ಬೇರೆ ಬೇರೆ ಪ್ರಾಣಿಗಳು ಪಂಚ ಇಂದ್ರಿಯಗಳಲ್ಲಿ ಒಂದಲ್ಲ ಒಂದು ಇಂದ್ರಿಯದ ಚಾಪಲ್ಯಕ್ಕೆ ಬಲಿಯಾಗಿ ಬಂಧಿಯಾಗುತ್ತವೆ ಎಂಬುದನ್ನು ಶ್ರೀಶಂಕರರು ಈ ಶ್ಲೋಕದಲ್ಲಿ ಪ್ರಕೃತಿ ಜೀವನದಿಂದ ಉದಾಹರಿಸುತ್ತಾರೆ. ಅವರು ಕೊಟ್ಟಿರುವ ದೃಷ್ಟಾಂತಗಳನ್ನು ನೋಡಿದರೆ ಪ್ರಕೃತಿಯನ್ನು ಎಷ್ಟು ಸೂಕ್ಷ್ಮದೃಷ್ಟಿಯಿಂದ ವೀಕ್ಷಿಸಿ ಅವರು ವಿವೇಚಿಸಿದ್ದಾರೆ ಅನ್ನುವುದು ತಿಳಿಯುತ್ತದೆ.
(ಆಕರ: ಶ್ರೀ ಶಂಕರರ ವಿವೇಕ ಚೂಡಾಮಣಿ)
ಶಬ್ದಾದಿಭಿಃ ಪಂಚಭಿರೇವ ಪಂಚ ಪಂಚತ್ವಮಾಪುಃ ಸ್ವಗುಣೇನ ಬದ್ದಾ: | ಕುರಂಗಮಾತಂಗಪತಂಗಮೀನ- ಭೃಂಗಾ ನರಃ ಪಂಚಭಿರಂಚಿತ: ಕಿಮ್ || ವಿವೇಕ ಚೂಡಾಮಣಿ । ಶ್ಲೋಕ 76 || ಅರ್ಥ: ಜಿಂಕೆ, ಆನೆ, ಪತಂಗ, ಮೀನು, ದುಂಬಿ ಈ ಐದು ಪ್ರಾಣಿಗಳು ಶಬ್ದವೇ ಮೊದಲಾದ ಪಂಚವಿಷಯಗಳಲ್ಲಿ ತಮ್ಮ ತಮ್ಮ ಇಚ್ಛೆಗೆ ಗೋಚರವಾಗುವ ಯಾವುದೋ ಒಂದು ಇಂದ್ರಿಯ ವಿಷಯಕ್ಕೆ ಬದ್ಧವಾಗಿ ಮೃತ್ಯುವನ್ನು ಹೊಂದುತ್ತವೆ. ಇನ್ನು ಈ ಐದು ಇಂದ್ರಿಯಗಳಿಂದಲೂ ಕೂಡಿರುವ ಮನುಷ್ಯನ ವಿಷಯದಲ್ಲಿ ಹೇಳತಕ್ಕದ್ದೇನಿದೆ?
ಇಂದ್ರಿಯಗಳ ವಿಷಯ ಸುಖಗಳನ್ನು ತಣಿಸುವುದರಲ್ಲೇ ತಲ್ಲೀನರಾಗಿರುವವರು ಹೇಗೆ ಅವುಗಳಿಂದ ಆಕರ್ಷಿಸಲ್ಪಟ್ಟು, ಅವುಗಳ ದಾಸರಾಗಿ ಮನಃಶಾಂತಿಯನ್ನು ಕಳೆದುಕೊಂಡು ಕೊನೆಗೆ ಅವುಗಳಿಂದಲೇ ಹೇಗೆ ನಾಶ ಹೊಂದುವರು ಎಂಬುದನ್ನು ಈ ಶ್ಲೋಕದಲ್ಲಿ ವಿವರಿಸಿದೆ. ಈ ಸಂದರ್ಭದಲ್ಲಿ ಹೇಗೆ ಬೇರೆ ಬೇರೆ ಪ್ರಾಣಿಗಳು ಪಂಚ ಇಂದ್ರಿಯಗಳಲ್ಲಿ ಒಂದಲ್ಲ ಒಂದು ಇಂದ್ರಿಯದ ಚಾಪಲ್ಯಕ್ಕೆ ಬಲಿಯಾಗಿ ಬಂಧಿಯಾಗುತ್ತವೆ ಎಂಬುದನ್ನು ಪ್ರಕೃತಿ ಜೀವನದಿಂದ ಶ್ರೀಶಂಕರರು ಉದಾಹರಿಸುತ್ತಾರೆ. ಅವರು ಕೊಟ್ಟಿರುವ ದೃಷ್ಟಾಂತಗಳನ್ನು ನೋಡಿದರೆ ಪ್ರಕೃತಿಯನ್ನು ಎಷ್ಟು ಸೂಕ್ಷ್ಮದೃಷ್ಟಿಯಿಂದ ವೀಕ್ಷಿಸಿ ಅವರು ವಿವೇಚಿಸಿದ್ದಾರೆ ಅನ್ನುವುದು ತಿಳಿಯುತ್ತದೆ.
ಶ್ರೀ ಶಂಕರರು ವಿವರಿಸುವಂತೆ;
ಜಿಂಕೆಗೆ ಇಂಪಾದ ಗಾನವು ಬಹಳ ಪ್ರಿಯ. ಇದನ್ನು ಬಲ್ಲ ಬೇಟೆಗಾರನು ತನ್ನ ವಾದ್ಯದಿಂದ ಮಧುರಗಾನವನ್ನು ಹೊರಡಿಸುತ್ತಾನೆ. ಗಾಳಿಯಲ್ಲಿ ತೇಲಿಬರುವ ಇಂಪಾದ ಇಂಚರವನ್ನು ಆಲಿಸಿ, ಅದು ಬರುವ ದಿಕ್ಕಿಗೆ ಜಿಂಕೆಯು ಧಾವಿಸುತ್ತದೆ. ಕೊನೆಗೆ ಬೇಟೆಗಾರನ ಬಲೆಗೋ, ಅವನ ಬಾಣಕ್ಕೋ ತುತ್ತಾಗುತ್ತದೆ.
ಖೆಡ್ಡಾದಲ್ಲಿ ಸಲಗಗಳು ಮದವೇರಿದ ಸಮಯಗಳಲ್ಲಿ ಹೆಣ್ಣಾನೆಗಳ ಮೈಗೆ ಉಜ್ಜಿಕೊಂಡೇ ಅವನ್ನು ಹಿಂಬಾಲಿಸಿ ಓಡಿಬರುತ್ತವೆ. ಮುಂಚೆಯೇ ಪಳಗಿಸಿದ ಹೆಣ್ಣಾನೆಯು ತನ್ನ ನಿರ್ದಿಷ್ಟ ಸ್ಥಳವನ್ನು ತಲುಪುತ್ತದೆ. ಗಂಡಾನೆಯು ತನ್ನ ದಾರಿಯಲ್ಲಿ ಮೇಲೆ ಮಾತ್ರ ಮುಚ್ಚಿರುವ ಹಳ್ಳವನ್ನು ಕಾಣದೆ ಅದರೊಳಗೆ ಬಿದು ಬಂಧಿಯಾಗುತ್ತದೆ.
ಮಳೆ ಹುಯ್ದು ನಿಂತ ಮೇಲೆ ದೀಪದ ಹುಳುಗಳು ಗುಂಪು ಗುಂಪಾಗಿ ನೆಲದಿಂದ ಎದ್ದು ಬಂದು ದೀಪದ ಸುತ್ತ ಸುತ್ತಿ ಸುತ್ತಿ ಅದರ ಜ್ವಾಲೆಗೆ ಸಿಕ್ಕಿ ರೆಕ್ಕೆ ಸುಟ್ಟು ಕೆಳಗೆ ಬಿದ್ದು ಸಾಯುತ್ತವೆ. ಉರಿಯುವ ಜ್ವಾಲೆಯ ರೂಪಕ್ಕೆ ಮರುಳಾಗಿ ಅದರ ಆಕರ್ಷಣೆಯನ್ನು ನಿರೋಧಿಸಲಾರದೆ ಸಾವನ್ನಪ್ಪುತ್ತವೆ.
ಮೀನು ತನ್ನ ಆಹಾರವನ್ನು ಯಾವಾಗಲೂ ತಡಕಾಡುತ್ತ, ಗಾಳದಲ್ಲಿ ಸಿಗಿಸಿರುವ ಹುಳಕ್ಕೆ ಆಸೆಪಟ್ಟು ಅದನ್ನು ನುಂಗಲು ಹೋಗಿ ಗಾಳಕ್ಕೆ ಸಿಕ್ಕಿಬೀಳುತ್ತವೆ.
ದುಂಬಿಯು ಹೂವಿನ ಪರಾಗದ ಪರಿಮಳಕ್ಕೆ ಮನಸೋತು ಹೂವಿನ ತಳವನ್ನು ಸೇರಿದಾಗ ಅದರ ದಳಗಳು ಮುಚ್ಚಿಕೊಂಡು ಅದು ಅಲ್ಲಿಯೇ ಸೆರೆಯಾಗುತ್ತದೆ.
ಶ್ರೀಶಂಕರರು ಈ ರೀತಿ ಐದು ಸೂಕ್ತ ದೃಷ್ಟಾಂತಗಳನ್ನು ಕೊಟ್ಟು ಶಬ್ದ, ಸ್ಪರ್ಶ , ರೂಪ, ರಸ, ಗಂಧಗಳೆಂಬ ಪಂಚೇಂದ್ರಿಯಗಳ ವಿಷಯಗಳಲ್ಲಿ ಒಂದೊಂದರಲ್ಲೇ ವಿಪರೀತ ಆಸಕ್ತಿಯುಳ್ಳ ಪ್ರಾಣಿಯು ಅದರಿಂದಲೇ ತಮ್ಮ ಮೃತ್ಯುವನ್ನು ಆಹ್ವಾನಿಸಿಕೊಳ್ಳುವುದೆಂದು ತೋರಿಸಿಕೊಡುತ್ತಾರೆ. ಕೊನೆಗೆ ತಮ್ಮ ಉಪಸಂಹಾರ
ವಾಕ್ಯದಲ್ಲಿ ಹೀಗಿರುವಾಗ ಐದೂ ಇಂದ್ರಿಯಗಳ ವಶಕ್ಕೆ ಸಿಕ್ಕಿಬಿದ್ದಿರುವ ಮನುಷ್ಯನ ಪಾಡೇನು ?’ ಎಂದು ಉದ್ಗಾರ ಮಾಡುತ್ತಾರೆ.
ವಿವೇಕ ವೈರಾಗ್ಯಗಳಿಲ್ಲದ ಅಜ್ಞಾನಿಯು ವಿಷಯಾಸಕ್ತಿಯಿಂದ ಅಲ್ಪಸುಖಕ್ಕಾಗಿ ಬಾಹ್ಯವಿಷಯಗಳ ಬೆನ್ನಟ್ಟಿ ಹೋದರೆ ಅವನು ಕೊನೆಗೆ ಭ್ರಾಂತಿಕೂಪದಲ್ಲಿ ಬಿದ್ದು ಸಂಸಾರ ಸಂಕಟವನ್ನು ಅನುಭವಿಸುವನು. ಈ ಐದು ಇಂದ್ರಿಯಗಳೂ ಅವನನ್ನು ಬಲವಾದ ಪಾಶದಿಂದ ಬಂಧಿಸಿ ಮೃತ್ಯುವಿಗೆ ಒಪ್ಪಿಸುತ್ತವೆ ಅನ್ನುವುದು ಇದರ ಸಾರಾಂಶ.