ದೇಹ ವಾಸನೆ, ಲೋಕ ವಾಸನೆ , ಶಾಸ್ತ್ರ ವಾಸನೆ ಎಂಬ ಮೂರು ವಿಧ . ಈ ಮೂರಕ್ಕೂ ಆಧಾರವಾಗಿರುವುದು ಅಹಂಕಾರ.
ಶ್ರೀ ರಮಣ ಮಹರ್ಷಿ
ಅಜ್ಞಾನಿಯ ಆತ್ಮನ ಕುರಿತು ಹಲವು ಬಗೆಯಲ್ಲಿ ಮನಸ್ಸಿಗೆ ಬಂದಂತೆ ತೀರ್ಮಾನಗಳನ್ನು ಮಾಡಿಕೊಂಡು ಅವುಗಳ ಬಗ್ಗೆ ವಾದ ವಿವಾದಗಳನ್ನು ಮಾಡಿಕೊಳ್ಳುತ್ತಾ ಇರುತ್ತಾನೆ .
ಮತಗಳು ಆತ್ಮನು ಇದ್ದಾನೆ , ಆತ್ಮನು ಇಲ್ಲ , ಅದಕ್ಕೆ ರೂಪವಿದೆ , ಅದು ನಿರಾಕಾರ , ಅದು ಏಕ, ಅದು ಎರಡು ( ಹಲವು ) ಅದು ಒಂದೂ ಅಲ್ಲ , ಎರಡೂ ಅಲ್ಲಾ , ಎಂದು ಹಲವಾರು ಬಗೆಗಳಿವೆ. ಇವು ಕ್ರಮವಾಗಿ ಆಸ್ತಿಕ , ನಾಸ್ತಿಕ , ಸಗುಣ , ನಿರ್ಗುಣ , ಅದ್ವೈತ , ದ್ವೈತ , ವಿಶಿಷ್ಟಾದ್ವೈತ ಎಂದು ಹಲವು ಬಗೆಯಲ್ಲಿ ಚರ್ಚೆಗೆ ಒಳಪಟ್ಟಿವೆ. ಇಲ್ಲಿ ಮತ ಎಂದರೆ ‘ಅಭಿಪ್ರಾಯ’ ಎಂದಷ್ಟೇ!
ಜೀವನ್ಮುಕ್ತನಿಗೆ ಎಲ್ಲ ಮತಗಳೂ ಸಮಾನ. ಅವನದು ಸಮರಸ. ಯಾವ ಮತವಾದರೂ ಸರಿ ಅದರ ಸಿದ್ಧಾಂತಗಳು ಮುಖ್ಯವಲ್ಲ, ಅದರಲ್ಲಿ ಹೇಳಿರುವ ಸಾಧನೆ ಮುಖ್ಯ. ಆ ಸಾಧನೆಯಲ್ಲಿ ನಿರತರಾಗಿ ಅದ್ವೈತ ಸ್ಥಿತಿಯನ್ನೇ ಪಡೆಯಬಹುದು. ಮೇಲಾಗಿ ಮತಾಭಿಮಾನ ಎನ್ನುವುದು ಕೂಡ ಮುಕ್ತಿಗೆ ಅಡ್ಡಿಯೇ , ಏಕೆಂದರೆ ಅದು ಒಂದು ಬಗೆಯ ವಾಸನೆಯೇ ( ಬಂಧನವೇ)
ದೇಹ ವಾಸನೆ, ಲೋಕ ವಾಸನೆ , ಶಾಸ್ತ್ರ ವಾಸನೆ ಎಂಬ ಮೂರು ವಿಧ . ಈ ಮೂರಕ್ಕೂ ಆಧಾರವಾಗಿರುವುದು ಅಹಂಕಾರ. ಇವುಗಳಲ್ಲಿ ಶಾಸ್ತ್ರ ವಾಸನೆಯು ಬಹಳ ಬಲಶಾಲಿಯಾದುದು ಮತ್ತು ಬಿಡಲು ಬಹಳ ಕಷ್ಟಕರವಾದುದು ಆದ್ದರಿಂದ ಇದನ್ನೂ ಬಿಡಬೇಕೆಂದು ವೇದಾಂತ ಶಾಸ್ತ್ರಗಳು ಉಪದೇಶಿಸುತ್ತದೆ.
ಪರಮಾರ್ಥ ಸತ್ಯವು ಅಹಂಕಾರ ಮತ್ತು ಮನಸ್ಸು ನಾಶವಾದ ಸ್ವಾನುಭೂತಿಯಲ್ಲಿ ಅನುಭವವಾಗುವುದೇ ಹೊರತು , ಅಹಂಕಾರ ಮತ್ತು ಮನಸ್ಸು ಇರುವಾಗ ಅಲ್ಲ. ಅವು ನಾಶವಾಗುವ ಮೊದಲೇ “ಸತ್ಯವನ್ನು ನಾನು ಅರಿತು ಬಿಟ್ಟೆ” ಎಂದು ಹೆಮ್ಮೆ ಪಡುವುದು ಬಹಳ ದೊಡ್ಡ ಪ್ರಮಾದ.