ಧನುರ್ ಉತ್ಸವ ವಿಶೇಷ ಸರಣೀಯ ಹದಿನೆಂಟನೇ ಕಂತು ಇಲ್ಲಿದೆ… | ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ
ಧನುರ್ ಉತ್ಸವ ಹದಿನೆಂಟನೇಯ ದಿನ
ಸೋರ್ವಮದಜಲದ ಗಜದಂತೆ ಹಿಂದೆಗೆಯದಿಹ ತೋಳ್ಬಲನ
ನಂದಗೋಪನ ಸೊಸೆಯೇ ನೀಳಾದೇವಿಯೇ
ಪರಿಮಳವು ಬಿರುತಿಹ ಕುರುಳವಳೇ ಚಿಲಕವ ತೆರೆಯೇ
ಬಂದೆಲ್ಲೆಡೆಯೂ ಕೋಳಿಗಳು ಕೂಗುತಿವೆ ನೋಡಾ
ಮಾಧವಿಯ ಚಪ್ಪರದ ಮೇಲೆ ಹಲಬಾರಿ ಕೋಗಿಲೆಗುಂಪು ಧ್ವನಿಗೈಯುತಿವೆ ನೋಡಾ
ಚೆಂಡಿನೊಲು ಶೋಭಿಸುವ ಬೆರಳವಳೇ ನಿನ್ನ ಪ್ರಿಯಕರನ ನಾಮವಪಾಡೆ
ಕೆಂದಾವರೆಯ ಕೈಯಿಂದ ಚಂದದಿಂ ಶೋಭಿಸುತಿರ್ಪ ಬಳೆಗಳು ಉಲಿಯುವೊಲು
ಬಂದು ತೆರೆ ಸಂತೋಷದಿಂ ನಮೀ ಪವಿತ್ರ ವ್ರತವು ಸಾರ್ಥಕವು
-ಬಿಂಡಿಗನವಿಲೆ ನಾರಾಯಣಸ್ವಾಮಿ (ಸಾವೇರಿ ರಾಗ – ಆದಿ ತಾಳ)
“ಮದ ಹಿಡಿದ ಆನೆಯಂತೆ ಬಾಲ ಹೊಂದಿದವರೂ, ರಣರಂಗದಲ್ಲಿ ಬೆನ್ನು ತೋರಿಸಿ ಓಡದವರೂ ಆದ ಶ್ರೀ ನಂದಗೋಪನ ಸೊಸೆಯೇ….!
ನೀಳಾದೇವಿಯೇ…! ಪರಿಮಳ ಬೀಸುವ ಕೇಶವನ್ನುಳ್ಳವಳೇ…!
ಎದ್ದು ಬಂದು ನಿನ್ನ ಹೊಸಿಲ ಬಾಗಿಲನು ತೆರೆಯುವಂತವಳಾಗು! ಉದಯವಾಗುವುದರ ಗುರುತಾಗಿ, ಎಲ್ಲ ಕಡೆಗಳಲ್ಲೂ ಕೋಳಿಗಳು ಕೂಗುತಿವೆ….. ಮಾಧವಿಯ ಚಪ್ಪರದ ಮೇಲೆ ಕೋಗಿಲೆಗಳು ಚಿಲಿಪಿಲಿಗುಟ್ಟುತ್ತಿವೆ….
ಇವೆಲ್ಲವನ್ನೂ ಬಂದು ನೋಡುವಂತವಳಾಗು…….!
ಹೂಚೆಂಡಿನಂತೆ ಮೃದುವಾದ ಬೆರಳುಗಳನ್ನುಳ್ಳವಳೇ…! ಕೃಷ್ಣನ ಸ್ತುತಿ ಹಾಡಲು ನಾವೆಲ್ಲರೂ ಬಂದಿದ್ದೇವೆ…..
ನಮಗಾಗಿ ಎದ್ದು ಬಂದು, ಅಂದದ ಬಳೆಗಳು ದನಿಸಲು ನಿನ್ನ ಕೆಂದಾವರೆ ಕೈಗಳಿಂದ ಮಣಿಕದವನು ತೆರೆದು ನಮ್ಮನ್ನು ಸಂತೋಷಗೊಳಿಸುವಂತವಳಾಗು…!”
ಎಂದು ಹಾಡುತ್ತಾಳೆ ಗೋದೈ…!
‘ನಂದಗೋಪನ ಸೊಸೆಯೇ ನೀಳಾದೇವಿಯೇ…’
ಗೆಳೆತಿಯರೊಂದಿಗೆ ಕೃಷ್ಣನನ್ನು ನಿದ್ರೆಯಿಂದ ಎಬ್ಬಿಸಲು ಬಂದ ಗೋದೈ, ಅವನು ನಿದ್ರಿಸುವ ಗುಡಿಯ ಬಾಗಿಲಲ್ಲಿ ನಿಂತು, ದ್ವಾರಪಾಲಕರನ್ನು ವಂದಿಸಿ, ನಂತರ ನಂದಗೋಪನ ನಮಸ್ಕರಿಸಿ, ಕೊನೆಗೆ ಬಲರಾಮನನ್ನೂ, ಕೃಷ್ಣನನ್ನೂ ಒಟ್ಟಾಗಿ ಕರೆದು ನೋಡುತ್ತಾಳೆ. ಯಾರೂ ಅವಳ ದನಿಯನ್ನು ಕೇಳಿ ಬಾಗಿಲು ತೆರೆಯುವಂತೆ ಕಾಣಲಿಲ್ಲ.
ಸಹನೆಯಿಲ್ಲದ ಗೋದೈ, ಈಗ ಕೃಷ್ಣನ ಪ್ರೇಮದ ಪತ್ನಿಯಾದ ನೀಲಾದೇವಿಯನ್ನು, ‘ನಂದಗೋಪನ ಸೊಸೆಯೇ…..ನೀಲಾದೇವಿಯೇ….. ಬಂದು ತೆರೆಯುವಂತವಳಾಗು!” ಎಂದು ಮಣಿ ಕದವನು ತೆರೆಯಲು ಕರೆಯುತ್ತಾಳೆ.
ಆದರೆ ಕೃಷ್ಣನ ಕಥೆಯಲ್ಲಿ ನಾವು ಅರಿಯದ ಯಾರಿವಳು ನೀಲಾದೇವಿ? ಅದೂ ನಂದಗೋಪನ ಸೊಸೆ ಎನ್ನುತ್ತಾಳಲ್ಲ ಗೋದೈ? ಅವಳು ಕೃಷ್ಣನ ಪತ್ನಿ ಎನ್ನುತ್ತಿದ್ದಾಳೆಯೇ? ನಮಗೆ ರಾಧೆ ರುಕ್ಮಿಣಿ ಅಲ್ಲವೇ ತಿಳಿದಿರುವುದು? ಹಾಗಾದರೆ ಈ ನೀಲಾದೇವಿ ಎಲ್ಲಿಂದ ಬಂದಳು? ಕೃಷ್ಣ ನೀಲಾದೇವಿಯನ್ನು ವಿವಾಹವಾದದ್ದು ಯಾವಾಗ? ಹೇಗೆ? ಕೃಷ್ಣಾವತಾರದಲ್ಲಿ ಇವಳು ನೀಲಾದೇವಿಯಾದರೆ ಉಳಿದ ಅವತಾರಗಳಲ್ಲಿ ಇವಳು ಯಾರು? ಎಂಬ ಅನೇಕ ಪ್ರಶ್ನೆಗಳು ಏಳುತ್ತದಲ್ಲವೇ?” ನೋಡೋಣ ಬನ್ನಿ…
ನೀಲಾದೇವಿ…!
ಯಾದವ ಕುಲದಲ್ಲಿ ಹುಟ್ಟಿದ ಹೆಣ್ಣು. ಆ ಮನೆಯಲ್ಲಿ ಕಿರಿಯವಳಾಗಿ ಹುಟ್ಟಿದವಳು. ‘ನೀಲಾದೇವಿ’ ಎಂದು ಕರೆಯಲ್ಪಟ್ಟವಳು.
‘ಉಪಕೇಶಿ’ ಎಂಬುದೇ ನೀಲಾದೇವಿಯ ಹುಟ್ಟು ಹೆಸರು. ಕೇಶಿ ಎಂದರೆ ಕೂದಲು ಎಂಬ ಅರ್ಥ. ಯಾದವ ಹೆಣ್ಣುಗಳಿಗೆ ಕೂದಲಿನ ಬಗ್ಗೆ ಅಭಿಮಾನ ಸದಾ ಉಂಟು. ನೀಲಾದೇವಿ ಹುಟ್ಟುವಾಗಲೇ ಕೇಶ ಸುಂದರಿಯಾಗಿ ಹುಟ್ಟಿದವಳು ಎಂಬುದರಿಂದ ಈ ಹೆಸರು ಉಂಟಾಯಿತು.
ನಿಜವಾಗಲೂ ಉಪಕೇಶಿ ಎಂಬ ನೀಲಾದೇವಿ ಕೃಷ್ಣನಿಗೆ ಸಂಬಂಧವಿರುವ ಹೆಣ್ಣು ಎಂದೇ ಹೇಳಬಹುದು. ಇವಳು ಕೃಷ್ಣನನ್ನು ಸಾಕಿದ ಯಶೋಧೆಯ ಜತೆ ಹುಟ್ಟಿದ ನಗ್ನಜಿತ್ ಮಗಳು ಎಂಬುದರಿಂದ, ಕೃಷ್ಣನಿಗೆ ಮಾವನ ಮಗಳು; ಕೃಷ್ಣ, ಬಲರಾಮರೊಂದಿಗೆ ಚಿಕ್ಕವಯಸ್ಸಿನಲ್ಲಿ ಆಟವಾಡಿದವಳು; ನಂತರ ಕೃಷ್ಣನನ್ನು ಪ್ರೇಮಿಸಿ, ಪತ್ನಿಯಾದವಳು; ಮಾವನ ಮಗಳಾದರೂ ನೀಲಾದೇವಿ ಕೃಷ್ಣ ಇವರಿಬ್ಬರ ವಿವಾಹ ಅಷ್ಟು ಸುಲಭವಾಗಿ ನಡೆಯಲಿಲ್ಲ.
ನೀಲಾದೇವಿಗೆ ಮದುವೆ ಮಾಡಲು ನಿಶ್ಚಯಿಸಿದ ನಗ್ನಜಿತ್, ತನಗೆ ಬರುವ ಅಳಿಯನ ಶೌರ್ಯವನ್ನೂ, ಸೌಂದರ್ಯವನ್ನೂ ಅರಿಯಲು ಒಂದು ನಿಬಂಧನೆ ಹಾಕುತ್ತಾನೆ. ‘ಅವನು ನಗ್ನಜಿತನ ಒರಟು ಗೂಳಿಗಳನ್ನು ಅಡಗಿಸಲೂಬೇಕು, ಅವನು ನೀಲಾದೇವಿಗೆ ಇಷ್ಟವಾಗಲೂ ಬೇಕು. ಆಗ ಮಾತ್ರವೇ ವಿವಾಹ” ಎಂದು ಘೋಷಿಸುತ್ತಾನೆ.
ಯಾದವ ಕುಲದ ಪದ್ಧತಿಯಂತೆ ತನ್ನ ಶೌರ್ಯವನ್ನು ತೋರಿಸಿ, ಮಾವನ ಏಳು ಬಲವಾದ ಗೂಳಿಗಳನ್ನು ಅಡಗಿಸಿ, ಸವಾಲಿನಲ್ಲಿ ಗೆದ್ದ ಮೇಲೆಯೇ ನೀಲಾದೇವಿಯನ್ನು ಕೈಹಿಡಿಯುತ್ತಾನೆ ಕೃಷ್ಣ ಎಂಬುದನ್ನು “ಮೃದು ತೋಳುಗಳ ಮೇಲಿನ ಪ್ರೀತಿಯಲ್ಲಿ ಏಳು ಗೂಳಿಗಳನ್ನು ಅಡಗಿಸಿದವನೇ” ಎಂದು ‘ತಿರುವಂದಾದಿ’ ತಮಿಳು ಕೃತಿಯಲ್ಲಿ ನಮ್ಮಾಳ್ವಾರ್ ಹೇಳುತ್ತಾರೆ.
ಕೃಷ್ಣಾವತಾರದಲ್ಲಿ ಕೃಷ್ಣ ಗೂಳಿಗಳನ್ನು ಅಡಗಿಸಿದ ಎಂಬಂತೆಯೇ, ನೀಲಾದೇವಿಯ ಹೆಸರು ನಮಗೆ ಹೊಸದಾಗಿ ಕಂಡರೂ, ನೀಲಾದೇವಿ ಶ್ರೀಮನ್ ನಾರಾಯಣನ ಪತ್ನಿಯರಲ್ಲಿ ಒಬ್ಬಳು ಎನ್ನುತ್ತದೆ ಹಿಂದಿನ ಅವತಾರಗಳ ಕಥೆ.
ಭೂದೇವಿ, ಶ್ರೀದೇವಿ, ನೀಳಾದೇವಿ ಮುಂತಾದ ಮೂವರನ್ನೂ ವಿಷ್ಣು ಪತ್ನಿಯರು ಎನ್ನುತ್ತದೆ ವೈಷ್ಣವ ಪುರಾಣ. ಅಂದರೆ ಭೂಮಿಯಾದ ಭೂಮಾದೇವಿ, ಶ್ರೀದೇವಿಯಾದ ಲಕ್ಷ್ಮೀದೇವಿ, ಸಮುದ್ರಮಾತೆಯಾದ ನೀಳಾದೇವಿ ಮುಂತಾದ ಮೂವರು ದೇವಿಯರು ವಿಷ್ಣುವಿನ ಪತ್ನಿಯರು. ಕೃಷ್ಣಾವತಾರದಲ್ಲಿ ರುಕ್ಮಿಣಿ ಶ್ರೀದೇವಿಯ ಅಂಶವಾಗಿಯೂ, ಸತ್ಯಭಾಮ ಭೂದೇವಿಯ ಅಂಶವಾಗಿಯೂ ನೀಲಾದೇವಿ ನೀಳಾದೇವಿಯ ಅಂಶವಾಗಿಯೂ ಹುಟ್ಟಿದ್ದಾಗಿ ಹೇಳುತ್ತವೆ ವಿಷ್ಣುವಿನ ಬಗ್ಗೆಯ ಪುರಾಣಗಳು.
ಸಂಪತ್ತಿಗೆ ಅಧಿಪತಿಯಾದ ಶ್ರೀದೇವಿ, ಸಹನೆಗೆ ಅಧಿಪತಿಯಾದ ಭೂದೇವಿಯರನ್ನು ವರಿಸಿ ನಮಗೆ ಸಂಪತ್ತು, ಆಹಾರ, ಜತೆಯಲ್ಲಿ ಜೀವಿಸಲು ಜೀವರಾಶಿಗಳನ್ನು ನೀಡಿದಂತೆ ಈ ಜಗತ್ತಿಗೆ ಆಧಾರವಾದ ನೀರನ್ನೂ ಕೊಟ್ಟು ನಮ್ಮನ್ನು ರಕ್ಷಿಸಿ ನಿಂತವನು ನಾರಾಯಣನೇ ಎಂಬುದು ಇದರ ಸಾರಾಂಶ.
“ರಸೋವೈಸಹ..” ಎಂದು ನಾರಾಯಣನನ್ನು ಕರೆಯುವಾಗ ಅವನೇ ನೀರಿಗೂ ಆಧಾರ ಎನ್ನುತ್ತವೆ ವೇದಗಳು. ನೀರು ಎಂಬ ‘ನಾರ’ದ ಮೇಲೆ ಶಯನಿಸಿರುವುದರಿಂದ ನಾರಾಯಣ ಎಂಬ ಹೆಸರು ಅವನಿಗೆ ಬಂದಿದೆ.
ಅಂತಹ ನೀರಿನ ಅಂಶವಾದ ನೀಲಾದೇವಿಯ ಕಥೆ, ನಿಜವಾಗಲೂ ವರಾಹ ಅವತಾರದಲ್ಲಿ ಸ್ಪಷ್ಟವಾಗಿ ನಮಗೆ ಕಾಣಲು ದೊರಕುತ್ತದೆ.
ಒಮ್ಮೆ ಕಶ್ಯಪ ಮುನಿಗೂ, ಅಧಿತಿಗೂ ಜನಿಸಿದ ಅಸುರರಿಬ್ಬರಲ್ಲಿ ಒಬ್ಬನಾದ ಹಿರಣ್ಯಾಕ್ಷ ಬ್ರಹ್ಮನಿಂದ ವರ ಪಡೆದು ಬಲಶಾಲಿಯಾಗಿ, ದೇವತೆಗಳಿಗೆ ಉಪಟಳ ನೀಡುತ್ತಾನೆ. ಎದುರಿಸಲು ಯಾರೂ ಇಲ್ಲ ಎಂಬುದರಿಂದ ಗರ್ವ ತಲೆ ಎತ್ತುತ್ತದೆ! ಅಂತಹ ಒಂದು ಸಮಯದಲ್ಲಿ ಭೂಮಿಯನ್ನು ಹೊತ್ತುಕೊಂಡು ಹೋಗಿ, ಯಾರ ಕಣ್ಣಿಗೂ ಕಾಣದ, ಯಾರಿಂದಲೂ ದಡ ಮುಟ್ಟಿಸಲಾಗದ ಸಮುದ್ರದ ಆಳದಲ್ಲಿ ಹಿರಣ್ಯಾಕ್ಷ ಅವಿತಿಡುತ್ತಾನೆ.
ಭೂಲೋಕ ಪ್ರಳಯದಲ್ಲಿ ಮುಳುಗಿದ್ದರಿಂದ, ಭೂಮಿಯನ್ನು ಕಾಪಾಡಲು ಮಹಾವಿಷ್ಣುವನ್ನು ಉದ್ದೇಶಿಸಿ ತಪಸ್ಸು ಮಾಡುತ್ತಾನೆ ಬ್ರಹ್ಮ. ಆಗ ಬ್ರಹ್ಮನ ಶ್ವಾಸದಿಂದ ಶ್ವೇತ ವರ್ಣದ ಸಣ್ಣ ವರಾಹ ರೂಪತಾಳಿ, ಅದು ಸ್ವಲ್ಪ ಸ್ವಲ್ಪವಾಗಿ ಬೆಳೆದು ಬ್ರಹ್ಮಾಂಡವಾದ ಆಕಾರವನ್ನು ತಾಳುತ್ತದೆ.
ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ರಕ್ಷಿಸಲು, ಒಂಟಿ ಕೊಂಬಿನೊಂದಿಗೆ ದೊಡ್ಡ ವರಾಹ ರೂಪಾತಾಳಿ ಶಂಖ, ಚಕ್ರ, ಗದೆ ಹೊತ್ತು ಕಡಲಿನ ಆಳಕ್ಕೆ ಇಳಿಯುತ್ತಾನೆ ಮಹಾವಿಷ್ಣು. ಭೂದೇವಿಯನ್ನು ಮತ್ತೆ ರಕ್ಷಿಸಲು, ಪತಿಗೆ ನೆರವಾಗಿರಲು ನೀಳಾದೇವಿಯೂ ‘ವರಾಹಿ’ ರೂಪಾತಾಳಿ ಜತೆಯಲ್ಲಿಯೇ ದುಮುಕುತ್ತಾಳೆ.
ಅದೇ ಸಮಯದಲ್ಲಿ ವರುಣ ಭಗವಂತನೊಂದಿಗೆ ಜಗಳ ಕಾಯುತ್ತಿದ್ದ ಹಿರಣ್ಯಾಕ್ಷನಿಗೆ ‘ನಿನ್ನ ಅಳಿವು ವರಾಹಮೂರ್ತಿಯಿಂದಲೇ…”,
ಎಂದು ವರುಣ ಎಚ್ಚರಿಕೆ ನೀಡಲು, ಹಿರಣ್ಯಾಕ್ಷ ಕೋಪದಿಂದ ವರಾಹಮೂರ್ತಿಯನ್ನು ಹುಡುಕಿ ದಣಿದು ಅಸುರ ಲೋಕಕ್ಕೆ ಮರಳುತ್ತಾನೆ. ಆ ಸಮಯದಲ್ಲಿ ಅವನ ಬಳಿ ಬಂದ ನಾರದ, “ಮಹಾವಿಷ್ಣು ವರಾಹ ಅವತಾರ ತಾಳಿ, ನೀರಿನಲ್ಲಿ ಮುಳಿಗಿರುವ ಭೂಮಿಯನ್ನು ಮೇಲಕ್ಕೆ ಎತ್ತುತ್ತಿದ್ದಾರೆ” ಎಂದು ಹೇಳಲು, ಕೋಪಗೊಂಡ ಹಿರಣ್ಯಾಕ್ಷ ತಕ್ಷಣ ಗದಾಯುಧವನ್ನು ಕೈಯಲ್ಲಿ ಹಿಡಿದು ಭಗವಂತನ ಮೇಲೆ ದಾಳಿ ಮಾಡಲು ಸಮುದ್ರದಲ್ಲಿ ಮುಳುಗುತ್ತಾನೆ.
ಅಲ್ಲಿ ತನ್ನ ಕೋರೆ ಹಲ್ಲುಗಳಿಂದ ಭೂಮಿಯನ್ನು ಎತ್ತಿಕೊಂಡು ಮೇಲೆ ಬರುತ್ತಿದ್ದ ವರಾಹಮೂರ್ತಿಯನ್ನು ನೋಡಿದಕೂಡಲೇ ಕೋಪಗೊಂಡ ಹಿರಣ್ಯಾಕ್ಷ ಭಗವಂತನ ಮೇಲೆ ದಾಳಿ ಮಾಡಲು, ಆಗ ನಡೆದ ಮಹಾಯುದ್ಧದಲ್ಲಿ ಹಿರಣ್ಯಾಕ್ಷನನ್ನು ಮಹಾವಿಷ್ಣು ವಧಿಸಿದಾಗ, ನೀಳಾದೇವಿಯಾದ ವಾರಾಹಿದೇವಿ ತನ್ನ ಪತಿಯನ್ನೂ ಭೂಮಿಯನ್ನೂ ಹೊತ್ತುಕೊಂಡು ರಕ್ಷಿಸಿದಳಂತೆ.
ವಿಷ್ಣುವಿನ ಹೋಲಿಸಲಾಗದ “ಯಜ್ಞ ವರಾಹ” ರೂಪವನ್ನು ತಾಳಿದ ಶಕ್ತಿ ಯಾರೋ, ಅವಳೇ ಅಲ್ಲಿ ವಾರಾಹಿ ರೂಪಾತಾಳಿ ಬಂದು ಸೇರಿದಳು ಎಂದು ದೇವಿ ಮಹಾತ್ಮಿಯ (19/458) ಎಂಟನೇಯ ಅಧ್ಯಾಯದಲ್ಲಿ ಉಲ್ಲೇಖಿಸಿಲಾಗಿದೆ.
ವರಾಹ ಮೂರ್ತಿಗೆ ನೇರವಾಗಿ ನಿಂತ ಗುರುತಾಗಿ ವಾರಾಹಿಯ ಕೈಗಳಲ್ಲಿ ಇಂದೂ ಶಂಖ, ಚಕ್ರ ಇರುವುದು, ವಿಷ್ಣುವಿನ ಹಾಗೆಯೇ ಅನಂತ ಕಲ್ಯಾಣ ಗುಣಗಳನ್ನುಳ್ಳ ದೇವಿಯಾಗಿ ಅವಳಿರುವುದು, ನೀಳಾದೇವಿಯ ಮರುರೂಪ ವಾರಾಹಿಯೇ ಎಂಬುದನ್ನೂ ನಮಗೆ ತಿಳಿಸುತ್ತದೆ.
ಅಂತಹ ವಾರಾಹಿ ಎಂಬ ನೀಳಾದೇವಿಯ ಅವತಾರವಾದವಳಾದ ನೀಲಾದೇವಿ ಎಂಬುವಳನ್ನು “ಈ ಸ್ತ್ರೀಯೂ ಸೀತಾಮತೆಯೋ, ಸಹನೆಯುಳ್ಳ ಭೂದೇವಿಯೋ, ಸಾಕ್ಷಾತ್ ಮಹಾಲಕ್ಷ್ಮಿಯೇ ಬಂದು ಹುಟ್ಟಿದಳೋ, ಇದು ಯಾವ ಅದ್ದ್ಭುತವೋ” ಎಂದು ಹೇಳುತ್ತಾರೆ ನಮ್ಮಾಳ್ವಾರ್.
ಹಿಂದಿನ ಅವತಾರದಲ್ಲಿ ಪತಿಯ ಗೆಲುವಿಗೆ ನೆರವಾಗಿ ನಿಂತು, ಅದಕ್ಕೆ ಯಾವ ಪ್ರತಿಫಲವನ್ನೂ ನಿರೀಕ್ಷಿಸದ ಸಮುದ್ರದೇವಿ ವಾರಾಹಿಗೆ ತನ್ನ ಶಂಖವನ್ನು, ಚಕ್ರವನ್ನು ಉಡುಗೊರೆಯಾಗಿ ನೀಡಿದ ವಿಷ್ಣು,
“ಪರಸ್ಪರಂ ಭಾವಯಂತ: ಶ್ರೇಯ ಪರಮವಾಪ್ಸ್ಯತಾ” (ಭಗವತ್ ಗೀತೆ 3:11)
ಪತಿ ಪತ್ನಿಯರು ಒಬ್ಬರನ್ನೊಬ್ಬರು ಪ್ರೀತಿಸುವುದರಿಂದ, ಸೇವೆ ಮಾಡುವುದರಿಂದ ಉನ್ನತ ಸ್ಥಿತಿಯನ್ನು ತಲುಪಬಹುದು ಎಂಬುದನ್ನು ತಿಳಿಸಿ ಹೇಳಲು ನೀಳಾದೇವಿ ಕೃಷ್ಣಾವತಾರದಲ್ಲಿ ನೀಲಾದೇವಿಯಾಗಿ ಅವತರಿಸಿ ಗೃಹಧರ್ಮವನ್ನು ನಮಗೆ ಭೋದಿಸುತ್ತಾಳೆ.
ಈ ಪಾಶುರದಲ್ಲಿ ಮತ್ತೊಂದು ವಿಶೇಷತೆ ಇದೆ.
ಪರಂದಾಮನ ಸಾವಿರಾರು ನಾಮಗಳಲ್ಲಿ ಯಾವುದನ್ನೂ ಹೇಳಬೇಕಾಗಿಲ್ಲ.
“ಓಂ ನಮೋ ನಾರಾಯಣ” ಎಂಬ ಶ್ರೀಮಂತ್ರವನ್ನು ಹೇಳಿದರೆ ಸಾಕು ಮೋಕ್ಷ ದೊರಕುತ್ತದೆ ಎಂದು ನಮಗೆ ತಿಳಿಸಿಕೊಟ್ಟ ರಾಮನುಜರಿಗೆ ಬಹಳ ಹಿಡಿಸಿದ ಪಾಶುರ ಇದೇ ಆಗಿದೆ.
ಒಂದು ದಿನ ರಾಮನುಜರು “ ಸೋರ್ವಮದಜಲದ ಗಜದಂತೆ” ಎಂಬ ಈ ‘ತಿರುಪ್ಪಾವೈ’ ಹಾಡನ್ನು ಹಾಡುತ್ತಲೇ, ತಮ್ಮ ಆಚಾರ್ಯಾರಾದ ಶ್ರೀಪೆರಿಯನಂಬಿಯ ಮನೆಗೆ ಹೋದಾಗ, “ಕೆಂದಾವರೆಯ ಕೈಯಿಂದ ಚಂದದಿಂ ಶೋಭಿಸುತಿರ್ಪ ಬಳೆಗಳು ಉಲಿಯುವೊಲು ಬಂದು ತೆರೆ” ಎಂದು ಹಾಡಿ ಮುಗಿಸುವಾಗ, ಅದೇ ಸಮಯಕ್ಕೆ ಶ್ರೀಪೆರಿಯನಂಬಿಯ ಮಗಳು ‘ಅತ್ತುಜ್ಹಾಯ್’ ಕೈಬಳೆಗಳ ದನಿಯೊಳು ಬಾಗಿಲನ್ನು ತೆರೆಯಲು ಆ ಬಾಲಕಿಯನ್ನು ‘ನೀಲಾದೇವಿ’ ಎಂದು ತಿಳಿದು ಅವಳ ಪಾದವನ್ನೆರಗಿದರಂತೆ ರಾಮನುಜರು ಎಂದು ಹೇಳಲ್ಪಡುತ್ತದೆ.
ನೀಳಾದೇವಿಯಾದ ನೀಲಾದೇವಿಯ ಕಥೆಯನ್ನು ಕೇಳಿದ ಗೋದೈಗೂ, ಕೃಷ್ಣನ ಮೇಲಿನ ತನ್ನ ಪ್ರೀತಿಯ ಬಗ್ಗೆ ಬಹಳ ನಂಬಿಕೆ ಹುಟ್ಟಲು, ನಂದಗೋಪನ ಸೊಸೆಯಾದ ನೀಲಾದೇವಿಯನ್ನು ಪೂಜಿಸಿ, ಅವಳ ಕೃಪೆಯಿಂದ, ಅವಳ ಪ್ರಿಯಕರ ಕೃಷ್ಣನ ಪ್ರೀತಿಯನ್ನು ಗಳಿಸಲು, ಗೆಳತಿಯರೊಂದಿಗೆ ಹದಿನೆಂಟನೇಯ ದಿನ ಹಾಡುತ್ತಾಳೆ ಗೋದೈ ಆಂಡಾಳ್…!
***
ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.