ಸುಂದರಿಯಾದ ಕುಬ್ಜೆಯ ಕಥೆ : ಧನುರ್ ಉತ್ಸವ ~ 19

ಧನುರ್ ಉತ್ಸವ ವಿಶೇಷ ಸರಣಿಯ ಹತ್ತೊಂಭತ್ತನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಹತ್ತೊಂಭತ್ತನೇಯ ದಿನ

ಸ್ತಂಭದಿಂ ಬೆಳಕುರಿಯೆ ದಂತ ಕಾಲಿನ ಮಂಚದೊಳು

ಮೆದುಮಾಗಿರ್ಪ ಐದು ಗುಣಗಳ ಹಾಸಿಗೆಯ ಮೇಲೇರಿ

ಗೊಂಚಲರಳಿದ ಹೂ ಕುರುಳ ನೀಳೆಯ ಎದೆಯ ಮೇಲ್

ಒರಗಿ ಮಲಗಿದ ನೀಳೆದೆಯವನೇ ಬಾಯ್ತೆರೆಯಬಾರದೇ

ಕಾಡಿಗೆಯ ಪೂಸಿರ್ಪ ಕಣ್ಣವಳೇ ನೀ ನಿನ್ನ ಪತಿಯ

ಎಷ್ಟು ಹೊತ್ತಾದೊಡಂ ನಿದ್ರೆಯಿಂದೇಳೆ ಬಿಡದಿಹೆಯಾ

ಕ್ಷಣಕಾಲಮುಂ ಅಗಲಿಕೆಯ ತಾಳದಿಹೆಯಾ ಅಚ್ಚರಿಯಲ್ತೆ

ತಕ್ಕುದಲ್ಲವಿದು ಯುಕ್ತವಲ್ಲವಿದು ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ  (ಶ್ರೀ ರಾಗ – ಆದಿ ತಾಳ)

“ನೆಲೆದೀಪಗಳು ನಾಲ್ಕು ಕಡೆಗಳಿಗೂ ಬೆಳಕ ಚೆಲ್ಲಲು, ದಂತದ ಕಾಲುಗಳ ಮಂಚದಲ್ಲಿ ಮೆತ್ತನೆಯ ಹತ್ತಿಯ ಹಾಸಿಗೆಯಲ್ಲಿ, ಗೊಂಚಲು ಗೊಂಚಲಾಗಿ ಅರಳಿರುವ ಹೂಗಳನ್ನು ಮುಡಿದ ನೀಲಾದೇವಿಯ ಎದೆಯ ಮೇಲೆ ತಲೆಯಿಟ್ಟು ಮಲಗಿರುವವನೇ, ಬಾಯಿ ತೆರೆದು ಮಾತನಾಡುವಂತವನಾಗು,

ಕಾಡಿಗೆ ಹಚ್ಚಿದ ಸುಂದರ ಕಣ್ಣುಗಳ ನೀಲಾದೇವಿಯೇ,

ನೀ ನಿನ್ನ ಪತಿಯನ್ನು ಸ್ವಲ್ಪ ಹೊತ್ತಾದರೂ ನಿದ್ರೆಯಿಂದ ಏಳಲು ಬಿಡಲಾರೆಯೇ,

ಕೆಲವು ಕ್ಷಣವಾದರೂ ಅವನನ್ನು ಅಗಲಿರಲಾರೆಯೇ,

ನೀನು ಹೀಗಿರುವುದು ತರವಲ್ಲ.”

ಎಂದು ತನ್ನ ಆತಂಕವನ್ನು ತತ್ವವಾಗಿ ಹಾಡುತ್ತಾಳೆ ಗೋದೈ !

“ಸ್ತಂಭದಿಂ ಬೆಳಕುರಿಯೆ ದಂತ ಕಾಲಿನ ಮಂಚದೊಳು….” ಎಂದು ಕೃಷ್ಣನ ಹಾಸಿಗೆಯನ್ನು ವರ್ಣಿಸಿ, ನಂತರ ಅವನನ್ನು ಎಚ್ಚರಗೊಳಿಸಲು ಹಾಡುತ್ತಾಳೆ ಗೋದೈ. ಹಾಸಿಗೆಯಿಂದ ಎದ್ದು ಬಾರದಿರುವ ಕೃಷ್ಣನನ್ನು, ನೀಲಾದೇವಿಯನ್ನು ಹಾಡುವ ಮೊದಲು, ಕೃಷ್ಣನ ಹಾಸಿಗೆ ಎಷ್ಟು ವಿಶೇಷವಾದದ್ದು ಎಂದು ಹಾಡುತ್ತಾಳೆ.

ಸಾಮಾನ್ಯವಾಗಿ ಹಾಸಿಗೆಯಲ್ಲಿ ಅಂತಹ ವಿಶೇಷತೆ ಏನಿರಬಹುದು ಎಂಬ ಪ್ರಶ್ನೆ ನಮ್ಮ ಮುಂದೆ ಬಂದರೂ, ಭಗವಂತ ಕೃಷ್ಣ ಉಪಯೋಗಿಸುವ ಎಲ್ಲವೂ ವಿಶೇಷವಾದದ್ದು ಎಂದಿರುವಾಗ, ಅವನ ಹಾಸಿಗೆ ಮಾತ್ರ ಸಾದಾರಣವಾಗಿರುತ್ತದೆಯೇ ಏನು? ಎಂದು ಆಲೋಚಿಸಲು ತೋರುತ್ತದಲ್ಲವೇ?

ಕೃಷ್ಣನ ಹಾಸಿಗೆಯನ್ನು ದಂತದ ಕಾಲಿನ ಮಂಚ ಎನ್ನುತ್ತಾಳೆ ಗೋದೈ! ಅದೇನು ದಂತದ ಕಾಲು?

ದಂತದ ಮಂಚ ಎಂಬುದು ಶೌರ್ಯದ ಗುರುತು. ಹಾಡುಗಳಲ್ಲಿ ‘ಭರಣಿ’ ಎಂಬುದು ಹೇಗೆ ಯುದ್ಧದಲ್ಲಿ ಸಾವಿರ ಆನೆಗಳನ್ನು ಕೊಂದವರಿಗಾಗಿ ಹಾಡಲ್ಪಡುತ್ತದೋ, ಹಾಗೆಯೇ ಯುದ್ಧದಲ್ಲಿ ಕೊಂದ ಆನೆಗಳ ದಂತಗಳಿಂದ ಮಾಡಿದ, ದಂತದ ಮಂಚವನ್ನು ‘ದಂತದ ಮಂಚ’ ಎಂದು ಕರೆಯುತ್ತಾರೆ.

ದಂತದ ಮಂಚದಲ್ಲಿ ಮಲಗಿದರೆ, ಹುಟ್ಟುವ ಮಗು ಶೌರ್ಯದಿಂದಿರುತ್ತದೆ ಎಂಬುದು ಅಂದಿನ ನಂಬಿಕೆ.

ಮಂಚವೇ ಹಾಗೆಂದರೆ, ಆ ಮಂಚದಲ್ಲಿ ಕೃಷ್ಣ ನಿದ್ರಿಸುವುದು ‘ಪಂಚ ಶಯನಂ’ ಎನ್ನುತ್ತಾಳೆ ಆಂಡಾಳ್. ಪಂಚ ಶಯನ ಎಂಬುದು ಸೌಂದರ್ಯ, ತಂಪು, ಮೃದುತನ, ಸ್ವಚ್ಛತೆ, ಶ್ವೇತ ಮುಂತಾದ ಐದು ಗುಣಗಳನ್ನುಳ್ಳ ಹಾಸಿಗೆಯಂತೆ. ಅಂತಹ ವಿಶೇಷವಾದ ಹಾಸಿಗೆಯ ಮೇಲೆ ನಿದ್ರಿಸುವವನೇ ಕೃಷ್ಣ.

ಆದರೆ, ಹಾಸಿಗೆಯೇ ಅಷ್ಟು ವಿಶೇಷವಾದದ್ದೇ ಹೊರತು, ಆ ಹಾಸಿಗೆಯ ಮೇಲೆ ಕೃಷ್ಣ ಎಂದಾದರೂ ನೆಮ್ಮದಿಯಾಗಿ ಮಲಗಿ ನಿದ್ರಿಸಿರುತ್ತಾನೆಯೇ? ಎಂದರೆ, ಇಲ್ಲ!

ಕೃಷ್ಣ ಮಾತ್ರ ನಿದ್ರಿಸಲಿಲ್ಲವೇ? ಅವನ ಮೇಲೆ ಪ್ರೇಮವಿದ್ದ ಸ್ತ್ರೀಯರೂ ನಿದ್ರಿಸಲಿಲ್ಲ.

ಅಂದೂ ಹಾಗೆಯೇ…. ಆಡಳಿತ ಕಾರ್ಯಗಳನ್ನು ಮುಗಿಸಿ, ಎರಡನೇಯ ಜಾವಕ್ಕೆ ಮನೆಗೆ ಹಿಂತಿರುಗಿದ ಕೃಷ್ಣನ ಕಣ್ಣುಗಳಲ್ಲಿ ಚಿಂತೆಯ ರೇಖೆಗಳು ಕಂಡ ನೀಲಾದೇವಿ, ಭೋಜನ ಮಾಡುವಾಗ ಮೆಲ್ಲಗೆ ವಿಚಾರಿಸುತ್ತಾಳೆ,  

ಅವಳ ಬಳಿ, “ದೃತರಾಷ್ಟ್ರ, ಪಂಚ ಪಾಂಡವರನ್ನೂ, ಕುಂತಿಯನ್ನೂ ಪುರೋಚನ ನಿರ್ಮಾಣ ಮಾಡಿದ್ದ  ಅರಗಿನ ಮಾಳಿಗೆಗೆ ಕಳುಹಿಸಿಕೊಡುತ್ತಾನೆ. ನನಗೆ ಯಾಕೋ ಗೊಂದಲವಾಗಿದೆ” ಎನ್ನುತ್ತಾನೆ ಕೃಷ್ಣ ಚಿಂತಾಗ್ರಸ್ತನಾಗಿ.

“ಸರಿ, ಬೆಳಗ್ಗೆ ನೋಡಿಕೊಳ್ಳೋಣ, ಸ್ವಲ್ಪ ನಿದ್ದೆ ಮಾಡಿ. ಆಗಲೇ ಒಂದು ವಾರವಾಯಿತು ನೀವು ನಿದ್ರಿಸಿ…!” ಎಂದು ಹೇಳಿ ಬಾಯಿ ಮುಚ್ಚುವುದರೊಳಗೆ ಆ ನಡು ರಾತ್ರಿಯಲ್ಲಿ, “ಪಾಂಡವರು ತಂಗಿದ್ದ ಮೇಣದ ಮಾಳಿಗೆ ಬೆಂಕಿಗೆ ಆಹುತಿಯಾಗಿದೆ” ಎಂಬ ಸುದ್ಧಿಯೊಂದಿಗೆ ಅಕ್ರೂರ ಓಡಿ ಬರುತ್ತಾನೆ.  

ಅಕ್ರೂರ ಹೇಳಿದ ಸುದ್ಧಿಯನ್ನು ಕೇಳಿ, ಓಡಿದ ಕೃಷ್ಣ ಮತ್ತೆ ಯಾವಾಗ ಮನೆಗೆ ಹಿಂತಿರುಗುತ್ತಾನೆ ಎಂದು ತಿಳಿಯದೆ ಕಾಯುತ್ತಿರುವ ನೀಲಾದೇವಿ ಮಾರನೇಯ ದಿನದ ರಾತ್ರಿ ಕೃಷ್ಣನನ್ನು ನೋಡಲು ಸಾಧ್ಯವಾಗುತ್ತದೆ.

ಇಂದಾದರೂ ಕೃಷ್ಣ ಸ್ವಲ್ಪ ವಿಶ್ರಾಂತಿ ಪಡೆಯಲಿ ಎಂದರೆ, ಬ್ರಹ್ಮ ಮುಹೂರ್ತದ ವೇಳೆಯಲ್ಲಿ ಈ ಗೋಕುಲ ಸ್ತ್ರೀಯರು ಬಂದುಬಿಟ್ಟರು. ಇದರಲ್ಲಿ, “ನಿದ್ರೆಯಿಂದ ಪತಿಯನ್ನು ಎಬ್ಬಿಸುವುದಿಲ್ಲವೇ” ಎಂದು ನೀಲಾದೇವಿಯ ಮೇಲೆಯೇ ದೂರು ಬೇರೆ.

ಆದ್ದರಿಂದಲೇ ಇನ್ನೂ ಸ್ವಲ್ಪ ಸಮಯ ನಿದ್ರೆ ಮಾಡಿದರೆ, ಕೃಷ್ಣನಿಗೆ ವಿಶ್ರಾಂತಿ ಎಂದು ಭಾವಿಸಿ, ತಾನೂ ನಿದ್ರಿಸದೆ, ಗೋಕುಲದ ಹೆಣ್ಣುಗಳನ್ನೂ ಎಬ್ಬಿಸಲು ಬಿಡದೆ ಕೃಷ್ಣನ ನಿದ್ದೆಯನ್ನು ಕಾಪಾಡಿ ನಿಲ್ಲುತ್ತಾಳೆ ನೀಲಾದೇವಿ.

ಕೃಷ್ಣನಿಗಾಗಿ ನೀಲಾದೇವಿ ಮಾತ್ರವೇ ನಿದ್ದೆಯನ್ನು ಹಾಳು ಮಾಡಿಕೊಂಡದ್ದು? ಇಲ್ಲವಲ್ಲ, ಕೃಷ್ಣನಿಗಾಗಿ ಎಷ್ಟೊಂದು ಹೆಣ್ಣುಗಳು ನಿದ್ರೆಯನ್ನು  ಕಳೆದುಕೊಂಡಿದ್ದಾರೆ…?!

ಕೃಷ್ಣನ ಮನಸ್ಸನ್ನು ಕದ್ದ ರುಕ್ಮಿಣಿ, ರಾಧೆ, ನೀಲಾದೇವಿ ಎಂದು ಎಲ್ಲ ನಾಯಕಿಯರೂ, ಕೃಷ್ಣನ ಬರುವಿಗಾಗಿ ಕಾದಿದ್ದರೆಂಬುದನ್ನು ನಾವು ಅರಿತಿದ್ದೇವೆ.

ಕೃಷ್ಣನ ಆಗಮನಕ್ಕಾಗಿ ನಾಯಕಿಯರು ಕಾದಿರಬಹುದು ಸರಿ; ದಾಸಿ ಕಾದಿರಬಹುದೇ..? ಹೌದು…! ಕೃಷ್ಣನ ಬರುವಿಗಾಗಿ ಕಾಲಪೂರ್ತಿ ಕಣ್ಣು ತೆರೆದುಕೊಂಡು ಕಾದಿದ್ದ ಕೃಷ್ಣ ದಾಸಿಯಾದ ಕುಬ್ಜೆಯ ವಿಚಿತ್ರ ಕಥೆ ಒಂದಿದೆ.

ಕೃಷ್ಣನನ್ನು ಹೇಗಾದರೂ ಅಳಿಸಬೇಕೆಂದುಕೊಂಡ ಕಂಸ, ಅವನನ್ನು ತನ್ನ ಸ್ಥಳವಾದ ಮಥುರಾಗೆ ಕರೆಸಿಕೊಂಡು ಅಲ್ಲಿ ಕೊಲ್ಲಲು ಎಣಿಸಿ, ಅದಕ್ಕೆ ಒಂದು ಯೋಜನೆಯನ್ನು ಹಾಕಿಕೊಳ್ಳುತ್ತಾನೆ.

ಧನುರ್ ಯಾಗ ಮಾಡುವುದಾಗಿ ನಿರ್ಧರಿಸಿ, ಆ ಯಾಗವನ್ನು ಆಚರಿಸಲು ಒಂದು ಹಬ್ಬವನ್ನು ಏರ್ಪಾಡಿಸಿ, ಕೃಷ್ಣನನ್ನು ಬಲರಾಮನನ್ನು ಮಥುರಾಗೆ ಬರುವಂತೆ ಅಕ್ರೂರನನ್ನು ಕಳುಹಿಸಿ ಆಹ್ವಾನಿಸುತ್ತಾನೆ ಕಂಸ.

ಅವನ ಆಹ್ವಾನವನ್ನು ಸ್ವೀಕರಿಸಿ ಬಂದ ಸಹೋದರರು ಬಲರಾಮ, ಕೃಷ್ಣ ಇಬ್ಬರನ್ನೂ ಮಥುರಾವಿನ ಮಹಿಳೆಯರು ದಾರಿ ಪೂರ್ತಿ ಪುಷ್ಪ ವೃಷ್ಟಿ ಮಾಡಿ ಬರಮಾಡಿಕೊಳ್ಳುತ್ತಾರೆ.

ಆಗ, ತನಗೆ ಗೂನು ಇದ್ದದ್ದರಿಂದ, ಪೂರ್ತಿಯಾಗಿ ಬಗ್ಗಲಾಗದೆ, ಆದರೂ ತನ್ನ ಕೈಗಳಲ್ಲಿ ಒಂದು ದೊಡ್ಡ ತಾವರೆ ಎಲೆಯಲ್ಲಿ ಗಂಧ ಮತ್ತು ಪರಿಮಳ ದ್ರವ್ಯಗಳನ್ನು ಹಿಡಿದುಕೊಂಡು, ಕುಬ್ಜೆ ಕೃಷ್ಣನನ ಕಡೆ ನಡೆದು ಬರುತ್ತಾಳೆ.

ಕೃಷ್ಣ… ಗೂನಿಯಾದ ನನ್ನ ಹೆಸರು ಕುಬ್ಜೆ. ದಿನನಿತ್ಯವೂ, ಕಂಸನ ಅಲಂಕಾರಕ್ಕೆ ಗಂಧ ತೇಯ್ದು ಕೊಡುವುದು ನನ್ನ ಕೆಲಸ, ನಿನ್ನ ಮುಖವನ್ನು ತಲೆ ಎತ್ತಿಯೂ ನೋಡಲಾಗದ ನನ್ನಿಂದ, ಇಂದೇಕೋ ನಿನಗೆ ಗಂಧ ಪೂಸಬೇಕೆಂದು ಆಸೆ ಉಂಟಾಗುತ್ತಿದೆ. ಅನುಮತಿಸುವೆಯಾ? ಎಂದು ಬೇಡಿಕೊಳ್ಳುತ್ತಾಳೆ.

ತಕ್ಷಣ ಕೃಷ್ಣ ನಗುತ್ತಾ, “ಪೂಸು, ಸುಂದರಿಯೇ…!” ಎಂದು ಕೈಗಳನ್ನು ಚಾಚಲು ಗಂಧ ಪೂಸುತ್ತಾಳೆ ಕುಬ್ಜೆ. ಕೈಗಳಲ್ಲಿ ಸವರಿದ ಗಂಧವನ್ನು ಆಸ್ವಾಧಿಸುತ್ತಲೇ ತುಂಟತನದಿಂದ ಕೃಷ್ಣ, “ಎಷ್ಟು ಸಮಯ ಕೈಗಳಿಗೆ ಸವರುತ್ತಿರುವೆ? ಯಾವಾಗ ನನ್ನ ಎದೆಗೂ, ಮುಖಕ್ಕೂ ಹಚ್ಚುವೇ? ” ಎಂದು ಕೇಳಲು, “ಗೂನಿಯಾದ ನನಗೆ ಪಾದಗಳ ಹೊರತು ಬೇರೆ ಕಡೆ ನೋಡಲು ಸಾಧ್ಯವಿಲ್ಲ ಕೃಷ್ಣ” ಎಂದು ವ್ಯಥೆಯಿಂದ ಹೇಳಲು, ಕೃಷ್ಣ ಅವಳ ಬೆನ್ನನ್ನು ಮುಟ್ಟಿ ನಿಲ್ಲಿಸುತ್ತಾನೆ.

ಮಥುರಾವಿನ ಪ್ರಜೆಗಳು ಎಲ್ಲರೂ ನೋಡುತ್ತಿರುವಾಗ, ಆಶ್ಚರ್ಯವಾಗಿ, ಕುಬ್ಜೆಯ ಗೂನು ಸರಿಯಾಗಿ, ಅವಳೊಬ್ಬ ಜ್ವಲಂತ ಸುಂದರಿಯಾಗುತ್ತಾಳೆ.

ಬಗ್ಗಿಯೇ ಇದ್ದ ತನ್ನ ಬದುಕಿನಲ್ಲಿ, ಅಲ್ಲಿಯವರೆಗೆ ಒಬ್ಬ ಪ್ರೀತಿಯ ಗಂಡನ್ನು ನೋಡಿರದ ಕುಬ್ಜೆ, ಕೃಷ್ಣನ ಪ್ರೀತಿಯ ಸ್ಪರ್ಶದಿಂದ ಗೂನು ಸರಿಯಾಗಿ, ಮೊಟ್ಟಮೊದಲು ಕೃಷ್ಣನನ್ನು ನೋಡಿದಕೂಡಲೆ ಪ್ರೀತಿಸುತ್ತಾಳೆ. ಕೃಷ್ಣನ ಕೈತಾಕಿ ಅತಿ ಸುಂದರಿಯಾದ ಕುಬ್ಜೆ, ಅವನಿಗೆ ಸೇವೆ ಮಾಡುವ ಸಲುವಾಗಿ, ಅವನನ್ನು ತನ್ನ ಮನೆಗೆ ಬರಲು ಆಹ್ವಾನಿಸುತ್ತಾಳೆ.

ಆದರೆ, ಕೃಷ್ಣನೋ. “ನಾನು ಬೇರೆಯ ಕೆಲಸದ ನಿಮಿತ್ತ ಇಲ್ಲಿಗೆ ಬಂದಿದ್ದೇನೆ. ನೀನು ಈಗ ನಿನ್ನ ಮನೆಗೆ ಹೋಗು, ನಾನು ಮತ್ತೆ ಒಂದು ದಿನ ನಿನ್ನ ಮನೆಗೆ ಬರುತ್ತೇನೆ. ನಿನಗಾಗಿ ಬರುತ್ತೇನೆ” ಎಂದು ಹೇಳಿ ಅವಳನ್ನು ಕಳುಹಿಸಿಕೊಡುತ್ತಾನೆ.

ಕೃಷ್ಣನ ಮಾತನ್ನು ಒಪ್ಪಿಕೊಂಡು ತನ್ನ ಮನೆಗೆ ಹಿಂತಿರುಗಿದ ಕುಬ್ಜೆ ಪ್ರತಿ ದಿನವೂ, ಪ್ರತಿ ಗಳಿಗೆಯೂ ಅವನ ಬರುವಿಗಾಗಿ ಅಡುಗೆ ಮಾಡಿಟ್ಟು ಕಾದಿರುತ್ತಾಳೆ. ಆದರೆ, ಕೃಷ್ಣ ಬರುವಂತೆ ಕಾಣುವುದಿಲ್ಲ. ದಿನಗಳು ತಿಂಗಳುಗಳಾಗಿ, ವರ್ಷಗಳು ಉರುಳಿದಾಗಲೂ ಕೃಷ್ಣ ಬರುವುದಿಲ್ಲ. ಕುಬ್ಜೆಯೂ ನಿರೀಕ್ಷಿಸುವುದನ್ನು ನಿಲ್ಲಿಸಲಿಲ್ಲ.

ಅವಳನ್ನು ವರ್ಷಗಳಿಂದ ಕಾಡಿದ್ದ ಆ ಶುಭದಿನ ಕೊನೆಗೆ ಬರುತ್ತದೆ. ಅವನ ಬರುವನ್ನು ದಿನವೂ ಎದುರುನೋಡುತ್ತ ನಿಂತವಳಿಗೆ, ಕೃಷ್ಣ ಬಂದು ಸೇರಿದ ದಿನ ಅವಳಿಗೆ ಮೋಕ್ಷವನ್ನು ದಯಪಾಲಿಸುವ ದಿನವಾಗಿಯೂ ಆಗುತ್ತದೆ.

ಗೋಪಿಯರು ಕೃಷ್ಣನ ಮೇಲೆ ಕಾಮ ಬೆರೆಯದ ಭಕ್ತಿಯನ್ನು ಇಟ್ಟಿದ್ದರು. ಆದರೆ ಕುಬ್ಜೆಯೋ  ಕೃಷ್ಣನ ಕೂಡುವಿಕೆಯನ್ನು ಬಯಸಿದಳು. ಆದರೂ ಅವಳನ್ನು ತೆಗಳದೆ ಆಲಿಂಗಿಸಿಕೊಳ್ಳುತ್ತಾನೆ.  ಗೂನಿಯಾಗಿಯೂ, ಕುರೂಪಿಯಾಗಿಯೂ ಇದ್ದ ಅವಳನ್ನು ಸುಂದರಿಯಾಗಿಸಿಸುತ್ತಾನೆ ಕೃಷ್ಣ. ಅಷ್ಟೇ ಅಲ್ಲ, ಕೃಷ್ಣಾವತಾರ ಸಂಪೂರ್ಣವಾಗಿ ಹಲವು ನೂರು ವರ್ಷಗಳ ನಂತರ ‘ಜನಾಬಾಯಿ’ ಎಂಬ ಹೆಸರಿನಲ್ಲಿ ಕುಬ್ಜೆಯನ್ನು ಜನ್ಮತಾಳುವಂತೆ ಮಾಡುತ್ತಾನೆ ವಿಷ್ಣು. ಆಗ ‘ಶುದ್ಧಬುದ್ಧಿ’ ಎಂಬ ವರವನ್ನೂ ಅವಳಿಗೆ ನೀಡಿ ತನ್ನ ಪಾದಕಮಲಗಳಲ್ಲಿ ಸೇರಿಸಿಕೊಳ್ಳುತ್ತಾನೆ ಎಂದು ನಂಬಲಾಗುತ್ತದೆ.

(ಸಂತ ಜನಾಬಾಯಿ ರಚಿಸಿದ ಕೀರ್ತನೆಗಳು ಜಗತ್ ಪ್ರಸಿದ್ಧಿಯಾದವು. ‘ಸಾವಳೆ ಸುಂದರ’ ಎಂಬ ಹಾಡು, ಜಗವೆಲ್ಲ ಇರುವ ವಿಠ್ಠಲ ಭಕ್ತರಿಂದ ಇಂದಿಗೂ ಕೊಂಡಾಡಲ್ಪಡುತ್ತದೆ.)

ಒಟ್ಟಾರೆ, ದಂತದ ಮಂಚವಿದ್ದರೂ, ಹತ್ತಿಯ ಹಾಸಿಗೆ ಇದ್ದರೂ ತಾನು ನಿದ್ರಿಸದೆ ತನ್ನ ಭಕ್ತರಿಗಾಗಿ ಎಚ್ಚರವಿರುವವನು ಕೃಷ್ಣ.

ಕೃಷ್ಣ ನಿದ್ರಿಸುವಾಗ ಯಾರೂ ಅವನನ್ನು ಎಚ್ಚರಗೊಳಿಸಬಾರದೆಂದು ನೀಲಾದೇವಿ, ತನ್ನ ನಿದ್ರೆಯನ್ನು ಹಾಳುಮಾಡಿಕೊಂಡು ರಕ್ಷಿಸಿ ನಿಂತವಳು.

ಕುಬ್ಜೆಯೋ, ಎಚ್ಚರವಿದ್ದರೆ ತನ್ನನ್ನು ಹುಡುಕಿಕೊಂಡು ಕೃಷ್ಣ ಬರುತ್ತಾನೆ ಎಂದು ತನ್ನ ನಿದ್ರೆಯನ್ನು ಕಳೆದುಕೊಂಡು ಕಾಯುತ್ತಿದ್ದವಳು.  

ಆದರೆ ಗೋದೈ, ತಾನು ನಿದ್ರೆ ಹೋದರೆ ಕೃಷ್ಣನನ್ನು ಪೂಜಿಸುವ ಸಮಯ ಕಡಿಮೆಯಾಗುತ್ತದೆ ಎಂದು ನಿದ್ರೆಯನ್ನು ಕಳೆದುಕೊಂಡವಳು.

“ಹೀಗೆ ನಿದ್ರೆಯನ್ನು ಕಳೆದುಕೊಂಡು ಆತ್ಮಾರ್ಥವಾದ ಪ್ರೀತಿಯಿಂದ, ತಮ್ಮನ್ನು ಅರ್ಪಿಸಿಕೊಂಡ ಎಲ್ಲರನ್ನೂ ಆಲಿಂಗಿಸಿಕೊಂಡ ಕೃಷ್ಣನ ಪಾದಕಮಲಗಳನ್ನು ಪೂಜಿಸಿ ನಮಸ್ಕರಿಸಿದರೆ, ನಮ್ಮನ್ನು ಆಲಿಂಗಿಸಿಕೊಳ್ಳುತ್ತಾನೆ ಬನ್ನಿರೀ…”  ಎಂದು ಹತ್ತೊಂಭತ್ತನೇಯ ದಿನ ಗೆಳೆತಿಯರನ್ನು ಕರೆದು ಹಾಡುತ್ತಾಳೆ ಗೋದೈ ಆಂಡಾಳ್!


ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply