ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ. ಇದು ಎರಡನೇ ಕಂತು.
ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ
ಧನುರ್ ಉತ್ಸವ ಎರಡನೇಯ ದಿನ
ಜಗದಲಿ ಬಾಳ ಬಂದಿರುವವರೇ ನಾವು ನಮ್ಮೀ ವ್ರತಕೆ
ಕೈಗೊಂಡ ನಿಯಮಗಳ ಕೇಳಿರೈ
ಹಾಲ್ಗಡಲೊಳ್ ಯೋಗ ನಿದ್ರೆಯಲಿರುವ ಪರಮನಡಿ ಪಾಡಿ
ಘೃತವುಣದೆ ಪಾಲುಣದೆ ಮುಂಜಾವದಲಿ ಮುಳುಗಿ
ಕಾಡಿಗೆಯನಿಡದೆ ಹೂ ತೆಗೆದು ನಾವ್ ಮುಡಿದಯೆ
ಮಾಡದನ ಮಾಡದೆಯೆ ಹೊಟ್ಟೆಕಿಚ್ಚಿನ ಮಾತ ಕೇಳಿ ಪೇಳದೆಯೇ
ಸತ್ಕಾರವನು ಭಿಕ್ಷೆಯನು ಕೈಲಾದ ಮಟ್ಟಿಗುಂ ನೀಡುತ್ತ
ಬಾಳ್ವ ಕ್ರಮವನು ನೆನೆಯೆ ಸಂತಸದಿ ನಮ್ಮೀ ಪವಿತ್ರ ವ್ರತವು ಸಾರ್ಥಕವು
-ಬಿಂದಿನಗವಲೆ ನಾರಾಯಣಸ್ವಾಮಿ (ಪಂತುವರಾಳಿ ರಾಗ – ಆದಿ ತಾಳ)
“ಗೋಕುಲದ ಸ್ತ್ರೀಯರೇ…..
ಕ್ಷೀರಸಾಗರದಲ್ಲಿ ಶಯನಿಸಿರುವ ಪರಂದಾಮನ ಪಾದಕಮಲಗಳನ್ನು ಸೇರಲು ನಾವು ಪಾಲಿಸಬೇಕಾದ ವ್ರತದ ಆಚಾರಗಳನ್ನು ಸ್ವಲ್ಪ ಕೇಳಿ !
ನಾವೆಲ್ಲರೂ ಮುಂಜಾವಿನಲ್ಲೇ ಎದ್ದು ಮೀಯೋಣ. ಬೇಕಿಲ್ಲದ ಅಲಂಕಾರಗಳಾದ ಕಣ್ಣಿಗೆ ಕಾಡಿಗೆ, ಕೇಶಕ್ಕೆ ಪುಷ್ಪಗಳು ಎಂದು ಯಾವುದನ್ನೂ ಮುಡಿಯದೆ, ತುಪ್ಪ, ಹಾಲು ಮುಂತಾದ ರುಚಿಯಾದ ಆಹಾರಗಳನ್ನು ಉಣ್ಣದೆ, ಕೆಟ್ಟ ಮಾತುಗಳನ್ನಾಡದೆ, ಕೆಟ್ಟ ಕಾರ್ಯಗಳನ್ನು ಮನಸಾರೆಯೂ ನೆನೆಯದೆ, ಸಾಧು ಸಂತರಿಗೆ ನಮ್ಮ ಕೈಯಿಂದಾದ ಧರ್ಮವನ್ನು ಮಾಡೋಣ !
ಹೀಗೆ ಬಾಹ್ಯ ಸ್ವಚ್ಛತೆ, ಆಂತರಿಕ ಶುದ್ಧಿಯೊಂದಿಗೆ ವ್ರತ ಕೈಗೊಂಡು, ಪರಂದಾಮನ ಹೊಗಳಿ ಹಾಡಿದರೆ ಭಗವಂತನ ಪಾದಕಮಲವನು ಸೇರಲು ಸಾಧ್ಯ ಬನ್ನಿರೇ…”
ಎಂದು ತನ್ನ ಸಖಿಯರನ್ನು ಎರಡನೇಯ ದಿನದ ವ್ರತಕ್ಕೆ ಆಹ್ವಾನಿಸುತ್ತಾಳೆ ಗೋದೈ ಆಂಡಾಳ್…!
“ಮುಂಜಾನೆಯೇ ಮಿಂದು…”
ಎಂದು ಯಾಕೆ ಮುಂಜಾನೆಯೇ ಗುಡಿಗೆ ಹೋಗಲು ಸಖಿಯರನ್ನು ಕರೆಯುತ್ತಾಳೆ ಗೋದೈ…? ಇನ್ನೂ ಸ್ವಲ್ಪ ನಿದ್ರಿಸಿ, ಚೆನ್ನಾಗಿ ಬೆಳಗಾದ ಮೇಲೆ ಅಥವಾ ಹಗಲಿನಲ್ಲೋ ದೇವಸ್ಥಾನಕ್ಕೆ ಹೋದರೆ ಆಗದೇ..? ಸಾಲದ್ದಕ್ಕೆ ವ್ರತ ಎಂದರೆ ಹಾಲು, ಹಣ್ಣು ಅಷ್ಟೇ ಅಲ್ಲವೇ ನಮಗೆ ಆಹಾರ…? ಆದರೆ ಗೋದೈ ‘ತುಪ್ಪ ಉಣ್ಣೆವು, ಹಾಲುಣ್ಣೆವು’ ಎನ್ನುತ್ತಾಳಲ್ಲ ಇದು ಯಾಕೆ…?
ವ್ರತವನ್ನು “ಮುಂಜಾವು ಮಿಂದು” ಎಂದು ಗೋದೈ ನಿಯಮ ಮಾಡುವ ಕಾರಣವನ್ನು ನಾವು ಹುಡುಕಿದರೆ, ಅದರ ಹಿಂದೆಯೂ ವಿಜ್ಞಾನವಿದೆ.
ಮನುಷ್ಯ ಸೃಷ್ಟಿಯಾದಾಗಲೇ ಅವನೊಂದಿಗೆ ಸಾತ್ವ, (ಸಾತ್ವಿಕ) ರಜೋ (ರಾಕ್ಷಸ) ಮತ್ತು ತಮೋ (ತಾಮಸ) ಎಂಬ ಮೂರು ಗುಣಗಳು ಹುಟ್ಟಿಕೊಂಡವಂತೆ.
ಸಾತ್ವೀಕ ಎಂಬ ಸತ್ವ ಗುಣ ಪರಿಶುದ್ಧವಾದದ್ದು. ಅದು ನಮಗೆ ಭಕ್ತಿ, ಶಿಸ್ತು, ಜ್ಞಾನ ಮುಂತಾದವುಗಳ ಮೇಲೆ ಒಲವವನ್ನು ಉಂಟುಮಾಡುತ್ತದೆ. ರಜೋ ಗುಣ ಎಂಬ ರಾಕ್ಷಸ ಗುಣ, ಅಹಂಕಾರ, ದುರಾಸೆಯಿಂದ ಉಂಟಾಗುವ ಸ್ಥಿತಿ. ತಮೋ ಗುಣ ಎಂಬ ತಾಮಸ ಗುಣವೋ, ಜ್ಞಾನವಿಲ್ಲದ ಶೂನ್ಯ ಸ್ಥಿತಿ.
ಈ ಮೂರು ಗುಣಗಳಲ್ಲಿ ಕೋಪ, ತಾಪ, ಕಾಮ, ಮೋಹ ಮುಂತಾದ ಚಂಚಲ ಗುಣಗಳು ಇಲ್ಲದೆ, ಒಳ್ಳೆಯ ಚಿಂತನೆಗಳೊಂದಿಗೆ ಇರುವ ಸಾತ್ವಿಕ ಸ್ಥಿತಿಯೇ ಮೋಕ್ಷವೆಂದು ಕರೆಯಲ್ಪಟ್ಟು ಪರಂದಾಮನ ಪಾದಕಮಲಗಳನ್ನು ಸೇರಲು ತಕ್ಕ ಗುಣವಾಗುತ್ತದೆ.
ಇದು ಹೇಗೆ ಸಾಧ್ಯ ಎಂಬುದಕ್ಕೆ ನಮ್ಮ ಪುರಾಣಗಳಲ್ಲಿ ಒಂದು ಸುಂದರವಾದ ಕಥೆ ಉಂಟು.
ಒಮ್ಮೆ ವಿಷ್ಣು ವಟಪತ್ರಸಾಯಿ ಯೋಗನಿದ್ರೆಯಲ್ಲಿರುವಾಗ, ಅವನ ಎರಡೂ ಕರ್ಣಕಮಲದಿಂದ ಮಧು, ಕೈಟಭ ಎಂಬ ಇಬ್ಬರು ರಾಕ್ಷಸರು ಉದ್ಭವಿಸುತ್ತಾರೆ.
ಮಧು ಎಂಬುವನು ರಜೂ ಎಂಬ ರಾಕ್ಷಸ ಗುಣದ ಒಟ್ಟು ರೂಪ. ಕೈಟಭನೋ ಬುದ್ಧಿಯೇ ಇಲ್ಲದ ಜ್ಞಾನ ಶೂನ್ಯದ ಗುರುತಾದ ತಮೋ ಗುಣದ ರೂಪವಾಗಿ ಇರುವವನು. ಇವರಿಬ್ಬರೂ ಸೇರಿ ದೇವತೆಗಳ ಮೇಲೆ ದೌರ್ಜನ್ಯ ಮಾಡುತ್ತಾರೆ. ಅವರ ಅರಾಜಕತೆ ಉಚ್ಚ ಸ್ಥಿತಿಯನ್ನು ತಲುಪುವ ಸಮಯ, ಬ್ರಹ್ಮನಿಂದ ಅವರಿಬ್ಬರು ವೇದಗಳನ್ನೂ ಅಪಹರಿಸಿಕೊಳ್ಳುತ್ತಾರೆ.
ಇದರಿಂದ ಲೋಕದಲ್ಲಿ ಸೃಷ್ಟಿಯ ಕಾರ್ಯ ನಿಂತು ಹೋಗಲು ಬ್ರಹ್ಮ ದೇವನೂ ಉಳಿತ ದೇವತೆಗಳೂ ಭಗವಂತನ ಬಳಿ ಬಂದು ಮೊರೆಯಿದುತ್ತಾರೆ. ನಂತರ ಭಕ್ತಿ, ಶಿಸ್ತು, ಜ್ಞಾನ ಮುಂತಾದ ಗುಣಗಳುಳ್ಳ ಸಾತ್ವಿಕ ಗುಣದ ನಾಯಕನಾದ ನಾರಾಯಣ, ರಜೋ ಗುಣದ ಮಧುವನ್ನೂ, ತಮೋ ಗುಣದ ಕೈಟಭನನ್ನೂ ಧ್ವಂಸಗೊಳಿಸಿ ಕಳೆದುಕೊಂಡ ವೇದಗಳನ್ನು ಮರಳಿ ಪಡೆದು ಬ್ರಹ್ಮದೇವನಿಗೆ ಕೊಟ್ಟರಂತೆ.
ಯುದ್ಧದಲ್ಲಿ ಸೋತ ರಕ್ಕಸ ಸಹೋದರರು ಇಬ್ಬರೂ ನಾರಾಯಣನನ್ನು ಶರಣಾಗಿ, ಅವರ ಬಳಿ “ತಮ್ಮ ಶಕ್ತಿಯಿಂದ ಹುಟ್ಟಿದವರು ನಾವು, ಆದ್ದರಿಂದ ತಮ್ಮನ್ನು ಬಿಟ್ಟು ಎಂದೂ ಅಗಲದೆ, ಮೋಕ್ಷ ಪಡೆದು ವೈಕುಂಟದಲ್ಲಿಯೇ ವಾಸವಿರುವಂತೆ ವರವನ್ನು ದಯಪಾಲಿಸಬೇಕು…” ಎಂದು ಬೇಡಿಕೊಂಡರಂತೆ. ಅದನ್ನು ಒಪ್ಪಿಕೊಂಡ ಶ್ರೀರಂಗನಾಥ ಧನುರ್ ಮಾಸದ ಶುಕ್ಲ ಪಕ್ಷ ಏಕಾದಶಿಯಂದು ಸ್ವರ್ಗದ ಉತ್ತರ ದ್ವಾರವನ್ನು ತೆರೆದು, ಅದರ ಮೂಲಕ ವೈಕುಂಠದೊಳಗೆ ಮಧು – ಕೈಟಭರನ್ನು ತನ್ನೊಂದಿಗೆ ಕರೆದುಕೊಂಡನಂತೆ.
ಶ್ರೀರಂಗನಾಥ ಯಾಕೆ ಶಯನಿಸಿರಬೇಕು, ಅವರು ನಿದ್ರಿಸುವಾಗ ರಕ್ಕಸರು ಯಾಕೆ ಉದ್ಭವಿಸಬೇಕು., ನಂತರ ಅವನೇ ಯಾಕೆ ಆ ರಕ್ಕಸರನ್ನು ನಾಶಮಾಡಬೇಕು ಎಂಬ ಪ್ರಶ್ನೆಗಳು ನಮಗೆ ತೋರಿದರೂ, ಈ ಕಥೆಯಲ್ಲಿ ವಿಶೇಷವಾಗಿ ನಾವು ತಿಳಿದುಕೊಳ್ಳಬೇಕಾಗಿರುವುದು ಮನುಷ್ಯನ ಈ ಜೀವನಕ್ಕೂ, ಪುನರ್ ಜೀವನಕ್ಕೂ ಅತ್ಯಾವಶ್ಯಕವಾದ ಸತ್ವ ಗುಣ ನಿದ್ರಿಸಲು ತೊಡಗಿದರೆ, ರಜೋ ಗುಣ, ತಮೋ ಗುಣ ಎಚ್ಚರವಾಗುತ್ತದೆ. ಅದೇ ಸಮಯ ಸತ್ವ ಗುಣ ಎಚ್ಚರವಾಗಿದ್ದರೆ ರಜೋ ಗುಣವೂ, ತಮೋ ಗುಣವೂ ತಮ್ಮಿರುವು ಅರಿಯದೆ ಸತ್ವ ಗುಣದೊಂದಿಗೆ ಐಕ್ಯವಾಗಿಬಿಡುತ್ತದೆ ಎನ್ನುತ್ತಾರೆ.
ಅಷ್ಟೇ ಅಲ್ಲದೆ, ಪ್ರತಿ ದಿನವೂ ಬೇರೆ ಬೇರೆ ಸಮಯಗಳಲ್ಲಿ ಈ ಸತ್ವ, ರಜೋ, ತಮೋ ಮೂರೂ ಗುಣಗಳು ತೀವ್ರವಾಗುತ್ತದಂತೆ.
ಉದಾಹರಣೆಗೆ ಮುಂಜಾವಿನ ಸೂರ್ಯೋದಯಕ್ಕೆ ಮುಂಚೆ (4 – 4.30 ಗಂಟೆಯ ಸಮಯ) ನಮ್ಮ ಮನಸ್ಸಿನಲ್ಲಿ ಸಾತ್ವಿಕ ಗುಣದ ಪ್ರಾಬಲ್ಯ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ನಾವು ಎದ್ದು ಓದುವುದು, ಪೂಜೆ ಮಾಡುವುದು ಮುಂತಾದ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಅವುಗಳ ಫಲವನ್ನು ನಾವು ಸಂಪೂರ್ಣವಾಗಿ ಪಡೆಯಬಹುದು.
ಹಗಲಿನ ಸಮಯದಲ್ಲಿ ರಜೋ ಗುಣ ಬಲವಾಗಿರುತ್ತದೆ. ಆ ಸಮಯ ಕೆಲಸ, ಪ್ರಯತ್ನ, ಉತ್ಸಾಹ, ಗೆಲುವು ಎಂದು ನಮ್ಮ ಮನಸ್ಸು ನಿರತವಾದರೆ ಗಮ್ಯದ ಕಡೆಗೆ ಅದು ನಮ್ಮನ್ನು ನಿರಂತರವಾಗಿ ಚಲಿಸುವಂತೆ ಮಾಡುತ್ತದೆ.
ರಾತ್ರಿ ಸಮಯ ತಮೋ ಗುಣ ತಲೆ ಎತ್ತುತ್ತದೆ. ಸೋಂಬೇರಿತನ, ದಣಿವು, ಮತ್ತು, ವಿಶ್ರಾಂತಿ, ಮುಂತಾದ ತಮೋ ಗುಣಗಳು ನಿದ್ರೆ ಮಾಡುವ ಸಮಯದಲ್ಲಿ ನಮ್ಮನ್ನು ಆಕ್ರಮಿಸುವುದು ಸರಿತಾನೇ…?
ಮೇಲ್ನೋಟಕ್ಕೆ ನೋಡಿದರೆ ಇದನ್ನು ಏನೋ ಆ ಕಾಲದಲ್ಲಿ ಕಥೆ ಕಟ್ಟಿ ಹೇಳಿದಂತೆ ಇದ್ದರೂ, ವಿಜ್ಞಾನದ ರೀತಿಯಲ್ಲಿ ಇದನ್ನು ನಿರೂಪಿಸಲಾಗಿದೆ.
ಗಡಿಯಾರದಿಂದ, ಒಂದು ದಿನ ಎಂಬುದನ್ನು ಹಗಲು–ರಾತ್ರಿ ಎಂದು ಎರಡು ಹೊತ್ತುಗಳಾಗಿ, ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಎಂದು ಮೂರು ಹೊತ್ತುಗಳಾಗಿ ನಾವು ವಿಂಗಡಿಸುವಂತೆಯೇ ನಮ್ಮ ದೇಹದೊಳಗೆ ವಿಶ್ರಾಂತಿ ಪಡೆದುಕೊಂಡಿರುವ ‘ಬಯಲಾಜಿಕಲ್ ಕ್ಲಾಕ್’ (Biological Clock) ಎಂಬ ಪ್ರಾಣ ಗಡಿಯಾರ ಆ ಸಮಯಗಳಿಗೆ ತಕ್ಕಂತೆ, ದೇಹದ ಎಲ್ಲ ಚಲನೆವಲನೆಗಳನ್ನೂ ಹಾರ್ಮೋನ್ಗಳ (ಚೋದಕ-Hormone) ಮೂಲಕ ನಿಯಂತ್ರಿಸುತ್ತದೆ.
ನಿದ್ದೆ – ಎಚ್ಚರ, ಚಲನೆ – ವಿಶ್ರಾಂತಿ , ಬೆಳವಣಿಗೆ – ನಾಶ ಇಂತಹ ಅತಿ ಪ್ರಮುಖವಾದ ಬದಲಾವಣೆಗಳು ನಮ್ಮ ದೇಹದ ಹಾರ್ಮೋನ್ಗಳ ನೆರವಿನಿಂದ ‘ಸಿರ್ಕಾಡಿಯನ್ ರಿದಂ’ (Circadian Rhythm- ದೈನಿಕ ನಿಯತಾರ್ವತನ) ಎಂಬ ದೇಹದ ಚಲನೆಗೆ ತಕ್ಕಂತೆ ರೂಪುಗೊಳ್ಳುತ್ತದೆ.
ಹಗಲು ಹೊತ್ತಿನ ಬಿರುಸಾದ ಓಟಗಳಿಗೆ ನೆರವಾಗಿ ನಿಲ್ಲುವುದು ‘ಕಾರ್ಟಿಸಾಲ್’ (Cortisol Hormone- ಆ hormone produced by the adrenal gland –ಕಲಿಜೊತ್ತು ಗ್ರಂಥಿ ) ಎಂಬ ರಜೋಗುಣದ ಹಾರ್ಮೋನ್ ಆದರೆ, ರಾತ್ರಿಯ ತಮೋ ಗುಣದ ನಿದ್ರೆಗೆ ಹೆಚ್ಚಾಗಿ ಸಹಾಯವಾಗುತ್ತದೆ ‘ಮೆಲೋಟೋನಿನ್’ ( Melatonin Hormone- ನೆತ್ತಿ ಗ್ರಂಥಿ) ಹಾರ್ಮೋನ್ ಎನ್ನುತ್ತದೆ ವೈದ್ಯ ವಿಜ್ಞಾನ. ಇವಕ್ಕೆ ನೇರವಾಗಿ, ಇವನ್ನು ನಿರ್ವಹಿಸುವುದು ದೇಹದ ಗಡಿಯಾರ, ರಾತ್ರಿಯ ಸಮಯದಲ್ಲಿ ಸರಿಯಾದ ಅಳತೆಯಲ್ಲಿ ಮೆಲೋಟಾನಿನ್ ಅನ್ನು ಸ್ರವಿಸುವಂತೆ ಮಾಡಿ ನಮ್ಮನ್ನು ಗಾಢವಾಗಿ ನಿದ್ರಿಸುವಂತೆ ಮಾಡುವಂತೆಯೇ, ಬೆಳಗಿನ ಜಾವ ಅದೇ ಮೆಲೋಟಾನಿನ್ ಸ್ರವಿಸುವುದು ಕಡಿಮೆಯಾಗಿ ಸಾತ್ವಿಕವಾದ ಎಚ್ಚರಿಕೆಯ ಸ್ಥಿತಿ ಉಂಟಾಗಲೂ ಸಹ ನೆರವಾಗುತ್ತದೆ.
‘ಬೆಳಗ್ಗೆ ಎದ್ದ ಕೂಡಲೇ ಪಾಠ, ಸಂಜೆ ಪೂರ್ತಿ ಆಟ’ ಎಂದು ಭಾರತೀಯರ್ ಹಾಡಿರುವುದು, ‘ಮುಂಜಾವಿನಲೇ ಮಿಂದು’ ಎಂಬ ಆಂಡಾಳ್ ಬೆಳಗಿನ ಜಾವದಲ್ಲಿಯೇ ದೇವರನ್ನು ಪೂಜಿಸಲು ಕರೆಯುವುದು ಒಂದೇ ರೀತಿ ಇದೆಯಲ್ಲದೆ, ಅವು ವೈಜ್ಞಾನಿಕ ಸತ್ಯ ಎನ್ನುವುದು ಈಗ ಋಜುವಾತು ಆಗುತ್ತದಲ್ಲವೇ?!
ದಿನಕ್ಕೂ, ಹೊತ್ತುಗಳಿಗೂ, ನಮ್ಮ ಗುಣಕ್ಕೂ ಹೇಗೆ ಸಂಬಂಧವಿದೆಯೋ, ಅದೇ ರೀತಿ ನಾವು ಸೇವಿಸುವ ಆಹಾರಕ್ಕೂ ನಮ್ಮ ಭಾವನೆಗಳಿಗೂ ಸಂಬಂಧ ಇದೆ ಎನ್ನುತ್ತದೆ ವಿಜ್ಞಾನ.
‘ತುಪ್ಪ ಉಣ್ಣೆವು, ಹಾಲುಣ್ಣೆವು’ ಎಂದು ವ್ರತದ ಸಮಯದಲ್ಲಿ ಗೋದೈ ಅವುಗಳನ್ನು ತ್ಯಜಿಸಲು ಹೇಳಿದ್ದೂ ಸಹ ಅದೇ ಕಾರಣಕ್ಕಾಗಿ.
ಆಹಾರ ಎಂಬುದು ನಮ್ಮ ದೇಹವನ್ನು ಬೆಳೆಸುವುದಕ್ಕೆ ಮಾತ್ರವಲ್ಲ; ನಮ್ಮ ಮನಸ್ಸನ್ನು ಬೆಳೆಸಿಕೊಳ್ಳುವುದಕ್ಕೂ ಸಹಾಯವಾಗಿರಬೇಕು. ನಾವು ದಿನನಿತ್ಯ ಉಣ್ಣುವ ಆಹಾರದ ಬಗೆಗಳು, ರುಚಿಗಳು ನಮ್ಮ ಗುಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡರಿತು, ಯಾವ ಆಹಾರವನ್ನು ಯಾವಾಗ ಸೇವಿಸಬೇಕು ಎಂಬುದನ್ನು ನಮ್ಮ ಹಿರಿಯರು ಮಾರ್ಗದರ್ಶನ ಮಾಡಿದ್ದಾರೆ.
ಮಾಂಸ, ಮೊಟ್ಟೆ, ಮೀನು ಮುಂತಾದವು ತಾಮಸ ಆಹಾರ ಬಗೆಗಳಿಗೆ ಸೇರಿದ್ದು.
ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಸಂರಕ್ಷಿಸಿದ ಹಾಲು, ದ್ವಿದಳ ಧಾನ್ಯಗಳು ಮುಂತಾದವು ಸಾತ್ವಿಕ ಆಹಾರದ ಬಗೆಗಳು.
ಆದ್ದರಿಂದ ಸಾತ್ವಿಕ ಸ್ಥಿತಿಯನ್ನು ತಲುಪುವುದಕ್ಕಾಗಿ, ಬೆಳಗಿನ ಜಾವದಲ್ಲಿ ಎಚ್ಚರವಾದ ಕೂಡಲೇ, ಸ್ನಾನ ಮಾಡಿ, ಹಾಲು, ತುಪ್ಪ ಮುಂತಾದವನ್ನು ಸೇವಿಸದೆ ವ್ರತವನ್ನು ಕೈಗೊಳ್ಳಬೇಕು ಎಂದು ಗೋಕುಲದ ಸ್ತೀಯರಿಗೆ ವ್ರತವನ್ನು (ಪಾವೈ ನೋಂಬು) ಹೇಳುತ್ತಾಳೆ ಗೋದೈ.
ಸಾಮಾನ್ಯವಾಗಿ ನಾವು ವ್ರತವಿರುವಾಗ ಹಾಲು, ತುಪ್ಪ ಉಣದೆ ಇರುವುದು ಸುಲಭ. ಆದರೆ ಹಾಲು ಮೊಸರು ಮಾರುವುದನ್ನೇ ವೃತ್ತಿಯಾಗಿಟ್ಟಿಕೊಂಡಿರುವ ಯಾದವರಿಗೆ ಅದು ಎಷ್ಟು ಕಠಿಣ ಎಂದು ಆಲೋಚಿಸಿ ನೋಡಿ.
ಆಹಾರ ಎಷ್ಟೇ ರುಚಿಯಾಗಿದ್ದರೂ, ಆಹಾರದ ಮೇಲೆ ಎಷ್ಟೇ ಒಲವಿದ್ದರೂ, ಆ ಆಹಾರವನ್ನು ತಿನ್ನಲು ಹೋಗಕೂಡದು ಎಂಬುದನ್ನೇ ‘ತುಪ್ಪ ಉಣ್ಣೆವು, ಹಾಲುಣ್ಣೆವು’ ಎಂದು ಒಂದು ಸಂಕಲ್ಪದಂತೆ ಗೋದೈ ಒತ್ತಿ ಹೇಳುತ್ತಾಳೆ.
ಅಷ್ಟುಮಾತ್ರವಲ್ಲ, “ನಾಲಿಗೆಯೇ ಸ್ನೇಹಿತ, ನಾಲಿಗೆಯೇ ವೈರಿ…!’ ಎಂದು ನಮ್ಮ ಹಿರಿಯರು ಹೇಳಿರುವುದನ್ನು ಕೇಳಿರುತ್ತೇವೆ.
ಅಂದರೆ, ಹೊಟ್ಟೆ ತುಂಬಿರುವಾಗ, ಜೀವಗಳು ಯಾವಾಗಲೂ ಮಂದವಾಗಿಯೇ ಇರುತ್ತವೆ; ಅವಕಾಶಗಳನ್ನು ತಪ್ಪಿ ಬಿಡುತ್ತವೆ. ಆದರೆ, ಉಪವಾಸ ಇರುವ ಜೀವಗಳು ಸದಾ ಎಚ್ಚರಿಕೆಯಿಂದ ಇರುತ್ತವೆ; ಹಸಿವಿನಿಂದ ಇರುತ್ತವೆ; ಬಯಸಿದ್ದನ್ನು ಪಡೆಯುತ್ತವೆ.
ಅದಕ್ಕೆ ನಾಲಿಗೆಯನ್ನು ಕಟ್ಟಿಹಾಕಿದರೆ ಮನಸ್ಸು ತನ್ನಷ್ಟಕ್ಕೆ ಎಚ್ಚರಿಕೆಯಿಂದ ಚಲಿಸುವುದಲ್ಲದೆ, ತಾನು ಬಯಸಿದ್ದನ್ನು ಪಡೆದುಕೊಳ್ಳುತ್ತದೆ.
ಆದರೆ, ಈ ನಾಲಿಗೆಯ ನಿಯಂತ್ರಣ ಎಂಬುದು ಆಹಾರಕ್ಕೆ ಮಾತ್ರವಲ್ಲ, ಮಾತನಾಡುವ ಮಾತುಗಳಿಗೂ ಅನ್ವಯಿಸುತ್ತದೆ.
‘ಕೆಟ್ಟ ಮಾತನಾಡುವುದಿಲ್ಲ’ (ತೀಕ್ಕುರಳೈ ಸೆಂಡ್ರೋದೋಮ್) ಎಂದು ಆಂಡಾಳ್, ‘ನಾಲಿಗೆಯಿಂದ ಸುಟ್ಟ ಗಾಯ’ (ನಾವಿನಾರ್ ಸುಟ್ಟ ಪುಣ್) ಎಂದು ತಿರುವಳ್ಳುವರ್ ಹೇಳುವುದು ಇದನ್ನೇ ಅಲ್ಲವೇ?! ಆದ್ದರಿಂದಲೇ ಮನೋದೃಢತೆಯಿಂದ, ಮನಸ್ಸಿನ ನಿಯಂತ್ರಣದಿಂದ, ಕಾಯಾ, ವಾಚಾ ವ್ರತವಿದ್ದು, ಮಾದವನ ಪೂಜಿಸಿ ಹಾಡಿ ಶೀಘ್ರದಲ್ಲೇ ನಾವು ಬಯಸಿದ್ದೆಲ್ಲವೂ ನೆರವೇರುತ್ತದೆ ಎಂಬ ನಂಬಿಕೆಯಿಂದ ‘ವ್ರತವಿದ್ದು, ಬೇಗನೆ ಆಲಯಕ್ಕೆ ಹೋಗೋಣ ಬನ್ನಿರೈ ಸಖಿಯರೇ’ ಎಂದು ಎರಡನೇಯ ದಿನ ಕರೆಯುತ್ತಾಳೆ ಗೋದೈ ಆಂಡಾಳ್.