ನಾರಾಯಣ ಗುರು ಹುಟ್ಟಿದಾಗ ಭಾರತದೇಶ ಕತ್ತಲೆಯಲ್ಲಿ ಮುಳುಗಿತ್ತು. ಜಾತಿಭ್ರಮೆಯಿಂದ ಬಹುಪಾಲು ಜನತೆಯೂ ಅನಾಥರಾಗಿ ಹಿಂದುಳಿದಿತ್ತು. ಇಂತಹ ಕರಾಳದಿನಗಳಲ್ಲಿ ಹುಟ್ಟಿದ ನಾರಾಯಣ ಗುರು ಅಸಹಾಯಕ ಜನತೆಗೆ ಆತ್ಮಪೋಷಕರಾಗಿಯೂ, ಕಾರ್ಗತ್ತಲಲ್ಲಿ ಪರಿತಪಿಸುತ್ತಿರುವವರಿಗೆ ಆಶಾಕಿರಣವಾಗಿಯೂ, ಎಲ್ಲರಲ್ಲೂ ಆತ್ಮಗೌರವವನ್ನು ತುಂಬಿ, ಎಲ್ಲೆಲ್ಲೂ ಶಾಂತಿಯನ್ನು ಹರಡಿದರು. ಹೀಗೆ ನವಭಾರತದ ಆಶಾಕಿರಣವಾಗಿ ಬಂದ ಸಮಾಜೋ ಆಧ್ಯಾತ್ಮಿಕ ಗುರು ಶ್ರೀ ನಾರಾಯಣ ಗುರುಗಳ ಬೋಧನೆಗಳ ಸಾರಾಂಶವನ್ನು ಇಲ್ಲಿ ನೀಡಲಾಗಿದೆ । ಕೃಪೆ: ನಾರಾಯಣಗುರು ಸಂಪೂರ್ಣ ಕೃತಿಗಳು; ಸಂಕಲನ ಮತ್ತು ಅನುವಾದ: ವಿನಯ ಚೈತನ್ಯ
೧. ಏಕವೂ ಎರಡಿಲ್ಲದ್ದೂ ಆದ ಪರಬ್ರಹ್ಮವೇ ಹೊರಗೂ ಒಳಗೂ ತುಂಬಿ ಬೆಳಗುತ್ತಿರುವುದು.
೨. ನಡೆಯುತ್ತಿರುವ ಎಲ್ಲಕ್ಕೂ ಸಾಕ್ಷಿಯಾಗಿ ಬೆಳಗುತ್ತಿರುವ ಅನಾದ್ಯಂತ ದೀಪವು ಅಂತರಂಗದಲ್ಲಿಯೇ ಇದೆ.
೩. ಈ ಜೀವ ತಾರಕವನ್ನು ಸದಾಕಾಲ ಅನುಸರಿಸಿ, ಅದಕ್ಕೆ ಅನ್ಯೋನ್ಯವಾಗಿದ್ದುಕೊಂಡು ಜೀವನವನ್ನು ನಡೆಸಬೇಕು.
೪. ನಿದ್ರೆ, ಎಚ್ಚರಿಕೆ ಎರಡೂ ಇಲ್ಲದ ಅರಿವಾಗಿ, ಅತ್ಮಾನುಭವದ ಅಮೃತವನ್ನು ಸವಿಯಬೇಕು. ಇದಕ್ಕೆ ಯೋಗ್ಯನಾಗಿರದಿದ್ದರೆ ಪ್ರಣವವನ್ನು ಎಚ್ಚರಿಸಿ, ಜನನವೇ ಇಲ್ಲದೆ ಬಾಳುವ ಮುನಿಜನರ ಸೇವೆಯಲ್ಲಿ ತನುವನ್ನು ನಿಲ್ಲಿಸಬೇಕು.
೫. ಸತ್ಯಬುದ್ಧಿಯಿಂದ ಈ ದೇಹಾಭಿಮಾನವನ್ನು ಕಳೆದು ಮುಕ್ತನಾಗಬಹುದು. ಆದರೂ, ಲೋಕ, ಶಾಸ್ತ್ರಾನುವರ್ತನೆಗಳಿಂದ ವಿಮೋಚನೆ ಪಡೆಯಲು ದೈವಕೃಪೆಯಿದ್ದರೆ ಮಾತ್ರ ಸಾಧ್ಯವಾಗುವುದು.
೬. ಏಕವೂ, ಅದ್ವಿತೀಯವೂ ಆದ ಆದಿ ಮಹತ್ತು ತಾನೇ ನಾವು ಕಾಣುವ ಲೋಕವಾಗಿ ತೋರುವುದು. ಇದಲ್ಲದೆ ಬೇರೊಂದು ಸತ್ಯವೂ ಇಲ್ಲ. ಜ್ಞಾನಿಗೆ ಈ ಲೋಕವು, ಮನುಷ್ಯ ಭಾವನೆಯಿಂದ ಕಲ್ಪಿಸಿಕೊಳ್ಳುವ ಉನ್ನತ ಮೌಲ್ಯಗಳಿಂದ ಪೋಣಿಸಿರುವ ಹೂವಿನ ಮಾಲೆಯಂತೆ ಕಾಣುತ್ತದೆ. ವಿವಿಧ ನಾಮರೂಪಗಳಲ್ಲಿ, ವಿಭಿನ್ನವಾಗಿ ತೋರುವ ಸಚ್ಚಿದಾನಂದವಾದ ಏಕಾತ್ಮನ ಆಶ್ಚರ್ಯವನ್ನು ದರ್ಶನ ಮಾಡಬೇಕು. ಅದಕೆ ಸಹಾಯಕವಾದ ಸುತಾರ್ಯತೆಯನ್ನು ಬುದ್ಧಿಗೆ ತರಬೇಕು.
೭. ಅಪರನ ಪ್ರಿಯವು ಯಾವುದೋ ಅದು ತನ್ನ ಪ್ರಿಯವು, ತನ್ನ ಪ್ರಿಯವು ಅಪರನಿಗೂ ಪ್ರಿಯವಾಗಬೇಕು. ಈ ಪ್ರಕಾರವಿರುವುದೇ ನಯ. ತನ್ನ ಸುಖಕ್ಕಾಗಿ ತನ್ನ ಕರ್ಮಗಳು ಅಪರನ ಸುಖಕ್ಕಾಗಿಯೂ ಬರಬೇಕು.
೮. ಕೃಪಾಳುವು ಅಪರನಿಗಾಗಿ ಹಗಲೂ ರಾತ್ರಿಯೂ ಪ್ರಯತ್ನ ಮಾಡುತ್ತಾನೆ. ಕೃಪಣನು ಅಧೋಮುಖನಾಗಿ, ತನ್ನ ಸ್ವಾರ್ಥ ಇಚ್ಚೆಯಿಂದ ಮಾಡುವುದೇ ಅಪಜಯ ಕರ್ಮವೆನಿಸುವುದು.
೯. ಒಬ್ಬನಿಗೆ ಒಳ್ಳೆಯದು, ಮತ್ತೊಬ್ಬನಿಗೆ ಕೆಟ್ಟದ್ದು ಕೊಡುವ ಕರ್ಮಗಳು ಆತ್ಮವಿರೋಧಿಯೆಂದು ತಿಳಿಯಬೇಕು.
೧೦. ಮನದ ಹೂವನ್ನು ಕೊಯ್ದು ಮಹೇಶಪೂಜೆಯನ್ನು ಮಾಡುವ ಮನುಜನು ಮತ್ತೊಂದು ಯಾವ ಕೆಲಸವೂ ಮಾಡಬೇಕಾಗಿಲ್ಲ.
೧೧. ಅರಿವು ತನ್ನ ನಿಜಸ್ಥಿತಿಯನ್ನು ಇಲ್ಲಿ ಅರಿಯುವುದಕ್ಕಾಗಿ, ಧರೆ ಮೊದಲಾದ ವಿಭೂತಿಗಳಾಗಿ, ತಾನೇ ತಿರುಗುತ್ತಾ ಮರೆಯುವ ಅವಸ್ಥೆಗೆ ಏರಿ ಬದಲಾಯಿಸಿ ಸುತ್ತುವ ಕೊಳವೆಯಂತೆ ತಿರುಗುತ್ತಿರುವುದು.
೧೨. ಸತ್ಕರ್ಮಿಗಳು ಸಹ ಪಕೃತಿಯ ವಿಕೃತಿಗಳಿಗೆ ಅಧೀನರಾಗಿ ಕಷ್ಟಪಡುತ್ತಾರೆ. ಅಕರ್ಮದಿಂದ (ಮಾಡದೆ ಇರುವುದರಿಂದ ) ವಿಕೃತಿ ಬಿಡುವುದಿಲ್ಲ. ಇದನ್ನು ಫಲಾಪೇಕ್ಷೆ ಬಿಟ್ಟು ತಿಳಿಯಬೇಕು.
೧೩. ಎಲ್ಲ ಧರ್ಮಗಳ ಸಾರವೂ ಏಕವೆಂದು ಕಾಣದೆ, ಆನೆ ನೋಡಲು ಹೋಗಿದ್ದ ಕುರುಡರಂತೆ, ಪಾಮರರು ಹಲವು ವಿಧ ಯುಕ್ತಿಗಳನ್ನು ಹೇಳುತ್ತ ಅಲೆಯುವುದು ಕಂಡು, ಅದರಂತೆ ಆಗದೆ ಅಂತಃಕರಣವು ಶಾಂತವಾಗಬೇಕು.
೧೪. ಒಂದು ಮತವು ಅನ್ಯನಿಗೆ ನಿಂದ್ಯವಾಗಿರುತ್ತದೆ. ಒಂದು ಮತದ ಸಿದ್ಧಾಂತ ಮತ್ತೊಂದು ಮತಸ್ಥನಿಗೆ ಕೊರತೆಉಳ್ಳದ್ದಾಗಿ ಕಾಣಿಸುತ್ತದೆ. ಧರಣಿಯಲ್ಲಿ ಇದೆಲ್ಲದರ ರಹಸ್ಯವೂ ಒಂದೇ ಎಂದು ತಿಳಿಯುವ ತನಕ ಈ ಭ್ರಮೆ ಇರುತ್ತದೆ.
೧೫. ಎಲ್ಲರೂ ಆತ್ಮಸುಖಕ್ಕಗಿಯೇ. ಯಾವಾಗಲೂ ಎಲ್ಲ ಪ್ರಯತ್ನವೂ ಮಾಡುವುದು. ಆತ್ಮಸುಖವೆಂಬ ಮತವೇ ಜಗತ್ತಿನಲ್ಲಿ ಏಕಮತ ಎಂದು ತಿಳಿದು ಶಾಂತಿಯನ್ನು ತಾಳಬೇಕು.
೧೬. ನಾನು ಅದೂ ಇದೂ ಅಲ್ಲ, ಸದರ್ಥವೂ ಅಲ್ಲ, ನಾನು ಸಚ್ಚಿದಮೃತವೆಂದು ತಿಳಿದು, ಧೀರನಾಗಿ, ಸತ್, ಅಸತ್ ಎಂಬ ಭಾವನೆಗಳು ಇಲ್ಲವಾಗಿ, ‘ಸತ್ ಓಂ’ ಇದರಲ್ಲಿ ನಿಧಾನವಾಗಿ ಕರಗಬೇಕು.
೧೭. ಜ್ಞಾನಿಯಾದ ಮನನಶೀಲನು, ಮನೆಯಲ್ಲಿದ್ದರೂ, ವನದಲ್ಲಿದ್ದರೂ, ನದೀದಡದಲ್ಲಿದ್ದರೂ, ಅವನ ಮನಸ್ಸು ಬ್ರಹ್ಮದಲ್ಲಿ ವಾಸವಾಗಿರುತ್ತದೆ. ಅಂತಹ ಮುನಿಯು ಆತ್ಮದೃಷ್ಟಿಯಿಂದ ನೋಡಿ, ಈ ಎಲ್ಲವನ್ನು ಮರುಮರೀಚಿಕೆಯಂತೆಕಾಣುತ್ತಾನೆ. ಬ್ರಹ್ಮಾನದಿಂದ ಮುನಿಯು ನಿರತಿಶಯಾನಂದವನ್ನು ಅನುಭವಿಸುತ್ತಾನೆ.
೧೮. ಹಸುಗಳಿಗೆ ‘ಗೋತ್ವ’ ಎಂಬುದು ಜಾತಿಯಾಗಿರುವಂತೆ ಮನುಷ್ಯನಿಗೆ’ಮಾನವತ್ವ’ವೇ ಜಾತಿ. ಬ್ರಾಹ್ಮಣಾದಿ ಜಾತಿಗಳು ಹೀಗಲ್ಲ. ಹಾ! ಈ ತತ್ವವು ಯಾರಿಗೂ ತಿಳಿಯುವುದಿಲ್ಲವಲ್ಲ! ಒಂದೇ ಜಾತಿ, ಒಂದೇ ಮತ, ಒಂದೇ ದೈವ ಮನುಷ್ಯನಿಗೆ, ಯೋನಿಯೂ, ಆಕಾರಾವೂ ಒಂದೇ. ಇದರಲ್ಲಿ ಯಾವ ಭೇದವೂ ಇಲ್ಲ. ಬ್ರಾಹ್ಮಣನೂ ಮಾದಿಗನೂ ನರಜಾತಿಯಲ್ಲೇ ಹುಟ್ಟುವುದು. ಒಂದೇ ಜಾತಿಯಲ್ಲಲ್ಲವೇ ಮಕ್ಕಳು ಹುಟ್ಟುವುದು? ಆದ್ದರಿಂದ ಇರುವುದು ಒಂದೇ ಜಾತಿ. ಹಿಂದೆ ಪರಾಶರ ಮಹಾಮುನಿಗಳು ಮಾದಿಗ ಸ್ತ್ರೀಯಲ್ಲಿ ಹುಟ್ಟಿದರು. ವೇದಗಳನ್ನು ಬರೆದ ವ್ಯಾಸರು ಬೆಸ್ತನಾರಿಯಲ್ಲಿ ಹುಟ್ಟಿದವರು.
೧೯. ಈ ಲೋಕಸದ ಪಿತನಾದ ದೇವರಲ್ಲಿ, ತನ್ನ ಗುರುವಿನಲ್ಲಿ, ತಂದೆ ತಾಯಿಯರಲ್ಲಿ, ಸತ್ಯ ಸ್ಥಾಪಕರಲ್ಲಿ, ಸತ್ಯದ ಮಾರ್ಗದಲ್ಲಿ ನಡೆಯುವವರಲ್ಲಿ, ನಿಷಿದ್ಧವಾದವನ್ನು ನಿಯಂತ್ರಿಸುವರಲ್ಲಿ, ಎಲ್ಲರಿಗೂ ಹಿತವನ್ನು ಮಾಡುವವರಲ್ಲಿ, ಯಾವ ಅನುರಾಗ ಅಲ್ಲಿದೆಯೋ, ಅದನ್ನು ಇಲ್ಲಿ ಭಕ್ತಿ ಎಂದು ಹೇಳುತ್ತಾರೆ.
೨೦. ಜೀವತಾರಕವಾದ ಏಕಸತ್ಯವೇ ಕೃಪೆ, ಪ್ರೇಮ, ಕರುಣೆ, ಅನುಕಂಪ, ಎಂದೆಲ್ಲ ಕರೆಯಲ್ಪಡುವುದು. ಕೃಪೆಯುಳ್ಳವನೇ ಜೀವಿಯು ಎಂಬ ನವಾಕ್ಷರಿ ಮಂತ್ರವನ್ನು ಹೃದಯದಲ್ಲಿ ಸ್ಥಾಪಿಸಬೇಕು.