ಹಾಲ್ಗಡಲೊಳಗೆ ಹಾವಮೇಲ್ ಮಲಗಿ… । ಧನುರ್ ಉತ್ಸವ ~ 6

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ. ಇದು ಆರನೇ ಕಂತು.

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಹಕ್ಕಿಗಳು ಕೂಗುತಿವೆ ನೋಡು ಪಕ್ಷಿಯೊಡೆಯನ ಸ್ವಾಮಿ ಸನ್ನಿಧಿಯಲ್ಲಿ

ಬೆಳ್ಳಗಿಹ ಅಂದ ಶಂಖದ ಮಹಾಧ್ವನಿಯು ಕೇಳಲಿಲ್ಲವೇ

ಬಾಲೆಯೇ ಏಳಮ್ಮಾ ರಕ್ಕಸಿಯ ಮೊಲೆಯ ವಿಷವನು ಕುಡಿದು

ಕಳ್ಳ ಶಕಟನ ಮೈಕಟ್ಟು ಅಳಿಯುವ ತೆರದಿ ಕಾಲಿನಿಂ ಒದೆದು

ಹಾಲ್ಗಡಲೊಳಗೆ ಹಾವಮೇಲ್ ಮಲಗಿ ಕಣ್ಣು ಅರೆಮುಚ್ಚಿರ್ಪ ಕಾರಣನ

ಮನದೊಳಗೆ ಧ್ಯಾನಿಸುತ ಮುನಿಗಳುಂ ಯೋಗಿಗಳುಂ

ಮೆಲ್ಲನೆದ್ದು ಹರಿ ಎಂಬ ಮಹಾಘೋಷವದು

ಒಳಹೊಕ್ಕು ತಂಪಾಗಿ ಮಾಡೆ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂದಿಗನವಲೆ  ನಾರಾಯಣಸ್ವಾಮಿ (ಭೂಪಾಳ ರಾಗ – ಆದಿ ತಾಳ)

ಬೆಳಗಾಯಿತು!

ಹಕ್ಕಿಗಳು ಚಿಲಿಪಿಲಿಗುಟ್ಟ ತೊಡಗಿವೆ. ಪಕ್ಷಿಗಳಿಗೆಲ್ಲ ರಾಜನಾದ ಗರುಡನ ಅರಸನಾದ ನಮ್ಮ ಭಗವಂತನ ಗುಡಿಯಲ್ಲಿ ಮೊಳಗುವ ಶ್ವೇತ ಶಂಖದ ಧ್ವನಿ ನಿನಗೆ ಕೇಳಿಸಲಿಲ್ಲವೇ…?

ಹೆಣ್ಣೇ ಎದ್ದೇಳು…! ಪೂತನಿಯ ಸ್ತನದಿಂದ ಸ್ರವಿಸಿದ ನಂಜು ಕುಡಿದವನನ್ನು, ಬಂಡಿಯ ರೂಪಾತಾಳಿ ಶಕಟಾಸುರನ ತನ್ನ ಕಾಲಿಂದ ಕೊಂದವನನ್ನು, ಕ್ಷೀರಸಾಗರದಲ್ಲಿ ಶಯನಿಸಿರುವ ಸಮಸ್ತ ಲೋಕದ ಮೂಲ ಕಾರಣನಾದ ನಾರಾಯಣನನ್ನು, ಮುನಿವರ್ಯರೂ ಯೋಗಿಗಳೂ ತಮ್ಮ ಮನದಲಿರಿಸಿ, ‘ಹರಿ’ ಎಂದು ನಮಸ್ಕರಿ ಹೇಳುವ ಧ್ವನಿ ಜಗವನ್ನೆಲ್ಲ ತಂಪಾಗಿಸುತ್ತಿದೆಯಲ್ಲ….!

ನೀನೂ ಎದ್ದೇಳಯ್ಯಾ…!

ಎಂದು ನಿದ್ರೆಯಿಂದ ಏಳದ ಯಾದವ ಕುಲದ ಹೆಣ್ಣುಗಳನ್ನು ಎಚ್ಚರಗೊಳಿಸುತ್ತಾಳೆ ಗೋದೈ ಆಂಡಾಳ್…!

“ಮಗುವೇ ಎದ್ದೇಳು…”

ಸಣ್ಣ ಧ್ವನಿ ಕೇಳಿಸಿದರೂ ತಕ್ಷಣ ಎಚ್ಚರಗೊಳ್ಳುವ ಸ್ವಭಾವ ಉಳ್ಳವರು ಸ್ತ್ರೀಯರು. ಆ ಗುಣಕ್ಕೆ ವಿರೋಧವಾಗಿ, ದಣಿದು ನಿದ್ರಿಸುತ್ತಿರುವ ಯಾದವ ಕುಲದ ಸ್ತ್ರೀಯರನ್ನು, ಗೋದೈ ನಿದ್ರೆಯಿಂದೆಬ್ಬಿಸುವ ಹಾಡುಗಳಲ್ಲಿ, ಇದು ಮೊದಲನೇಯ ಹಾಡಾಗುತ್ತದೆ.

ಕೃಷ್ಣನಿಗೆ ವಿಧೇಯವಾಗಿದ್ದಾರೆ, ಅವನ ಪ್ರೀತಿಯನ್ನೂ ಪ್ರೇಮವನ್ನೂ ಅವನು ಬಾಚಿ ಕೊಡುತ್ತಾನೆ ಎಂಬುದರಿಂದ, ಅವನನ್ನು ನೋಡಲು ಬೆಳಗಿನ ಜಾವದಲ್ಲೇ ಹೊರಡ ಬೇಕಾಗಿರುವುದರಿಂದ, ದಣಿದು ನಿದ್ರಿಸುವ ಯಾದವ ಕುಲದ ಸ್ತ್ರೀಯರನ್ನು ‘ಮಗುವೇ ಎದ್ದೇಳು’ ಎಂದು ನಿದ್ರೆಯಿಂದೆಬ್ಬಿಸಿ, ಕೃಷ್ಣ ವಾಸವಿರುವ ಗುಡಿಗೆ ಹೋಗಿ ಅವನನ್ನು ನಮಸ್ಕರಿಸಲು ಕರೆಯುತ್ತಾಳೆ ಗೋದೈ.

ಯಾದವ ಕುಲದ  ಅವನ ಭಕ್ತೆಯೇ ಹೀಗೆ ನಿದ್ರಿಸುವಾಗ, ಭಗವಂತ ಮಾತ್ರ ನಿದ್ರೆ ಮಾಡುವುದರಲ್ಲಿ ಸಾಮಾನ್ಯನೇನು ? ಅವನ ಹೆಮ್ಮೆಯ ರೂಪವೇ ಶಯನಾವಸ್ಥೆಯ ರೂಪವಲ್ಲವೇ. ಅವನನ್ನು ನೇರವಾಗಿ ಬೇಟಿಯಾದ ನೆಂಟರಿಗೂ, ಅವನ ಜತೆ ಬದುಕಿದ ಸ್ನೇಹಿತರಿಗೂ ಏನನ್ನೂ ಮಾಡದೆ ನಿದ್ರಿಸಿದ ಕಥೆಗಳನ್ನು ನಾವು ಓದಿದ್ದೇವಲ್ಲವೇ? ಅಂತಹ ಕೃಷ್ಣನನ್ನು ದೇವಸ್ಥಾನಕ್ಕೆ ಹೋಗಿ ಪೂಜಿಸಿದರೆ ಮಾತ್ರ ತಕ್ಷಣ ಕೇಳಿದ ವರವನ್ನು ಕೊಟ್ಟುಬಿಡುತ್ತಾನೆಯೇ ಏನು?

ಸರಿ, ಯಾವಾಗ ಕೃಷ್ಣ ಅಂತಹ ನಿದ್ರೆಯನ್ನು ಮಾಡಿದ? ಅದರನಂತರ, ಅವನು ಏನು ಮಾಡಿದ ಎಂಬುದನ್ನೂ ಸ್ವಲ್ಪ ನೋಡೋಣ.

ಕುರುಕ್ಷೇತ್ರ ಯುದ್ಧ ನಡೆಯುವುದು ಖಚಿತ ಎಂದಾದಾಗ ಯುದ್ಧಕ್ಕೆ ಮೊದಲು, ಕೌರವರ ಪರವಾಗಿ ದುರ್ಯೋಧನನೂ, ಪಾಂಡವರ ತರಪಿನಿಂದ ಅರ್ಜುನನೂ ಕೃಷ್ಣನ ನೆರವು ಬೇಡಿ ಒಂದೇ ಸಮಯಕ್ಕೆ ಕೃಷ್ಣನ ಅರಮನೆಗೆ ಹೋರಡುತ್ತಾರೆ.

ಆದರೆ, ಕೃಷ್ಣ ಯಾರಿಗೆ ಮೊದಲು ಸಹಾಯ ಮಾಡುವುದಾಗಿ ವಚನ ನೀಡುತ್ತಾನೋ, ಅವರು ಯುದ್ಧದಲ್ಲಿ ಜಯಶೀಲರಾಗುತ್ತಾರೆ ಎಂಬುದನ್ನು, ತನ್ನ ಬಳಿ ನೆರವು ಬೇಡಿ ಬರುವ ಇಬ್ಬರಲ್ಲಿ ದುರ್ಯೋಧನ ಮೊದಲು ತಾನೀರುವ ಸ್ಥಳವನ್ನು ಬಂದು ತಲುಪುತ್ತಾನೆ ಎಂಬುದನ್ನು ಅರಿತು ಆ ಹಾಡುಹಗಲಲ್ಲಿ ಬೇಕೆಂತಲೇ, ದಣಿವಾಗಿದೆ ಎಂದು ಹೇಳಿ, ಮಂಟಪದ ಕೋಣೆಯಲ್ಲಿದ್ದ ನೀಳವಾದ ಆಸನದಲ್ಲಿ ಅರ್ಜುನ ಬರುವವರೆಗೆ ಕೃಷ್ಣ ನಿದ್ರೆ ಮಾಡುವಂತೆ ನಟಿಸುತ್ತಾನೆ.

ಕೋಣೆಯೊಳಗೆ ಮೊದಲು ಬಂದ ಕೌರವರ ನಾಯಕ ದುರ್ಯೋಧನನಿಗೆ ಕೃಷ್ಣನ ಕಾಲ ಬಳಿ ಕುಳಿತುಕೊಳ್ಳಲು  ಗೌರವ ತಡೆದಿದ್ದರಿಂದ, ಅವನು ತಲೆಯ ಬಳಿ ಬಂದು ಕುಳಿತುಕೊಳ್ಳುತ್ತಾನೆ. ದುರ್ಯೋಧನನ ಹಿಂದೆಯೇ ಬಂದ ಅರ್ಜುನನೋ, ಭಗವಂತನ ಬಳಿ ಸಹಾಯ ಬೇಡಿ ಬಂದವರು ಪಾದದ ಬಳಿ ಕುಳಿತುಕೊಳ್ಳುವುದೇ ಪದ್ಧತಿ ಎಂದು  ಕುಳಿತು, ಕೃಷ್ಣ ಕಣ್ಣು ತೆರೆಯುವುದಕ್ಕಾಗಿ ಕಾಯುತ್ತಿರುತ್ತಾನೆ.

ಎಲ್ಲ ತಿಳಿದೂ ನಿದ್ರೆಮಾಡುವಂತೆ ನಟಿಸುತ್ತಿರುವ ಕೃಷ್ಣ ಸ್ವಲ್ಪ ಸಮಯ ಕಳೆದು ಕಣ್ಣುತೆರೆದಕೂಡಲೆ, ಕಾಲ ಬಳಿ ಕುಳಿತಿದ್ದ ಅರ್ಜುನನನ್ನು ಮೊದಲು ನೋಡಿ ಮುಗುಳ್ನಗುತ್ತಾ, “ಬಾ ಅರ್ಜುನ, ಬಂದು ಬಹಳ ಸಮಯವಾಯಿತೇ?’ ಎಂದು ಕೇಳಲು, ತಲೆಯ ಬಳಿ ಕುಳಿತಿದ್ದ ದುರ್ಯೋಧನ. “ಇಲ್ಲಿಗೆ ಮೊದಲು ಬಂದವನು ನಾನು ಕೃಷ್ಣ ತನ್ನ ಮಾತನ್ನು ಕೇಳಿದ ಮೇಲೆಯೇ ಅರ್ಜುನ ಹೇಳುವುದನ್ನು ಕೇಳಬೇಕು” ಎನ್ನುತ್ತಾನೆ. ಕೃಷ್ಣನ ಬಳಿ ಎಲ್ಲಿ ಅರ್ಜುನ ಸೈನ್ಯವನ್ನು ಕೇಳಿ ಪಡೆದುಕೊಳ್ಳುತ್ತಾನೋ  ಎಂಬ ಭಯ ದುರ್ಯೋಧನನಿಗೆ ಇರುತ್ತದೆ.  

“ನಿದ್ರೆ ಮಾಡುತ್ತಿರುವಾಗ ಬಂದದ್ದರಿಂದ ತಿಳಿಯಲಿಲ್ಲ. ಬಂದ ಕಾರಣವೇನು ಎಂದು ಕೇಳುತ್ತಾನೆ ಕೃಷ್ಣ. ಕೃಷ್ಣ ಕೇಳಿದ ಕೂಡಲೇ ಇಬ್ಬರೂ ವಿಷಯವನ್ನು ಹೇಳಲು, ಕೃಷ್ಣ ಈಗ ಉತ್ತರ ಹೇಳುತ್ತಾನೆ.

“ಆಯುಧವನ್ನು ಮುಟ್ಟವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೇನೆ. ಆದರಿಂದ ನಾನು ಒಂದು ಕದೆಯೂ,  ನನ್ನ ನಾರಾಯಣಿ ಸೈನ್ಯ ಮತ್ತೊಂದು ಕಡೆಯೂ ಈ ಯುದ್ಧದಲ್ಲಿ ಇರಲು ಸಾಧ್ಯ. ಕಣ್ಣು ತೆರೆದಾಗ ನಾನು ಮೊದಲು ನೋಡಿದ ಅರ್ಜುನನನ್ನೇ ಕೇಳುತ್ತೇನೆ… ಅರ್ಜುನ ನಿನಗೆ ನಾನು ಬೇಕೆ ಅಥವಾ ನನ್ನ ಸೈನ್ಯ ಬೇಕೆ?  ಕೇಳು!” ಎನ್ನುತ್ತಾನೆ.

ಅರ್ಜುನ, ನನಗೆ ಯಾವ ಸೇನೆಯೂ ಬೇಕಾಗಿಲ್ಲ ಕೃಷ್ಣ. ನೀನು ಮಾತ್ರ ನನ್ನ ಪಕ್ಷ ನಿಂತರೆ ಸಾಕು” ಎಂದ ಕೂಡಲೇ, ಎಲ್ಲಿ ಅರ್ಜುನ ಸೈನ್ಯವನ್ನು ಕೇಳಿಬಿಡುತ್ತಾನೋ ಎಂದು ಆತಂಕದಲ್ಲಿದ್ದ ದುರ್ಯೋಧನನಿಗೆ ಪಾರ್ಥನ ಕೋರಿಕೆ ಸಂತೋಷ ನೀಡುತ್ತದೆ. ಆಗಲೇ, ತಾನು ಗೆದ್ದನೆಂದು ಅಂದುಕೊಂಡು ದುರ್ಯೋಧನ ನೆಮ್ಮದಿಯ ನಿಟ್ಟಿಸುರುಬಿಡುತ್ತಾನೆ.  

ಪಾಂಡವರಿಗೆ ನೆರವಾಗುವುದಾಗಿ ಅರ್ಜುನನಿಗೆ ಮಾತುಕೊತ್ತ ಕೃಷ್ಣ, ಆಗಲೇ ಯುದ್ಧದ ಜಯವನ್ನೂ ನಿರ್ಧರಿಸಿಬಿಡುತ್ತಾನೆ.  

ಧರ್ಮದ ಪರವಾಗಿ ರಥದ ಸಾರತಿಯಾಗಿ ನಿಲ್ಲುವುದಕ್ಕಾಗಿ ಅಂದು ಸಣ್ಣದಾಗಿ ತೂಕಡಿಸಿದ ಕೃಷ್ಣ, ದೀರ್ಘ ನಿದ್ದೆ ಮಾಡಿದ್ದು ತನ್ನ ಗೆಳೆಯ ಕುಚೇಲ ಎಂಬ ಸುಧಾಮನ ಜೀವನದಲ್ಲಿ.

ಗುರುಕುಲ ವಾಸದ ಸಮಯ, ಕೃಷ್ಣನಿಗೂ, ಬಲರಾಮನಿಗೂ ಆತ್ಮ ಸ್ನೇಹಿತನಾಗಿದ್ದವನು ಸುಧಾಮ ಎಂಬ ಕುಚೇಲ. ಕೃಷ್ಣನ ಸ್ನೇಹಿತನಾಗಿದ್ದೂ ಸಹ, ಅತಿ ದಾರಿದ್ಯದಲ್ಲಿ ಬದುಕಿದ ಕುಚೇಲನನ್ನು ಕೃಷ್ಣ ಬಹಳ ಕಾಲ ತನ್ನ ಕಣ್ಣು ತೆರೆದು ನೋಡಲೇ ಇಲ್ಲ.

ಸುಶೀಲಾ ಎಂಬ ಹೆಣ್ಣನ್ನು ಮದುವೆಯಾಗಿ, ಕಷ್ಟದ ಜೀವನ ನಡೆಸುತ್ತಿದ್ದಾಗಲೂ ಕೃಷ್ಣ ಅವನನ್ನು ಬಂದು ನೋಡಲೇ ಇಲ್ಲ. ಐದು ಹೆಣ್ಣನ್ನು ಹೆತ್ತರೆ ಬಿಕ್ಷುಕ ಎನ್ನುತ್ತಾರೆ. ಕುಚೇಲನಿಗೋ ಅಶ್ವಿನಿ, ಭರಣಿ ಎಂದು ತೊಡಗಿ ರೇವತಿಯವರೆಗೆ ಇಪ್ಪತ್ತೇಳು ಹೆಣ್ಣು ಮಕ್ಕಳು. ಮನೆಯಲ್ಲಿ ತೀರದ ಬಡತನ. ಆ ಸ್ಥಿತಿಯಲ್ಲೂ ಕುಚೇಲನಿಗಾಗಿ ಕೃಷ್ಣ ಕಣ್ಣು ತೆರೆಯಲಿಲ್ಲ.

ನಿಸ್ಸಾಹಯಕ ಸ್ಥಿತಿಯಲ್ಲಿದ್ದ ಕುಚೇಲ ಹಸಿವು, ಉಪವಾಸದಿಂದ ಇದ್ದರೂ ಸಹ ಧ್ಯಾನ, ಪೂಜೆಗಳಲ್ಲಿ ನಿರತನಾದನು.  ಕಾಡಿನಲ್ಲಿ ದೊರಕುವ ಧಾನ್ಯ ಮತ್ತು ಹಣ್ಣು ಹಂಪಲುಗಳನ್ನು ದಿನನಿತ್ಯ ಶೇಕರಿಸಿ ಗಂಜಿ ಕಾಯಿಸುವ ಸುಶೀಲೆ  ಎಷ್ಟು ಹೊಟ್ಟೆಗಳ ಹಸಿವನ್ನು ಹಿಂಗಿಸಲು ಸಾಧ್ಯ…?

ಆದರೆ, ಎಲ್ಲವನ್ನೂ ನೋಡುತ್ತಾ ಏನೂ ತಿಳಿಯದವನಂತೆ ಇದ್ದ ಕೃಷ್ಣ ಸದಾ ಕಳ್ಳ ನಿದ್ದೆ ಮಾಡುತ್ತಲೇ ಇದ್ದ.

ಒಂದು ದಿನ ಮಕ್ಕಳ ಹಸಿವನ್ನು ನೋಡಿ ತಡೆಯಲಾಗದೆ ಕುಚೇಲನ ಬಳಿ ಅಲವತ್ತುಕೊಂಡ ಸುಶೀಲೆ, ತನ್ನ ಬಳಿ ಇದ್ದ ಅವಲಕ್ಕಿಯನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಕೊಟ್ಟು, ಕುಚೇಲನ ಗುರುಕುಲದ ಗೆಳೆಯನಾದ  ಕೃಷ್ಣನ ಬಳಿ ಸಹಾಯ ಕೇಳಲು ಗಂಡನನ್ನು ಕಳುಹಿಸಿಕೊಡುತ್ತಾಳೆ.

ಹರಕು ಬಟ್ಟೆಯೊಂದಿಗೆ,  ಕೈಹಿಡಿ ಅವಲಕ್ಕಿಯೊಂದಿಗೆ ಕೃಷ್ಣನ ಮಾಳಿಗೆಗೆ ಸಂಕೋಚದಿಂದ ಬಂದು ಸೇರಿದ ಕುಚೇಲನನ್ನು ಕೃಷ್ಣ ಆಲಿಂಗಿಸಿಕೊಂಡು ಸ್ವಾಗತ ನೀಡಿ ಉಪಚಾರ ಮಾಡುತ್ತಾನೆ.

ಸುಶೀಲೆ ಪ್ರೀತಿಯಿಂದ ಕಳುಹಿಸಿಕೊಟ್ಟ ಅವಲಕ್ಕಿಯನ್ನು ಕೊಡಲು ನಾಚಿಕೆಯಿಂದ ಕುಚೇಲ ತಲೆ ತಗ್ಗಿಸಿ ನಿಂತಿರುವಾಗ, ತಾನಾಗಿಯೇ ಮುಂದೆ ಬಂದು ಒಂದು ಹಿಡಿ ಅವಲಕ್ಕಿಯನ್ನು ತೆಗೆದು ತಿನ್ನುತ್ತಾನೆ ಕೃಷ್ಣ.

ದೀರ್ಘ ಕಾಲದ ನಂತರ ಬೇಟಿಯಾಗುವ ಗೆಳೆಯನನ್ನು ತನ್ನ ಅರಮನೆಯಲ್ಲಿ ಉಳಿಸಿಕೊಂಡು, ಗೌರವಿಸಿದ ಕೃಷ್ಣನ ಬಳಿ ಸಹಾಯ ಬೇಡಲು ಸಂಕೋಚಪಟ್ಟುಕೊಂಡು ಹಿಂಜರಿದ ಕುಚೇಲ,  ಏನನ್ನೂ ಕೇಳದೆ ಊರಿಗೆ ಹಿಂತಿರುಗುತ್ತಾನೆ.

ಅಲ್ಲಿಗೆ ಅವನು ಬಂದು ಸೇರುವ ಮೊದಲೇ ಅವನ ಗುಡಿಸಲು ದೊಡ್ಡ ಮಾಳಿಗೆಯಾಗಿ ಬದಲಾಗಿರುವುದನ್ನೂ, ಅವನ ಹೆಂಡತಿಯೂ, ಮಕ್ಕಳೂ ಸಿರಿ ಸಂಪತ್ತಿನಲ್ಲಿ ಇರುವುದನ್ನೂ ಹರ್ಷದಿಂದ ನೋಡುತ್ತಾನೆ. ಈಗ   ಕೇಳದಲೇ ವರವನ್ನು ನೀಡಿದ ಕೃಷ್ಣ, ಯಾಕೆ ಅಲ್ಲಿಯವರೆಗೆ ಅವನ ದುಃಖವನ್ನು ನೀಗಿಸಲಿಲ್ಲ. ಅದರಲ್ಲೂ, ತನ್ನ ಭಕ್ತರೆಲ್ಲ ಸಿರಿತನದಲ್ಲಿ ಮೆರೆಯುವಾಗ ತನ್ನ ಪ್ರಾಣ ಸ್ನೇಹಿತ ಮಾತ್ರ ಬಡತನದಲ್ಲಿ ಬಾಡಲು ಹೇಗೆ ಕೃಷ್ಣ ಅನುಮತಿಸಿದನು? ಎಂದರೆ, ಅದಕ್ಕೆ ಕುಚೇಲನ ಗುಣವೇ ಕಾರಣವಾಗಿತ್ತು.

ಗುರುಕುಲದಲ್ಲಿ ಕಲಿಯುತ್ತಿರುವಾಗ ಕೃಷ್ಣ, ಬಲರಾಮ, ಕುಚೇಲರನ್ನು ಕಾಡಿನೊಳಗೆ ಹೋಗಿ ಸೌದೆ ಕಾಡಿಕೊಂಡು ಬರಲು ಸಾಂದೀಪನಿ ಮುನಿ ಕಳುಹಿಸಿಕೊಡುತ್ತಾರೆ. ಆಗ ಗುರುಪತ್ನಿ ಆ ಮೂವರಿಗೂ ಆಹಾರವಾಗಿ ಕೊಟ್ಟ ಬೇಯಿಸಿದ ಕಡಲೆಬೇಳೆ ಎಲ್ಲವನ್ನೂ ಉಳಿದ ಇಬ್ಬರಿಗೂ ಹಂಚಿಕೊಡದೆ ತಾನೊಬ್ಬನೇ ಉಂಡನಂತೆ ಕುಚೇಲ.

ಹಸಿವಿನಿಂದ ಬಳಲುತ್ತಿದ್ದ ಗೆಳೆಯರೊಂದಿಗೆ ಅದನ್ನು ಹಂಚಿಕೊಂಡು ತಿನ್ನದೇ,  ತಾನೊಬ್ಬನೇ ತಿಂದ ಕಾರಣ ಜೀವನ ಪೂರ್ತಿ ಬಡತನದಿಂದ  ಕಷ್ಟಪಡುತ್ತಾನೆ ಕುಚೇಲ. ಬಡತನದಲ್ಲಿದ್ದರೂ ಸಹ ತಾನೂ ತನ್ನ ಮದಡಿಯೂ ದುಡಿದು ಗಳಿಸಿದ ಒಂದು ಹಿಡಿ ಅವಲಕ್ಕಿಯನ್ನು ಉಳಿದವರೊಂದಿಗೆ ಹಂಚಿಕೊಳ್ಳಬೇಕೆಂಬ ಭಾವನೆ ಉಂಟಾದಕೂಡಲೇ ಕುಚೇಲನ ಬಡತನ ಸಂಪೂರ್ಣವಾಗಿ ನೀಗಿ ವಸತಿ ಸೌಕರ್ಯಗಳನ್ನು ಪಡೆಯುತ್ತಾನೆ.

ಭಗವಂತ ಒಂದು ಹಗಲು ಮಾಡಿದ ಸಣ್ಣ ನಿದ್ರೆಯೂ, ತನ್ನ ಗೆಳೆಯನ ಬಳಿ ತೋರಿದ ದೀರ್ಘ ನಿದ್ರೆಯೂ ಕೆಡುಕನ್ನು ತಪ್ಪಿಸಲೂ, ಮೌಡ್ಯವನ್ನು ಹೋಗಲಾಡಿಸಲು.  ನಿಜವಾದ ಪ್ರೀತಿಯಿಂದ ಇದ್ದರೆ, ನಾವು ಕೇಳದ ವರಗಳನ್ನೂ  ಕೊಡುತ್ತಾನೆ ಕೃಷ್ಣ ಎಂಬುದು ಅರ್ಥವಾಯಿತಲ್ಲವೇ?!

“ಹೀಗೆ ಕಳ್ಳ ನಿದ್ದೆ ಮಾಡುವ ಆ ತುಂಟ ಕೃಷ್ಣನನ್ನು ಪೂಜಿಸಿ ಕೃಪೆ ಪಡೆಯಲು ನಿದ್ದೆಯಿಂದ ಎದ್ದು ಬನ್ನಿರೀ “ ಎಂದು ಮಾರ್ಗಶಿರದ ಆರನೇಯ ದಿನದಂದು ತಮ್ಮ ಗೆಳತಿಯರನ್ನು ಕರೆಯುತ್ತಾಳೆ ಗೋದೈ ಆಂಡಾಳ್!!

Leave a Reply