ಆಪತ್ತು ಎದುರಿಸುವ ಬಗೆ ಯಾವುದು: ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಮಹಾಭಾರತದ ಶಾಂತಿಪರ್ವದಿಂದ…

ನ ಜಾನಪದಿಕಂ ದುಃಖಮೇಕಃ ಶೋಚಿತುಮರ್ಹತಿ |
ಅಶೋಚನ್‌ ಪ್ರತಿ ಕುರ್ವೀತ ಯದಿ ಪಶ್ಯೇದುಪಕ್ರಮಮ್‌ ॥ಮಹಾಭಾರತ, ಶಾಂತಿಪರ್ವ॥

ಅರ್ಥ: “ಸಾರ್ವತ್ರಿಕ ಆಪತ್ತುಗಳು ಎದುರಾದಾಗ ಯಾರೂ ಅಳುತ್ತ ಕೂಡಬಾರದು. ಶೋಕವನ್ನು ಬದಿಗಿರಿಸಿ ಪರಿಸ್ಥಿತಿಯನ್ನು ನಿವಾರಿಸಲು ಮಾಡಬೇಕಾದ ಪ್ರಯತ್ನವನ್ನು ಆರಂಭಿಸಬೇಕು.”

ತಾತ್ಪರ್ಯ: ಪ್ರಪಂಚದ ಕೋಟಲೆಗಳನ್ನು ಹೇಗೆ ಎದುರಿಸಬೇಕೆಂದು ಶುಕರಿಗೆ ಬೋಧನೆ ಮಾಡುವಾಗ ನಾರದರು ಹೇಳಿದ ಮಾತು ಇದು. ವೈಯಕ್ತಿಕವಾಗಿ
ಸಂಕಟಗಳು ಒದಗಿದಾಗ ಜನ ತಮ್ಮ ಶಕ್ತಿಮೀರಿ ಪ್ರಯತ್ನಿಸಿ ಅವನ್ನು ನಿವಾರಿಸಿಕೊಳ್ಳುತ್ತಾರೆ. ಆದರೆ ಜನಸಮುದಾಯಕ್ಕೆ ವಿಪತ್ತು ಎರಗಿದಾಗ
ಜನರ ಪ್ರಯತ್ನಶೀಲತೆ ಕುಗ್ಗುತ್ತದೆ. ಕೆಲವರು “ಇದು ನನಗೆ ತಟ್ಟಿಲ್ಲವಲ್ಲ, ನಾನೇಕೆ ತಲೆಕೆಡಿಸಿಕೊಳ್ಳಲಿ ?’ – ಎಂದು ಉದಾಸೀನಭಾವ ತಳೆಯುತ್ತಾರೆ; ತಮ್ಮ ಮನೆಗೂ ಬೆಂಕಿಬಿದ್ದಾಗ ಮಾತ್ರ ಎಚ್ಚರಾಗುತ್ತಾರೆ. ಇದು ಸರಿಯಲ್ಲ. ಇಂಥಾ ಆಪತ್ತುಗಳು ಎದುರಾದಾಗ ಸಮಸ್ಯೆಯ ಗಾತ್ರದಿಂದ ಎದೆಗುಂದದೆ ತಾವಾಗಿ ಪರಿಹಾರ ಪ್ರಯತ್ನಗಳನ್ನು ನಡೆಸಲು ಮುಂದಾಗಬೇಕು – ಅನ್ನುವುದು ನಾರದರ ಮಾತಿನ ತಾತ್ಪರ್ಯ.


Leave a Reply