ನೀ ಏಳದೆಯೆ ಮಲಗಿರ್ಪ ಅರ್ಥವದೇನೇ!? : ಧನುರ್ ಉತ್ಸವ ~ 11

ಧನುರ್ ಉತ್ಸವ ವಿಶೇಷ ಸರಣೀಯ ಏಳನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಹನ್ನೊಂದನೇಯ ದಿನ

ಕರೆವ ಹಸುಗಳ ಹಿಂಡುಗಳ ಹಲವನು ಕರೆದು

ಶತ್ರು ಬಲವಳಿಯುವ ತೆರದಿ ಹೋಗಿ ಯುದ್ಧವ ಮಾಡ್ವ

ದೋಷವೊಂದೂ ಇಲ್ಲದಿಹ ಗೋವಳ ಕುಲದ ಹೊನ್ನಬಳ್ಳಿಯ

ಹುತ್ತದಿಹ ಹಾವಂತೆ ನಿತಂಬವಿಹ ಬನ ನವಿಲೆ ಹೊರಟು ಬಾ

ಸುತ್ತಲಿಹ ಕೆಳತಿಯರೆಲ್ಲರೂ ಬಂದು

ನಿನ್ನ ಮನೆಯಂಗಳವ ಹೊಕ್ಕು ಮುಗಿಲ ಬಣ್ಣನ ನಾಮ ಪಾಡುತಿರಲ್ಕೆ

ಅಲುಗದೆಯ ಮಾತಾಡದೆಯೆ ಸಿರಿ ವೆಣ್ಣೇ

ನೀ ಏಳದೆಯೆ ಮಲಗಿರ್ಪ ಅರ್ಥವದೇನೇ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ    (ಶಹಾನಾ ರಾಗ – ತ್ರಿಪುಟ ತಾಳ)

“ಕರುಗಳಿಗೆ ಜನ್ಮನೀಡಿ ಹೆಚ್ಚು ಹಾಲು ಸ್ರವಿಸುವ ಹಸುಗಳನ್ನು ಉಳ್ಳವರೂ,  ಬಲ ಹೊಂದಿರುವ  ವೈರಿಗಳೇ ಆದರೂ ಅವರ ಸ್ವಸ್ಥಾನಕ್ಕೇ ತೆರಳಿ ವೈರಿಗಳನ್ನು ಅಳಿಸುವ ವೀರರಿರುವ ಯಾದವ ಕುಲದಲ್ಲಿ ಜನಿಸಿದ ಹೊನ್ನ ಧ್ವಜದಂತಹ ಸುಂದರವಾದ ಹೆಣ್ಣೇ!

ಹುತ್ತದಿಂದ ಎದ್ದುಬಂದು ಹೆಡೆಯೆತ್ತುವ ಹಾವಿನ ಕುತ್ತಿಗೆಗೆ ಸಮನಾದ ಸಣ್ಣ ನಡುವುಳ್ಳವಳೇ, ವನದ ನವಿಲಿನಂತ ಛಾಯೆ ಉಳ್ಳವಳೇ, ಎಚ್ಚರವಾಗಿ ಎದ್ದು ಬರುವಂತವಳಾಗು!

ಗೆಳೆತಿಯರು ನಾವೆಲ್ಲರೂ ನಿನ್ನ ಮನೆಯ ಅಂಗಳದಿ ನಿಂದು ನೀಲಮೇಘ ಕೃಷ್ಣನ ಶ್ರೀನಾಮಗಳ ಸ್ತುತಿಸಿ ಹಾಡುವುದ ಕೇಳಿದ ಮೇಲೂ, ನೀನು ಸ್ವಲ್ಪವೂ ಅಲುಗದೆ, ಮಾತನಾಡದೇ ನಿದ್ರಿಸುವುದು ಯಾಕೋ ಸಿರಿಹೆಣ್ಣೇ?” ಎಂದು ಗೆಳತಿಯ ಬಳಿ ಕೇಳುತ್ತಾಳೆ.

“ಕರೆವ ಹಸುಗಳ ಹಿಂಡುಗಳ ಹಲವನು ಕರೆದು…”

ಹಸು ಎಂಬ  ಸಂಪತ್ತೂ, ಕ್ಷೀರವೆಂಬ ಸಮೃದ್ಧಿಯೂ ತುಂಬಿದ ಯಾದವ ಕುಲದಲ್ಲಿ ಇರುವ ಒಬ್ಬ ಹೆಣ್ಣನ್ನು ನೋಡಿ, ಗೋದೈ ಹೀಗೆ ಹಾಡುತ್ತಾಳೆ.

ಯಾದವ ಕುಲದ ಕಸುಬಾದ ದನ ಮೇಯಿಸುವುದನ್ನು, ಉಳಿದ ಯಾದವರಂತೆಯೇ ತಾನು ಮಾಡಿದವನು ಕೃಷ್ಣ. ಆದರೆ ಇವರು ವೃತ್ತಿಯಿಂದ ದನ ಕಾಯುವವರಾದರೂ, ನಿಜವಾಗಲು ಶೌರ್ಯದಲ್ಲಿ ಶ್ರೇಷ್ಠರಾಗಿದ್ದವರು. ಸಿಂಹವನ್ನು ಅದರ ಗುಹೆಯಲ್ಲಿ ಬೇಟಿಯಾಡುವಂತೆ, ವೈರಿಗಳನ್ನು ಅವರು ಎಷ್ಟೇ ಶಕ್ತಿಶಾಲಿಗಳಾಗಿದ್ದರೂ, ಅಂಜದೆ ಅವರ ಜಾಗಕ್ಕೆ ಹೋಗಿ ಅಳಿಸಬಲ್ಲ ಬಲ ಉಳ್ಳವರಂತೆ.

ಕುರುಕ್ಷೇತ್ರ ಯುದ್ಧದಲ್ಲಿ ನಾರಾಯಣಿ ಸೈನ್ಯ ಎಂದು ಕರೆಯಲ್ಪಡುವ ಯಾದವ ಸೇನೆ ಪಾಂಡವರ ಕಡೆ ಇದ್ದರೆ, ಪಾಂಡವರು ತಮ್ಮನ್ನು ಸುಲಭವಾಗಿ ಗೆದ್ದುಬಿಡುತ್ತಾರೆ ಎಂದು ಹೆದರಿದ ದುರ್ಯೋಧನ, ಯಾದವ ಸೈನ್ಯವನ್ನು ಪಾಂಡವರು ಪಡೆದುಬಿಡಕೂಡದೆಂಬ ಕೋರಿಕೆಯೊಂದಿಗೆ ಕೃಷ್ಣನನ್ನು ಯುದ್ಧಕ್ಕೆ ಮೊದಲು ಬೇಟಿಯಾಗುತ್ತಾನೆ ಎಂದರೆ, ಯಾದವರ ಶೌರ್ಯದ ಬಗ್ಗೆ ನಮಗೆ ಅರ್ಥವಾಗುತ್ತದೆ ಅಲ್ಲವೇ? ಅಂತಹ ಯಾದವರ ಜತೆಯಲ್ಲೇ ಬೆಳೆದ ಕೃಷ್ಣ ಅವರಂತೆಯೇ ಇರುತ್ತಾನಲ್ಲವೇ!

ದನ ಕಾಯುವವರಿಗೆ ಅವನೇನೋ ಒಳ್ಳೆಯವನಾಗಿ ಇದ್ದಿರಬಹುದು. ಆದರೆ ತನ್ನನ್ನು ಕೊಲ್ಲಲು ನಿರ್ಧರಿಸಿದ ಮಾವನಿಗೆ ಸಿಂಹ ಸ್ವಪ್ನವಾಗಿಯೇ ಇದ್ದವನಲ್ಲವೇ? ಅಂತಹ ಭಗವಂತ, ತನ್ನ ಗೆಳೆಯನಾಗಿದ್ದರೆ ಏನು ಮಾಡುತ್ತಿದ್ದ? ಎಂಬುದನ್ನೂ, ಅದೇ ವೈರಿಯಾಗಿದ್ದರೆ ಏನು ಮಾಡುತ್ತಿದ್ದನೆಂಬುದನ್ನೂ ತಿಳಿದುಕೊಳ್ಳೋಣ ಬನ್ನಿ!

ಬೆಣ್ಣೆ ಎಂದರೆ,  ಮಗು ಕೃಷ್ಣನಿಗೆ ಬಹಳ ಇಷ್ಟ. ಸಣ್ಣ ವಯಸ್ಸಿನಲ್ಲಿ ಹಾಲು, ಮೊಸರು, ಬೆಣ್ಣೆ ಮುಂತಾದುವನ್ನು ತನ್ನ ಮನೆಯಿಂದ ಮಾತ್ರವಲ್ಲ, ಎಲ್ಲ ಗೋಪಿಯರ ಮನೆಗಳಿಂದಲೂ ಕದ್ದು ತಿನ್ನುತ್ತಿದ್ದನು. ತಾನು ಉಣುವುದು ಮಾತ್ರವಲ್ಲದೆ ತನ್ನ ಗೆಳೆಯರಿಗೂ ಹಂಚಿಕೊಡುತ್ತಿದ್ದನು. ಹೀಗೆ ಅವನು ಮಾಡುವ ತುಂಟಾಟಗಳಿಗೆ ಲೆಕ್ಕವೇ ಇಲ್ಲ.

ತಾನು ಬೆಣ್ಣೆ ಕದ್ದದ್ದೂ ಅಲ್ಲದೆ, ಅಲ್ಲಿಂದ ಹೊರಗೆ ಬರುವಾಗ, ಯಾರೂ ಇಲ್ಲದ ಯಾದವರ ಮನೆಗಳಲ್ಲಿ ಕರುಗಳನ್ನು ಬಿಚ್ಚಿಬಿಟ್ಟು, ಅವುಗಳ ತಾಯ ಬಳಿ ಹಾಲುಣಿಸಿ, ಗೋಪಿಯರು ಕರೆಯಲು ಹಾಲಿಲ್ಲದಂತೆ   ಮಾಡಿಬಿಡುತ್ತಿದ್ದ ಕೃಷ್ಣ.

ಒಮ್ಮೆ, ತನ್ನ ಗೆಳೆಯ ತದಿಪಾಂಡನ ಬಳಿ ಹಾಗೆಯೇ ಆಟ ಆಡಿದನು ಮಾಯಕೃಷ್ಣ.

ಕೃಷ್ಣನ ಗೆಳೆಯ ತಡಿಪಾಂಡ ನಿಜವಾಗಲೂ ಬಹಳ ಮುಗ್ಧ. ಕಳ್ಳಕಪಟ ಅರಿಯದವನು. ಅಂದು ಕೃಷ್ಣ ಅವನನ್ನು ಆಟವಾಡಲು ಕರೆದಾಗ, ತದಿ ಪಾಂಡ ತನ್ನ ಮನೆಯ ಕೊಟ್ಟಿಗೆಯಲ್ಲಿ ಕರುಗಳ ಹಗ್ಗವನ್ನು ಎಳೆದುಹಿಡಿದುಕೊಂಡು ಅವುಗಳನ್ನು ಹಸುವಿನ ಬಳಿ ಹೋಗದಂತೆ ನೋಡಿಕೊಳ್ಳುತ್ತಿದ್ದನು. ತದಿ ಪಾಂಡನ ತಾಯಿ ‘ತಾನು ಬಂದು ಹಾಲು ಕರೆದ ನಂತರವೇ, ಕರುಗಳನ್ನು ಹಸುವಿನ ಬಳಿ ಬಿಡಬೇಕು. ಅಲ್ಲಿಯವರೆಗೆ, ಕರುಗಳನ್ನು ದೂರ ಕಟ್ಟಿಹಾಕಿ ಕಾಯುತ್ತಿರಬೇಕು’ ಎಂದು ಆಜ್ಞೆ ಮಾಡಿರುತ್ತಾಳೆ.

ಕರುಗಳೆಲ್ಲವೂ ತಾಯಿ ಹಾಲಿಗಾಗಿ ತವಕಿಸುತ್ತಾ ಕೂಗುವುದನ್ನು ನೋಡಿದ ಕೃಷ್ಣ, ಅವುಗಳಿಗೆ ಹಾಲು ದೊರಕುವಂತೆ ಮಾಡಲು, ಅದಕ್ಕಾಗಿ ಆಲೋಚಿಸಿ, ತದಿಪಾಂಡನನ್ನು ತನ್ನೊಂದಿಗೆ ಆಟವಾಡಲು ಕರೆಯಲು, ತನ್ನ ತಾಯಿಗೆ ಹೆದರಿ ತದಿಪಾಂಡಕೃಷ್ಣನೊಂದಿಗೆ ಆಟವಾಡಲು ನಿರಾಕರಿಸುತ್ತಾನೆ.

ಆಲೋಚಿಸಿದ ಕೃಷ್ಣ, ಸಿಹಿಯನ್ನು ಬಹಳವಾಗಿ ಇಷ್ಟಪಡುವ ತದಿಪಾಂಡನ ಬಳಿ, ಒಣ ಹುಲ್ಲು ರಾಶಿಯ ಹಿಂದೆ ತಾನು ಬಹಳ ಸಿಹಿಗಳನ್ನು ಇಟ್ಟಿರುವುದಾಗಿ ಹೇಳುತ್ತಾನೆ. ಕೃಷ್ಣನ ಆಸೆಯ ಮಾತುಗಳಿಗೆ ತನ್ನನ್ನು ಮರೆತು ತದಿಪಾಂಡಸಿಹಿಯನ್ನು ಹುಡುಕಿಕೊಂಡು ಒಣ ಹುಲ್ಲಿನ  ರಾಶಿಯ ಹಿಂದೆ ಜಿಗಿದು ಹಾರಿ ಓಡುತ್ತಾನೆ.

ಸಿಹಿಗಳನ್ನು ತದಿಪಾಂಡಆಸೆಯಿಂದ ತಿನ್ನುತ್ತಿರುವ ಅದೇ ಸಮಯ ಮತ್ತೊಂದು ಕಡೆ, ಕರುಗಳ ಹಗ್ಗವನ್ನು ಬಿಚ್ಚಿಬಿಟ್ಟ ಕೃಷ್ಣ ತಾನು ಅಂದುಕೊಂಡಂತೆಯೇ ತಾಯಿ ಹಸುವಿನ ಬಳಿ ಆನಂದವಾಗಿ ಹಾಲು ಕುಡಿಯುವುದನ್ನು  ನೋಡಿ ತುಂಬಿದ ಮನದೊಂದಿಗೆ ಅಲ್ಲಿಂದ ಹೊರಟುಹೋಗುತ್ತಾನೆ.

ಹಾಲು ಕರೆಯಲು ಬಂದ ತದಿಪಾಂಡನತಾಯಿ, ಕರುಗಳೆಲ್ಲ ಹಾಲನ್ನು ಕುಡಿದು ಮುಗಿಸಿದ್ದರಿಂದ, ಅಂದಿನ ವ್ಯಾಪಾರಕ್ಕೆ, ಮನೆಯ ಬಳಕೆಗೆ ಹಾಲಿಲ್ಲದ ಕೋಪದಲ್ಲಿ ಮಗನನ್ನು ಚೆನ್ನಾಗಿ ಹೊಡೆದುಬಿಡುತ್ತಾಳೆ. ಇದರಿಂದ ತದಿಪಾಂಡನಿಗೆ  ಕೃಷ್ಣನ ಮೇಲೆ ಬಹಳ ಕೋಪವಿರುತ್ತದೆ. ಕೃಷ್ಣ ತನ್ನ ಬಳಿ ಸಿಕ್ಕಿಹಾಕಿಕೊಳ್ಳುವ ಸಮಯ, ಅವನನ್ನು ನೋಡಿಕೊಳ್ಳೋಣ ಎಂದು ಕಾಯುತ್ತಿದ್ದನು.

ಆ ದಿನವೂ ಬಂದಿತು.  ಅಂದು ಎಂದಿನಂತೆ ಗೋಪಿಯರ ಮಡಿಕೆಯಿಂದ ಕೃಷ್ಣ ಬೆಣ್ಣೆ ಕದಿಯುವಾಗ ಮಡಿಕೆ ಕೆಳಗೆ ಬಿದ್ದು ಒಡೆದುಹೋದದ್ದರಿಂದ, ಗೋಪಿಯರು ಕೃಷ್ಣನ ಬಗ್ಗೆ ಯಶೋಧೆಯ ಬಳಿ ದೂರು ಹೇಳಲು, ಕೋಪಗೊಂಡ ಯಶೋಧೆ ಅವನನ್ನು ಹುಡುಕಿಕೊಂಡು ಬಂದಳು. ತಾಯಿಯ ಹೊಡೆತದಿಂದ ತಪ್ಪಿಸಿಕೊಂಡು, ತದಿಪಾಂಡನ ಮನೆಯೊಳಗೆ ಓಡಿ ಬಂದ ಕೃಷ್ಣ, “ಅಮ್ಮನ ಬಳಿ ಹೇಳಬೇಡ…” ಎನ್ನುತ್ತಾ ಅವನ ಮನೆಯ ಆಳೆತ್ತರದ  ಒಂದು ಖಾಲಿ ಮಡಿಕೆಯೊಳಗೆ ಅವಿತಿಟ್ಟುಕೊಳ್ಳುತ್ತಾನೆ.

ಸೇಡು ತೀರಿಸಿಕೊಳ್ಳಲು ಇದೇ ತಕ್ಕ ಸಮಯವಾದರೂ, ಯಾಕೋ ಕೃಷ್ಣನನ್ನು ತೋರಿಸಿಕೊಡಲು ಅವನ ಮನಸ್ಸು ಒಪ್ಪಲಿಲ್ಲ. ಕೃಷ್ಣ ಅವಿತಿಟ್ಟುಕೊಂಡ ಮಡಿಕೆಯ ಮೇಲೆ ಒಂದು ಮುಚ್ಚಳವನ್ನು ಹಾಕಿ ಆಟವಾಡುವಂತೆ ಹತ್ತಿ ಕುಳಿತುಕೊಂಡನು ತದಿಪಾಂಡ. “ಕೃಷ್ಣ ಇಲ್ಲಿ ಬಂದನೇ…?” ಎಂದು ಕೇಳಿದ ಯಶೋಧೆಯ ಬಳಿ “ಇಲ್ಲ” ಎಂದು ಸುಳ್ಳು ಹೇಳಿ ಕೃಷ್ಣನನ್ನು ಆ ಕ್ಷಣ ಕಾಪಾಡುತ್ತಾನೆ.

ಎಲ್ಲರೂ ಹೋದ ಮೇಲೆ, ಮಡಿಕೆಯಿಂದ ತನ್ನನ್ನು ಹೊರಗೆ ತೆಗೆಯುವಂತೆ ಕೇಳಿದ ಕೃಷ್ಣನ ಬಳಿ ತದಿಪಾಂಡ“ನೀನು ವಿಷ್ಣುವಿನ ಅವತಾರ, ನಿನ್ನನ್ನು ವಂಧಿಸಿದರೆ ನೀನು ಮೋಕ್ಷ ಕೊಡುತ್ತೀಯ ಎಂದು ಎಲ್ಲರೂ ಹೇಳುತ್ತಾರೆ. ನನಗೆ ಮೋಕ್ಷ ಎಂದರೆ ಏನು ಎಂದು ತಿಳಿಯದು. ಆದರೆ, ಅದನ್ನು ನನಗೆ ಕೊಡುವುದಾಗಿ ಪ್ರಮಾಣ ಮಾಡಿದರೆ, ಮಡಿಕೆಯ ಮುಚ್ಚಳವನ್ನು ತೆಗೆಯುತ್ತೇನೆ.!” ಎಂದು ಹೇಳುತ್ತಾನೆ.

ಆ ಸಣ್ಣ ಹುಡುಗನ ನಿಷ್ಕಲ್ಮಶ ಮನಸ್ಸನ್ನು ಮೊದಲೇ ಅರಿತಿದ್ದ ಕೃಷ್ಣ, “ಕೊಟ್ಟೇ ಮೋಕ್ಷ” ಎಂದಾಗ ಹುಡುಗನಾದ ತದಿಪಾಂಡ, ಅದೇ ಮುಗ್ಧ ಮನಸ್ಸಿನಿಂದ, “ನಿನ್ನನ್ನು ಕಾಪಾಡಿದ ನನಗೆ ಮಾತ್ರ ಮೋಕ್ಷ ನೀಡಿದರೆ ಸಾಕೇ? ನಮಗೆ ಸಹಾಯ ಮಾಡಿದ ಈ ಮಡಿಕೆಗೂ ಸೇರಿಯೇ ಮೋಕ್ಷ ಕೊಡು!” ಎಂದು ಮುಗ್ಧವಾಗಿ ಕೇಳಲು, “ಹಾಗೆಯೇ ಆಗಲಿ!” ಎಂದು ವರ ನೀಡುತ್ತಾನೆ ಕೃಷ್ಣ.

ಭಗವಂತನನ್ನು ತನ್ನೊಳಗೆ ಇಟ್ಟುಕೊಳ್ಳುವವರಿಗೆ ಮೋಕ್ಷ ಖಂಡಿತ ಎಂಬುದನ್ನು ನಿರೂಪಿಸುವಂತೆಯೇ, ಮೇಲು ಕೀಳು ಎಂಬ ವ್ಯತ್ಯಾಸವಿಲ್ಲದೆ, ಅವನು ಮೋಕ್ಷ ನೀಡುತ್ತಾನೆ ಎಂಬುದನ್ನು ತಿಳಿಸಿ ಹೇಳುವಂತೆ ತಡಿಪಾಂಡನ ಜತೆಯಲ್ಲೇ, ಇಂದಿನ ದಿನದವರೆಗೂ ವೈಕುಂಠದಲ್ಲಿ ಆ ಮಡಿಕೆಯೂ ಇರುವುದಾಗಿ ಪ್ರತೀತಿ.

ಮತ್ತೊಬ್ಬರಿಗೆ ತಿಳಿದೋ ತಿಳಿಯದೆಯೋ ಸಹಾಯ ಮಾಡಿದರೆ ಮೋಕ್ಷ ನಿಶ್ಚಯ ದೊರಕುತ್ತದೆ ಎಂದು ತಿಳಿಸಿದನು ತದಿಪಾಂಡ.

ಗೆಳೆಯನಿಗೆ ಮಾತ್ರವಲ್ಲದೆ, ಗೆಳೆಯನ ಮನೆಯ ಮಡಿಕೆಗೂ ಸೇರಿಸಿಯೇ ಮೋಕ್ಷ ನೀಡಿದ, ಒಳ್ಳೆಯ ಮನಸ್ಸುಳ್ಳವನು ಪರಂದಾಮ. ಅದೇ ತನ್ನ ವೈರಿಗೆ ಏನು ಮಾಡಿರಬಲ್ಲ ಎಂಬುದನ್ನೂ ನಾವು ತಿಳಿದುಕೊಳ್ಳಬೇಕಲ್ಲವೇ?

“ಶತ್ರು ಬಲವಳಿಯುವ ತೆರದಿ ಹೋಗಿ ಯುದ್ಧವ ಮಾಡ್ವ…”  ಎಂಬ ಗೋದೈಯ ಮುಂದಿನ ಸಾಲಿನಲ್ಲಿ. ‘ಕುಲದ ಕಸಬು ದನ ಕಾಯುವುದೇ ಆದರೂ ಗೂಳಿ ಅಡಗಿಸುವುದು, ದಂಡ, ಕತ್ತಿ ವರಸೆ, ಮಲ್ಲಯುದ್ಧ ಎಂದು ಎಲ್ಲದರಲ್ಲೂ ಪರಿಣತಿ ಪಡೆದಿರುವವರು ಯಾದವ ಕುಲದವರು’ ಎನ್ನುತ್ತಾಳೆ. ಅಂತಹ ಗೋಕುಲದಲ್ಲಿ ಬೆಳೆದ ಕೃಷ್ಣ ಮಾತ್ರ ಬೇರೆಯಾಗಿ ಹೇಗೆ ಬೆಳೆದಿರಲು ಸಾಧ್ಯ? ಮಹಾ ವೀರನಾಗಿ ಅಲ್ಲಿ ಕೃಷ್ಣ ಬೆಳೆದ.

ಕೃಷ್ಣನನ್ನು ಅವನ ಸ್ಥಳದಲ್ಲೇ ಕೊಲ್ಲಲು ಪ್ರಯತ್ನ ಮಾಡಿ ಸೋತ ಕಂಸ, ಒಮ್ಮೆ ಅವನನ್ನು ತನ್ನ ಜಾಗಕ್ಕೆ ಕರೆತರಬೇಕೆಂದು ಬಯಸಿ ಮಥುರಾಗೆ ಆಹ್ವಾನಿಸಿದನಂತೆ. ಯಾವುದಕ್ಕೂ ಅಂಜದ ಕೃಷ್ಣನೂ, ಬಲರಾಮನೂ ಮಥುರಾ ನಗರಕ್ಕೆ ಹೋದಾಗ, ಅಲ್ಲಿ ಅವರನ್ನು ಕೊಲ್ಲಲು ಕಂಸನಿಂದ ಕಳುಹಿಸಲ್ಪಟ್ಟ ಅರಮನೆಯ ಮಲ್ಲರನ್ನು ಅವರಿಬ್ಬರೂ ಅಲ್ಲೇ ಗೆದ್ದು ಮುಗಿಸುತ್ತಾರೆ.  

ಚಣೂರ, ಮುಷ್ಟಿಕಎಂಬ ಇಬ್ಬರು ಮಲ್ಲ ಯೋಧರ ಜತೆ ಹೋರಾಡಿ ಕೃಷ್ಣನೂ ಬಲರಾಮನೂ ಜಯಗಳಿಸಿದ್ದನ್ನು “ಎರಡು ಬೆಟ್ಟಗಳಂತೆ ಎದುರು ನಿಂತ ಇಬ್ಬರು ಮಲ್ಲರು …………………”ಎಂದು ಹಾಡುತ್ತದೆ ಭಾಗವತ.

ಇವರಿಬ್ಬರೂ ತನ್ನ ಮಲ್ಲ ಯೋಧರನ್ನು ಜಯಗಳಿಸಿದ ಸುದ್ಧಿಯನ್ನು ಕೇಳಿದ ಕಂಸನ ಕೋಪ ಎಲ್ಲೆ ಮೀರಲು, ಉಗ್ರಸೇನ, ವಸುದೇವ, ನಂದಗೋಪ ಎಂದು ಕೃಷ್ಣನ ನೆಂಟರೆಲ್ಲರನ್ನೂ ಕೃಷ್ಣ ಬರುವುದರೊಳಗೆ ಸಾಯಿಸಲು ಆಜ್ಞೆ ನೀಡುತ್ತಾನೆ ಕಂಸ.

ತನ್ನನ್ನು ಸಾಯಿಸಲು ಪ್ರಯತ್ನಿಸಿದಾಗಲೆಲ್ಲಾ ಕೋಪಗೊಳ್ಳದೆ, ಕಂಸ ಕಳುಹಿಸಿದ ವೈರಿಗಳನ್ನೆಲ್ಲಾ ವಧಿಸಿ ಶ್ರೀಕೃಷ್ಣನಿಗೆ  ತನ್ನ ಪ್ರಜೆಗಳಿಗೆ ಹಿಂಸೆ ಎಂದಕೂಡಲೇ ಕೋಪಗೊಂಡು, ನೇರವಾಗಿ ಕಂಸನ ಅರಮನೆಗೆ ಹೋಗಿ ಅಲ್ಲಿ ಅವನೊಂದಿಗೆ ಹೋರಾಡಿ ಅವನನ್ನು ಧರೆಗೆ ಉರುಳಿಸಿ ಕೊಲ್ಲುತ್ತಾನೆ.

ಕಂಸ ಅಳಿದಕೂಡಲೇ, ಕೃಷ್ಣನ ಅವತಾರದ ಉದ್ದೇಶ ನೆರವೇರಿದ್ದನ್ನು ತಿಳಿಸಲು ದೇವತೆಗಳು, ಹೂಮಳೆ ಸುರಿಸಿ ಹಾರೈಸಿದರಂತೆ!

ತನ್ನ ಮೇಲೆ ಪ್ರೀತಿ ತೋರಿದ ತಡಿಪಾಂಡನಿಗೆ ಮೋಕ್ಷ ನೀಡಿದ ಕೃಷ್ಣ, ತನ್ನನ್ನೂ ತನ್ನ ನೆಂಟರನ್ನು ಕೊಲ್ಲ ಬಯಸಿದ ಕಂಸನನ್ನು ನರಕದಲ್ಲಿಟ್ಟು ಚಿತ್ರಹಿಂಸೆ ಮಾಡಿರುತ್ತಾನೆ ಎಂದು ನಾವು ಅಂದುಕೊಂಡರೇ, ಅವನಿಗೆ ಸ್ವರ್ಗವನ್ನು ನೀಡಿದನಂತೆ ಆ ಪರಂದಾಮ.

ಶಿಕ್ಷೆ ವಿನೋದವಾಗಿದೆ ಎಂದರೆ, ಅದರ ಕಾರಣವೂ ಅದಕ್ಕಿಂತಲೂ ಹೆಚ್ಚು ವಿಸ್ಮಯವಾಗಿದೆ. ಭಕ್ತ ಭಗವಂತನನ್ನು ನೆನಪುಮಾಡಿಕೊಳ್ಳುವುದಕ್ಕಿಂತಲೂ, ವೈರಿಯಾದ ಕಂಸ ಭಗವಂತನನ್ನು ಹೆಚ್ಚು ನೆನಪು ಮಾಡಿಕೊಂಡನಂತೆ. ತನ್ನ ಪ್ರಾಣದ ಮೇಲಿದ್ದ ಭಯದ ಕಾರಣವಾಗಿ, ಉಣುವಾಗ, ನಿದ್ರಿಸುವಾಗ, ಎಚ್ಚರವಿರುವಾಗ, ಮಾತನಾಡುವಾಗ, ನಡೆಯುವಾಗ ಎಂದು ಸದಾ ಎಡೆಬಿಡದೆ ಕೃಷ್ಣನನ್ನೇ ನೆನಸುತ್ತಿದ್ದುದರಿಂದ, ಕಂಸನಿಗೆ ಮುಕ್ತಿ ಎಂಬ ಮೋಕ್ಷವನ್ನು ನೀಡಿದನಂತೆ ಭಗವಂತ. ತನ್ನ ಜೀವನ ಪೂರ್ತಿ ಯಾವುದಾದರೂ ಒಂದು ರೀತಿಯಲ್ಲಿ ಭಗವಂತನ ಚಿಂತೆಯಲ್ಲಿದ್ದುದರಿಂದ ಮರಣದ ನಂತರ ಭಗವಂತನಲ್ಲಿ ಐಕ್ಯವಾದನು ಕಂಸ.

ಭಕ್ತಿಯಲ್ಲಿ ಮೂರು ಬಗೆ ಉಂಟು ಎಂದು ಹೇಳುವ ಹಿರಿಯರು, ಅವನ್ನು ಜ್ಞಾನ ಭಕ್ತಿ, ಮೂಡ ಭಕ್ತಿ, ವಿದ್ವೇಷ ಭಕ್ತಿ ಎಂದು ವಿಂಗಡಿಸಿದ್ದಾರೆ.

ಇದರಲ್ಲಿ ಜ್ಞಾನ ಭಕ್ತಿ ಎಂಬುದು, ರುಕ್ಮಿಣಿಯ ಭಕ್ತಿಯ ರೀತಿ…. ಅರಿವಿನಿಂದಲೂ, ವಾತ್ಸಲ್ಯದಿಂದಲೂ ಕೃಷ್ಣನಿಂದ ಆಕರ್ಷಿಸಲ್ಪಟ್ಟು, ಅವನನ್ನೇ ಧ್ಯಾನಿಸುತ್ತಿರುವುದು. ಮೂಡ ಭಕ್ತಿ ಎಂಬುದು ಗೋಪಿಯರ ಭಕ್ತಿಯ ಹಾಗೆ, ತಮ್ಮ ಕೆಲಸಗಳೆಲ್ಲವನ್ನೂ ಮರೆತು ತಮ್ಮ ಮನಸ್ಸಿಗೆ ಇಷ್ಟವಾದ ಕೃಷ್ಣನ ಬಳಿ ಶರಣಾಗುವುದು. ಆದರೆ, ವಿದ್ವೇಷ ಭಕ್ತಿ ಎಂಬುದೋ ಕಂಸನ ಭಕ್ತಿಯಂತೆ…. ಅದು ಭಗವಂತನ ಮೇಲೆ ದ್ವೇಷ, ವೈರತ್ವ ಉಳ್ಳ ಒಬ್ಬ ಎಡೆಬಿಡದೆ ಭಗವಂತನನ್ನು ನೆನಪುಮಾಡಿಕೊಂಡಿರುವುದು. ಹಾಗೆ, ಕಂಸನ ವಿದ್ವೇಷ ಭಕ್ತಿಯಿಂದ, ಅವನು ಭಗವಂತನ ಬಳಿ ಐಕ್ಯವಾದನು ಎನ್ನುತ್ತವೆ ಪುರಾಣಗಳು.

“ಹೀಗೆ ಇಷ್ಟದಿಂದ ಸೇರಿದ ತದಿಪಾಂಡನಿಗೂ, ಇಷ್ಟ ಇಷ್ಟವಿಲ್ಲದ್ದೂ ಎಂದು ಏನೂ ತಿಳಿಯದ ಆ ಮಡಿಕೆಗೂ, ಸದಾ ತನ್ನನ್ನು ದ್ವೇಷಿಸುವುದೇ ಬದುಕಾಗಿಸಿಕೊಂಡ ಕಂಸನಿಗೂ, ಯಾವ ಬೇಧಭಾವ ಇಲ್ಲದೆ ಮೋಕ್ಷ ನೀಡುವವನಾಗಿ ಆ ಶ್ರಿನಿವಾಸನನ್ನು ಹಾಡಿ ಎಚ್ಚರಗೊಳಿಸಲು ಬರುವಂತವಳಾಗು” ಎಂದು ಗೆಳತಿಯನ್ನು ಹನ್ನೊಂದನೇಯ ದಿನದಂದು ಕರೆಯುತ್ತಾಳೆ ಗೋದೈ ಆಂಡಾಳ್!


ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply