ಇಂದಿನ ಸುಭಾಷಿತ, ಕಾತ್ಯಾಯನ ಸ್ಮೃತಿಯಿಂದ…
ಪಂಚಧಾ ಸಂಭೃತಃ ಕಾಯೋ ಯದಿ ಪಂಚತ್ವಮಾಗತಃ |
ಕರ್ಮಭಿಃ ಸ್ವಶರೀರೋತ್ಥೈಸ್ತತ್ರ ಕಾ ಪರಿವೇದನಾ ॥ ಕಾತ್ಮಾಯನಸ್ಮೃತಿ, 22-6 ||
ಅರ್ಥ: ಪಂಚಭೂತಗಳಿಂದ ನಿರ್ಮಿತವಾದ ಈ ದೇಹ ತನ್ನಲ್ಲುಂಟಾದ ಕರ್ಮಗಳಿಂದ ಪಂಚಭೂತಗಳಲ್ಲಿ ಬೆರೆತುಹೋಗುತ್ತದೆ. ಇದೇ
ಮರಣ. ಇದಕ್ಕಾಗಿ ಅಳುವುದರಲ್ಲಿ ಹುರುಳಿಲ್ಲ.
ತಾತ್ಪರ್ಯ: ಆತ್ಮವನ್ನು ಹೊರತಾಗಿಸಿ ಜಗತ್ತಿನ ಎಲ್ಲ ಪದಾರ್ಥಗಳನ್ನೂ ಐದು ಗುಂಪಾಗಿ ಪ್ರಾಚೀನರು ವಿಂಗಡಿಸಿದ್ದಾರೆ : ಭೂಮಿ, ಜಲ, ಅಗ್ನಿ, ವಾಯು, ಆಕಾಶ – ಎಂದು. ಇವೇ ಪಂಚಭೂತಗಳು. ಇವುಗಳಿಂದ ದೇಹದ ರಚನೆ. ಆಹಾರದಿಂದ ಬೆಳೆಯುವಾಗ ಈ ವಸ್ತುಗಳನ್ನು ದೇಹವು
ಉಚಿತ ರೀತಿಯಲ್ಲಿ ಸಂಗ್ರಹಿಸುತ್ತದೆ. ಪರಸ್ಪರ ಹೊಂದಾಣಿಕೆಯಿಂದಾದ ಪಂಚಭೂತಗಳ ರಾಶಿ ಈ ದೇಹ. ಯಾವುದು ಜೀರ್ಣವಾಗಿ ನಾಶವಾಗುತ್ತದೆಯೋ ಅದು ಶರೀರ. ಪಂಚಭೂತಗಳು ಹಂಚಿಹೋಗುವುದರಿಂದ, ಶರೀರ ಹೇಗೆ ಬೆಳೆಯುವುದೋ ಹಾಗೆಯೇ ನಶಿಸುವುದೂ ಇದರ ಸ್ವಭಾವ. ಹೀಗೆ ಬೆಳೆಯುವ ಮತ್ತು ನಶಿಸುವ ಕ್ರಿಯೆಗೆ ನಿಮಿತ್ತವೇನು? ನಮಗೆ ಗೊತ್ತಿಲ್ಲ.
ಯಾವ ಕರ್ಮ ದೇಹವನ್ನು ಬೆಳೆಸಿತೋ ಅದೇ ಕರ್ಮವು ಶರೀರವನ್ನು ಜೀರ್ಣಗೊಳಿಸಿತು. ಕರ್ಮ ಹುಟ್ಟುವುದು ದೇಹದಲ್ಲಿ. ಅದಕ್ಕೆ ಪ್ರೇರಕ ಜೀವ. ಜೀವನು ತಾನು ಕಟ್ಟಿಕೊಂಡ ಗೂಡನ್ನು ತನಗೆ ತಿಳಿಯದಂತೆ ತಾನೇ ಕಿತ್ತುಹಾಕುತ್ತಾನೆ. ಅದಕ್ಕಾಗಿ ಇನ್ನೊಬ್ಬರು ಏಕೆ ಶೋಕಿಸಬೇಕು – ಅನ್ನುವುದು ಈ ಸುಭಾಷಿತದ ತಾತ್ಪರ್ಯ