ಸಂತ ರವಿದಾಸರ ದೋಹೆಗಳು

ಮೂಲ: ಸಂತ ರವಿದಾಸ (ರೈದಾಸ) | ಕನ್ನಡಕ್ಕೆ : ಎಚ್. ಎಸ್. ಶಿವಪ್ರಕಾಶ್

ಕೃಷ್ಣ, ಕರೀಮ, ರಾಮ, ಹರಿ, ರಾಘವ-
ಎಲ್ಲಾ ಒಂದರ ಹೆಸರು
ವೇದ, ಗ್ರಂಥ, ಖುರಾನ್, ಪುರಾಣ
ಒಂದೇ ಎಂಬುದ ಕಾಣರು

ನರಕ ಕುಂಡದಂಥ ನನ್ನ ನಿವಾಸ
ಕಂಡು ಹೇಸುವ ಮಂದಿಗೆ
ಪ್ರೇಮಭಕ್ತಿಯಲಿ ಮಿಂದೆದ್ದು
ಪ್ರಕಟನಾದ ರವಿದಾಸ

ಯಾವ ರಾಜ್ಯದಲಿ ನೆಲೆಸಿದ
ಹಿರಿಯರುಕಿರಿಯರಿಗೆ
ಸಮಸಮ ದೊರಕುವುದು ಅನ್ನ
ರವಿದಾಸನಿರುವ ಅಲ್ಲೇ

ಹೊನ್ನು, ಹೊನ್ನಿನ ಬಳೆಯಲ್ಲಿ
ಅಂತರವೇ ಇಲ್ಲ
ಹಾಗೇ ರವಿದಾಸ ಹಿಂದೂ
ಮುಸಲರುಬೇರಲ್ಲ

ವರ್ಣಾಶ್ರಮದಹಮು
ತೊರೆದು, ಸಂದೇಹವೆಂಬ ಗಂಟ
ತುಂಡರಿಸೊ ನಿಪುಣ
ರವಿದಾಸನ ಮಾತು ಕೇಳಿ

ಹಿಂದೂ ತುರಕರು ಬೇರಲ್ಲ
ರಕ್ತಮಾಂಸ ಒಂದು
ಒಂದೇ ಇಬ್ಬರು ಎರಡಲ್ಲ-
ನಿಜ, ರವಿದಾಸನ ಮಾತು

Leave a Reply