ಎದ್ದು ಬಾ… ಬಂದು ಬಾಗಿಲು ತೆರೆ …! : ಧನುರ್ ಉತ್ಸವ ~ 7

ಧನುರ್ ಉತ್ಸವ ವಿಶೇಷ ಸರಣೀಯ ಏಳನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಮಾಸದ ಏಳನೇಯ ದಿನ

ಕೀಚ್ ಕೀಚ್ ಎಂದು ಎಲ್ಲೆಲ್ಲೂ ಭಾರದ್ವಾಜ ಪಕ್ಷಿಗಳು

ಸೇರಿ ಆಡಿದ ಮಾತ ಧ್ವನಿ ಕೇಳಲಿಲ್ಲವೇ ಹುಚ್ಚು ಹೆಣ್ಣೇ

ಕಾಸಿನ ತಾಲಿಯುಂ ಆಮೆಯ ತಾಲಿಯುಂ ಕಲಕಲ ಎನುವಂತೆ ಕೈಸೇರೆ

ಕಂಪಿನಿಂ ಘಮಘಮಿಪ ಕುರುಳುಳ್ಳ ಗೋಪಿಯರು

ಮತ್ತಿನಿಂ ಕಡೆವ ಶಬ್ದದ ಮೊಸರ ದನಿ ಕೇಳಿಸುತ್ತಿಲ್ಲವೇ

ಹೆಣ್ಣುಮಕ್ಕಳಿಗೆಲ್ಲ ಒಡತಿಯೆ ನಾರಾಯಣ ರೂಪಿ

ಕೇಶವನ ಹಾಡುವುದ ನೀ ಕೇಳಿದರೂ ಮಲಗಿಹೆಯಾ

ತೇಜ ಉಳ್ಳವಳೇ ತೆರೆಯೇ ನಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ (ಭೂಪಾಳ ರಾಗ – ರೂಪಕ ತಾಳ)

ದೆವ್ವದಂತೆ ನಿದ್ರಿಸುತ್ತಿರುವ ಹೆಣ್ಣೇ…!

ಭಾರದ್ವಾಜ ಎಂಬ ಹಕ್ಕಿ, ದಿನ ಬೆಳಗಿದ್ದನ್ನು ಹೇಳುವಂತೆ ಎಬ್ಬಿಸುವ ಕಲರವದ  ಧ್ವನಿ ನಿನ್ನ ಕಿವಿಗಳಿಗೆ ಬೀಳಲಿಲ್ಲವೇ?

ಗೋಕುಲದ ಹೆಣ್ಣುಗಳು ತೊಟ್ಟಿರುವ ತಾಳಿ ಕಾಸಿನ ದನಿಯೊಂದಿಗೆ  ಮತ್ತಿನಿಂದ ಮೊಸರು ಕಡೆವ ದನಿಯೂ ಕೇಳಿಸಲಿಲ್ಲವೇ?

ನಾವೆಲ್ಲರೂ ಒಟ್ಟಾಗಿ ಸೇರಿ ನಾರಾಯಣನನ್ನು, ಕೇಶವನನ್ನು ಹೊಗಳಿ ಹಾಡುತ್ತಿದ್ದೇವಲ್ಲಾ, ಯಾದವ ಕುಲದ ನಾಯಕಿಯಾದ ನೀನು ಇದನ್ನು ಕೇಳಿಯೂ ಸಹ ಹಾಸಿಗೆಯಿಂದ ಏಳದೆ ಇದ್ದೀಯಲ್ಲೇ.

ಜ್ಯೋತಿ ತುಂಬಿದ ಹೆಣ್ಣೇ… ಬಂದು ಬಾಗಿಲು ತೆರೆಯುವಂತವಳಾಗು,

ಎಂದು ನಿದ್ರೆ ಮಾಡುತ್ತಿರುವ ಯಾದವ ಕುಲದ ನಾಯಕಿಯನ್ನು ಎಬ್ಬಿಸುತ್ತಾಳೆ ಗೋದೈ…!

“ಎಲ್ಲೆಡೆ ಭಾರಧ್ವಾಜ ಪಕ್ಷಿಗಳ ಕಲರವ…..”

ಬೆಳಕು ಹರಿದಿರುವ ಕುರುಹಾಗಿ ಹಕ್ಕಿಗಳೆಲ್ಲವೂ ದನಿ ಎಬ್ಬಿಸಿ ಕೂಗುತ್ತವೆ. ಹಾಗಿರುವಾಗ ಯಾಕೆ ಭಾರಧ್ವಾಜ  ಎಂಬ ಪಕ್ಷಿಯನ್ನು ಮಾತ್ರ ಗೋದೈ ವಿಶೇಷವಾಗಿ ಹೇಳುತ್ತಾಳೆ? ಯಾವುದು ಈ ಭಾರಧ್ವಾಜ ಹಕ್ಕಿ?  ನೋಡೋಣ ಬನ್ನಿ.

ಶ್ರೀ ವೆಂಕಟೇಶನಿಗೂ, ಹಕ್ಕಿಗಳಿಗೂ ಸದಾ ಸಂಬಂಧ ಇರುತ್ತಲೇ ಬಂದಿದೆ. ಭಗವಂತನ ದೊಡ್ಡ ಪಾದ ಎಂದು ಗರುಡನನಲ್ಲವೇ ಹೇಳುತ್ತಾರೆ. ಅದೇ ರೀತಿ ಭಾರಧ್ವಾಜ ಪಕ್ಷಿಯೂ ಸಹ!

ಭಾರಧ್ವಾಜ ಎಂಬ ಹಕ್ಕಿ ಕೋಗಿಲೆಯ ಆಕಾರದಲ್ಲಿದ್ದು, ದೊಡ್ಡ ದನಿ ಎಬ್ಬಿಸುವ ಒಂದು ಸಣ್ಣ ಹಕ್ಕಿ. ಕಾಜಾಣ, ಭೀಮರಾಜ, ಕಂಚು ಕಾಜಾಣ ಎಂದು ಕರೆಯಲ್ಪಡುವ ಆಗ್ನೇಯ ಏಷ್ಯ ನಿವಾಸಿಗಳಾದ ಈ ಭಾರಧ್ವಾಜ “Block Drongo’ (Dicrurus macrocercus) ಎಂದು ಇಂಗ್ಲಿಷಿನಲ್ಲಿ ಕರೆಯಲ್ಪಡುತ್ತದೆ.

ಬೆಳಗಾಗುವುದನ್ನು ಹೇಳುವ ಈ ಹಕ್ಕಿಯ ದನಿ ಬಹಳ ದೂರಕ್ಕೂ ಕೇಳಿಸುತ್ತದೆ.  ಭಾರಧ್ವಾಜ ಹಕ್ಕಿ ‘ಕೀಚು ಕೀಚು’ ಎಂದು  ಕೂಗುವುದು ‘ಕೇಚು ಕೇಚು’ ಎಂದು ಕೇಶವನ ಹೆಸರನ್ನು ಕರೆಯುವಂತೆಯೇ ಕೇಳಿಸುವುದಂತೆ. ಅಂತಹ ಎತ್ತರದ ಧ್ವನಿಯನ್ನು ಕೇಳಿಯೂ ಎದ್ದು ಬಾರದೇ, ದೆವ್ವದಂತೆ ನಿದ್ರೆ ಮಾಡುವ ಹೆಣ್ಣನ್ನು ಎಬ್ಬಿಸಲು ಗೋದೈ ಹಾಡುತ್ತಾಳೆ.

ಆದರೆ, ಭಾರಧ್ವಾಜ ಎಂಬ ಹಕ್ಕಿಯನ್ನು ಮಾತ್ರ ಇಲ್ಲಿ ಉಲ್ಲೇಖಿಸಲಿಲ್ಲ, ಭಾರಧ್ವಾಜನಿಗೆ ‘ಆನೆಯನ್ನು ಬೀಳಿಸಿದವನು’ ಎಂಬ ಅರ್ಥವೂ ಉಂಟು.

ಕೃಷ್ಣನನ್ನು ಕೊಲ್ಲಲು ಕಂಸ ಕಳುಹಿಸಿದ  ‘ಕುವಾಲಯ ಪೀಠ’ ಎಂಬ ಆನೆಯನ್ನು ಕೊಂದವನು ಕೃಷ್ಣ. ಆದ್ದರಿಂದ ಭಾರಧ್ವಾಜ ಎಂದೂ ಕರೆಯಲ್ಪಟ್ಟನು.

ಅಷ್ಟು ಮಾತ್ರವಲ್ಲ… ಗಜೇಂದ್ರ ಎಂಬ ಆನೆಯನ್ನು ರಕ್ಷಿಸಿ ಮೋಕ್ಷ ತಂದವನು ಎಂಬುದರಿಂದಲೂ ಗಜ ರಕ್ಷಕ ಎಂದೂ ಕರೆಸಿಕೊಳ್ಳುತ್ತಾನೆ ನಮ್ಮ ಮಾಯ ಕೃಷ್ಣ.

ಪಂಚೇಂದ್ರಿಯಗಳುಳ್ಳ ಗಜೇಂದ್ರ, ಆನೆಯ ಹಿಂಡಿಗೆ ನಾಯಕನಾಗಿದ್ದರೂ, ತನ್ನ ಪೂರ್ವ ಜನ್ಮದ ಸಂಬಂಧದಿಂದ ವಿಷ್ಣುವಿನ ಕೃಪೆಯನ್ನೂ, ಮೋಕ್ಷವನ್ನೂ ಪಡೆಯುವುದಕ್ಕಾಗಿ ದಿನ ನಿತ್ಯ ಪೂಜೆ ಮಾಡುತ್ತಾ ಬಂದನು.

ಒಂದು ದಿನ ಕೊಳದಲ್ಲಿ ಅರಳಿದ್ದ ಸಾವಿರ ದಳಗಳ ತಾವರೆಯ ಹೂವನ್ನು ನೋಡಿ, ಇದನ್ನು ಶ್ರೀರಂಗನಿಗೆ ಪೂಜೆಯಲ್ಲಿ ಸಮರ್ಪಿಸಿದರೆ ಸುಂದರವಾಗಿರುತ್ತದೆ ಎಂದು ಭಾವಿಸಿ ಅದನ್ನು ಕೀಳಲು ಗಜೇಂದ್ರ ಕೊಳಕ್ಕೆ ಇಳಿಯುತ್ತಾನೆ.

ಮೊದಲು ಆಳವಿಲ್ಲದ ಜಾಗದಲ್ಲಿ ತನ್ನ ದೇಹವನ್ನು ಸ್ವಚ್ಛಗೊಳಿಸಿದ ನಂತರ ಮತ್ತಷ್ಟು ಆಳಕ್ಕೆ ಇಳಿದು ಹೂವನ್ನು ಕೀಳಲು ಯತ್ನಿಸುವಾಗ ಕೊಳದಲ್ಲಿದ್ದ  ಮಹೇಂದ್ರನೆಂಬ ರಾಕ್ಷಸ ಮೊಸಳೆ ತನ್ನ ಆಹಾರಕ್ಕಾಗಿ ಗಜೇಂದ್ರನ ಕಾಲನ್ನು ಹಿಡಿದುಕೊಂಡಿತು.

ಇದನ್ನು ಸ್ವಲ್ಪವೂ ನಿರೀಕ್ಷಿಸದ ಗಜೇಂದ್ರ, ಮೊಸಳೆಯ ಹಿಡಿತದಿಂದ ತಪ್ಪಿಸ್ಕೊಳ್ಳಲು ತನ್ನ ಬಲವನ್ನೆಲ್ಲ ಕ್ರೋಢೀಕರಿಸಿ ಬಹಳ ಪ್ರಯತ್ನಪಟ್ಟರೂ ಆಗಲಿಲ್ಲ. ಬಹಳ ಪ್ರಯತ್ನ ಎಂದು ಯಾಕೆ ಹೇಳುತ್ತಾರೆ ಎಂದರೆ, ಮಾನವ ಲೆಕ್ಕದಲ್ಲಿ ಅವನ ಪ್ರಯತ್ನ ಸಾವಿರ ವರ್ಷಗಳಂತೆ. ಅಂದರೆ ಒಬ್ಬ ಮನುಷ್ಯ ಸಾವಿರ ವರ್ಷ ಅಥವಾ ಸಾವಿರ ಮನುಷ್ಯರು ಒಂದು ವರ್ಷ ಬಿಡದೆ ಪ್ರಯತ್ನಿಸಿದರೆ ಎಷ್ಟು ಬಲ ನೀಡಬಹುದೋ, ಅಷ್ಟೂ ಶಕ್ತಿಯನ್ನು ಒಟ್ಟಾಗಿ ಸೇರಿಸಿ ಒಂದೇ ಸಮಯದಲ್ಲಿ ಗಜೇಂದ್ರ  ಪ್ರಯತಿನಿಸುತ್ತಾನೆ.

ಆ ಎಲ್ಲ ಪ್ರಯತ್ನಗಳೂ ಫಲ ನೀಡದೆ ಹೋಗಲು, ತನ್ನ ಏಕೈಕ ನಂಬಿಕೆಯಾದ ದೇವರನ್ನು ಉದ್ದೇಶಿಸಿ, ಕಿತ್ತ ತಾವರೆ ಪುಷ್ಪವನ್ನು ಸೊಂಡಿಲಲ್ಲಿ  ಹಿಡಿದುಕೊಂಡು, “ಆದಿಮೂಲನೇ ನನ್ನನ್ನು ಕಾಪಾಡು” ಎಂದು ಗಜೇಂದ್ರ ಅತ್ತು ಗೋಗರೆದನಂತೆ.

ಗಜೇಂದ್ರನ ದನಿಯನ್ನು ಕೇಳಿದ ಆ ಕ್ಷಣದಲ್ಲೇ  ಕ್ಷೀರಸಾಗರದಲ್ಲಿ ವಿರಾಮದಲ್ಲಿದ್ದ ಲಕ್ಷ್ಮಿನಾರಾಯಣ, ತನಗೆ ಸೇವೆ ಮಾಡುತ್ತಿದ್ದ ಶ್ರೀದೇವಿಯನ್ನೂ, ಭೂದೇವಿಯನ್ನೂ ಬಿಟ್ಟು, ಗರುಡನ ಮೇಲೆ ಹತ್ತಿ ಕುಳಿತುಕೊಂಡು, ಅತಿ ವೇಗವಾಗಿ ಹಾರಿಬಂದು ಗಜೇಂದ್ರನ ಕಾಲನ್ನು ಹಿಡಿದಿದ್ದ ಮೊಸಳೆಯನ್ನು ತನ್ನ ಚಕ್ರಾಯುಧದಿಂದ ಅಳಿಸಿ, ಭಕ್ತ ಗಜೇಂದ್ರ ಎಂಬ ಆನೆಯನ್ನು ರಕ್ಷಿಸಿದನಂತೆ, ಇದೇ ಗಜೇಂದ್ರ ಎಂಬ ಹೆಸರಿಗೆ ಕಾರಣವಾಯಿತು.

ಮೊಸಳೆಯ ಬಾಯಲ್ಲಿ ಸಿಕ್ಕಿಬಿದ್ದಿದ್ದ ಭಕ್ತನನ್ನು ಕಾಯಬೇಕೆಂದು, ಕರೆದಕೂಡಲೆ ತನಗೆ ಸೇವೆ ಸಲ್ಲಿಸುತ್ತಿದ್ದ ತನ್ನ ದೇವಿಯರನ್ನು ತೊರೆದು ಭಕ್ತನ ಒಳಿತಿಗಾಗಿ ಓಡಿಬಂದವನೇ ಈ ಗಜರಕ್ಷಕ.

ಭಕ್ತನನ್ನು ಕಾಪಾಡಬೇಕೆಂದು, ತನ್ನ ದೇವಿಯರನ್ನೋ, ನಿದ್ರೆಯನ್ನೋ ಮರೆಯುವುದು ಮಾತ್ರವಲ್ಲ; ತನ್ನ ಭಕ್ತನ ಪ್ರಾಣ ಉಳಿಸಲು ಏನನ್ನು ಬೇಕಾದರೂ ಮಾಡುತ್ತಾನೆ; ತಾನು ಮಾಡಿದ ಪ್ರಮಾಣವನ್ನೂ ಸಹ ಮರೆಯುತ್ತಾನೆ ಎನ್ನುತ್ತದೆ ಭಾರತದ ಮತ್ತೊಂದು ಕಥೆ.  

ಕುರುಕ್ಷೇತ್ರದಲ್ಲಿ ಎದುರೆದುರು ನಿಂತಿರುತ್ತಾರೆ ಪಕ್ಕದ ದೇಶದ ರಾಜರುಗಳಾದ ಸಾತ್ಯಕಿಯೂ, ಭೂರಿಶ್ರವಸ್. ಇಬ್ಬರೂ ಜನ್ಮ ವಿರೋಧಿಗಳು. ಸಾತ್ಯಕಿ ಕೃಷ್ಣನ ಗೆಳೆಯ. ಶ್ರೇಷ್ಠ ಭಕ್ತ. ಆದರೆ ಕೌರವರ ಪಕ್ಷದಲ್ಲಿ ನಿಲ್ಲುವ ಸಾತ್ಯಕಿಯ ವೈರಿಯಾದ ಭೂರಿಶ್ರವಸ್ ಯಾರಿಂದಲೂ ಗೆಲ್ಲಲಾಗದ, ಸರಿಸಾಟಿಯಿಲ್ಲದ ಖಡ್ಗವೀರ!

ಹನ್ನೆರಡನೇಯ ದಿನದ ಯುದ್ಧದಲ್ಲಿ ಅಭಿಮನ್ಯು ಕೊಲ್ಲಲ್ಪಡುತ್ತಾನೆ.

ಮಾರನೇಯ ದಿನ ಸಾತ್ಯಕಿಯೂ ಸೂರ್ಯಾಸ್ತಮಾನದೊಳಗೆ ಅಭಿಮನ್ಯುವಿನ ಮರಣಕ್ಕೆ ಕಾರಣವಾದ ಜಯದ್ರಥನನ್ನು ಕೊಲ್ಲುತ್ತೇನೆ, ಇಲ್ಲದಿದ್ದರೆ ಅಗ್ನಿಗೆ ಆಹುತಿಯಾಗಿ ಪ್ರಾಣ ಬಿಡುತ್ತೇನೆ ಎಂದು ಅರ್ಜುನನ ಬಳಿ ಶಪಥ ಮಾಡುತ್ತಾನೆ.

ಜಯದ್ರಥನನ್ನು ಕೊಲ್ಲಲು ಅರ್ಜುನ ಸರ್ವ ಪ್ರಯತ್ನವನ್ನು ಮಾಡುತ್ತಾನೆ ಎಂದು ಅರಿತಿದ್ದ ದ್ರೋಣಾಚಾರ್ಯರು, ಜಯದ್ರಥನನ್ನು ಕಾಯಲು, ಬಹಳ ದೊಡ್ಡ ರಕ್ಷಣಾ ವ್ಯೂಹವನ್ನು ರಚಿಸುತ್ತಾರೆ.  ಅರ್ಜುನನೂ, ಭೀಮನೂ ಒಂದು ಕಡೆ ವ್ಯೂಹವನ್ನು ಬೇಧಿಸಿ ಒಳಗೆ ನುಸುಳಿ ಕಟುವಾಗಿ ಯುದ್ಧ ಮಾಡುತ್ತಾರೆ. ಅವರಿಗೆ ನೇರವಾಗಿ ಮತ್ತೊಂದು ಕಡೆ ಸಾತ್ಯಕಿಯೂ ಅತೀವ ಪ್ರಯತ್ನದಿಂದ, ಆ ವ್ಯೂಹವನ್ನು ಬೇಧಿಸಿ ಒಳಗೆ ಹೋಗುತ್ತಾನೆ.

ಆಗ ಸಾತ್ಯಕಿಯನ್ನು ಕೌರವರ ಕಡೆಯಿಂದ ಭೂರಿಶ್ರವಸ್ ತನ್ನ ಖಡ್ಗದಿಂದ ಎದುರಿಸಿ ನಿಲ್ಲುತ್ತಾನೆ. ಸಾತ್ಯಕಿ ಎಷ್ಟೇ ಹೋರಾಡಿದರೂ ಖಡ್ಗ ಯುದ್ಧದಲ್ಲಿ ನಿಪುಣನಾದ ಭೂರಿಶ್ರವಸ್ ಕೊನೆಗೆ ಸಾತ್ಯಕಿಯನ್ನು ಹೊಡೆದು ಬೀಳಿಸಿ, ಅವನ ಎದೆಯ ಮೇಲೆ ಕಾಲಿಟ್ಟು, ಅವನ ತಲೆಯನ್ನು ತುಂಡರಿಸಲು ಖಡ್ಗವನ್ನು ಎತ್ತುತ್ತಾನೆ.

ಅದನ್ನು ಕಂಡ ಸಾತ್ಯಕಿಯ ಗೆಳೆಯನೂ, ಭಗವಂತನೂ ಆದ ಶ್ರೀ ಕೃಷ್ಣ, ತನ್ನ ಭಕ್ತ ಕೆಳಗೆ ಬಿದ್ದಿರುವುದನ್ನು ನೋಡಲು ಸಹಿಸಲಾಗದೆ ರಥದಲ್ಲಿ ಇದ್ದಂತೆಯೇ ‘ಅರ್ಜುನ ಸಾತ್ಯಕಿ ಸೋತುಹೋಗುತ್ತಾನೆ… ನೀನು ಭೂರಿಶ್ರವಸಿನ ಮೇಲೆ ಇಲ್ಲಿಂದಲೇ ಬಾಣ ಬಿಟ್ಟು  ಕೊಲ್ಲು…!’ ಎಂದು ಅರ್ಜುನನಿಗೆ ಆಜ್ಞೆ ಮಾಡುತ್ತಾನೆ.

ಬಿಲ್ಲಿಗೆ ಬಾಣವನ್ನಿಟ್ಟು ಗುರಿಯಿಟ್ಟ ಅರ್ಜುನನಿಗೆ ಕಂಡದ್ದೋ ಭೂರಿಶ್ರವಸಿನ ಬೆನ್ನು! ಹಿಂದಿನಿಂದ ದಾಳಿಮಾಡುವುದು ಯುದ್ಧ ಧರ್ಮವಲ್ಲ ಎಂದು ಅರ್ಜುನ ಭೂರಿಶ್ರವಸಿನ ಮೇಲೆ ಬಾಣ ಬಿಡಲು ಹಿಂಜರಿಯಲು, ಅವಕಾಶ ಕೈತಪ್ಪಿ ಹೋಗುವುದನ್ನು ಕಂಡು ಕೋಪಗೊಂಡ ಪರಂದಾಮ ಅರ್ಜುನನನ್ನು ಎದುರುನೋಡದೆ ತನ್ನ ಭಕ್ತನ ಪ್ರಾಣವನ್ನು ಕಾಪಾಡಲು, ವಿಷ್ಣು ಚಕ್ರವನ್ನು ಹಿಡಿದು ತಾನೇ ನರಸಿಂಹ ಅವತಾರವಾಗಿ ಧರೆಗೆ ಇಳಿಯುತ್ತಾನೆ.

ಕುರುಕ್ಷೇತ್ರ  ಯುದ್ಧದಲ್ಲಿ ಆಯುಧವನ್ನು ಹಿಡಿಯುವುದಿಲ್ಲ ಎಂದು ದುರ್ಯೋಧನನಿಗೆ ಕೊಟ್ಟ  ಪ್ರಮಾಣವನ್ನೂ ತನ್ನ ಭಕ್ತನಿಗಾಗಿ ಕೃಷ್ಣ ಮೀರಲು ಸಿದ್ಧವಾಗಿರುವುದನ್ನು ಕಂಡ ಅರ್ಜುನ, ತನ್ನ ಬಿಲ್ಲನ್ನು ಕೈಗೆತ್ತಿಕೊಂಡು, “ಒಳಿತು ಕೆಟ್ಟದ್ದು ಎಲ್ಲವೂ ನಿನಗೇ…!” ಎಂದು ಹೇಳುತ್ತಾ ಬಾಣವನ್ನು ಬಿಟ್ಟು ಭೂರಿಶ್ರವಸನನ್ನು ಕೊಲ್ಲುತ್ತಾನೆ.

ಭೂಮಿಗೆ ಬಿದ್ದ ಭೂರಿಶ್ರವಸ್ ಚಕ್ರಾಯುಧದೊಂದಿಗೆ ತನ್ನ ಎದುರು ನಿಂತಿದ್ದ ಕೃಷ್ಣನನ್ನು ನೋಡಿ ಸತ್ಯವನ್ನು ಅರಿತು, ಮಂಡಿಯೂರಿ ಮೋಕ್ಷ ಪಡೆಯುತ್ತಾನೆ.

ಯುದ್ಧ ಪ್ರಾರಂಭವಾಗುವ ಮುನ್ನ ಆಯುಧವನ್ನು ಹಿಡಿಯುವುದಿಲ್ಲ ಎಂದು ದುರ್ಯೋಧನನಿಗೆ ಪ್ರಮಾಣ ಮಾಡಿಕೊಟ್ಟ ಕೃಷ್ಣ ಅದನ್ನೂ ಮೀರಿ ಕೆಟ್ಟ ಹೆಸರನ್ನು ಸಂಪಾಧಿಸಿಕೊಳ್ಳಲು ಮುಂದಾದದ್ದೂ ತನ್ನ ಭಕ್ತನನ್ನು ರಕ್ಷಿಸುವುದಕ್ಕಾಗಿಯೇ.

ಶ್ರೀ ವರಾಹ ಚರಮ ಶ್ಲೋಕದಲ್ಲಿ “ಅಹಂ ಸ್ಮರಾಮಿ ಮದ್ ಭಕ್ತಮ್ …..” ಎಂದು ನನ್ನ ಹೆಸರನ್ನು ಹೇಳಿ ನನ್ನ ಪಾದಗಳಲ್ಲಿ ಪುಷ್ಪಗಳನ್ನಿಟ್ಟು ನನಗೆ ಆತ್ಮಾರ್ಥವಾಗಿ ಅರ್ಚನೆ ಮಾಡುವ ನನ್ನ ಭಕ್ತನನ್ನು,

“ನಯಾಮಿ ಪರ ಮಾಂಗಿತಮ್ …” ಎಂದು ನಾನು ಕೈಬಿಡುವುದಿಲ್ಲ. ಏನೇ ಆದರೂ ಅವನನ್ನು ರಕ್ಷಿಸಿ ಮೋಕ್ಷ ನೀಡುತ್ತೇನೆ  ಎನ್ನುತ್ತಾನೆ ಶ್ರೀರಂಗನಾಥ.

ಹೌದು, ಅವತಾರ ಧರ್ಮ, ಕ್ಷತ್ರಿಯ ಧರ್ಮ, ಮಾನವ ಧರ್ಮ ಎಂದು ಎಷ್ಟೇ ಧರ್ಮಗಳಿದ್ದರೂ ಎಲ್ಲವನ್ನೂ ಮೀರಿ ಭಾಗವತ ಧರ್ಮವೇ ಹಿರಿದಾಗಿ ಕಾಣುತ್ತದಂತೆ ಆ ಪರಂದಾಮನಿಗೆ.

ತನ್ನ ಭಕ್ತನಿಗೆ ಒಂದು ಸಂಕಷ್ಟ ಎಂದರೆ, ನೋಡಲು ಸಹಿಸದ ಪಾರ್ಥಸಾರತಿಯನ್ನು ನಾವೆಲ್ಲರೂ ಪಾದವೆರಗಿ, ಮನಕರಗಿ ಹಾಡುತ್ತೇವೆ. ಅದನ್ನು ಕೇಳಿದ ನಂತರವೂ ನಿದ್ರೆ ಮಾಡುತ್ತಿರುವ ನಾಯಕಿ ಹೆಣ್ಣೇ.. ಎದ್ದು ಬಾ… ಬಂದು ಬಾಗಿಲು ತೆರೆ …! ಎಂದು ಏಳನೇಯ ದಿನದಂದು ಕರೆಯುತ್ತಾಳೆ ಗೋದೈ ಆಂಡಾಳ್..!

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ. ಈ ಹಿಂದಿನ ಕಂತುಗಳನ್ನು ಇಲ್ಲಿ ನೋಡಬಹುದು: https://aralimara.com/tag/%e0%b2%86%e0%b2%82%e0%b2%a1%e0%b2%be%e0%b2%b3%e0%b3%8d/

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.