ಭಗವಂತನ ಹಾಜರಾತಿ : ಸೂಫಿ Corner

ಮೂಲ: ಜಲಾಲುದ್ದಿನ್ ರೂಮಿ । ಕನ್ನಡಕ್ಕೆ: ಚಿದಂಬರ ನರೇಂದ್ರ

ಒಬ್ಬ ದರವೇಶಿ ಇನ್ನೊಬ್ಬನಿಗೆ,
ಭಗವಂತನ ಹಾಜರಾತಿಯ ಬಗ್ಗೆ ನಿನ್ನ ದೃಷ್ಟಿಕೋನ ಏನು?

ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ 
ಆದರೂ
ಈ ಮಾತುಕತೆಯನ್ನು ಮುಂದುವರೆಸಲು
ಒಂದು ಕಥೆ ಹೇಳುತ್ತೇನೆ ಕೇಳು.

ಆ ಹಾಜರಾತಿಯನ್ನು 
ಕಾಣುತ್ತಿದ್ದೇನೆ ನನ್ನ ಎದುರಿನಲ್ಲಿ.
ಎಡ ಭಾಗದಲ್ಲಿ 
ಧಗಧಗ ಹೊತ್ತಿ ಉರಿಯುತ್ತಿರುವ ಬೆಂಕಿ,
ಮತ್ತು ಬಲ ಭಾಗದಲ್ಲಿ  
ಜುಳು ಜುಳು ಹರಿಯುತ್ತಿರುವ ಸುಂದರ ಝರಿ.
ಒಂದು ಗುಂಪು
ಬೆಂಕಿಯ ಸುತ್ತ ಸುತ್ತಾಡಿ ಬೆಂಕಿಯನ್ನು ಪ್ರವೇಶಿಸುತ್ತದೆ,
ಮತ್ತು ಇನ್ನೊಂದು ಗುಂಪು  ಆಹ್ಲಾದಕರ ಝರಿಯನ್ನು.

ಯಾರಿಗೂ 
ತಮ್ಮ ತಮ್ಮ ಅದೃಷ್ಟಗಳ ಬಗ್ಗೆ ಕಲ್ಪನೆಯಿಲ್ಲ.
ಬೆಂಕಿಯನ್ನು ಪ್ರವೇಶಿಸಿದವರು
ಅಚಾನಕ್ ಆಗಿ ನೀರಿನ ಝರಿಯಲ್ಲಿ ಕಾಣಿಸಿಕೊಳ್ಳುತ್ತಾರೆ,
ಮತ್ತು ನೀರಿಗೆ ಇಳಿದವರ ತಲೆಗಳು ಬೆಂಕಿಯಲ್ಲಿ.

ಬಹುತೇಕ  ಜನ 
ಬೆಂಕಿಯಿಂದ ತಮ್ಮನ್ನು ತಾವು 
ದೂರ ಇಟ್ಟುಕೊಂಡವರು
ಕೊನೆಗೆ ಬೆಂಕಿಯ ಪಾಲು,
ನೀರಿನ ಪ್ರಶಾಂತತೆಯನ್ನು ಪ್ರೀತಿಸುವವರು
ಈ ಪ್ರಶಾಂತತೆಯನ್ನೇ ಭಕ್ತಿಯಾಗಿಸಿಕೊಂಡವರು
ಮೋಸ ಹೋಗಿದ್ದಾರೆ ಈ ವೈರುಧ್ಯದಿಂದಾಗಿ.

ಮೋಸ 
ಇಲ್ಲಿಗೇ ಮುಗಿಯುವುದಿಲ್ಲ.
ಬೆಂಕಿ ಅತ್ಯಂತ ಮಧುರ ದನಿಯಲ್ಲಿ
ಮಾತನಾಡುತ್ತಿದೆ ಕೇಳಿ,
ನಾನು ಬೆಂಕಿಯಲ್ಲ, 
ನಾನು ಚಿಮ್ಮುವ ಕಾರಂಜಿ,
ಬನ್ನಿ ನನ್ನ ಪ್ರವೇಶಿಸಿ, 
ಅಲ್ಲಲ್ಲಿ ಹಾರಾಡುತ್ತಿರುವ ಕಿಡಿಗಳನ್ನು ನಿರ್ಲಕ್ಷಿಸಿ. 

ನೀವು ಭಗವಂತನ ಗೆಳೆಯರಾಗಿದ್ದರೆ
ಈ ಬೆಂಕಿಯೇ ನಿಮ್ಮ ಝರಿ.

1 Comment

  1. ಅರಳಿ ಮರ ….. ಹೆಸರು ಎಷ್ಟೊಂದು ಸಾರ್ಥಕ…
    ಮೊಬೈಲ್ app ಇದ್ದರೆ ತಿಳಿಸಿ ಕನ್ನಡ ಸಾಹಿತ್ಯ ದಲ್ಲಿ
    ಈ ಬರಹಗಳು ಜೀವನ ದರ್ಶನ ಮಾಡಿಸಿ ತ್ತಿ ವೇ

Leave a Reply