಸಿ ವಾ ಸಬ್ಬೆ-ಸತ್ತ ಭವಂತು ಸುಕಿ- ತತ್ತಾ
ಮಾತಾ ಯಥಾ ನಿಯಂ ಪುತ್ತಂ ಆಯುಸಾ ಏಕಪುತ್ತಮಾನುರಕ್ಖೆ
ಏವಾಂಪಿ ಸಬ್ಬಭೂತೇಸು ಮಾನಸಂ ಭಾವಯೇ ಅಪರಿಮಿತಂ

ಅರ್ಥ: ಬಲಹೀನನೋ, ಬಲಶಾಲಿಯೊ ಸದೃಢನೋ,
ಗೋಚರನೊ, ಅಗೋಚರನೋ, ಸನಿಹದಲಿರುವವರೊ, ದೂರ ವಾಸಿಯೊ,
ಹುಟ್ಟಿರುವವನೋ, ಇನ್ನೂ ಹುಟ್ಟಲಿರುವವನೋ
ತಾಯಿ ತನ್ನ ಮಗುವನ್ನು ಏಕೈಕ ಒಡಲ ಕುಡಿಯೆಂದು ಸಲಹುವಂತೆ
ಸಕಲ ಜೀವರಾಶಿಯೂ ಅಪರಿಮಿತ ಆನಂದ ಪಡೆಯಲಿ
(ಕರಣೀಯ ಮೆತ್ತ ಸೂತ್ತ)


ರಜಮುಹತಂ ಚ ವಾತೇನ ಯಥಾ ಮೇಘೋಪಸಮ್ಮಯೆ;
ಏವಂ ಸಮ್ಮತಿ ಸಂಕಪ್ಪಾ ಯದಾ ಪಣ್ಣಾಯ ಪಸ್ಸತಿ.
ಸಬ್ಬೆ ಸಂಜಕಾರಾ ಅನಿಚ್ಛತಿ ಯದಾ ಪಣ್ಣಾಯ ಪಸ್ಸತಿ;
ಅಥ ನಿಬ್ಬಿಂದತಿ ದುಃಖೆ ಏಸ ಮಗ್ಗೊ ವಿಸುದ್ಧಿಯಾ.

ಅರ್ಥ: ಗಾಳಿ ತೂರಿದ ಧೂಳನು ಮಳೆಯ ಮೋಡವು ಅಡಗಿಸುವುದು;
ಅರಿವು ನೀಡುವ ಬೆಳಕು ಭಾವಭಾರವನು ಕರಗಿಸುವುದು.
ವಿವೇಕಿಯಾದವನು ಬದುಕು ಅನಿಶ್ಚಯವೆಂದರಿಯುವನು;
ದುಃಖದಲಿ ಬಸವಳಿದವನು ಪರಿಶುದ್ಧ ಹಾದಿಯನು ಹುಡುಕುವನು.
(ಅಣ್ಣಕೊಂಡಣ್ಣ ಥೇರಾ ಗಾಥಾ)

ನಿಜವಾದ ಕಾಣ್ಕೆಯಲ್ಲಿ ಅರಿವಲ್ಲದೆ ಬೇರೇನೂ ಇಲ್ಲ. ಆ ಕಾರಣವಾಗಿಯೇ ಅಧ್ಯಯನಶೀಲನು ವಸ್ತುಸ್ಥಿತಿ ಜ್ಞಾನವನ್ನು ಪಡೆಯುವತ್ತ ಮಗ್ನನಾಗಿರಬೇಕು. . . ಬುದ್ಧಿವಂತನಾದವನು ಜ್ಞಾನದ ದೀಪದಿಂದ ಪ್ರತಿಯೊಂದರ ಮೂಲವನ್ನು; ಲೋಕದ ವೈವಿಧ್ಯಮಯ ಅನುಭವವನ್ನು ಅರಿತುಕೊಳ್ಳಬೇಕು. ಬಂಧಿಸಲಾಗದ ಈ ಬೆಳಕು ಬಿಡುಗಡೆಯತ್ತ ಹೆಜ್ಜೆಗಳನ್ನು ಕೊಂಡೊಯ್ಯುತ್ತದೆ, ಇದರ ಬೆಂಕಿಯು ಕೊಳೆಯನ್ನು ದಹಿಸುತ್ತದೆ. ಅದರಿಂದ ಪಡೆವ ತಿಳಿವು ಎಂಬ ಸಿಹಿಯು ಸಂತೃಪ್ತಿಯನ್ನು ತರುತ್ತದೆ.
ಭಾವಿವೇಕ (ಮಾಧ್ಯಮಕ-ಹೃದಯ-ಕಾರಿಕಾ, ತತ್ತ್ವಜ್ಞಾನೈಷನಾ) 
(ಗಾಂಧಿಗೆ ವಿವಿಧ ಸನ್ನಿವೇಶದಲ್ಲಿ ರವೀಂದ್ರನಾಥ ಠಾಕೂರರು ಬರೆದ ಪತ್ರಗಳ ಸಾರ)

ದೇಶಭಕ್ತಿಯ ಅಪಾಯ!

ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಜನಗಳು ಒಂದೆಡೆ ಕೂಡಿಕೊಂಡಾಗ ಅದನ್ನೊಂದು ರಾಷ್ಟ್ರವೆಂದು ಪರಿಗಣಿಸಬಹುದು. ಈ ಯಾಂತ್ರಿಕ ಕಾರಣದಿಂದ ಸಮುದಾಯಗಳು ಒಂದುಗೂಡಿರುತ್ತವೆ. ಯಾವುದೇ ಕಾರಣಕ್ಕೂ ಜನಾಂಗೀಯ, ಪ್ರಾದೇಶಿಕ, ಭಾಷಿಕ ಮತ್ತು ಸಾಂಸ್ಕೃತಿಕ ಅಂಶಗಳು ರಾಷ್ಟ್ರೀಯತೆಯಲ್ಲಿ ಸೇರಿರಬಾರದು. ಭೌತಿಕ ಸಂಪತ್ತಿನ ದುರಾಸೆಯ ದೆಸೆಯಿಂದ ಒಂದು ರಾಷ್ಟ್ರವು ಇನ್ನೊಂದನ್ನು ದಿಟ್ಟಿಸುತ್ತ ಭಯ ಮತ್ತು ಆತಂಕಗಳಿಂದ ಬದುಕುತ್ತಿದೆ. ಬಲಹೀನ ದೇಶದ ರಕ್ತಮಾಂಸವನ್ನು ಹೆಕ್ಕಿ ತಿನ್ನುವುದು ಇವುಗಳ ನಾಗರಿಕತೆಯಾಗಿದೆ. ತನ್ನದೇ ಗಡಿಯಿಂದ ಒಳ್ಳೆಯತನವನ್ನು ಹೊರ ಹಾಕುವುದನ್ನೇ ಇದು ಸದಾ ಯೋಚಿಸುತ್ತದೆ. ಈ ಹಿಂದೆಂದೂ ಇಂಥ ಭಯಾನಕ ಅಸೂಯೆ, ವಿಶ್ವಾಸದ್ರೋಹವನ್ನು ನಾವು ಕಾಣಲಾರೆವು. ವಾಸ್ತವದಲ್ಲಿದು ರಾಜಕೀಯ ಮಹತ್ವಾಕಾಂಕ್ಷೆ. ಆದರೆ, ದೇಶಭಕ್ತಿಯೆಂದು ಕರೆಯಲಾಗುತ್ತದೆ.

ಮಾರಣಾಂತಿಕ ಏಕರೂಪತೆ

ನಮ್ಮ ದೇಶದಲ್ಲಿಯಂತೂ ಏಕರೂಪತೆಯ ಅನಿಷ್ಟವು ದೀರ್ಘಕಾಲದಿಂದ ಅನುಷ್ಠಾನದಲ್ಲಿದೆ. ಪ್ರತಿ ಜಾತಿಯ, ಪ್ರತಿ ವ್ಯಕ್ತಿಗೂ ಆತ ಮಾಡಬೇಕಾದ ಕೆಲಸವನ್ನು ನಿಗದಿಪಡಿಸಲಾಗಿದೆ. ಆತನನ್ನು ಈ ಪವಿತ್ರ ಕಟ್ಟಪ್ಪಣೆಯ ಭ್ರಾಂತಿಯ ವಶೀಕರಣಕ್ಕೆ ಒಳಪಡಿಸಲಾಗಿದ್ದು, ಆತನ ಪೂರ್ವಜ ಒಪ್ಪಿಕೊಂಡ ವ್ಯವಸ್ಥೆಯಿಂದ ಪಾರಾಗುವುದು ಪಾಪವೆಂದು ಮನವರಿಕೆ ಮಾಡಲಾಗಿದೆ. ಈ ಜೀವವಿರೋಧಿ ಸಾಮಾಜಿಕ ವ್ಯವಸ್ಥೆಯಲ್ಲಿ ದಿನದ ಕ್ಷುಲ್ಲಕ ಕೆಲಸಗಳನ್ನು ಮಾಡುವುದು ಸುಲಭ. ಆದರೆ, ಸಂಪತ್ತು ಗಳಿಸುವುದು ಕಷ್ಟ. ಚಾಕರಿಯ ಈ ಗುಲಾಮನಾಗಿರುವ ಕುಶಲತೆಯನ್ನು ಹಸ್ತಾಂತರಿಸಲಾಗುತ್ತದೆ. ಸೃಷ್ಟಿಸುವ ಕೆಲಸದಲ್ಲಿ ನಿರತನಾಗಿರುವ ಈತನ ಕೈಗಳಿಗೇನೊ ಕೆಲಸವಿದೆ. ಆದರೆ, ಬುದ್ಧಿಯನ್ನು ಹತ್ಯೆಮಾಡಲಾಗಿದೆ. ನಮ್ಮ ದೇಶದಲ್ಲಿ ಕಾಣುವುದೆಲ್ಲ ಹಳೆಯದರ ಮರುಕಳಿಕೆ.

ಅಸಾಧ್ಯ ಒತ್ತಡವನ್ನು ಹೇರುವ ಮೂಲಕ ಸಮೂಹವನ್ನು ಸಮ್ಮೋಹನಗೊಳಿಸಿರುವುದು ಅನಾರೋಗ್ಯಕರ ಎಂಬುದು ನನ್ನ ಬಲವಾದ ನಂಬಿಕೆ. ಸಮುದಾಯಗಳ ನಂಬಿಕೆಯು ಎಲ್ಲೆಡೆ ಪಸರಿಸಿ ಇದ್ದಕ್ಕಿದ್ದಂತೆ ಪ್ರಬಲವೂ, ಅಗಾಧವೂ ಆದ ಏಕರೂಪದ ಉದ್ದೇಶವನ್ನು ಸೃಷ್ಟಿಸಬಹುದು. ಈ ಬಗೆಯ ಸಮೂಹ ಪರಿವರ್ತನೆಯು ನಮ್ಮ ವೈಚಾರಿಕ ಮನಸ್ಸನ್ನು ತಲ್ಲಣಗೊಳಿಸುವಂತಿದೆ. ಎಲ್ಲವೂ ಸರಾಗವಾಗಿ ಸಾಕಾರಗೊಳ್ಳಬಹುದು ಎಂಬ ಭಾರೀ ಭರವಸೆಗಳು ಏರುಗತಿಯ ಮಾರುಕಟ್ಟೆಯಂತೆ ಕಾಣುತ್ತಿವೆ. ಮನುಷ್ಯ ಸ್ವಭಾವಕ್ಕೆ ಹಿಗ್ಗಿಕೊಳ್ಳುವ ಗುಣವಿದೆ. ತುರ್ತಿನ ಹೆಸರಲ್ಲಿ ಅದನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಮಿತಿಮೀರಿ ಹಿಗ್ಗಿಸುವುದು ಸರಿಯಲ್ಲ. ಹಿನ್ನೆಗೆತ ಕಟ್ಟಿಟ್ಟ ಬುತ್ತಿಯಾಗಿದ್ದು, ಭಾರಿ ಬೆಲೆ ತೆರಬೇಕಾಗಬಹುದು.

ಇತ್ತೀಚೆಗೆ ನಾವು ಹಿಂದೂ-ಮುಸ್ಲಿಮ್ ಐಕ್ಯತೆಯ ವಿಷಯದಲ್ಲಿ ಸಲೀಸಾದ, ಕಾಲ್ಪನಿಕ ನಿರೀಕ್ಷೆಗಳನ್ನಿಟ್ಟುಕೊಂಡು ಈ ಬಗೆಯ ಭಾರೀ ಸಂಭ್ರಮವನ್ನು ಅನುಭವಿಸಿಯಾಗಿದೆ. ಹೀಗಾಗಿಯೇ, ಕ್ಷಿಪ್ರ ವಿಧಾನಗಳಿಗೆ ಸುಲಭವಾಗಿ ಬಲಿಯಾಗಬಲ್ಲ ದೇಶದಲ್ಲಿ, ನೈತಿಕತೆಯ ಕುರಿತು ಯಾರೂ ಸಂದೇಹಿಸಲಾಗದ ವ್ಯಕ್ತಿತ್ವವನ್ನು ಹೆಂದಿದವರೊಬ್ಬರು ಚರಕಕ್ಕೆ ನೀಡುತ್ತಿರುವ ಒತ್ತು ಮತ್ತು ಬೆಳೆಯುತ್ತಿರುವ ಬೃಹತ್ ಪ್ರಮಾಣದ ಚರಕ ಅಂಧ ವಿಶ್ವಾಸವು ನನ್ನಲ್ಲಿ ಆತಂಕವನ್ನು ಮೂಡಿಸುತ್ತಿದೆ.

ಧರ್ಮದ ಮೂಲಕ ಏಕತೆ ಸಾಧಿಸುವುದು ಅಸಾಧ್ಯ!

ನಮ್ಮದು ಆಚರಣೆಗಳಲ್ಲಿ ಲೀನವಾದ ಸಂಪ್ರದಾಯಶರಣ ದೇಶ. ದೇವರಿಗಿಂತ ಮಿಗಿಲಾಗಿ ಆತನನ್ನು ಪೂಜಿಸುವ ಅರ್ಚಕರ ಪಾದಗಳಿಗೆ ನಮಸ್ಕಾರ ಮಾಡುವುದರಲ್ಲಿಯೇ ನಮಗೆ ಹೆಚ್ಚು ನಂಬಿಕೆ. ನಾವು ಅಂತರಂಗದ ಆಶಯಗಳನ್ನು ಹತ್ತಿಕ್ಕಿ ಹೆರಗಿನ ಶಕ್ತಿಗಳಿಗೆ ಮಣೆ ಹಾಕುವವರು. ಹೆರಗಿನ ಸಹಾಯಕ್ಕಾಗಿ ಕಾಯುವುದು ಗುಲಾಮಿ ಲಕ್ಷಣ. ನಮ್ಮನ್ನು ನಾಶಪಡಿಸಲು ಇದಕ್ಕಿಂತ ಪ್ರಬಲ ಅಸ್ತ್ರ ಬೇಕಿಲ್ಲ.

ಭಾರತದಲ್ಲಿ ಧರ್ಮದ ಹೆಸರಿನಲ್ಲಿ ಎಲ್ಲರನ್ನೂ ಒಂದುಗೂಡಿಸುವುದು ಸಾಧ್ಯವಿಲ್ಲ. ರಾಜಕೀಯ ವೇದಿಕೆಗಳ ಮೂಲಕ ಅದನ್ನು ಸಾಧಿಸಲು ಪ್ರಯತ್ನಿಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದ್ದು ಅದಕ್ಕೆ ತುಸು ಕಾಲ ಬೇಕಾಗಬಹುದು. ಇಂಥ ಸನ್ನಿವೇಶದಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಹಣಕಾಸಿನ ಧರ್ಮದ ಮೂಲಕ ಪ್ರಯತ್ನಿಸಬಹುದಾಗಿದೆ. ಬಡವಬಲ್ಲಿದ, ಮೇಲುಕೀಳು ಹೀಗೆ ಎಲ್ಲರೂ ತೊಡಗಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ಈ ವಿಚಾರವನ್ನು ಸಮರೋಪಾದಿಯಲ್ಲಿ ಗ್ರಹಿಸಬೇಕು. ಸ್ಪರ್ಧೆಯ ಮೂಲಕವಲ್ಲದೆ ಸಹಕಾರದ ಮೂಲಕ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ನಿರೂಪಿಸಿದರೆ ಬಡತನದ ಭೂತದಿಂದ ತಪ್ಪಿಸಿಕೊಳ್ಳಬಹುದು. ದೇಶಭಕ್ತಿಯ ವಾಣಿಜ್ಯ ಹಿತಾಸಕ್ತಿಯನ್ನು ಸೂಚಿಸಲು ವ್ಯಕ್ತಿಯೊಬ್ಬನಿಗೆ ಜೀವನೋಪಾಯವಾಗಿ, ನಿರ್ದಿಷ್ಟ ಜನರಿಗೆ ರಾಜಕೀಯವಾಗಿ ಇದು ರೂಪುಗೊಳ್ಳಬಹುದು. ಇಲ್ಲಿಯವರೆಗೆ, ವಾಣಿಜ್ಯವನ್ನು ಕುತ್ಸಿತ ವಿರೋಧಿಭಾವದಿಂದ ನೋಡಿದರೆ, ರಾಜಕಾರಣವನ್ನು ಜಗಳಗಂಟ ರಾಷ್ಟ್ರೀಯವಾದವೆಂಬಂತೆ ಗ್ರಹಿಸಲಾಗಿದೆ. ಪರಸ್ಪರ ನಂಬಿಕೆಯಲ್ಲಿ ಕಟ್ಟಿಕೊಂಡ ಸಹಕಾರ ಮಾತ್ರ ರಾಷ್ಟ್ರಗಳ ಹಿತಾಸಕ್ತಿಯನ್ನು ಕಾಯಬಲ್ಲದು ಎಂದು ಅರಿವಾದಾಗಲಷ್ಟೇ ನಿಜವಾದ ರಾಜಕಾರಣಕ್ಕೆ ಅವಕಾಶವಿರುತ್ತದೆ. ಪ್ರಸ್ತುತ ಪ್ರತಿ ರಾಷ್ಟ್ರದಲ್ಲಿಯೂ ರಾಜಕೀಯವು ಹೇಗೆ ವ್ಯಕ್ತಿವಾದವನ್ನು ವಿಜೃಂಭಿಸುವ ಮಾರ್ಗವಾಗಿದೆಯೋ, ಅದೇರೀತಿ, ಜೀವನೋಪಾಯ ಕೂಡ ವ್ಯಕ್ತಿಗಳ ಅತಿ ಸ್ವಾರ್ಥದ ಅಭಿವ್ಯಕ್ತಿಯಾಗಿದೆ. ಮನುಷ್ಯ ತನ್ನ ಬದುಕಿಗಾಗಿ ದುಡಿಯುತ್ತಿರುವಾಗ ಕೇವಲ ತನ್ನ ರೊಟ್ಟಿ ಮಾತ್ರವಲ್ಲದೆ ಶಾಶ್ವತ ಸತ್ಯವನ್ನು ಗಳಿಸುವಂತಿರಬೇಕು.

Leave a Reply