ಸುಖವೆಂದರೆ ದುಃಖದ ಮರಿ ಹಾಕುವ ಮೊಟ್ಟೆ! : ಗೀತಾ ಬೋಧೆ

ಯಾವ ಸುಖವೂ ಸುಖವಲ್ಲ, ನಾವು ಯಾವುದನ್ನು ಸುಖವೆಂದು ಬಗೆಯುತ್ತೇವೋ ವಾಸ್ತವದಲ್ಲಿ ಅದು ಮುಂಬರುವ ದುಃಖಕ್ಕೆ ಮುನ್ನುಡಿ ಅನ್ನುತ್ತಾನೆ ಶ್ರೀಕೃಷ್ಣ…

ಯೇಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ | 
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ || 5.22 ||
ಅರ್ಥ: ವಿಷಯದ ನಂಟಿನಿಂದ ಬರುವ ಸುಖಗಳು ಬನ್ನದ ತವರು. ಬಂತು ಎನ್ನುವಷ್ಟರಲ್ಲೇ ಬರಿದಾಗುವಂಥವು. ಕೌಂತೇಯ, ಬಲ್ಲವರು ಅವನ್ನು ಮೆಚ್ಚುವುದಿಲ್ಲ.

“ಬಾಹ್ಯ ವಿಷಯ ಸ್ಪರ್ಶದಿಂದ ಸಿಗುವ ಸುಖಭೋಗದ ಅನುಭವ(ಸಂಸ್ಪರ್ಶ)ದಿಂದ ನಮಗೆಷ್ಟು ಸುಖ ಸಿಕ್ಕೀತು? ಒಂದು ಗುಲಗಂಜಿಯಷ್ಟು ಸುಖಕ್ಕಾಗಿ ಕುಂಬಳಕಾಯಿಯಷ್ಟು ದುಃಖವನ್ನು ಅನುಭವಿಸಲು ನಾವು ಸಿದ್ಧರಾಗಿರುತ್ತೇವೆ. ಇಂದಿನ ಎಲ್ಲಾ ಪ್ರಾಪಂಚಿಕ ಅಪರಾಧಗಳಿಗೆ ಇದೇ ಕಾರಣ. ಕ್ಷಣಿಕ ಸುಖದ ಆಸೆಗೆ ಬಿದ್ದು ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುವವರನ್ನು ನಮ್ಮ ದೈನಂದಿನ ಜೀವನದಲ್ಲಿ ನಾವು ಕಾಣುತ್ತೇವೆ. ನಮಗೆ ಬಾಹ್ಯವಾಗಿ ಸುಖ ಎಂದು ಕಾಣುವುದು ದುಃಖವನ್ನು ಮರಿ ಹಾಕುವ ಮೊಟ್ಟೆ ಎನ್ನುವ ಸತ್ಯವನ್ನರಿಯದೆ ಅದೇ ಸುಖ ಎಂದು ಅದರ ಬೆನ್ನು ಹಿಡಿಯುತ್ತೇವೆ. ಪ್ರತಿಯೊಂದು ಬಾಹ್ಯಸುಖದ ಹಿಂದೆ ದುಃಖವೆಂಬ ಕಗ್ಗತ್ತಲು ಮಡುಗಟ್ಟಿರುತ್ತದೆ. ಬಾಹ್ಯ ಸುಖ-ಆನಂದ ಎನ್ನುವುದು ಕೇವಲ ಒಂದು ಮಿಂಚು. ಅದು ಬಂತು ಎನ್ನುವಷ್ಟರಲ್ಲಿ ಬರಿದಾಗುತ್ತದೆ. ತಿಳುವಳಿಕೆ ಉಳ್ಳವರು ಈ ಬಾಹ್ಯ ಸುಖದ ಆಸೆಯಲ್ಲಿ ಬದುಕುವುದಿಲ್ಲ” – ಇದು ಶ್ರೀ ಕೃಷ್ಣನ ಮಾತಿನ ವಿಸ್ತೃತಾರ್ಥ.

Leave a Reply