ನಂಬಿದವರಿಗೆ ನಾರಾಯಣ, ನಂಬದವರಿಗೆ ನರಸಿಂಹ : ಧನುರ್ ಉತ್ಸವ ~ 8

ಧನುರ್ ಉತ್ಸವ ವಿಶೇಷ ಸರಣೀಯ ಏಳನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಎಂಟನೇಯ ದಿನ

ಪೂರ್ವದಾಗಸವು ಬೆಳಗಾಗಿ ಎಮ್ಮೆಗಳು ಎಳೆಹುಲ್ಲ

ಮೇಯ ಹೊರಟವು ನೋಡು ಮಿಕ್ಕ ಬಾಲೆಯರೆಲ್ಲ

ಹೋಗುವದು ಹೋಗಳಿರುವವರ ಹೋಗದೊಲು ಕಾಯುತ್ತ

ನಿನ್ನ ಕರೆಯಲು ಬಂದು ನಿಂತಿರುವೆವು

ಕುತೂಹಲ ತುಂಬಿರ್ಬ ಬಾಲೆಯೇ ಎದ್ದೇಳು ಹಾದಿ ಭಕುತಿಯ ಪಡೆದು

ಕುದುರೆಯನು ಸೀಳ್ದವನ ಮಲ್ಲರನು ಕೊಂದವನ

ದೇವಾದಿ ದೇವನನು ಸೇರಿ ನಾವ್ ಸೇವಿಸಲು

‘ಆಆ’ ಎಂದು ವಿಚಾರಿಸಿ ಕೃಪೆತೋರೆ ನಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ (ಭೂಪಾಲ ರಾಗ – ಆಟ್ಟ ತಾಳ)

“ಪೂರ್ವದಲ್ಲಿ ಬಾನು ಬಿಳುಚಿಕೊಂಡು ಬೆಳಕು ಹರಿಯಲು ತೊಡಗಿತು. ಮಂಜು ಹರಡಿರುವ ಹುಲ್ಲ ಹಾಸಿನಲ್ಲಿ  ಎಮ್ಮೆಗಳು ಮೇಯಲು ಹೊರಟುಬಿಟ್ಟವು.

ಯಾದವಕುಲದ ಹೆಣ್ಣುಗಳು ಸಹ ವ್ರತಕ್ಕೆ ಹೊರಟುಬಿಟ್ಟರು. ನಿನ್ನನ್ನು ನಮ್ಮ ಜತೆಯಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ ಕೆಲವು ಗೆಳತಿಯರನ್ನು ತಡೆದು ನಿಲ್ಲಿಸಿ ನಿನ್ನ ಬಾಗಿಲಿಗೆ ಬಂತು ನಿಂತಿದ್ದೇವೆ.

ಕುತೂಹಲ ತುಂಬಿರುವ ಹೆಣ್ಣೇ ,ಇನ್ನೂ ನಿದ್ರಿಸದೆ ಎದ್ದೇಳು.

ಕೇಸಿ ಎಂಬ ರಾಕ್ಷಸನ ಬಾಯನ್ನು ಸೀಳಿ ಕೊಂದವನನ್ನು, ಕಂಸನಿಂದ ಕಳುಹಿಸಲ್ಪಟ್ಟ ಮಲ್ಲರನ್ನು ಅಳಿಸಿದವನನ್ನು, ದೇವ ದೇವತೆಗಳಿಗೆಲ್ಲ ನಾಯಕನಾದವನನ್ನು, ನಮ್ಮ ಮನಸ್ಸು ಕದ್ದ ಕೃಷ್ಣನನ್ನು ಹೊಗಳಿ ಹಾಡಲು….

‘ಆಹಾ…’ ಎಂದು ಅವನು ಮನ ತಂಪಾಗಿ, ನಮಗೆಲ್ಲ ಕೃಪೆ ನೀಡುವನು….!”

ಎಂದು ತನ್ನ ಗೆಳೆತಿಯರನ್ನು ಕರೆಯುತ್ತಾಳೆ ಗೋದೈ…!

“ಕುದುರೆಯನು ಸೀಳ್ದವನ….”

ಮೃಗ ರೂಪದಲ್ಲಿ ಬಂದ ಅಸುರನ ಬಾಯನ್ನು ಸೀಳಿ ಕೊಂದವನೇ ಕೃಷ್ಣ.

ಕೃಷ್ಣನಿಂದ ತನಗೆ ಅಳಿವು ಎಂದು ಆಕಾಶವಾಣಿಯಾದ ದುರ್ಗೆಯ ಮಾತನ್ನು ಕೇಳಿ ಕಂಸ, ಕೃಷ್ಣನನ್ನು ಕೊಲ್ಲಲೂ, ಅವನು ವಾಸವಿರುವ ಗೋಕುಲದಲ್ಲಿ ಪ್ರಜೆಗಳನ್ನು ಬೆದರಿಸಲೂ ನಿರಂತರವಾಗಿ ತನ್ನ ಬಲಶಾಲಿ ಅಸುರನ್ನು ಕಳುಹಿಸುತ್ತಲೇ ಇದ್ದನು.

ಪೂತನಿ ಮತ್ತು ಅವಳ ಸಹೋದರರಾದ ಬಕಾಸುರ, ಅಕಾಸುರ, ಕಂಸನ ಅಸುರ ಕುಲ ಗೆಳೆಯರಾದ ಶಕಟಾಸುರ, ತೃಣಾವರ್ತ ಎಂದು ತಾನು ಕಳುಹಿಸಿದ ಎಲ್ಲರೂ ಕೃಷ್ಣನಿಂದ ಕೊಲ್ಲಲ್ಪಟ್ಟದ್ದನ್ನು ಕೇಳಿ, ಚಿಂತಾಜನಕನಾಗಿ ಕುಳಿತಿದ್ದನು ಕಂಸ.

ಆಗ ಕಂಸನ ಚಿಂತೆಯ ಕಾರಣವನ್ನು ಕೇಳಿ ಅವನ ಆಪ್ತ ಸ್ನೇಹಿತನೂ, ಕೈಗೆತ್ತಿಕೊಂಡ ಕಾರ್ಯಗಳನ್ನು ತಡೆಯಿಲ್ಲದೆ ಜಯಿಸುವವನು ಆದ ಅಸುರ ಕೇಸಿ, “ನಾನಿರುವಾಗ ನೀನು ಚಿಂತೆ ಮಾಡಬಹುದೇ ಗೆಳೆಯಾ? ಇರು ಕೃಷ್ಣನನ್ನು ಅಳಿಸಿ ಗೆದ್ದು ಹಿಂತಿರುಗುತ್ತೇನೆ…” ಎಂದು ಕಂಸನಿಗೆ ಸಮಾಧಾನ ಹೇಳಿ ಕೃಷ್ಣನನ್ನು ಕೊಲ್ಲಲು ಗೋಕುಲಕ್ಕೆ ಹೋಗುತ್ತಾನೆ.

ಗೋಕುಲದೊಳಗೆ ಹೋದಕೂಡಲೇ, ಒಂದು ದೊಡ್ಡ ರಾಕ್ಷಸ ಕುದುರೆಯ ಆಕಾರ ತಾಳಿದ ಅಸುರ ಕೇಸಿ, ಕತ್ತನ್ನು ಕೊಂಕಿಸಿ ಆ ಗೋಕುಲವೇ ಅದುರಿ ನಡುಗುವಂತೆ ಎತ್ತರದ ದನಿಯಲ್ಲಿ ಕೆನೆಯಲು, ತನ್ನನ್ನು ಯುದ್ಧಕ್ಕೆ ಕರೆಯುವುದಕ್ಕಾಗಿಯೇ ಕುದುರೆಯ ಆಕಾರದಲ್ಲಿ ಅಸುರ ಬಂದಿದ್ದಾನೆ ಎಂಬುದನ್ನು ಅರಿತ ಕೃಷ್ಣ, ಕೇಸಿಯನ್ನು ಎದುರಿಸಿ ನಿಲ್ಲುತ್ತಾನೆ.

ಕೃಷ್ಣನನ್ನು ಕಂಡ ಕೇಸಿ, ಬ್ರಹ್ಮಾಂಡವೇ ಪತರಗುಟ್ಟುವಂತೆ ಸಿಂಹದಂತೆ ಗರ್ಜಿಸಿ, ತನ್ನ ಬಲವಾದ ಕಾಲುಗಳಿಂದ ಕೃಷ್ಣನನ್ನು ತುಳಿಯಲು ಯತ್ನಿಸುತ್ತಾನೆ. ಕೃಷ್ಣನೋ ತಪ್ಪಿಸಿಕೊಂಡು ಆಟವಾಡಿಸಲು, ಕಟುಕೋಪಗೊಂಡ ಕೇಸಿ, ಕೊನೆಗೆ ತನ್ನ ಬಾಯನ್ನು ತೆರೆದು ಕೃಷ್ಣನನ್ನು ನುಂಗಲು ಪ್ರಯತ್ನಿಸುತ್ತಾನೆ. ಕೃಷ್ಣ ತಕ್ಷಣವೇ ದೊಡ್ಡ ಆಕಾರವನ್ನು ತಾಳಿ ತನ್ನ ಕೈಯಿಂದ ಆ ಕುದುರೆಯ ಬಾಯನ್ನು ಸೀಳಿ ಕೇಸಿ ವಧೆ ಮಾಡುತ್ತಾನೆ.

ಕೇಸಿ ವಧೆ ಮಾಡಿದ್ದಕ್ಕಾಗಿಯೇ ಕೇಶವ ಎಂಬ ಹೆಸರನ್ನು ಪಡೆದುಕೊಂಡನು ಕೃಷ್ಣ.

ಕೃಷ್ಣ ಎಲ್ಲರಿಗೂ ಪ್ರಿಯವಾದವನಲ್ಲವೇ. ಅವನು ಯಾಕೆ ಪ್ರತಿಸಲವೂ ಅಸುರರನ್ನು ಶಿಕ್ಷಿಸಲು, ಕೊಲ್ಲಲು ಬೇಕು ಎಂದರೆ ಅದಕ್ಕೆ ಕಾರಣಗಳನ್ನು ಹೇಳುತ್ತದೆ ಪುರಾಣಗಳು.

ನಮ್ಮ ಭಗವಂತನಾದ ಕೇಶವ ಎಲ್ಲರಿಗೂ ಸಮನಾದವನು. ಸಾತ್ವಿಕ, ರಜೋ, ತಾಮಸ ಎಂಬ ಮೂರು ಗುಣಗಳನ್ನು ಗೆದ್ದವನು. ಆ ಮೂರು ಗುಣಗಳಿಗೂ ಸಾಕ್ಷಿಯಾಗಿ ನಿಂತವನು. ಎಲ್ಲರೊಳಗೆ ಹೊಕ್ಕು, ಅವರ ಅಸುರ ಗುಣಗಳನ್ನು ಕಡಿಮೆ ಮಾಡಿ ದೇವ ಗುಣವನ್ನು ಹೆಚ್ಚಿಸುವವನು. ಹಾಗೆ ದೇವ  ಗುಣ ಹೆಚ್ಚಾಗಿ ತನ್ನನ್ನೇ ಭಗವಂತನ ಬಳಿ ಅರ್ಪಿಸಿಕೊಂಡವರು ದೇವರಾದರೂ, ಅಸುರರಾದರೂ, ಮೃಗಗಳಾದರೂ ಅವರ ಅಡೆತಡೆಗಳನ್ನೆಲ್ಲ ನೀಗಿಸಿದವನು.

ಶ್ರೀರಂಗನ ಹನ್ನೆರಡು ನಾಮಗಳಲ್ಲಿ, ಮೊದಲ ಹೆಸರಾದ ಕೇಶವ ಎಂಬುದು ಕೇಶಿಯ ವಧೆ ಮಾಡಿದ್ದರಿಂದ ಉಂಟಾದದ್ದೂ ಎಂದರೂ ಕೇಶವನಿಗೆ ಅಡೆತಡೆಗಳನ್ನು ನೀಗಿಸುವವನು ಎಂದೂ, ಸುಂದರವಾದ ಕೇಶ ಉಳ್ಳವನೂ ಎಂದೂ ಸಹ ಅರ್ಥಗಳುಂಟು.

ಕೇಶ ತುಂಬಿದವನು ಎಂದ ಕೂಡಲೇ ವಿಷ್ಣುವಿನ ಹತ್ತು ಅವತಾರಗಳಲ್ಲಿ ಪ್ರಧಾನವಾಗಿ ಬಂದು ನಿಲ್ಲುವುದು ಕುತ್ತಿಗೆಯ ಮೇಲಿನ ಕೂದಲು ಹರಡಿ ನಿಂತಿರುವ ನರಸಿಂಹ ಅವತಾರ. ಕುತ್ತಿಗೆಯ ಕೂದಲು ತುಂಬಿ ಹರಡಿರುವ ನರಸಿಂಹನ ಮುಖ ಮನಸ್ಸಿನಲ್ಲಿ ತೋರುವಾಗ, ಪ್ರಹಲ್ಲಾದನ ನೆನಪು ಬರದೇ ಇರುತ್ತದೆಯೇ?

ಬಾಲ್ಯ ಪರ್ವದಲ್ಲಿ ಕೃಷ್ಣನಿಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲದೆ ದುಃಖವನ್ನು ಅನುಭವಿಸದವನು ಹಿರಣ್ಯಕಶಿಪು ಎಂಬ ಹಿರಣ್ಯನ ಮಗನಾದ ಈ ‘ಭಕ್ತ ಪ್ರಹಲ್ಲಾದ’.

ತನ್ನ ಸಹೋದರನಾದ ಹಿರಣ್ಯಾಕ್ಷನನ್ನು ಕೊಂದ ಮಹಾವಿಷ್ಣುವಿನ ಮೇಲೆ ಸೇಡು ತೀರಿಸಿಕೊಳ್ಳುವ ಹಿರಣ್ಯ ಘೋರ ತಪಸ್ಸು ಮಾಡುವುದಕ್ಕಾಗಿ ದೇಶಬಿಟ್ಟು ಹೊರಡುವಾಗ, ಅವನ ಮಡದಿ ಕಯಾತುದೇವಿ ಪ್ರಹಲ್ಲಾದನನ್ನು ಗರ್ಭದಲ್ಲಿ ಧರಿಸಿರುತ್ತಾಳೆ.

 ಹಿರಣ್ಯನಿಗೆ ಮಕ್ಕಳಾದರೆ ದೇವ ಕುಲಕ್ಕೆ ಆಪತ್ತು ಉಂಟಾಗುತ್ತದೆ ಎಂಬುದರಿಂದ, ಗರ್ಭದಲ್ಲಿಯೇ ಪ್ರಹಲ್ಲಾದನನ್ನು ಅಳಿಸಲು ಬಂದ ಇಂದ್ರ. ಇಂದ್ರನನ್ನು ತಡೆದ ನಾರದಮುನಿ ಹಿರಣ್ಯನ ಹೆಂಡತಿ ಕಯಾತುದೇವಿ ಸ್ವಾಭಾವಿಕವಾಗಿಯೇ ಒಳ್ಳೆಯವಳು ಎಂದೂ, ಅವಳ ಮಗುವಿನಿಂದ ದೇವತೆಗಳಿಗೆ ಯಾವ ಆಪತ್ತು ಉಂಟಾಗಾದು ಎಂದೂ ಹೇಳಿ ಇಂದ್ರನಿಂದ ಅವಳನ್ನು ಕಾಪಾಡಿ ತನ್ನ ಆಶ್ರಮಕ್ಕೆ ಕರೆದು ಹೋಗುತ್ತಾರೆ.

ನಾರದರ ಆಶ್ರಮದಲ್ಲಿ ದಿನನಿತ್ಯವೂ ನಾರಾಯಣ ಮಂತ್ರವನ್ನು ಕೇಳಿ, ಕಯಾತುದೇವಿಯ ಗರ್ಭದಲ್ಲಿ ಬೆಳೆದುದ್ದರಿಂದ ಹುಟ್ಟುವಾಗಲೇ ನಾರಾಯಣ ಭಕ್ತನಾಗಿ ಜನಿಸುತ್ತಾನೆ ಪ್ರಹಲ್ಲಾದ.

ಘೋರ ತಪಸ್ಸು ಮಾಡಿದ ಪ್ರಹಲ್ಲಾದನ ತಂದೆ ಹಿರಣ್ಯ, ಬ್ರಹ್ಮ ದೇವನ ಬಳಿ ಮರಣವಿಲ್ಲದ ವರವನ್ನು ಪಡೆದು ತ್ರಿಲೋಕವನ್ನೂ ಜಯಿಸಿ, ಎಲ್ಲರನ್ನೂ ಗುಲಾಮರಾಗಿಸಿ ದೌರ್ಜನ್ಯದ ಆಡಳಿತ ಮಾಡಿದ್ದಲ್ಲದೆ, ದೇವತೆಗಳು, ಮನುಷ್ಯರು, ಭೂತ ಗಣಗಳು ಎಂದು ಎಲ್ಲರನ್ನೂ “ಓಂ ಹಿರಣ್ಯಾಯ ನಮಃ…” ಎಂದು ಉಚ್ಚರಿಸುವಂತೆ ಮಾಡುತ್ತಾನೆ.

ಎಲ್ಲಕ್ಕೂ ಒಂದು ಅಪವಾದವಿರುತ್ತದೆ ಎನ್ನುತ್ತಾರೆ. ಅದೇ ರೀತಿ, ಹಿರಣ್ಯನಿಗೆ ಮಗ ಪ್ರಹಲ್ಲಾದನ ರೂಪದಲ್ಲಿ ವಿಧಿ ಬರೆಯಲ್ಪಟ್ಟಿತ್ತು.

ತ್ರಿಲೋಕದಲ್ಲಿ ತನ್ನ ನಾಮವನ್ನು ಉಚ್ಚರಿಸುವಂತೆ ಮಾಡಿದ ಹಿರಣ್ಯನಿಂದ, ಹಗಲೂ ರಾತ್ರಿ, “ಓಂ ನಮೋ ನಾರಾಯಣಾಯ…” ಎಂದು ಮಹಾವಿಷ್ಣುವಿನ ನಾಮಸ್ಮರಣೆ ಮಾಡಿ ಸಾಧು ಸಂತರಿಗೆ ಸೇವೆಮಾಡಿ, ದೇವರ ಧ್ಯಾನದಲ್ಲಿ ಮುಳುಗಿ, ಭಗವಂತ ಮಹಾವಿಷ್ಣುವಿನ ನೆನಪಿನಲ್ಲಿಯೇ ಜೀವಿಸಿ ಬಂದ ಅವನ ಕಿರಿಯ ಮಗ ಪ್ರಹಲ್ಲಾದನನ್ನು ಮಾತ್ರ ಸ್ವಲ್ಪವೂ ಬದಲಾಯಿಸಲಾಗಲಿಲ್ಲ.

ತನ್ನ ಮನೆಯಲ್ಲಿಯೇ ಇದ್ದುಕೊಂಡು, ತನ್ನ ಪರಮ ವೈರಿಯನ್ನು ದಿನನಿತ್ಯ ಪೂಜಿಸುವ ಮಗನನ್ನು ನೋಡಿ ಹಿರಣ್ಯನಿಗೆ ಕೋಪ ನೆತ್ತಿಗೇರುತ್ತದೆ.

ಪ್ರಹಲ್ಲಾದನನ್ನು ಖಂಡಿಸಿಯೂ, ದಂಢಿಸಿಯೂ, ಬೆದರಿಸಿಯೂ ನೋಡಿ ಏನೂ ಆಗದೆ ಕೋಪದಲ್ಲಿ ಹುಚ್ಚು ಹಿಡಿದವನಂತೆ ಪ್ರಹಲ್ಲಾದ ತನ್ನ ಮಗ ಎಂಬುದನ್ನೂ ಮರೆತು ಹಿರಣ್ಯ ಕೋಪದಲ್ಲಿ ತನ್ನ ಮಗನನ್ನು ಕೊಲ್ಲಲು ಹರಿತವಾದ ಆಯುಧಗಳಿಂದ ದಾಳಿಮಾಡಿದಾಗಲೂ, ವಿಷ ಕುಡಿಸಿದಾಗಲೂ, ಮದಹಿಡಿದ ಆನೆಯ ಕಾಲುಗಳಿಗೆ ಕಟ್ಟಿಹಾಕಿದಾಗಲೂ, ವಿಷದ ಹಾವುಗಳೊಂದಿಗೆ ಸೆರೆಯಿಟ್ಟಾಗಲೂ, ಯಾವ ಬದಲಾವಣೆಗಳೂ ಇಲ್ಲದೆ ನಾರಾಯಣನ ನಾಮಗಳನ್ನು ನಗುತ್ತಲೇ ಉಚ್ಚರಿಸುತ್ತಿದ್ದನು.  

ಹಿರಣ್ಯ, ಎಷ್ಟೇ ಪ್ರಯತ್ನಿಸಿದರೂ ಪ್ರಹಲ್ಲಾದನನ್ನು ಕೃಷ್ಣ ಕಾಪಾಡಿಬಿಡುವುದರಿಂದ, ಮಗನನ್ನು ಕೊಲ್ಲಲೂ ಆಗದೆ, ಅವನ ದೈವ ಭಕ್ತಿಯನ್ನು ಬದಲಾಯಿಸಲೂ ಆಗದೆ, ಕೊನೆಗೆ ತನ್ನ ತಂಗಿ ಹೋಲಿಕಳನ್ನು ಕರೆದು ಬೆಂಕಿಯಿಟ್ಟು ಸುಟ್ಟು ಭಸ್ಮ ಮಾಡುವಂತೆ ಬೇಡಿಕೊಳ್ಳುತ್ತಾನೆ.

ಹೋಲಿಕಳನ್ನು ಹಿರಣ್ಯ ಹಾಗೆ ಕರೆದದ್ದಕ್ಕೆ ಒಂದು ಕಾರಣವೂ ಇತ್ತು. ಬೆಂಕಿಗೆ ಉರಿಯದ ವಸ್ತ್ರಗಳನ್ನು ತಪಸ್ಸು ಮಾಡಿ ಪಡೆದ ಅವಳು. ಅದನ್ನು ಹೊದ್ದುಕೊಂಡು ಕೈಗಳಲ್ಲಿ ಪ್ರಹಲ್ಲಾದನನ್ನು ಎತ್ತಿಕೊಂಡು ಹೋಲಿಕ ಬೆಂಕಿಯಲ್ಲಿ ಇಳಿದು ನಡೆಯಲು, ಆಗ ಕೃಷ್ಣ ಸುಳಿಗಾಳಿಯಾಗಿ ರೂಪಾತಾಳಿ, ವಸ್ತ್ರವನ್ನು ಪ್ರಹಲ್ಲಾದನ ಮೇಲೆ ಬೀಳುವಂತೆ ಮಾಡಿ ಅಗ್ನಿಯಿಂದ ಪ್ರಹಲ್ಲಾದನನ್ನು ಕಾಪಾಡಿ, ಹಿರಣ್ಯನ ತಂಗಿ ಹೋಲಿಕಳನ್ನು ಬೆಂಕಿಗೆ ಆಹುತಿಯಾಗುವಂತೆ ಮಾಡುತ್ತಾನೆ.

ಇಂದೂ ಹೋಲಿಕಳ ನೆನಪಾಗಿ ಆಚರಿಸುವ ಹೋಲಿ ಹಬ್ಬದ ಮೊದಲ ದಿನ ಅವಳ ಆಕಾರವನ್ನೇ ಬೆಂಕಿಗೆ ಇಡಲಾಗುತ್ತದೆ.

“ನಂಬಿದವರಿಗೆ ನಾರಾಯಣ…. ನಂಬದವರಿಗೆ ನರಸಿಂಹ…”

ಎಂಬುದನ್ನು ಖಚಿತಪಡಿಸುವ ರೀತಿಯಲ್ಲಿ, ಪ್ರತಿಸಲವೂ ಅಡೆತಡೆಗಳನ್ನು ನೀಗಿಸಿ, ಪ್ರಹಲ್ಲಾದನನ್ನು ಪ್ರಾಣ ಸಮೇತ ಕಾಪಾಡಿದವನು ಕೇಶವ.

ಭಕ್ತ ಪ್ರಹಲ್ಲಾದನ ಮನಸ್ಸನ್ನು ಬದಲಾಯಿಸಲು ಹಿರಣ್ಯ ಕೈಗೊಂಡ ಸಾಮ, ಬೇಧ , ದಾನ, ದಂಢ ಎಂಬ ಸಕಲ ಪ್ರಯತ್ನಗಳೂ ವಿಫಲವಾಗಲು, ಅಂತ್ಯದಲ್ಲಿ ತಂದೆಯೇ ಮಗನನ್ನು ಕೊಲ್ಲಲು ಬರುವಾಗ ನರಸಿಂಹ ಅವತಾರ ತಾಳಿ ಕಂಬದಿಂದ ಹೊರ ಬಂದು, ಉಗ್ರ ರೂಪದಲ್ಲಿ ತನ್ನ ಚೂಪಾದ ಉಗುರುಗಳಿಂದ ಹಿರಣ್ಯನ ಎದೆಯನ್ನು ಸೀಳಿ ವಧಿಸಿದನು ಕೇಶವ, ಕುತ್ತಿಗೆಯ ತುಂಬಾ ಕೇಶವಿದ್ದ ನಮ್ಮ ನರಸಿಂಹ.

ದೇವೇತೆಗಳನ್ನು ಕಾಪಾಡುವುದು ಮಾತ್ರವಲ್ಲ, ದೇವತೆಗಳಿಗೆ ವೈರಿಯಾದ ಅಸುರ ಕುಲ ಬಾಲಕನಾದ ಪ್ರಹಲ್ಲಾದನನ್ನು ಕಾಪಾಡಲೂ ಅವನು ಒಂದು ಅವತಾರ ತಾಳಿದನು ಎಂಬುದನ್ನು ನೋಡುವಾಗ, ಭಗವಂತ ಅಸುರರಿಗೆ ವೈರಿಯಲ್ಲ, ರಕ್ಕಸ ಗುಣಕ್ಕೆ ವೈರಿಯಾಗಿದ್ದ ಎಂಬುದು ಅರ್ಥವಾಗುತ್ತದೆ.

“ಪ್ರಹಲ್ಲಾದ ಸಂಭಕ್ತಾನಾಮ್ ಪ್ರಿಯ…”

ಪ್ರಹಲ್ಲಾದನಿಗೆ ಸಮನಾಗಿ ಭಕ್ತಿ ಇರುವ ಎಲ್ಲರ ಬಳಿಯೂ ಅವನು ಮೃಗವೇ ಆದರೂ, ಅರಸನೇ ಆದರೂ ಪ್ರೀತಿಯನ್ನು ತೋರಿಸುವವನು ಶ್ರೀಮನ್ ನಾರಾಯಣ. ಹೀಗೆ ಅಸುರರಿಗೆ ನೆರವಾಗುವ ಕರುಣೆಯ ಹೃದಯ ಪಡೆದ ದೇವತೆಗಳಿಗೆಲ್ಲ ನಾಯಕನಾದ ನಮ್ಮ ಭಗವಂತನನ್ನು ಹಾಡಿ ಹೊಗಳಿ, ಪೂಜಿಸಿದರೆ ನಮ್ಮ ಸಂಕಷ್ಟಗಳನ್ನೆಲ್ಲ ನೀಗಿಸಿ, ದಯೆ ಪಾಲಿಸುತ್ತಾನೆ ಕೇಶವ ಎಂದು ನಿದ್ರೆ ಮಾಡುವ ಹೆಣ್ಣನ್ನು, ಎಂಟನೇಯ ದಿನದಂದು ಎಬ್ಬಿಸುತ್ತಾಳೆ ಗೋದೈ ಆಂಡಾಳ್!

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply