ಐಡಿಯಲಿಸಮ್ ಮತ್ತು ರಿಯಲಿಸಮ್ : ಸ್ವಾಮಿ ರಾಮತೀರ್ಥರ ಪ್ರವೇಶಿಕೆ

ವೇದಾಂತ ಕುರಿತ ಅವರ ಹಲವು ಉಪನ್ಯಾಸಗಳಲ್ಲಿ ವಿಜ್ಞಾನ ಸತ್ಯತಾವಾದ ಹಾಗೂ ವಿಷಯ ಸತ್ಯತಾವಾದಗಳ ಕುರಿತ ಉಪನ್ಯಾಸ ಸರಣಿ ತತ್ತ ಜಿಜ್ಞಾಸುಗಳ ಪಾಲಿಗೆ ನಿಧಿಯಿದ್ದತೆ. ಅದರದೊಂದು ತುಣುಕು ಇಲ್ಲಿದೆ. ಇಲ್ಲಿ ಸ್ವಾಮಿ ರಾಮತೀರ್ಥರು ಆ ಎರಡು ಸಂಗತಿಗಳ ಪ್ರವೇಶಿಕೆ ಮಾಡಿಸಿಕೊಡುತ್ತಾರೆ.

ಆಕರ: In the woods of God realization by Sw. Ramathirtha

ಇಂದ್ರಿಯಗಳನ್ನು ನಂಬಬಹುದೆ?

ಪ್ರಪಂಚವಿದೆಯೆಂದು ನಿಮಗೆ ಹೇಗೆ ತೋರಿತು? ಇಂದ್ರಿಯಗಳಿಂದ. ಇಂದ್ರಿಯಗಳನ್ನು ನಂಬಬಹುದೆ? ಉದಾಹರಣೆಗಾಗಿ, ನಮಗೆ ತೋರಿದಂತೆ ಪ್ರಪಂಚವು ಹೀಗೆ ಹೀಗೆ ಇದೆಯೆಂದು ಹೇಳುತ್ತೇವೆ ಎಂದು ಇಟ್ಟುಕೊಳ್ಳೋಣ. ಆದರೆ ಆನೆಗೂ ಕಣ್ಣುಗಳಿವೆ. ಈ ಪ್ರಪಂಚವು ಅದಕ್ಕೆ ಹೇಗೆ ಕಾಣುತ್ತಿರಬಹುದು? ಮೀನುಗಳಿಗೆ ಅದು ಹೇಗೆ ಕಾಣಬಹುದು? ಇರುವೆಗಳಿಗೆ? ಅವಕ್ಕೆ ಎಲ್ಲವೂ ದೂಳಿನ ದೊಡ್ಡ ಮೋಡವಾಗಿ ಕಾಣಬಹುದು. ಅವುಗಳಿಗೆ ಕಾಣಬಹುದಾದ ರೀತಿ ಅದೇ. ಆನೆಗಳಿಗೆ ಎಲ್ಲವೂ ಸಣ್ಣದಾಗಿ ಕಾಣಬಹುದು. ಆದರೆ ಮನುಷ್ಯನಿಗೆ ಮಾತ್ರ ಕಾಣುವುದು ಹೀಗೆ.

ಒಂದೊಂದು ಪ್ರಾಣಿಗೆ ಒಂದೊಂದು ರೀತಿಯಲ್ಲಿ ಕಂಡುಬಂದರೂ ನಮಗೆ ಕಾಣುವಂತೆಯೇ ಪ್ರಪಂಚವಿದೆ ಎಂದು ವಾದಿಸುವುದು ಎಷ್ಟುಸರಿ!?

ಮನುಷ್ಯರಲ್ಲಿಯೇ ಕಣ್ಣುಗಳಲ್ಲಿ ವ್ಯತ್ಯಾಸವುಳ್ಳವರಿಗೂ ದೋಷವುಳ್ಳವರಿಗೂ ಪ್ರಪಂಚ ಬೇರೆ ಬಗೆಯಾಗಿಯೇ ತೋರುತ್ತದೆ. ಇದನ್ನೆಲ್ಲ ವಿಚಾರ ಮಾಡಿದರೆ, ಇಂದ್ರಿಯಗಳನ್ನು ನಂಬುವುದು ತಪ್ಪಾಗಿ ತೋರುತ್ತದೆ. ಕಣ್ಣುಗಳಂತೆಯೇ ಮಿಕ್ಕ ಎಲ್ಲ ಇಂದ್ರಿಯಗಳೂ ನಂಬಿಕೆಗೆ ಅರ್ಹವಲ್ಲವೆಂದು ಸಿದ್ಧವಾಗುತ್ತದೆ.

ಮಗುವಿಗೆ ಕಣ್ಣು ಕಿವಿ ಇತ್ಯಾದಿ ಎಲ್ಲ ಇಂದ್ರಿಯಗಳೂ ಇವೆ. ಆದರೂ ಅದು ವಸ್ತುಗಳನ್ನು ನೋಡುವುದಿಲ್ಲ, ಗುರುತಿಸುವುದಿಲ್ಲ.  ಇದು ಗೋಡೆ, ಇದು ಪುಸ್ತಕ ಎಂದು ಮೊದಲಾಗಿ ತಾಯಿಯು ಪುನಃಪುನಃ ಹೇಳಿಕೊಟ್ಟು ಅದನ್ನು ಸಮ್ಮೋಹನಗೊಳಿಸಿದಾಗಲೇ ಆ ಮಗುವಿಗೆ ಆಯಾ ವಸ್ತುಗಳ ತಿಳಿವು ಉಂಟಾಗುವುದು.

ಭಾವನೆಗಳೇ ನಿಜವೆಂದು ಯಾರು ತಿಳಿದಿರುವರೋ ಅವರು ವಿಜ್ಞಾನ ಸತ್ಯತಾವಾದವನ್ನೆ ಪರಮ ಸತ್ಯವೆಂದು ಪ್ರತಿಪಾದಿಸುತ್ತಾರೆ ಮತ್ತು ಅದರ ಸಮರ್ಥನೆಗೆ ತಮ್ಮಲ್ಲಿ ಆಧಾರ ಉಂಟೆಂದು ಹೇಳುತ್ತಾರೆ. ಈ ವಿಜ್ಞಾನ ಸತ್ಯತಾವಾದ ಎಂದರೇನು? ನಮಗೆ ತೋರುವ ರೀತಿಯಲ್ಲಿ ಪ್ರಪಂಚವಿಲ್ಲ; ಪ್ರಪಂಚವೇನೋ ಇದೆ, ಆದರೆ ಅದು ನಮಗೆ ತೋರುವಂತೆಯೇ ಇಲ್ಲ – ಎಂಬ ವಿಚಾರ ಸರಣಿಯೇ ವಿಜ್ಞಾನ. ಇದು ಅರಿವೇ ಸತ್ಯ ಅನ್ನುತ್ತದೆ. ಅದನ್ನು ಆಂಗ್ಲಭಾಷೆಯಲ್ಲಿ ಐಡಿಯಲಿಸಮ್ ಅನ್ನುತ್ತಾರೆ.

ಐಡಿಯಲಿಸಮ್‌ ಅನುಯಾಯಿಗಳು ತಮ್ಮವಾದಕ್ಕೆ ಪೂರಕ ನಿದರ್ಶನಗಳನ್ನು ನೀಡುತ್ತಾರೆ. ಉದಾಹರಣೆಗೆ : ದ್ರಷ್ಟಾ ಇಲ್ಲದೆ ದೃಶ್ಯವು ಕಾಣುವುದು ಹೇಗೆ? ನೋಡುವವನಿಲ್ಲದೆ ಈ ಗೋಡೆಯು ಕಾಣುವುದು ಹೇಗೆ? ಗೋಡೆಯಲ್ಲಿ ನಿಜವಾದುದೇನೂ ಇಲ್ಲವೆಂದೂ, ಭಾವನೆಯೇ ಗೋಡೆಯನ್ನುಸೃಷ್ಟಿಸಿತೆಂದೂ ವಶೀಕರಣ ಸಂಮೋಹಿತನಾದವನು ಆವಾಹಕನ ಸೂಚನೆಯ ಪ್ರಕಾರ ಗೋಡೆಯನ್ನು ಬೇರೆ ಬೇರೆ ವಸ್ತುಗಳನ್ನಾಗಿ ನೋಡಬಲ್ಲೆನೆಂದೂ ಹೇಳುತ್ತಾನೆ. ಹಿಪ್ನೊಟೈಸ್‌ ಆದ ಮನುಷ್ಯನಿಗೆ ಈ ನೆಲವಿದ್ದಲ್ಲಿ ಸರೋವರ ಇದೆಯೆಂದು ಸೂಚಿಸಿದರೆ, ಕೂಡಲೇ ಅವನು ಈ ನೆಲದಲ್ಲಿ ಮೀನು ಹಿಡಿಯುವುದಕ್ಕೇ ತೊಡಗುತ್ತಾನೆ!

ಆದರೆ ಗೋಡೆಯು ಬಹಳ ನಿಜವೆಂದೂ, ನಮ್ಮ ಭಾವನೆಗೆ ಸಂಬಂಧವಿಲ್ಲದೆ ಗೋಡೆಯು ಸ್ವತಂತ್ರವಾಗಿದೆಯೆಂದೂ ವಿಷಯ ಸತ್ಯತಾವಾದಿಗಳು ಹೇಳುತ್ತಾರೆ. ನಮಗೆ ತೋರುವಂತೆಯೇ ಈ ಪ್ರಪಂಚವಿದೆ. ಅದರ ಹೊರತಾಗಿ ಮತ್ತೇನೂ ಅಲ್ಲಎನ್ನುವ ವಿಚಾರ ಸರಣಿಯೇ ವಿಷಯ ಸತ್ಯತಾವಾದ. ಇದನ್ನು ಆಂಗ್ಲಭಾಷೆಯಲ್ಲಿ ‘ರಿಯಲಿಸಮ್‌’ ಎನ್ನುತ್ತಾರೆ.

ನಾವು ಗೋಡೆಯನ್ನು ಮುಟ್ಟುತ್ತೇವೆ. ನೋಡುತ್ತೇವೆ. ಅದರ ಗಂಧವನ್ನೂ ಮೂಸಿ ನೋಡಬಹುದು. ಆದ್ದರಿಂದ ವಿಷಯಸತ್ಯತಾವಾದಿಗಳಿಗೂ ತಮ್ಮ ವಿಚಾರವನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ.

ಹಾಗಾದರೆ ವಾಸ್ತವದಲ್ಲಿ ಯಾವುದು ಸರಿಯಾಗಿದೆ? ಐಡಿಯಲಿಸಮ್‌ ಅಥವಾ ರಿಯಲಿಸಮ್‌ – ಈ ಎರಡರಲ್ಲಿ ಯಾವುದು ಸರಿ ಅನ್ನಿಸುತ್ತದೆ?

ಮೇಲಿನ ವಿವರಣೆಗಳನ್ನು ನೀಡುವ ರಾಮತೀರ್ಥರು ಮುಂದುವರಿದು ಹೇಳುತ್ತಾರೆ, “ಒಂದು ವಸ್ತುವು ತೋರಬೇಕಾದರೆ ಮನಸ್ಸೂ ಬೇಕು, ವಿಷಯವೂ ಬೇಕು” ಎಂದು. ವಶೀಕರಣಕ್ಕೆ ಒಳಗಾದವನಿಗೆ ಗೋಡೆಯು ಬೇರೆ ವಸ್ತುವಾಗಿ ತೋರಬಹುದೆಂದು ಒಪ್ಪಿದರೂ ಆವಾಹಕನು ತನಗೆ ಇಷ್ಟವಾದ ವಸ್ತುವನ್ನು ಸೂಚಿಸಿ ಕುದುರೆಯೆಂದೋ ಸರೋವರವೆಂದೋ ಹೇಳಲು ಆಧಾರವಾಗಿ ಏನಾದರೊಂದು ವಸ್ತು ಇರಲೇಬೇಕು. ಒಂದು ವಸ್ತು ತೋರಲಿಕ್ಕೆ ಅರಿಯುವವನೂ ಬೇಕು, ವಿಷಯವೂ ಬೇಕು ಎಂದು!

(ಮುಂದುವರಿಯುವುದು…)

Leave a Reply