ಕ್ಷಮಿಸುತ್ತಲೇ ಇರಬೇಕು! : ಓಶೋ ಹೇಳಿದ ಕಥೆ

ವ್ಯಕ್ತಿಯೊಬ್ಬ “ಎಷ್ಟು ಬಾರಿ ನಾವು ಯಾರನ್ನಾದರೂ ಕ್ಷಮಿಸಬಹುದು “ ಎಂದು ಕೇಳಿದ ಪ್ರಶ್ನೆಗೆ ಬುದ್ಧ ನೀಡಿದ ಉತ್ತರವೇನು ಗೊತ್ತೆ? ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ಒಬ್ಬ ಮನುಷ್ಯ ಬುದ್ಧನನ್ನು ಪ್ರಶ್ನೆ ಮಾಡಿದ. “ಎಷ್ಟು ಬಾರಿ ನಾವು ಯಾರನ್ನಾದರೂ ಕ್ಷಮಿಸಬಹುದು ?“

ಅವನು ಕೇಳಿದ ಪ್ರಶ್ನೆ ಮತ್ತು ಅವನು ಕೇಳಿದ ರೀತಿಯಿಂದಲೇ, ಆ ಮನುಷ್ಯನ ಸ್ವಭಾವ ಎದ್ದು ಕಾಣುತ್ತಿತ್ತು. ಆ ಮನುಷ್ಯನಲ್ಲಿ ಅಂತಃಕರಣದ ಅಭಾವವಿದೆ ಎಂದು ಗೊತ್ತಾಗುತ್ತಿತ್ತು.

ಅವನ ಪ್ರಶ್ನೆಗೆ ಬುದ್ಧ ಉತ್ತರಿಸಿದ, “ ಏಳು ಬಾರಿ “

“ ಸರೀ ಹಾಗೇ ಮಾಡುತ್ತೇನೆ “ ಆ ಮನುಷ್ಯ ಪ್ರತಿಕ್ರಿಯಿಸಿದ.

ಆ ಮನುಷ್ಯ ಉತ್ತರಿಸಿದ ರೀತಿಯನ್ನ ಗ್ರಹಿಸಿದ ಬುದ್ಧ ಮತ್ತೆ ಮಾತನಾಡಿದ,

“ನಿಲ್ಲು, ಏಳಲ್ಲ ಎಪ್ಪತ್ತು ಬಾರಿ ! “

ಬುದ್ಧ ಹೇಳಿದ್ದನ್ನ ಕೇಳಿ, ಆ ಮನುಷ್ಯನಿಗೆ ಇರುಸುಮುರುಸಾಯಿತು. ಆದರೂ “ ಸರಿ ಎಪ್ಪತ್ತು ಬಾರಿ ತಾನೇ “ ಎಂದು ಅವ ಹೊರಡಲು ಅನುವಾದ.

ಬುದ್ಧ ಆ ಮನುಷ್ಯನನ್ನು ಮತ್ತೆ ತಡೆದು ನಿಲ್ಲಿಸಿದ.

“ ನನ್ನ ಮಾತುಗಳನ್ನ ನಾನು ಹಿಂತೆಗೆದುಕೊಳ್ಳುತ್ತೇನೆ. ನೀನು ಸದಾ ಕ್ಷಮಿಸುತ್ತಲೇ ಇರಬೇಕು ; ಎಪ್ಪತ್ತು ಬಾರಿ ಸಾಕಾಗುವುದಿಲ್ಲ. ನನ್ನ ಮಾತನ್ನ ನೀನು ಒಪ್ಪಿಕೊಂಡ ರೀತಿಯನ್ನ ಗಮನಿಸಿದರೆ, ಎಪ್ಪತ್ತನೇ ಬಾರಿ ಕ್ಷಮಿಸುವುದು ಮುಗಿದಕೂಡಲೇ ನೀನು ಅವನ ವಿರುದ್ಧ ಸೇಡು ತೀರಿಸಿಕೊಳ್ಳುತ್ತೀ. ಒಂದೇ ಹೊಡೆತದಲ್ಲಿ ಅವನ ಮೇಲೆ ಆಕ್ರಮಣ ಮಾಡಿ ಅವನಿಗೆ ಅಪಾಯ ಮಾಡುತ್ತೀ. ನೀನು ಅಂತಃಕರಣದ ಮನುಷ್ಯಲ್ಲ. ನಿನಗೆ ನಾನು ಅರ್ಥವಾಗುವುದು ಸಾಧ್ಯವಿಲ್ಲ, ನಿನಗೆ ಎಷ್ಟು ಬಾರಿ ಎಂದು ನಿಖರವಾಗಿ ಹೇಳುವುದು ನನಗೆ ಸಾಧ್ಯವಿಲ್ಲ. ಹಾಗಾಗಿ ನೀನು ಕ್ಷಮಿಸುತ್ತಲೇ ಇರಬೇಕು. “

Leave a Reply