ಮಾರ್ಗಶಿರದಲಿ ಮಿಂದು ಆನಂದಿಸಲು । ಧನುರ್ ಉತ್ಸವ ~ 4

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ. ಇದು ನಾಲ್ಕನೇ ಕಂತು.

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ನಾಲ್ಕನೇಯ ದಿನ

ಬಿರುಮಳೆಗೆ ಒಡೆಯ ಒಮ್ಮೆಯೂ ನೀ ಕೈತೊರೆಯದಿರಯ್ಯ

ಜಲಧಿಯೊಳು ಹೊಕ್ಕು ಮೊಗೆದು ಗರ್ಜಿಸುತ ಏರಿ

ಪ್ರಳಯಕೂ ಮೊದಲವನ ರೂಪದೊಲು ಮೈ ನೀಲಿಗೊಂಡು

ವಿಸ್ತರದ ಚೆಲುವ ತೋಳುಳ್ಳ ಪದ್ಮನಾಭನ ಕೈಲಿ

ಚಕ್ರದೊಲು ಮಿಂಚೆ ಬಲಮುರಿಯಂತೆ ನಿಂತು ಗರ್ಜಿಸಿ

ಸತತ ಶಾರ್ಜ್ಞವು ಬಿಟ್ಟ ಬಾಣಗಳ ಮಳೆಯಂತೆ

ಬಾಳ ಲೋಕದೊಳು ಮಳೆಯ ಸುರಿಸಯ್ಯ

ನಾವುಂ ಮಾರ್ಗಶಿರದಲಿ ಮಿಂದು ಆನಂದಿಸಲು ನಮ್ಮೀ ಪವಿತ್ರ ವ್ರತವೂ ಸಾರ್ಥಕವು

-ಬಿಂದಿಗನವಲೆ ನಾರಾಯಣಸ್ವಾಮಿ  (ಕಾಂಬೋಧಿ ರಾಗ – ಆದಿ ತಾಳ)

“ಕಡಲಿನಂತಹ, ಗಂಭೀರವಾದ ಮಳೆಯ ಭಗವಂತನೇ…..

ನಿನ್ನಿಂದ ಏನನ್ನೂ ಮರೆಮಾಚಿಟ್ಟುಕೊಳ್ಳದೆ, ಕಡಲ ನೀರಿನಿಂದ ಬಾನನ್ನು ತಲುಪಿ, ಅಲ್ಲಿ ದೇವನ ದೇಹದಂತೆ  ಮೇಘವಾಗಿ ಮೈ ನೀಲಿಗೊಂಡು, ಅವನ ಕೈಯಲ್ಲಿರುವ ಚಕ್ರದಂತೆ ಮಿಂಚಿನಂತೆ ಜಳಪಿಸಿ, ಬಲಮುರಿ ಶಂಖದ ಗುಡಿಗಿನಂತೆ ಸಿಡಿದು, ದೇವದೇವನ  ಸಾರಂಗವೆಂಬ ಬಿಲ್ಲಿನಿಂದ ಹೊರಟ ಬಾಣದಂತೆ ಬಿಡದೆ ಸುರಿ ಮಳೆಯೇ!

ನಾವು ಮಾರ್ಗಶಿರದಲ್ಲಿ ಮಿಂದು, ಹರುಷದಿಂದ ದೇವನನ್ನು ಪೂಜಿಸುವ ಎಂದು ಮಳೆಯ ದೇವನಾದ ವರುಣ ಭಗವಂತನನ್ನು ಆಹ್ವಾನಿಸುತ್ತಾಳೆ ಗೋದೈ ಆಂಡಾಳ್…!

‘ಆಲಿಮಳೆಯ ಕೃಷ್ಣ….!’

ಮಳೆಯನ್ನು ತರುವ ವರುಣ ದೇವನನ್ನು  ಕೃಷ್ಣನ ಹೆಸರಿಡಿದು ಗೋದೈ ಯಾಕೆ ಕರೆಯುತ್ತಾಳೆ…?

ಗೋಕುಲದ ಹೆಣ್ಣುಗಳು ವಿದ್ಯೆಯ ಅರಿವಿಲ್ಲದವರು. ಲೋಕ ಜ್ಞಾನವಿಲ್ಲದವರು. ಅವರಿಗೆ ವರುಣ ಬೇರೆ ಕೃಷ್ಣ ಬೇರೆ ಎಂಬ ವ್ಯತ್ಯಾಸ ತಿಳಿಯದಿರುವುದರಿಂದ, ಮಳೆಯ ದೇವನನ್ನೂ ತಾವು ಚೆನ್ನಾಗಿ ಅರಿತಿರುವ ಕೃಷ್ಣನ ಹೆಸರಿಂದಲೇ ಕರೆದರು ಎಂಬ ಉತ್ತರ ತೋರುತ್ತದಲ್ಲವೇ..? ಆದರೆ ಈ ಪಾಶುರದಲ್ಲಿ ಬರುವ ಮುಂದಿನ ಸಾಲುಗಳನ್ನು ಓದಿ, ಅದರಲ್ಲಿ ಬರುವ ವೈಜ್ಞಾನಿಕ ಸತ್ಯಗಳನ್ನು ಅರಿಯುವಾಗ, ನಾವು ಅಂದುಕೊಂಡದ್ದು ಸರಿಯೇ ಎಂಬ ಸಂಶಯ ಉಂಟಾಗುತ್ತದೆ.

‘ಮಳೆ ಹೇಗೆ ಸುರಿಯುತ್ತದೆ..?’ ಎಂದು ಕೇಳಿದರೆ, ವಿಜ್ಞಾನಾದ ಪುಸ್ತಕದಲ್ಲಿ  ಓದಿದ್ದು ನಮಗೆ ನೆನಪಿಗೆ ಬರಬಹುದು.

ಕಡಲ ನೀರು, ಸೂರ್ಯನ ಶಾಕಕ್ಕೆ ಆವಿಯಾಗಿ, ಮೇಲಕ್ಕೆ ಹೋಗಿ ಮೋಡಗಳ ಗುಂಪಾಗಿ, ಜಡಿಮಳೆಯಾಗಿ ಸುರಿಯುತ್ತದೆ ಎಂದು ಪಾಠದ ಪುಸ್ತಕಗಳಲ್ಲಿ ನಾವು ಕಲಿತ ನೀರಿನ ಆವೃತ್ತಿಯನ್ನು ‘ಜಲಧಿಯೊಳು ಹೊಕ್ಕು ಮೊಗೆದು ಗರ್ಜಿಸುತ ಏರಿ…’ ಎಂದೂ, ‘ಸತತ ಶಾರ್ಜ್ಞವು ಬಿಟ್ಟ ಬಾಣಗಳ ಮಳೆಯಂತೆ …’ ಎಂದು ತನ್ನ ಪ್ರೇಮದ ಗೀತೆಗಳಲ್ಲಿ, ವಿಜ್ಞಾನವನ್ನೂ ಸರಳವಾಗಿ ಹೇಳುತ್ತಾಳೆ ಗೋದೈ…?

ಸಣ್ಣ ಗ್ರಾಮದಲ್ಲಿ ಹುಟ್ಟಿ ಬೆಳೆದ ಗೋದೈಗೆ ಹಾಗೆ ಏನು ವೈಜ್ಞಾನಿಕ ಅರಿವು ಇದ್ದಿರಬಹುದು…? ಇದು ಏನೋ ಕಾಕತಾಳೀಯವಾಗಿರಬಹುದೇ ಎಂದೂ ನಮಗೆ ತೋರಬಹುದು. ಆದರೆ ಈ ಹಾಡಿನಲ್ಲಿ ಮುಂದೆ ಮುಂದೆ ಬರುವ ವೈಜ್ಞಾನಿಕ ಸತ್ಯಗಳು ನಮ್ಮನ್ನು ಮತ್ತೆ ಆಶ್ಚರ್ಯಚಕಿತರನ್ನಾಗಿಸುತ್ತದೆ. ‘ಚಕ್ರದೊಳು ಮಿಂಚೆ ಬಲಮುರಿಯಂತೆ ನಿಂತು ಗರ್ಜಿಸಿ…’ ಎಂಬ ಗೋದೈಯ ಬಾಯಲ್ಲಿ ತಮಿಳು ಸಾಹಿತ್ಯದಲ್ಲಿ ವಿಜ್ಞಾನ ಎಷ್ಟು ಸೊಗಸಾಗಿ ಹೇಳಲ್ಪಟ್ಟಿದೆ ಎಂಬುದನ್ನು ನೋಡಿ. ಮೊದಲು ಮಿಂಚು, ನಂತರ ಗುಡುಗು ಎಂಬ ವೈಜ್ಞಾನಿಕ ಸತ್ಯವೂ ಇಲ್ಲಿ ಅಂದವಾಗಿದೆ.  ಶಾಲೆಯ ಪಾಠದಲ್ಲಿ ಮನಃಪಠಣಕ್ಕೆ ಮಾತ್ರ ಉಪಯೋಗವಾದ ತಮಿಳು ಹಾಡಲ್ಲಿ, ಆಳವಾದ ವಿಜ್ಞಾನವೂ ಇರುವುದನ್ನು ನೋಡುವಾಗ ಆಶ್ಚರ್ಯವಲ್ಲವೇ…?

ವಿಸ್ಮಯ ಅಲ್ಲಿಗೆ ಮುಗಿಯಿತೇ ಎಂದರೆ, ಇವೆಲ್ಲಕ್ಕೂ ಮಿಗಿಲಾಗಿ, ‘ಪ್ರಳಯಕ್ಕೂ ಮೊದಲವನ ರೂಪದೊಳು ಮೈ ನೀಲಿಗೊಂಡು..’ ಎಂಬ ಮುಂದಿನ ಸಾಲಿನಲ್ಲಿ ಕೃಷ್ಣನನ್ನು ಹಾಡುವಾಗ. ಗೋದೈಯ ಲೋಕಜ್ಞಾನದಲ್ಲಿ  ವಿಜ್ಞಾನ ಎಂಬುದು ಚಿನ್ನದ ಬಿಂದಿಗೆಗೆ ಬೊಟ್ಟಿಟ್ಟಂತೆ ಹೊಳೆಯುತ್ತದೆ.!

‘ಈ ಪ್ರಪಂಚದ ಕ್ಷೀರಪಥ ಮೊದಲು ಕಪ್ಪು ರಂಧ್ರದಿಂದಲೇ ಉಂಟಾಯಿತು. (Black Hole Theory) ಎಂದು ಐನ್ಸ್ಟಿನ್ ಮೊದಲುಗೊಂಡು ಪಾಶ್ಚಿಮಾತ್ಯ ವಿಜ್ಞಾನಿಗಳು ಈಗ ಹೇಳುವ ಸಿದ್ಧಾಂತಗಳು, ಅಂದೇ ಈ ಆಂಡಾಳಿಗೆ ಹೇಗೆ ತಿಳಿದಿತ್ತು?

ಪ್ರಳಯಕ್ಕೆ ಮೊದಲು ಕಪ್ಪು ಮಾತ್ರವೇ ಇತ್ತು ಎಂಬ ಖಗೋಳ ಶಾಸ್ತ್ರವನ್ನು ತನ್ನ ಹಾಡಿನಲ್ಲಿ ಹೇಳುವ ಜ್ಞಾನಿಯಾದ ಪೆರಿಯಾಳ್ವಾರ್ ಮಗಳಾದ ಗೋದೈಗೆ, ಮಳೆಯ ದೇವತೆ ವರುಣ ಎಂಬುದು ಮಾತ್ರ ತಿಳಿಯದೆ ಇರುತ್ತದೆಯೇ ಏನು? ಎಲ್ಲವನ್ನೂ ತಿಳಿದೂ ಸಹ, ಯಾಕೆ ವರುಣನನ್ನು ‘ಬಿರುಮಳೆಗೆ ಒಡೆಯ (ಕೃಷ್ಣ)’ ಎಂದು ಕರೆಯುತ್ತಾಳೆ ಅವಳು?

ಅದಕ್ಕೆ ಕೃಷ್ಣನ ಮೇಲೆ ಅತೀವ ಪ್ರೀತಿಯೇ ಕಾರಣ. ಆ ಪ್ರೇಮ ಅವಳು ನೋಡುವ ಸರ್ವಸ್ವದಲ್ಲೂ ಆ ಪರಂದಾಮನನ್ನೇ ನೋಡುವಂತೆ ಮಾಡಿತು.

ಮಳೆಯ ದೇವನಾದ ವರುಣನನ್ನು, ಕೃಷ್ಣನ ಹೆಸರು ಹೇಳಿ ಕರೆಯುವುದಕ್ಕಷ್ಟೇ ನಿಲ್ಲುವುದಿಲ್ಲ. ಗೋದೈಯ ಪ್ರೀತಿ, ಕಡಲಿನ ಮೇಲೆ ಹೋಗುವ ಮಳೆಯ ಮೋಡಗಳನ್ನು, ಕೃಷ್ಣನ ನೀಲಿ ಮೈ ಬಣ್ಣದಲ್ಲಿ ನೋಡುತ್ತಾಳೆ. ಮಳೆಗಾಲದ ಮಿಂಚಿನ ಬೆಳಕನ್ನು ಪದ್ಮನಾಭನ ಕೈಯಲ್ಲಿರುವ ಚಕ್ರದಂತೆ ಹೊಳೆಯುವುದಾಗಿ ಕಲ್ಪನೆ ಮಾಡಿಕೊಳ್ಳುತ್ತಾಳೆ. ಮಳೆಯೊಂದಿಗೆ ಗುಡುಗುವ ಗುಡುಗನ್ನು ಶ್ರೀನಿವಾಸನ ಬಲಮುರಿ ಶಂಖದ ನಾಧವಾಗಿ ಭಾವಿಸುತ್ತಾಳೆ. ಬಿಡುವಿಲ್ಲದೆ ಸುರಿಯುವ ಜಡಿಮಳೆಯನ್ನು, ಶ್ರೀರಂಗನ ಕೈಯಲ್ಲಿರುವ ಸಾರಂಗ ಎಂಬ ಬಿಲ್ಲಿನಿಂದ ಹೊರಡುವ ಬಾಣದಂತೆ ಛಟಛಟ ಸುರಿದು  ಕೆಳಗಿಳಿಯುತ್ತದೆ ಎಂದು ರೂಪಿಸುತ್ತಾಳೆ.

ಹೀಗೆ ಬಾಣಗಳ ಮಳೆಯಾಗಿ ಸುರಿಯಲು, ಕೊಳಗಳೆಲ್ಲವೂ ತುಂಬುವುದಂತೆ. ಅದರಲ್ಲಿ ಮಿಂದು ಗೋವಿಂದನ ದರ್ಶನಕ್ಕೆ ಹೋಗೋಣ ಬನ್ನಿ ಎಂದು ಮಳೆಯನ್ನು ಕೃಷ್ಣನಿಗಾಗಿ ಬೇಡಿಕೊಳ್ಳುತ್ತಾಳೆ.

ಕೃಷ್ಣನನ್ನೇ ನೆನೆದು, ಕೃಷ್ಣನನ್ನೇ ಜಪಿಸಿ, ಕೃಷ್ಣನಿಗಾಗಿ ಕರಗಿ, ಕೃಷ್ಣನಾಗಿ ಜೀವಿಸುವುದೇ ಗೋಕುಲದ ಸ್ತ್ರೀಯರ ಜೀವನ ಪದ್ಧತಿ.

ಒಮ್ಮೆ ಕೃಷ್ಣನ ನೆನಪಿನಲ್ಲಿ ಮೊಸರು ಕಡೆಯುತ್ತಿದ್ದ ಒಬ್ಬ ಯಾದವ ಹೆಣ್ಣನ್ನು, ‘ಕಡೆದ ಮೊಸರನ್ನೂ, ತುಪ್ಪವನ್ನೂ ಮಾರಾಟ ಮಾಡಿ  ಬಾ’ ಎಂದು ಕಳುಹಿಸಿದರಂತೆ ಯಾದವ ಕುಲದ ನಾಯಕ.

ಆ ಹೆಣ್ಣೋ, ‘ಗೋವಿಂದನನ್ನು ಕೊಂಡುಕೊಳ್ಳಿ ಗೋವಿಂದನನ್ನು….. ಕೃಷ್ಣನ್ನು ಕೊಂಡುಕೊಳ್ಳಿ ಕೃಷ್ಣನನ್ನು…’ ಎಂದು ಆ ಕೃಷ್ಣನ ನೆನಪಿನಲ್ಲೇ, ಬೀದಿಯಲ್ಲಿ ಕೂಗುತ್ತಾ ಮೊಸರು, ತುಪ್ಪವನ್ನು ಮಾರಾಟ ಮಾಡಿದಳಂತೆ.

ಈ ಗೋಕುಲದ ಹೆಣ್ಣುಗಳಿಗೆ ಕೃಷ್ಣನ ಮೇಲಿನ ಪ್ರೀತಿ, ಕೆಲವು ಸಮಯ ಆ ಭಗವಂತನ ಹೃದಯದಲ್ಲಿ ಸದಾ ವಾಸವಿರುವ ದೇವಿಯನ್ನೂ ಸಹ ಅಸೂಯೆ ಪಡುವಂತೆ ಮಾಡುತ್ತದಂತೆ.

ಇದನ್ನು  ರಾಧಾ ರುಕ್ಮಿಣಿ ಕಥೆ ನಮಗೆ ತಿಳಿಸಿ ಹೇಳುತ್ತದೆ.

ಕೃಷ್ಣನ ಭಕ್ತೆಯಾದ ರಾಧೆಗೆ ಕೃಷ್ಣನ ಮೇಲೆ ಅಪರಿಮಿತವಾದ ಪ್ರೀತಿ ಉಂಟು. ರಾಧೆಯ ಕಲ್ಮಶವಿಲ್ಲದ ಪ್ರೇಮಕ್ಕೆ ಆಕರ್ಷಿತನಾದ ಕೃಷ್ಣ ರಾಧೆಗೆ ತನ್ನ ಹೃದಯದಲ್ಲಿ ಒಂದು ಪ್ರತ್ಯೇಕ ಸ್ಥಾನವನ್ನು ನೀಡುತ್ತಾನೆ.

ಕೃಷ್ಣನ ಮೇಲಿನ ತನ್ನ ಭಕ್ತಿಗೆ ಸಾಟಿಯಾಗಿ ಈ ಜಗತ್ತಿನಲ್ಲಿ ಯಾರೂ ಇಲ್ಲ ಎಂದು ಗರ್ವತಾಳಿದ್ದ ರುಕ್ಮಿಣಿಗೆ ರಾಧೆಯ ಕೃಷ್ಣ ಭಕ್ತಿಯೂ, ಕೃಷ್ಣ ಅವಳ ಭಕ್ತಿಗೆ ನೀಡಿದ ಗೌರವದ ಮೇಲೆ ಸ್ವಲ್ಪ ಅಸೂಯೆ ಉಂಟಾದುದ್ದಲ್ಲದೆ  ಒಂದು ಹಂತದಲ್ಲಿ ರುಕ್ಮಿಣಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಭಾವನೆಯನ್ನೂ ಉಂಟುಮಾಡಿತು.

ಒಂದು ದಿನ, ಯಾತಕ್ಕಾಗಿಯೋ ರುಕ್ಮಿಣಿಯ ಮನೆಗೆ ಬರುತ್ತಾಳೆ ರಾಧೆ. ಮೊದಲೇ ಅವಳ ಮೇಲೆ ಕೋಪ  ಅಸೂಯೆಯಿಂದ ಇದ್ದ ರುಕ್ಮಿಣಿ ಅದೇ ತಕ್ಕ ಸಮಯ ಎಂದು ಅವಳ ಬಳಿ ತನ್ನ ಕೋಪವನ್ನು ತೋರಿಸಲು ಮುಂದಾಗುತ್ತಾಳೆ. ಆಗತಾನೇ ಕಾಯಿಸಿ ಇಳಿಸಿದ  ಹಾಲನ್ನು ಬೇಕಂತಲೇ ರಾಧೆಗೆ ಕುಡಿಯಲು ಕೊಡುತ್ತಾಳೆ.

ರುಕ್ಮಿಣಿಯ ಕೋಪವನ್ನು ಅರಿಯದ  ಮುಗ್ಧ ರಾಧೆಯೋ ರುಕ್ಮಿಣಿ ಕೊಟ್ಟ ಹಾಲಿನ ಬಿಸಿಯನ್ನು ತಡೆದುಕೊಳ್ಳಲಾಗದಿದ್ದರೂ, ಅದನ್ನು ಹೇಳಿದರೆ ಅವಳು ಮನ ನೊಂದುಕೊಳ್ಳಬಹುದೆಂದು ಏನೂ ಹೇಳದೆ, ತನ್ನ ನೋವನ್ನೂ ತೋರಿಸಿಕೊಳ್ಳದೆ ಹಾಲನ್ನು  ಕುಡಿದು ಹೋಗುತ್ತಾಳೆ. ರುಕ್ಮಿಣಿ ಸಹ ಏನೂ ತಿಳಿಯದವಳಂತೆ ಇದ್ದುಬಿಡುತ್ತಾಳೆ.

ರಾತ್ರಿಯಾಗುತ್ತದೆ.

ರಾತ್ರಿ ಬೋಜನದ ನಂತರ ಕೃಷ್ಣ ಮಂಚದಲ್ಲಿ ಮಲಗಿಕೊಳ್ಳಲು, ನಿತ್ಯ ರೂಡಿಯಂತೆ ರುಕ್ಮಿಣಿ ಕೃಷ್ಣನ ಪಾದಗಳನ್ನು ಅದುಮಲು ಕುಳಿತುಕೊಳ್ಳುತ್ತಾಳೆ. ಆಗ ಕೃಷ್ಣನ ಪಾದಗಳಲ್ಲಿ ಬೊಕ್ಕೆಗಳು ಎದ್ದಿರುವುದನ್ನು ಕಂಡು ‘ಅಯ್ಯೋ, ದೇವರೇ ಇದು ಹೇಗಾಯಿತು..? ಎಂದು ತವಕದೊಂದಿಗೆ ಕೇಳಿದಾಗ, ಕೃಷ್ಣ ಮುಗುಳ್ನಗುತ್ತಾ,

‘ರುಕ್ಮಿಣಿ…. ನನ್ನ ಪಾದಗಳನ್ನು ರಾಧೆ ಅವಳ ಹೃದಯದಲ್ಲಿಟ್ಟು ಪ್ರೀತಿಸುತ್ತಿದ್ದಾಳೆ. ಇಂದು ನೀನು ಕುಡಿಯಲು ಕೊಟ್ಟ ಬಿಸಿ ಹಾಲನ್ನು ನಿನ್ನ ಮನ ನೋಯಕೂಡದೆಂದು ಅವಳು  ಕುಡಿದುಬಿಟ್ಟಳು. ಆ ಬಿಸಿ ಅವಳನ್ನು ಏನೂ ಮಾಡಲಿಲ್ಲ. ಆದರೆ, ಅವಳ ಹೃದಯದಲ್ಲಿರುವ ನನ್ನ ಪಾದಗಳ ಮೇಲೆ ಗುಳ್ಳೆಗೆಳೆದ್ದಿವೆ…’ ಎಂದು ಕೃಷ್ಣ ಉತ್ತರಿಸುತ್ತಾನೆ.

ರಾಧೆಯ ನಿಜವಾದ ಭಕ್ತಿಯನ್ನು ಚೆನ್ನಾಗಿ ಅರಿತಿದ್ದ ರುಕ್ಮಿಣಿ ತನ್ನ ತಪ್ಪಿಗೆ ಕೃಷ್ಣನ ಬಳಿ ನೊಂದುಕೊಂಡದ್ದೂ ಅಲ್ಲದೆ ರಾಧೇಯ ಬಳಿ ಕ್ಷಮೆಯನ್ನೂ ಯಾಚಿಸುತ್ತಾಳೆ.

ಅಷ್ಟೊಂದು ಪ್ರೀತಿಯನ್ನೂ, ವಾತ್ಸಲ್ಯವನ್ನೂ ಕೃಷ್ಣನ ಬಳಿ ತೋರಿಸುವುದರ ಜತೆಯಲ್ಲೇ, ಕೃಷ್ಣ ತನ್ನನ್ನು ಬಯಸಬೇಕೆಂದರೆ ತಾನೂ ಸಹ ಗೋಕುಲದ ಹೆಣ್ಣಾಗಿ ಬದಲಾದರೆ ಮಾತ್ರ ಸಾಧ್ಯ ಎಂದು ಅಂದುಕೊಂಡ ಗೋದೈ, ತಾನು ಪೆರಿಯಾಳ್ವಾರ್ ಮಗಳೆಂಬುದನ್ನೂ ಮರೆತು ಯಾದವ ಹೆಣ್ಣಾಗಿಯೇ ತನ್ನನ್ನು ಬದಲಾಯಿಸಿಕೊಳ್ಳುತ್ತಾಳೆ.  

ಮತ್ತೆ ನಿಜವಾದ ಪ್ರೀತಿಯನ್ನೂ, ಪ್ರೇಮವನ್ನೂ, ಭಕ್ತಿಯನ್ನೂ ಕೃಷ್ಣನ ಮೇಲೆ ತೋರಿಸಿದರೆ, ಅವನ ಹೃದಯದಲ್ಲಿ ನೀಗದ ಸ್ಥಾನ ದೊರಕುತ್ತದೆ ಎಂಬುದನ್ನು ಚೆನ್ನಾಗಿ ಅರಿತಿದ್ದ ಗೋದೈ, ತಾನು ನೋಡುವ ಎಲ್ಲದರಲ್ಲೂ ಕೃಷ್ಣನನ್ನೇ ಕಾಣುತ್ತಾಳೆ.

ಕಣ್ಣಿಗೆ ಕಾಣುವುದೆಲ್ಲವೂ ಅವಳಿಗೆ ಕೃಷ್ಣನಾಗಿಯೇ ಕಂಡರೂ, ಅವಳ ಪ್ರೀತಿ ಮಳೆಯ ಮೇಲೂ, ಮಣ್ಣಿನ ಮೇಲೂ, ತನ್ನ ಜನಗಳ ಮೇಲೂ ಸಹ ತೋರಿಸುತ್ತಾಳೆ ಎಂಬುದನ್ನು,

‘ಬಾಳಲೋಕದೊಳು ಮಳೆಯ ಸುರಿಸಯ್ಯ’ ಎಂಬ ಸಾಲು ಇದನ್ನು ಅರಿಯುವಂತೆ ಮಾಡುತ್ತದೆ.

ಭಗವಂತನನ್ನು ಹಾಡಿ ಹೊಗಳಲು ಮಾರ್ಗಶಿರದಲ್ಲಿ ಮೀಯುವುದು ಮಾತ್ರವಲ್ಲ, ಲೋಕದಲ್ಲಿ ಎಲ್ಲರೂ ಸಂತೋಷದಿಂದ ಬದುಕಲೂ ಸಹ ಮಳೆ ಬೇಕು ಎಂದು ಸಾರ್ವಜನಿಕ ಒಳಿತಿಗಾಗಿ ವರುಣ ದೇವನನ್ನು ಬರಮಾಡಿಕೊಂಡು, ಕೃಷ್ಣನನ್ನೂ ಪ್ರಾರ್ಥಿಸಲು ಬನ್ನಿರಿ ಎಂದು ನಾಲ್ಕನೇಯ ದಿನದಂದು ತನ್ನ ಗೆಳತಿಯರನ್ನು ಕರೆಯುತ್ತಾಳೆ ಗೋದೈ ಆಂಡಾಳ್…!!

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.