ರಾವಣನ ಬಗೆಗಷ್ಟು… : ಧನುರ್ ಉತ್ಸವ ~ 12

ಧನುರ್ ಉತ್ಸವ ವಿಶೇಷ ಸರಣೀಯ ಹನ್ನೆರಡನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಹನ್ನೆರಡನೇಯ ದಿನ

ಕೆನೆಯುತ್ತ ಎಳೆಯ ಕರುಗಳೆಮ್ಮೆಗಳು ಕರುಗಳಂ ಕನಿಕರಿಸಿ

ನೆನೆಯೆ ಕೆಚ್ಚಲೊಳಗಿಂದ ಧಾರೆ ಹಾಲು ಹರಿಯುತ್ತಿರಲು

ನೆನೆದು ಮನೆ ಕೆಸರಾಗ್ವೆ ಒಳ್ಳೆ ಸಿರಿಯುಳ್ಳವನ ತಂಗಿಯೇ

ಹನಿಯು ತಲೆಯಲಿ ಬೀಳೆ ನಿನ್ನ ಬಾಗಿಲ ಮೆಟ್ಟಿಲನು ಹತ್ತಿ

ಕೋಪದಿಂ ದಕ್ಷಿಣದ ಲಂಕೆಯ ರಾಜನಂ ಕೊಂದ

ಮನಕಿನಿಯನನು ಪಾಡಲುಂ ನೀ ಬಾಯಿ ತೆರೆಯಲಾಪೆಯಾ

ಇನ್ನಾದರೂ ಏಳಮ್ಮ ಇದು ಎಂಥ ಗಾಢ ನಿದ್ರೆಯೇ

ಅಷ್ಟು ಮನೆಯವರುಂ ಎಚ್ಚರವಿಹರೇ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ  (ಕೇದಾರಗೌಳ ರಾಗ – ಆದಿ ತಾಳ)

“ತಮ್ಮ ಕರುಗಳ ಹಸಿವಿನ ದನಿ ಕೇಳಿದಕೂಡಲೇ ಎಮ್ಮೆಗಳು ತಮ್ಮ ಕೆಚ್ಚಲಿನ ಹಾಲನ್ನು ಸ್ರವಿಸುತ್ತಾ ಅಲ್ಲೂ ಇಲ್ಲೂ ಅಲೆದಾಡುತ್ತವೆ.

ಹಾಗೆ ಸುರಿಸಿದ ಹಾಲು ಮನೆಯ ಹೊಸಿಲನ್ನೆಲ್ಲಾ ಕೆಸರಾಗಿಸುವಷ್ಟು ಹಾಲಿನ ಸಮೃದ್ಧಿಯುಳ್ಳ ಮನೆಯನ್ನು ಹೊಂದಿರುವವನ ತಂಗಿಯೇ…!

ಸುರಿವ ಮಂಜು ನಮ್ಮ ತಲೆ ಮೇಲೆ ಬೀಳಲು, ನಿನ್ನ ಮನೆಯ ಹೊಸಿಲಿನಲ್ಲಿ ನಾವು ಕಾದು ನಿಂತಿರುವೆವು.

ಸೀತೆಯನ್ನು ಅಪಹರಿಸಿ ಹೋದ ರಾವಣನ ಮೇಲೆ ಕೋಪಗೊಂಡು ಅವನ ಅಳಿಸಿದ ರಾಮನ ಹಿರಿಮೆಯ ಹಾಡುತ್ತಿದ್ದೇವೆ.

ನೀನೋ ಸುಮ್ಮನೆ ಇನ್ನೂ ನಿದ್ರಿಸುತ್ತಲೇ ಇರುವೆ. ಎಲ್ಲರೂ ಎಚ್ಚರವಾದ ಮೇಲೂ, ನಿನಗೆ ಮಾತ್ರ ಯಾಕೆ ಗಾಢ ನಿದ್ರೆ, ಈಗಲೇ ಎದ್ದೇಳುವಂತವಳಾಗು.”

ಎಂದು ನಿದ್ರಿಸುತ್ತಿರುವ ಗೆಳತಿಯನ್ನು ಎಚ್ಚರಗೊಳಿಸಲು ಹಾಡುತ್ತಾಳೆ ಗೋದೈ…!

“ಕೋಪದಿಂ ದಕ್ಷಿಣದ ಲಂಕೆಯ ರಾಜನಂ ಕೊಂದ ಮನಕಿನಿಯನನು.”

“ದಕ್ಷಿಣದಲ್ಲಿರುವ ಲಂಕೆಯ ರಾಜನಾದ ರಾವಣನನ್ನು ಕೋಪದಿಂದ ಕೊಂದ ರಾಮನ ಬಗ್ಗೆ ಹಾಡುತ್ತಿರುವೆವಲ್ಲಾ? ಅದು ನಿನ್ನ ಕಿವಿಗೆ ಬೀಳಲಿಲ್ಲವೇ?”  ಎಂದು ನಿದ್ರಿಸುವ ಗೆಳತಿಯ ಬಳಿ ಕೇಳುತ್ತಿದ್ದಾಳೆ ಗೋದೈ.

ಆದರೆ, ಈ ಒಂದು ಸಾಲಿನಲ್ಲಿರುವ ವಿರೋಧಾಭಸವನ್ನು ನೋಡಿ. ಕೋಪ ಎಂದರೆ ಏನೆಂದೇ ತಿಳಿಯದ, ಇನ್ನೂ ಸರಿಯಾಗಿ ಹೇಳುವುದಾದರೆ, ಕೋಪ ಎಂಬ ಗುಣವನ್ನೂ ಸಹಾ ಅರಿಯದ ರಾಮ, ಕೋಪಗೊಂಡನು ಎನ್ನುತ್ತಾಳೆ ಗೋದೈ.

ಮನುಷ್ಯರು ಕೋಪಗೊಂಡರೆ ಸಾಕಷ್ಟು ಕೆಡಕುಗಳು ಘಟಿಸುತ್ತವೆ. ಅದರಲ್ಲೂ ದೇವರು ಕೋಪಗೊಂಡರೆ ಎನ್ನುತ್ತಾಳಲ್ಲ ಗೋದೈ! ಹಾಗೆ ಅವನು ನಿಜವಾಗಲೂ ಕೋಪಗೊಂಡಿದ್ದರೆ ಏನು ನಡೆಯುತ್ತಿತ್ತು?

ಅಷ್ಟು ಮಾತ್ರವಲ್ಲ  ರಾವಣನನ್ನು ‘ರಾಜ’ ಎಂದು ಬೇರೆ ಹೇಳುತ್ತಾಳಲ್ಲ ಇವಳು?

ರಾಮನಿಗೆ ಕೋಪ ಬಂದದ್ದರಲ್ಲೂ ಒಂದು ರೀತಿಯ ನ್ಯಾಯವಿದೆ. ಅವತಾರ ಪುರುಷನೇ ಆದರೂ, ತನ್ನ ಮನಸ್ಸಿಗೆ ಪ್ರಿಯವಾದವಳನ್ನು ಅಪಹರಿಸಿಹೋದ ರಾಜ ರಾವಣನ ಮೇಲೆ ರಾಮನಿಗೆ ಕೋಪ  ಬಂದಿರಲು ಸಾಧ್ಯ.

ಆದರೆ ಮತ್ತೊಬ್ಬನ ಹೆಂಡತಿಯನ್ನು ಅಪಹರಿಸಿಹೋದ ರಾವನನ್ನು ‘ರಾಜ’ ಎಂದು ಕರೆಯುವುದು ಹೇಗೆ ಸರಿ? ಮಾಯೆಯ ವಶಕ್ಕೆ ಒಳಗಾಗಿ ವಿಷ್ಣುವಿನ ಅಂಶವಾದ ಸೀತೆಯನ್ನು, ತನ್ನೊಂದಿಗೆ ಸೇರಿಸಿಕೊಳ್ಳಲು ಆಸೆಪಟ್ಟದ್ದರಿಂದ, ತನ್ನ ಅಳಿವನ್ನು ತಾನೇ ಹುಡುಕಿಕೊಂಡ ರಾವಣನನ್ನು ರಾಜ ಎಂದು ಕರೆಯುವುದು ಸರಿಯೇ? ಅದೂ, ಗೋದೈಯಂತಹ ಹೆಣ್ಣು ಹಾಗೆ ಕರೆಯಬಹುದೇ?

ಈ ಪ್ರಶ್ನೆಗಳಿಗೆ ಉತ್ತರ ನೀಡುವ ಮೊದಲು, ಸೀತೆಯನ್ನು ಅಪಹರಿಸುವುದಕ್ಕೆ ಮೊದಲಿದ್ದ ರಾವಣನ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.

ರಾವಣ!

ಅಂದರೆ ‘ಕರಿಯ ಬಣ್ಣದವನು’ ಎಂಬ ಹೆಸರಿಗೆ ಹೆಮ್ಮೆಯಾದವನು ಎಂದೂ, ‘ಯಾರಿಗೂ ಇಲ್ಲದ ರೂಪ ಉಳ್ಳವನು’ ಎಂದೂ ಅರ್ಥಗಳುಂಟಂತೆ.

ಅಸುರ ಕುಲದ ನಾಯಕನಾದ ರಾವಣ, ‘ಮುಕ್ಕೋಟಿ ದಿನಗಳ ಆಯುಷ್ಯ ಉಳ್ಳವನು; ಕಟು ತಪಸ್ಸು ಮಾಡಿ, ಮುಮ್ಮೂರ್ತಿಗಳಲ್ಲಿ ಮೊದಲನೇಯವನಾದ ಬ್ರಹ್ಮನ ಬಳಿ ಅಸುರರು, ದೇವತೆಗಳು, ಮನುಷ್ಯರು ಎಂದು ಯಾರಿಂದಲೂ ಗೆಲ್ಲಲಾಗದ ವರವನ್ನು ಪಡೆದವನು; ಮಹಾವೀರ; ಹಲವಾರು ಕಲೆಗಳನ್ನು ಕಲಿತವನು; ತನ್ನ ದೇಶದ ಪ್ರಜೆಗಳನ್ನು ಸಂಪತ್ತು  ಭರಿತವನಾಗಿ ಇಟ್ಟಿದ್ದವನು; ಸಾಮವೇದದಲ್ಲಿ ಮಹಾ ಪಂಡಿತ; ತನ್ನ ಕೈ ನರಗಳಿಂದ ವೀಣೆಯ ತಂತಿ ಮಾಡಿ ಸಾಮಗಾನ ಹಾಡಿ ಶಿವನನ್ನು ಒಲಿಸಿಕೊಂಡವನು; ಶ್ರೇಷ್ಠ ವೀಣಾ ವಾಧಕ; ಅತಿಶ್ರೇಷ್ಟ ರಣವೀರ…’ ಎಂಬ ಹಲವು ಗುಣಗಳಿಗೆ ಪಾತ್ರನಾದವನು.

ಅಲ್ಲದೆ, ರಾವಣನಿಗೆ ‘ದಶಮುಖ’ ಅಥವಾ ‘ದಶಕಂಠ’ ಎಂಬ ಹೆಸರೂ ಉಂಟು. ಹತ್ತು ತಲೆಗಳನ್ನು ಉಳ್ಳವನು ಎಂದು ಅದಕ್ಕೆ ಅರ್ಥ. ಇಲ್ಲಿ ಹತ್ತು ತಲೆಗಳು ಎಂಬುದು ಸಂಖ್ಯೆಯಲ್ಲಿ ಮಾತ್ರವಲ್ಲ; ಹತ್ತು ಕ್ಷೇತ್ರಗಳಲ್ಲಿ ಸರ್ವ ಶ್ರೇಷ್ಟನಾಗಿ ರಾವಣನಿದ್ದನು ಎಂಬುದು ಅರ್ಥ. ಹತ್ತು ತಲೆಗಳು ಎಂಬುದು ಹತ್ತು ಇಂದ್ರಿಯಗಳನ್ನೂ ಗುರುತಿಸುತ್ತದೆ. ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಎಂಬ ಹತ್ತು ಇಂದ್ರಿಯಗಳು ಮನಸ್ಸನ್ನು ಒಳಿತಿನ ಕಡೆಗೆ ಕರೆದೊಯ್ವ ದೈವೀಕ ಸ್ವಭಾವ ಉಳ್ಳವನು ಎಂದು ಹೇಳಲಾಗುತ್ತದೆ.

ಅಂತಹ ಹಿರಿಮೆಗಳನ್ನು ತುಂಬಿಕೊಂಡಿರುವ ರಾವಣ ಲಂಕೆಯನ್ನು ರಾಜ್ಯವಾಳಿದ ರಾಜ ಎಂದು ಗೋದೈ ಕರೆಯುವುದು ತಪ್ಪಲ್ಲವಲ್ಲಾ. ಆದರೆ ಅವನು ಮಾಡಿದ ಒಂದು ಅಲ್ಪ ಕಾರ್ಯದಿಂದ, ಆ ದಕ್ಷಿಣ ಲಂಕೆಯ ರಾಜನ ಹಿರಿಮೆ ಎಲ್ಲವೂ ನಾಶವಾಗುತ್ತದೆ.

ಅವನು ಹೇಗೆ ಆಳಿದನು ಎಂದರೆ, ಅಲ್ಲೇ ರಾಮನ ‘ಕೋಪ’ ಕ್ಕೆ ಕಾರಣವಾದ ಕಥೆಯೊಂದು ಬರುತ್ತದೆ.

‘ಸಿಟ್ಟು ದಣಿಯುಬೇಕು’; ಎಂದು ಹೇಳುತ್ತಾರೆ ಹಿರಿಯರು.  ಒಬ್ಬ ಕೋಪವನ್ನು ನಿಯಂತ್ರಿಸಲಾಗದೆ ಹೋದಾಗ, ಅದು ಅವನಿಗೆ ಹಲವಾರು ಕೆಡಕುಗಳನ್ನೂ, ಅಳಿವನ್ನೂ ಉಂಟುಮಾಡುತ್ತದೆ ಎಂಬುದನ್ನೇ,

ನಿನ್ನ ನೀ ಕಾಯ್ದುಕೊಳ್ಳಬೇಕೆಂದರೆಕೋಪವನು ತಡೆಯುವುದು

ತಡೆಯದಿರೆ ನಿನ್ನನ್ನೇ ಕೊಲುವುದದು (ತಿರುಕ್ಕುರಲ್ -305, ಕನ್ನಡ ಅನುವಾದ ನ.ಮುನಿಸ್ವಾಮಿ)

ಇದನ್ನು ನಾವು ಕೇವಲ ಉಪದೇಶವಾಗಿ ಮಾತ್ರ ನೋಡದೆ, ವೈದ್ಯಕೀಯ ರೀತಿಯಲ್ಲೂ ನೋಡಬಹುದು.

ಮೆದುಳಿನ ಒಳಭಾಗದಲ್ಲಿ Amygdala (ಆಮಿಗ್ದಲ- ಮೆದುಳಿನ ಬಿಳಿ ವಸ್ತುವಿನ ಒಳಭಾಗದಲ್ಲಿರುವ ಒಂದು ಬಗೆಯ ಗ್ರಂಥಿ) ಮತ್ತು Hypothalamus (ಹೈಪೊತಲಮಸ್- ಮಸ್ತಿಸ್ಕನಿಮ್ಮಾಂಗ, ಕೆಳಮೆದುಳು ಕುಳಿ) ಎಂಬ ಭಾಗಗಳುಂಟು.  ಇವು ನಮ್ಮ ಕೋಪ, ಆತಂಕ, ನಿರಾಶೆ, ಅಶಕ್ತತೆ ಮುಂತಾದ ಭಾವನೆಗಳನ್ನು ನಿಯಂತ್ರಿಸುತ್ತವೆ. ಆದರೆ, ನಾವು ಕೋಪಗೊಳ್ಳುವಾಗ ಈ ಅಂಗಗಳ ಚಟುವಟಿಕೆಯ ಕಾರಣವಾಗಿ, Serotonin (ಸೆರಟೊನಿನ್ – ರಕ್ತನಾಳ ಸಂಪೀಡಕ ಮತ್ತು ನರ ಪ್ರೇಷಕ)  Adrenaline (ಆಡ್ರಿನಾಲಿನ್-ಕಲಿಚೊತ್ತು)  Noradrenaline ನಾರ್ ಅಡ್ರಿನಾಲಿನ್ – ಕಲಿಚೊತ್ತು ಸ್ರವಿಸುವ ಒಂದು ಚೋದಕ)  ಗ್ರಂಥಿಗಳು ಹೆಚ್ಚಾಗಿ ಸ್ರವಿಸುವುದರಿಂದ ತಲೆನೋವು, ಮಾನಸಿಕ ಒತ್ತಡ, ನಿದ್ರಾಹೀನತೆ, ಅಜೀರ್ಣ, ರಕ್ತದೊತ್ತಡ, ಹೃದಯಾಘಾತ ಮುಂತಾದವು ಉಂಟಾಗುತ್ತದೆ ಎನ್ನುತ್ತಾರೆ ವೈದ್ಯರು.

ಮನುಷ್ಯರಿಗೆ ಇವೆಲ್ಲವೂ ಹೊಂದಬಹುದು. ರಾಮನಂತಹ ಅವತಾರ ಪುರುಷನಿಗೆ ಇದು ಹೊಂದುವುದೇ? ಎಲ್ಲ ಒಳಿತು ಗುಣಗಳನ್ನು ಒಟ್ಟಾಗಿ ಮೈವೆತ್ತ ಮನುಷ್ಯನಾಗಿ ದೇವರು ತೆಗೆದ ಅವತಾರವಲ್ಲವೇ ರಾಮಾವತಾರ? ತನ್ನನ್ನು ನಂಬಿದವರನ್ನು ರಕ್ಷಿಸಿ, ಎಲ್ಲರನ್ನೂ ಸೋದರರಾಗಿ ಭಾವಿಸಿ, ತನ್ನ ಪತ್ನಿಯ ಹೊರತು ಬೇರೆ ಯಾವ ಹೆಣ್ಣನ್ನೂ ಮನಸಾರೆ ಬಯಸದ ಉತ್ತಮ ಪುರುಷನಲ್ಲವೇ ರಾಮ? ರಾಜ ಧರ್ಮ, ಸಂಕಷ್ಟ ಧರ್ಮ, ಮೋಕ್ಷ ಧರ್ಮ ಎಂದು ಸಕಲವನ್ನೂ ಜಗತ್ತಿಗೆ ತೋರಿ, “ಒಂದೇ ಮಾತು, ಒಂದೇ ಬಾಣ, ಒಬ್ಬಳೇ ಪತ್ನಿ” ಎಂದು ಧರ್ಮದ ಹಾದಿಯಲ್ಲಿ ನಡೆದವನಲ್ಲವೇ ರಾಮ?

ಮತ್ತೆ, ‘ಜಿತ್ ಕ್ರೋಧ’ ಅಂದರೆ ‘ಕೋಪವನ್ನು ಜಯಿಸಿದವನು’ ಎಂಬ ಬಿರುದಿಗೆ ಪಾತ್ರನಾದವನು ಎನ್ನುತ್ತದೆ ಪುರಾಣಗಳು. ಹಾಗೆ ಕೋಪವನ್ನು ಗೆದ್ದ ಗುಣವಂತನನ್ನು ಸಿಟ್ಟು  ಛೇಡಿಸದೆ ಬಿಡಲಿಲ್ಲ ಎನ್ನುತ್ತದೆ ರಾಮ ಕಥೆ.

ಕೋಪವೇ ಮಾಡಿಕೊಳ್ಳದ ರಾಮನಿಗೆ ಯಾವಾಗ ‘ಕೋಪ’ ಬಂದಿತೆಂದರೆ, ಮೂರು ಸಲ ಎನ್ನುತ್ತದೆ ರಾಮನ ಚರಿತ್ರೆ.

ತನ್ನ ಪ್ರೀತಿಯ ಪತ್ನಿ ಸೀತಾದೇವಿಯನ್ನು ರಾವಣ ಅಪಹರಿಸಿ ಹೋದಾಗ, ಅವಳನ್ನು ಕಾಣದೆ  ತವಕಿಸಿತ್ತಾನೆ ರಾಮ. ಮರ ನದಿ ಎಲ್ಲವನ್ನೂ ನೋಡಿ, ‘ಏನಾಯಿತು? ಎಲ್ಲಿ ನನ್ನ ಸೀತೆ?’ ಎಂದು ಅಶಕ್ತನಾಗೂ ಕೋಪದಿಂದಲೂ ಕೇಳುತ್ತಾನೆ ಇದು ಮೊದಲ ಸಲ.

ಎಲ್ಲಿ ಹುಡುಕಿದರೂ ಸೀತೆಯನ್ನು ಕಾಣದ ರಾಮ, ‘ನನ್ನ ಪ್ರಿಯವಾದ ಮಡದಿಯನ್ನು ಅಪಹರಿಸಿ ಹೋದವನು ಯಾರು? ನನ್ನ ಬಳಿ ಆಕೆಯನ್ನು ಒಪ್ಪಿಸದಿದ್ದರೆ ನನ್ನ ಬಾಣಗಳಿಂದ ತ್ರಿಲೋಕವನ್ನು ಅಳಿಸಿಬಿಡುತ್ತೇನೆ’ ಎಂದು ಕೋಪದಿಂದ ಕೂಗುತ್ತಾನೆ. ಇದು ಎರಡನೇಯ ಸಲ.

ನಂತರ ಸೀತೆಯನ್ನು ಹುಡುಕಿಕೊಂಡು ಲಂಕೆಗೆ ಹೋಗಲು ಕಡಲರಾಜ ದಾರಿಬಿಡದೆ ಹೋದಾಗ ಮತ್ತೆ ಕೋಪದ ವಶವಾಗುತ್ತಾನೆ ರಾಮ.

“ಲಕ್ಷ್ಮಣ ನನ್ನ ಧನುಸ್ಸನ್ನು ಕೊಂಡು ತಾ! ಈ ಸಮುದ್ರವನ್ನು ಸಂಪೂರ್ಣವಾಗಿ ಬತ್ತಿಹೋಗುವಂತೆ ಮಾಡುತ್ತೇನೆ. ವಾನರ ಸೇನೆ ನಡದೇ ಲಂಕೆಗೆ ಹೋಗಲಿ….” ಎಂದು ಶ್ರೀರಾಮ ಕೋಪಗೊಂಡಾಗ, ರಾಜ್ಯ ತನಗಿಲ್ಲ ಎಂದಾಗಲೂ ಸಹ ದುಃಖ ಪಡದ ರಾಮ, ಪ್ರೀತಿ ಕಳೆದುಹೋದಾಗಲೇ ಅವನ ಜೀವ ವ್ಯಥೆಪಟ್ಟದ್ದಾಗಿ ಹೇಳುತ್ತದೆ.  ಅದರ ನಂತರ ಅವನು ಮತ್ತೆ ಕೋಪಗೊಂಡದ್ದು ಹನುಮಂತನಿಗಾಗಿ.

ರಾವಣನೊಂದಿಗೆ ಯುದ್ಧ ಮಾಡುವಾಗ, ಹನುಮಂತನನ್ನು ತನ್ನ ಬಾಣಗಳಿಂದ ಗಾಯಗೊಳಿಸುತ್ತಾನೆ ರಾವಣ. ತನ್ನ ಪ್ರಿಯ ಧೂತ, ತನಗಾಗಿ ಗಾಯಗೊಳ್ಳುವುದನ್ನು ಕಂಡ ರಾಮನಿಗೆ ಬಹಳ ಕೋಪ ಬರುತ್ತದೆ. ತನ್ನ ಪತ್ನಿಗಾಗಿ ಯುದ್ಧ ಮಾಡುವಾಗಲೂ ಸಹ, ಶಾಂತವಾಗಿ ಯುದ್ಧ ಮಾಡಿದ ರಾಮ, ತನ್ನ ಭಕ್ತ ಹನುಮಂತನಿಗೆ ಗಾಯವಾಯಿತು ಎಂದಾಗ, ಅವನಿಗೆ ಸಿಟ್ಟು ನೆತ್ತಿಗೇರುತ್ತದೆ.

ಆಗ, ತಾಳದ ಕೋಪದಿಂದ ಅವನು ತೊಟ್ಟ ಆ ಒಂದೇ ಒಂದು ಬಾಣ ರಾವಣನ ಆಯುಧಗಳನ್ನು ಅಳಿಸಿ, ಕವಚಗಳನ್ನು ಸೀಳಿ, ಮಕುಟ, ರಥವನ್ನೆಲ್ಲ ಧ್ವಂಸ ಮಾಡಿ,  ರಾವಣನನ್ನು ನಿರಾಯುಧಪಾಣಿಯಾಗಿಸುತ್ತದೆ ಎಂದರೆ ರಾಮನಿಗೆ ಎಷ್ಟು ತೀವ್ರವಾದ ಕೋಪ ಇದ್ದಿರಬಹುದು!

ಅಷ್ಟೊಂದು ಕೋಪದಲ್ಲೂ, ತನ್ನ ಗುಣಕ್ಕೆ ಕುಂದು ಬಾರದಂತೆ ಬರಿಗೈಯೊಂದಿಗೆ ನಿಂತ ರಾವಣನನ್ನು ಕೊಲ್ಲುವುದು ಧರ್ಮವಲ್ಲ ಎಂದು, ‘ಇಂದು ಹೋಗಿ ನಾಳೆ ಬಾ’ ಎಂದು ಅವನನ್ನು ಕಳುಹಿಸಿಕೊಟ್ಟು, ಮಾರನೇಯ ದಿನ ಯುದ್ಧದಲ್ಲಿ ಜಯವನ್ನೂ ಗಳಿಸುತ್ತಾನೆ ರಾಮ.

ಸೀತೆಗಾಗಿ ಯುದ್ಧ ಅನೇಕ ದಿನಗಳು ನಡೆದರೂ, ಭಕ್ತನಾದ ಹನುಮಂತನಿಗಾಗಿ ರಾಮ ಕೋಪಗೊಂಡದ್ದು ರಾವಣನ ಅಂತ್ಯಕ್ಕೆ ಕಾರಣವಾಯಿತು ಎಂಬುದು ತಿಳಿಯುತ್ತದೆ ಅಲ್ಲವೇ.

ನಮ್ಮಂತಹ ಮನುಷ್ಯರ ಕೋಪ, ನಗುವನ್ನು ಕೊಲ್ಲುತ್ತದೆ, ಗುಣವನ್ನು ಕೆಡಿಸುತ್ತದೆ, ಕುಲವನ್ನು ಸುಟ್ಟು ಭಸ್ಮ ಮಾಡುತ್ತದೆ, ಗೆಳೆತನವನ್ನು ಕೆಡಿಸಿ ದೂರ ಸರಿಯುವಂತೆ ಮಾಡುತ್ತದೆ. ಆ ಕೋಪದಿಂದ ಉಂಟಾಗುವ ಪರಿಣಾಮಗಳನ್ನು ಜೀವನ ಕಲಿಸುತ್ತದೆ. ಆದರೆ, ರಾಮನಂತಹ ಉತ್ತಮರ ಕೋಪವೋ “ಕೆಟ್ಟದ್ದನ್ನು ತೊಲಗಿಸಿ, ಒಳಿತಿಗೆ ದಾರಿ ಮಾಡಿ ಕೊಡುತ್ತದೆ” ಎಂಬುದನ್ನು ರಾಮಯಣದ ಮೂಲಕ ತಿಳಿಸಿ ಹೇಳುತ್ತದೆ. “ಹೀಗೆ ಸಂಸಾರವನ್ನು ಹಾಳು ಮಾಡುವ ಕೋಪ ಎಂಬ ಗುಣದಿಂದ ಸಹ ದುಷ್ಟ ನಿಗ್ರಹ ಮಾಡಿ ಶಿಷ್ಟ ಪರಿಪಾಲನೆ’ ಮಾಡಿದ ರಾಮನನ್ನು, ಕೃಷ್ಣನನ್ನು, ಗೋವಿಂದನನ್ನು ಹಾಡಿ, ಅವನ ಪಾದಗಳಲ್ಲಿ ಶರಣಾಗೋಣ ಬನ್ನಿರೀ” ಎಂದು ಹನ್ನೆರಡನೇಯ ದಿನ, ಗೆಳತಿಯರನ್ನು ಉತ್ಸಾಹದಿಂದ ಕರೆಯುತ್ತಾಳೆ ಗೋದೈ ಆಂಡಾಳ್!


ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.