ಋತು ಲಕ್ಷಣಗಳು ಮತ್ತು ಋತುಚರ್ಯೆ ಕುರಿತು ಆಯುರ್ವಿಜ್ಞಾನ ಹೇಳುವುದೇನು?

ಋತುಗಳ ವಿಭಾಗ, ಋತು ಲಕ್ಷಣಗಳು, ಆಯಾ ಋತುವಿನಲ್ಲಿ ಉಂಟಾಗಬಹುದಾದ ರೋಗ ಲಕ್ಷಣಗಳು ಹಾಗೂ ತ್ರಿದೋಷಗಳ  ಕುರಿತು ‘ಆಯುರ್ವಿಜ್ಞಾನ’ದ ತಿಳುವಳಿಕೆ ಹೀಗಿದೆ….

‘ವರ್ಷ’ ವೆಂದರೆ ಎರಡು ಆಯನಗಳು. ಉತ್ತರಾಯಣ, ದಕ್ಷಿಣಾಯನವೆಂದು ಎರಡು ವಿಭಾಗ.

ಉತ್ತರಾಯಣದಲ್ಲಿ ಶಿಶಿರ, ವಸಂತ, ಗ್ರೀಷ್ಮಗಳೆಂಬ ಮೂರು ಋತುಗಳು. ಇದನ್ನು “ಆದಾನ”ಕಾಲ ಎನ್ನುವರು. ಒಣಗಿಸುವ ಛಳಿ, ಉರಿಯುವ ಬಿಸಿಲಿನ ಕಾರಣ ಇಲ್ಲಿ ಪ್ರಾಣಿ, ಪಕ್ಷಿ, ಗಿಡ, ಮರಗಳು ಒಣಗಿ ಕ್ಷೀಣಿಸುವವು. ಈ ಋತುವಿನ ಆರಂಭವಾದ ಶಿಶಿರದಲ್ಲಿ ಉತ್ತಮ ದೇಹಬಲ ಹೊಂದಿದ ಪ್ರಾಣಿಗಳು ಕ್ರಮೇಣ ವಸಂತದಲ್ಲಿ ಬಲ ಮಧ್ಯಮವಾಗಿ ಗ್ರೀಷ್ಮದ ಕೊನೆಯಲ್ಲಿ ಅತ್ಯಂತ ಕಡಿಮೆ ಶಕ್ತಿ ಇರುವಂತಹವುಗಳಾಗಿರುತ್ತವೆ. ಆದ್ದರಿಂದಲೇ ಈ  ಋತುವನ್ನು “ಆದಾನ” ಕಾಲ ಅಂದರೆ ಶಕ್ತಿಯನ್ನು ಹೀರುವ ಕಾಲ ಎಂಬ ಅನ್ವರ್ಥದ ಹೆಸರನ್ನಿಟ್ಟಿದ್ದಾರೆ. ಈ ಋತುವಿನಲ್ಲಿ ‘ಸೂರ್ಯ’ನಿಗೆ ಪ್ರಾಬಲ್ಯ ಹೆಚ್ಚು.

ವರ್ಷಾ, ಶರದ್, ಹೇಮಂತ ಋತುಗಳು ಸೇರಿ ‘ದಕ್ಷಿಣಾಯನ’. ಮಳೆ, ಅಲ್ಪ ಬಿಸಿಲು ಹಾಗೂ ಚಳಿಯಿಂದ ಕೂಡಿದ ಕಾಲ. ಆರಂಭದ ‘ವರ್ಷಾ’ ಋತುವಿನಲ್ಲಿ ಅತ್ಯಂತ ಕಡಿಮೆ ಬಲವಿರುವ ಜೀವಿಗಳಿಗೆ ಕ್ರಮೇಣ ಬಲ ಹೆಚ್ಚುತ್ತಾ ಹೋಗಿ ಶರದ್ ನಲ್ಲಿ ಮಧ್ಯಮವಾಗಿ ಹೇಮಂತದಲ್ಲಿ ಉತ್ಕೃಷ್ಟ ಬಲವಿರುತ್ತದೆ. ಹೀಗೆ ‘ಬಲ’ವನ್ನು ಕೊಡುವ ಕಾಲವಾದ್ದರಿಂದ ಇದಕ್ಕೆ ‘ವಿಸರ್ಗ’ ಕಾಲವೆನ್ನುವರು. ‘ಸೌಮ್ಯ’ ಕಾಲವೆಂದು ಕರೆಯಲ್ಪಡುವ ಈ ದಕ್ಷಿಣಾಯನದಲ್ಲಿ ‘ಚಂದ್ರ’ನಿಗೆ ಬಲ.

ವರ್ಷವೊಂದರಲ್ಲಿ ಬೇಸಿಗೆಯ  (ಗ್ರೀಷ್ಮ) ಕೊನೆಗೆ ಅತ್ಯಂತ ಕ್ಷೀಣಬಲವೂ, ಚಳಿಗಾಲದ ನಡುವೆ ( ಹೇಮಂತದ ಕೊನೆಗೆ) ಅತ್ಯಂತ ಉತ್ತಮ ಬಲವೂ ಇರುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಛಳಿಗಾಲದ ನಡುವೆ ಎಲ್ಲರ ಆರೋಗ್ಯ ಸಾಮಾನ್ಯವಾಗಿ ಚೆನ್ನಾಗಿರುವುದು, ರೋಗ ಲಕ್ಷಣಗಳ ಉಲ್ಬಣದಂತೆ ಬೇಸಿಗೆಯ ಕೊನೆಯಲ್ಲಿ ಅತಿ ಹೆಚ್ಚಾಗುವುದು ಇದೇ ಕಾರಣಕ್ಕಾಗಿ.

ಜಗತ್ತು ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳೆಂಬ ಪಂಚ ಮಹಾಭೂತಗಳಿಂದ ಉಂಟಾಗಿದೆ. ಈ ಪಂಚ ಮಹಾಭೂತಗಳ ವಿಶೇಷ ರೀತಿಯ ಸೇರ್ಪಡೆಗೆ ‘ಪಂಚೀಕರಣ’ವೆಂದು ಹೆಸರು. ವಿವಿಧ ರೀತಿಯಲ್ಲಿ  (ವಿವಿಧ ಪ್ರಮಾಣದಲ್ಲಿ ) ಉಂಟಾಗುವ ಪಂಚೀಕರಣದ ವೈಶಿಷ್ಟ್ಯದಿಂದಲೇ ಕೋಟಿಗಟ್ಟಲೆ ಕಂಡುಬರುವ ಜೀವ- ನಿರ್ಜೀವ ವಸ್ತುಗಳಲ್ಲಿ ವೈವಿಧ್ಯತೆ ಕಂಡುಬರುವುದು.

 ‘ವ್ಯಕ್ತಿ’ ವಿವಿಧ ರೀತಿಯ ಆಹಾರ – ವಿಹಾರಗಳ ಸೇವನೆ ಮಾಡುವುದರಿಂದ ಆತನಲ್ಲೂ ಉಂಟಾಗುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ‘ತ್ರಿದೋಷ’ ವಿಜ್ಞಾನವನ್ನು ಆಯುರ್ವೇದದಲ್ಲಿ ಕೊಡಲಾಗಿದೆ.

   ವಾಯು, ಆಕಾಶಗಳಿಂದ – ವಾತದೋಷವೂ, ಅಗ್ನಿಯಿಂದ – ಪಿತ್ತದೋಷವೂ, ಪೃಥ್ವಿ, ಜಲಗಳಿಂದ – ಕಫದೋಷವೂ ಉಂಟಾಗಿದೆ. ಈ ದೋಷಗಳು ಶರೀರದ ಪ್ರಾಕೃತ ಹಾಗೂ ವಿಕೃತ ಕಾರ್ಯಗಳನ್ನು ಮಾಡುತ್ತಿರುತ್ತವೆ ಎಂಬುದು ಆಯುರ್ವಿಜ್ಞಾನಿಗಳ ಸಿದ್ಧಾಂತ.

ಈ ದೋಷಗಳ ಗುಣ, ಕರ್ಮಗಳನ್ನು ವರ್ಣಿಸಿ ಅವುಗಳ ಪ್ರಾಕೃತ ಲಕ್ಷಣಗಳು ಹಾಗೂ ಅವು ವಿಕೃತವಾಗಿ ದೇಹದ ಸಮತೋಲನ ತಪ್ಪಿದಾಗ ಉಂಟಾಗುವ ಲಕ್ಷಣಗಳನ್ನು ವಿಸ್ತೃತವಾಗಿ ವಿವೇಚಿಸಲಾಗಿದೆ. ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳಿಂದ ಶರೀರದಲ್ಲಿ ದೋಷಗಳ ಸಮತೋಲನದಲ್ಲಿ ವ್ಯತ್ಯಾಸವಾಗುತ್ತದೆ.

ಹೇಮಂತ, ಶಿಶಿರಗಳಲ್ಲಿ – ಕಫ ಸಂಚಯ, ವಸಂತದಲ್ಲಿ – ಕಫ ಪ್ರಕೋಪ, ಗ್ರೀಷ್ಮದಲ್ಲಿ – ಕಫ ಶಮನ, ಗ್ರೀಷ್ಮದಲ್ಲಿ – ವಾತ ಸಂಚಯ, ವರ್ಷಾದಲ್ಲಿ – ವಾತ ಪ್ರಕೋಪ, ಶರತ್  ನಲ್ಲಿ – ವಾತ ಶಮನ, ವರ್ಷಾದಲ್ಲಿ – ಪಿತ್ಥ ಸಂಚಯ, ಶರತ್ ನಲ್ಲಿ – ಪಿತ್ತ ಪ್ರಕೋಪ, ಹೇಮಂತದಲ್ಲಿ – ಪಿತ್ಥ ಶಮನ.

ಋತುವನ್ನು ಗುರುತಿಸುವುದು ಹೇಗೆ?

ಸೂರ್ಯ, ಚಂದ್ರರಿಂದಲೇ ಕಾಲಚಕ್ರ ಘಟಿಸುವುದರಿಂದ ನಭೋ ಮಂಡಲದಲ್ಲಿ ಸೂರ್ಯ ಚಂದ್ರರ  ಗತಿಯನ್ನನುಸರಿಸಿ ಕಾಲಗಣನೆ ಮಾಡಲಾಗುತ್ತದೆ. ಇದನ್ನು ಸೌರಮಾನ ಹಾಗೂ ಚಾಂದ್ರಮಾನ ಕಾಲಗಣನೆ ಎನ್ನಲಾಗುತ್ತದೆ. ಇಡೀ ನಭೋ ಮಂಡಲವನ್ನು ೧೨ ರಾಶಿಗಳಾಗಿ ವಿಭಜಿಸಲಾಗಿದ್ದು, ಮೇಷ, ವೃಷಭಾದಿ ರಾಶಿಗಳಲ್ಲಿ ರವಿಯ ಗತಿಯನ್ನು ಅನುಸರಿಸಿ ಸೌರಮಾನದ ನಿಗದಿಯಾಗಿದೆ. ಈ ಕ್ರಮದಲ್ಲಿ ರವಿಯ ಸಂಕ್ರಮಣ ಮೀನದಲ್ಲಿ ಆಗುತ್ತಿದ್ದಂತೆಯೇ  ವಸಂತ ಋತುವಿನ ಆರಂಭ. ಎರಡೆರಡು ರಾಶಿಗಳ ಚಲನೆಯನ್ನು ಒಂದೊಂದು ಋತುವಾಗಿ ಗಣಿಸಲಾಗಿದೆ.

ಮೀನ- ಮೇಷ, ವಸಂತ, ವೃಷಭ – ಮಿಥುನ : ಗ್ರೀಷ್ಮ, ಕರ್ಕ- ಸಿಂಹ : ವರ್ಷಾ, ಕನ್ಯಾ-ತುಲಾ : ಶರತ್, ವೃಶ್ಚಿಕ-ಧನು : ಹೇಮಂತ ಹಾಗೂ ಮಕರ-ಕುಂಭ : ಶಿಶಿರ.

ಚಂದ್ರ ಪ್ರತಿ ತಿಂಗಳಿಗೊಮ್ಮೆ ಪೂರ್ತಿ ನಭೋಮಂಡಲವನ್ನು ಕ್ರಮಿಸುತ್ತಾನೆ. ವರ್ಷವೊಂದರಲ್ಲಿ ಚಂದ್ರ 12 ಬಾರಿ ಹೀಗೆ ಸುತ್ತುತ್ತಾನೆ. ಪ್ರತಿಯೊಂದು ಸುತ್ತಿಗೂ ಒಂದು ಮಾಸವೆಂದು ಹೆಸರಿಸಲಾಗಿದೆ. ಈ ರೀತಿಯ ಎರಡೆರಡು ಮಾಸಗಳು ಸೇರಿ ಒಂದೊಂದು ಋತುವಾಗುತ್ತದೆ.

ಚೈತ್ರ – ವೈಶಾಖ : ವಸಂತ, ಜ್ಯೇಷ್ಠ – ಆಷಾಢ : ಗ್ರೀಷ್ಮ, ಶ್ರಾವಣ-ಭಾದ್ರಪದ : ವರ್ಷಾ, ಅಶ್ವೀನ-ಕಾರ್ತಿಕ: ಶರತ್, ಮಾರ್ಗಾಶೀರ್ಷ- ಪುಷ್ಯ : ಹೇಮಂತ, ಮಾಘ- ಫಾಲ್ಗುಣ : ಶಿಶಿರ.

ಈ ಸೌರಮಾನ- ಚಾಂದ್ರಮಾನಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಸೌರಮಾನಕ್ಕೇ ಪ್ರಾಮುಖ್ಯತೆ. ಆದರೆ ಇವೆರಡಲ್ಲದೇ ಋತುವನ್ನು ಲಕ್ಷಣಗಳಿಂದ ಗುರುತಿಸುವ ವಿಧಾನವೊಂದಿದೆ. ಇದು ಪ್ರತ್ಯಕ್ಷ ಪ್ರಮಾಣವಾದ್ದರಿಂದ ಈ ವಿಧಾನವೇ ಉಳಿದೆರಡು ವಿಧಾನಗಳಿಂದ ಶ್ರೇಷ್ಠ ಎಂಬುದು ವಿಜ್ಞಾನಿಗಳ ಅಭಿಪ್ರಾಯ. 

 “ಮಾಸರಾಶಿಸ್ವರೂಪಾಖ್ಯಂ ಋತೋರ್ಯಲ್ಲಕ್ಷಣತ್ರಯಂ । ಯಥೋತ್ತರಂ ಭಜೇಚ್ಚರ್ಯಾಂ ತತ್ರ ತಸ್ಯ ಬಲಾದಿತಿ ॥” (ಅ. ಸಂಗ್ರಹ. ಸೂ.4 )

ಆಯಾ ಋತುವಿನ ಲಕ್ಷಣಗಳು ಸ್ಪಷ್ಟವಾಗಿ ವಾತಾವರಣದಲ್ಲಿ ಕಂಡುಬರುತ್ತವೆ. ಇವುಗಳನ್ನು ಗುರುತಿಸಿ ಆಯಾ ಋತುಚರ್ಯೆಯನ್ನು ಜೀವನದಲ್ಲಿ ಅಳವಡಿಸುವುದೇ ಹೆಚ್ಚು ಶ್ರೇಯಸ್ಕರವಾದದ್ದು.

ಸಾಮಾನ್ಯವಾಗಿ ಕೆಳಕಂಡ ರೀತಿಯಲ್ಲಿ ಋತು ಲಕ್ಷಣಗಳು ಕಂಡುಬರುತ್ತವೆ

  1. ಫೆಬ್ರುವರಿ 15 ರಿಂದ – ಎಪ್ರಿಲ್ 15 ರವರೆಗೆ: ವಸಂತ,
  2. ಏಪ್ರಿಲ್ 15ರಿಂದ – ಜೂನ್ 15 ರ ವರೆಗೆ : ಗ್ರೀಷ್ಮ,
  3. ಜೂನ್ 15 ರಿಂದ – ಆಗಸ್ಟ್ 15ರ ವರೆಗೆ : ವರ್ಷಾ,
  4. ಆಗಸ್ಟ್ 15 ರಿಂದ – ಅಕ್ಟೋಬರ್ 15ರವರೆಗೆ : ಶರತ್,
  5. ಅಕ್ಟೋಬರ್ 15ರಿಂದ – ಡಿಸೆಂಬರ್ 15ರವರೆಗೆ : ಹೇಮಂತ,
  6. ಡಿಸೆಂಬರ್ 15ರಿಂದ – ಫೆಬ್ರುವರಿ 15ರ ವರೆಗೆ : ಶಿಶಿರ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.