ನನಗೆ ಗೊತ್ತಿಲ್ಲ : ಓಶೋ ಹೇಳಿದ ಸಾಕ್ರೆಟಿಸನ ದೃಷ್ಟಾಂತ

ಕೊನೆ ಪಕ್ಷ ಈ ಜಗತ್ತಿಗೆ ಗೊತ್ತಾಗಬೇಕು, ಸಾಕ್ರೆಟಿಸ್ ಸಾಯುವ ಮುನ್ನ ಪ್ರಾಮಾಣಿಕತೆಯಿಂದ ಮಾತನಾಡಿದ ಎನ್ನುವುದು. ~ ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ

ತನ್ನ ಬದುಕಿನ ಕೊನೆಯ ಕ್ಷಣಗಳಲ್ಲಿ ಸಾಕ್ರೆಟಿಸ್ ಖಡಾ ಖಂಡಿತವಾಗಿ ಹೇಳಿದ. ತನ್ನ ಬದುಕಿನುದ್ದಕ್ಕೂ ಸತ್ಯದ ಬಗ್ಗೆ ಪಾಠ ಮಾಡುತ್ತಲೇ ಬಂದ ಸಾಕ್ರೆಟಿಸ್ ತನ್ನ ಕೊನೆಗಾಲದಲ್ಲಿ ತುಂಬ ವಿನೀತನಾದ, ಅವನಿಗೆ ಇನ್ನುಮುಂದೆ ಯಾವುದನ್ನೂ ಖಚಿತವಾಗಿ ಹೇಳುವುದು ಸಾಧ್ಯವಾಗದೇ ಹೋಯಿತು. ಆಗ ಸಾಕ್ರೆಟಿಸ್ ಯಾವ ನಾಚಿಕೆಯಿಲ್ಲದೇ ಒಪ್ಪಿಕೊಳ್ಳತೊಡಗಿದ, “ ನನಗೆ ಗೊತ್ತಿಲ್ಲ “.

ತನ್ನ ಬದುಕಿನ ಕೊನೆಗಾಲದಲ್ಲಿ ಅವನಿಗೆ ಸತ್ಯದ ಮಹಾನತೆ, ನಿಗೂಢತೆ, ಪವಾಡದ ಸದೃಶ್ಯತೆ, ಹೇಳಲು ಅಸಾಧ್ಯವಾದ ಸ್ವಭಾವ ಮನವರಿಕೆಯಾಗತೊಡಗಿತು ಮತ್ತು ಜೀವನವಿಡೀ ತಾನು ಶಬ್ದಗಳ ಜೊತೆ ಆಟ ಆಡುತ್ತ ಸಮಯ ವ್ಯರ್ಥ ಮಾಡಿದ್ದು ಸ್ಪಷ್ಟವಾಗತೊಡಗಿತು. ಇನ್ನು ಮುಂದೆ ಅವನಿಗದು ಸಾಧ್ಯವಿಲ್ಲ. ಇನ್ನೇನು ಕೆಲವೇ ಕೆಲವು ನಿಮಿಷಗಳಲ್ಲಿ ಅವನು ಸಾಯಲಿದ್ದಾನೆ. ಅವನಿಗಾಗಿಯೆಂದೇ ವಿಷ ತಯಾರಾಗುತ್ತಿದೆ. ಕೊನೆ ಪಕ್ಷ ಈ ಜಗತ್ತಿಗೆ ಗೊತ್ತಾಗಬೇಕು, ಸಾಕ್ರೆಟಿಸ್ ಸಾಯುವ ಮುನ್ನ ಪ್ರಾಮಾಣಿಕತೆಯಿಂದ ಮಾತನಾಡಿದ ಎನ್ನುವುದು. ಹಾಗಾಗಿ ಸಾಕ್ರೆಟಿಸ್ ಮಾತನಾಡಿದ;

“ ನನಗೆ ಗೊತ್ತಿಲ್ಲ, ಯಾವುದರ ಬಗ್ಗೆಯೂ ಏನೂ ಗೊತ್ತಿಲ್ಲ. ನಾನು ಮಗುವಿನಷ್ಟು ಮುಗ್ಧ, ಅಜ್ಞಾನಿ”

ಇದು ತಿಳುವಳಿಕೆಯ ಶಿಖರಪ್ರಾಯವಾದ ಸ್ಥಿತಿ. ಯಾವಾಗ ನಿಮಗೆ ಏನೂ ಗೊತ್ತಿಲ್ಲವೋ ಆಗ ನಿಮ್ಮ ಮೈಂಡ್ ಪೂರ್ತಿ ಖಾಲಿ. ನಿಮ್ಮ ಮೈಂಡ್ ತುಂಬಿಕೊಂಡಿರುವಾಗ, ಆ ಜ್ಞಾನವೇ ನಿಮಗೆ ವಿಶ್ವ ಚೇತನವಾಗಲು, ಅನನ್ಯವಾಗಲು, ಸನಾತನ ಸತ್ಯವನ್ನು ತಲುಪಲು, ನಿಮ್ಮ ಬುದ್ಧ ಪ್ರಕೃತಿಯನ್ನು ನೀವು ಗುರುತಿಸಿಕೊಳ್ಳಲು ದೊಡ್ಡ ಅಡ್ಡಗಾಲು.

Leave a Reply