ಹೊಟೈ, ದ ಲಾಫಿಂಗ್ ಬುದ್ಧ : ಓಶೋ

ಜಗತ್ತಿನಿಂದ ಗಂಭೀರತೆ ನಾಶವಾದರೆ ಏನೂ ತೊಂದರೆ ಇಲ್ಲ ಬದಲಾಗಿ ಜಗತ್ತು ಹೆಚ್ಚು ಆರೋಗ್ಯ ಹೆಚ್ಚು ಪೂರ್ಣತೆಯಿಂದ ತುಂಬಿಕೊಳ್ಳುತ್ತದೆ. ಆದರೆ ಜಗತ್ತಿನಿಂದ ಏನಾದರೂ ನಗು ನಾಶವಾದರೆ ಎಲ್ಲವೂ ನಾಶವಾದಂತೆ

~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ತಾಂಗ್ ವಂಶದ ಸಾಮ್ರಾಜ್ಯದಲ್ಲಿ ಹೊಟೈ ಎನ್ನುವ ಸ್ಥೂಲಕಾಯದ ಝೆನ್ ಮಾಸ್ಟರ್ ಇದ್ದ. ಜನ ಅವನನ್ನು ಹ್ಯಾಪಿ ಚಿನ್ಮನ್ ಅಥವಾ ಲಾಫಿಂಗ್ ಬುದ್ಧ ಎಂದೇ ಗುರುತಿಸುತ್ತಿದ್ದರು. ಝೆನ್ ಮಾಸ್ಟರ್ ಹೊಟೈ ಗೆ ತನ್ನನ್ನು ಝೆನ್ ಮಾಸ್ಟರ್ ಎಂದು ಕರೆದುಕೊಳ್ಳುವಲ್ಲಿ , ತನ್ನ ಸುತ್ತ ಶಿಷ್ಯರನ್ನು ಕೂಡಿ ಹಾಕಿಕೊಂಡು ಪಾಠ ಹೇಳುವಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ಬದಲಾಗಿ ಮಾಸ್ಟರ್ ಹೊಟೈ ತನ್ನ ಹೆಗಲ ಮೇಲೆ ಹಣ್ಣು, ಸಿಹಿ ತಿಂಡಿಗಳ ಚೀಲ ಹೊತ್ತುಕೊಂಡು ಬೀದಿ ಬೀದಿ ಅಲೆಯುತ್ತಿದ್ದ. ತನ್ನ ಸುತ್ತ ಸೇರಿದ ಮಕ್ಕಳಿಗೆ ಹಣ್ಣು, ಸಿಹಿ ತಿಂಡಿ ಹಂಚುತ್ತಿದ್ದ.

‘ನಗು’ ಧರ್ಮದ ಜೀವಾಳ, ತಿರುಳು. ಗಂಭೀರತೆ ಯಾವತ್ತೂ ಧರ್ಮದ ಭಾಗವಲ್ಲ, ಆಗುವುದು ಸಾಧ್ಯವೂ ಇಲ್ಲ. ಗಂಭೀರತೆ ಅಹಂ ನ ಅವತಾರ, ಕಾಯಿಲೆಯ ಮೂಲ ಕಾರಣ. ಆದರೆ ನಗು ಅಹಂನಿಂದ ಹೊರತು.

ಒಬ್ಬ ಧಾರ್ಮಿಕ ಮನುಷ್ಯ ನಗುವುದಕ್ಕೂ ನೀವು ನಗುವುದಕ್ಕೂ ವ್ಯತ್ಯಾಸವಿದೆ. ನೀವು ಯಾವಾಗಲೂ ಇನ್ನೊಬ್ಬರನ್ನು ನೋಡಿ ನಗುತ್ತೀರಿ ಆದರೆ ಧಾರ್ಮಿಕ ಮನುಷ್ಯ ತನ್ನನ್ನೇ ನಗುವಿಗೆ ಕಾರಣ ಮಾಡಿಕೊಳ್ಳುತ್ತಾನೆ. ಅಥವಾ ಮನುಷ್ಯನ ಇಡೀ ಅಸ್ತಿತ್ವದ ಹಾಸ್ಯಾಸ್ಪದತೆಯನ್ನು ನೆನಸಿಕೊಂಡು ನಗುತ್ತಾನೆ.

ಭಾರ ಇಳಿಸಿಕೊಂಡಿರುವ ಮನುಷ್ಯನ ಅಸ್ತಿತ್ವದ ಮೇಲೆ ಯಾವ ಶಾಸ್ತ್ರ, ಸಿದ್ಧಾಂತಗಳ ಹೊರೆ ಇಲ್ಲ ಹಾಗಾಗಿ ನಗು ಅವನಿಗೆ ತುಂಬ ಸಹಜ.

ಈ ಬದುಕಿನ ನಾಟಕ ಎಷ್ಟು ಮನೋಹರವಾಗಿದೆಯೆಂದರೆ ಕೇವಲ ನಮ್ಮ ನಗು ಮಾತ್ರ ಅದಕ್ಕೆ ನಮ್ಮ ಪ್ರತಿಕ್ರಿಯೆಯಾಗಬಲ್ಲದು. ಕೇವಲ ನಗು ಮಾತ್ರ ನಿಜದ ಪ್ರಾರ್ಥನೆ, ಕೃತಜ್ಞತೆಯಾಗಬಲ್ಲದು.

ನನಗಂತೂ ಮಾಸ್ಚರ್ ಹೊಟೈ ಬಹಳ ಮುಖ್ಯ ಮನುಷ್ಯ. ಇಂಥ ಮನುಷ್ಯನೊಬ್ಬ ಭೂಮಿಯ ಮೇಲೆ ನಡೆದಾಡಿದ ಸಂಗತಿಯೇ ಅಪರೂಪದ ವಿಷಯ. ಬಹಳಷ್ಟು ಜನ ಹೊಟೈನಂತಾಗಬೇಕು. ಹೆಚ್ಚು ಹೆಚ್ಚು ದೇವಾಲಯಗಳು ನಗು, ಕುಣಿತ, ಹಾಡುಗಳಿಂದ ತುಂಬಿಕೊಳ್ಳಬೇಕು. ಜಗತ್ತಿನಿಂದ ಗಂಭೀರತೆ ನಾಶವಾದರೆ ಏನೂ ತೊಂದರೆ ಇಲ್ಲ ಬದಲಾಗಿ ಜಗತ್ತು ಹೆಚ್ಚು ಆರೋಗ್ಯ ಹೆಚ್ಚು ಪೂರ್ಣತೆಯಿಂದ ತುಂಬಿಕೊಳ್ಳುತ್ತದೆ. ಆದರೆ ಜಗತ್ತಿನಿಂದ ಏನಾದರೂ ನಗು ನಾಶವಾದರೆ ಎಲ್ಲವೂ ನಾಶವಾದಂತೆ. ಧಿಡೀರ್ ನೇ ಅಸ್ತಿತ್ವದ ಉತ್ಸವ ತನ್ನ ಕಳೆ ಕಳೆದುಕೊಳ್ಳುತ್ತದೆ. ನೀವು ಬಣ್ಣರಹಿತವಾಗುತ್ತೀರಿ, ಏಕತಾನತೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ ಮತ್ತು ನೀವು ಸಾವಿನದಾರಿಯಲ್ಲಿ ಮುನ್ನಡೆಯುತ್ತೀರಿ. ನಿಮ್ಮ ಶಕ್ತಿಯ ಪ್ರವಾಹ ತನ್ನ ಗತಿಯನ್ನ ಕಳೆದುಕೊಳ್ಳುತ್ತದೆ.

~ ಓಶೋ

Leave a Reply