ಮೂವತ್ತು ಮೂರು ದೇವತೆಗಳಿಗು… : ಧನುರ್ ಉತ್ಸವ ~ 20

ಧನುರ್ ಉತ್ಸವ ವಿಶೇಷ ಸರಣಿಯ ಇಪ್ಪತ್ತನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಇಪ್ಪತ್ತನೇಯ ದಿನ

ಮೂವತ್ತು ಮೂರು ದೇವತೆಗಳಿಗು ಮುಂದ್ಹೋಗಿ

ನಡುಕ ನೀಗುವ ಕಲಿಯೇ ನಿದ್ದೆಯಿಂದೇಳಯ್ಯ

ಸರಲ ಗುಣ ಸಂಪದನೇ ಮಹಾಪರಾಕ್ರಮಿಯೇ

ಆರಿಗಳ್ಗೆ ಭಯ ಉಂಟುಮಾಡ್ವ ವಿಮಲನೆ ನಿದ್ದೆಯಿಂದೇಳಯ್ಯ

ಕಲಶದಂತಿರ್ಪ ಮೆದುಮೊಲೆಯ ಕೆಂದುಟಿಯ ಸಣ್ಣ ನಡುವಿನ

ನೀಳಾದೇವಿಯೇ ಸಿರಿಯೇ ನಿದ್ದೆಯಿಂದೇಳವ್ವ

ಬೀಸಣಿಗೆಯನು ಕನ್ನಡಿಯ ತಂದು ನಿನ್ನೊಡಯನನು

ಈಗಲೇ ನಮ್ಮ ಮೀಯಿಸಲು ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ   (ದೇಶೀಯ ರಾಗ  – ಆದಿ ತಾಳ)

“ಮೂವತ್ತಮೂರು ಕೋಟಿ ದೇವತೆಗಳಿಗೂ ಏನಾದರೂ ತೊಂದರೆ ಉಂಟಾಗುವ ಮುನ್ನವೇ, ಓಡಿ ಹೋಗಿ, ಅವರ ಕಷ್ಟಗಳನ್ನು ನೀಗಿಸಿ, ರಕ್ಷಿಸಿ ಕಾಪಾಡುವ ಕೃಷ್ಣನೇ…ಕಣ್ಣು ತೆರೆಯುವಂತವನಾಗು…!

ಕೊರತೆ ಇಲ್ಲದವನೇ, ಬಲಶಾಲಿಯೇ, ಎಲ್ಲೆಲ್ಲೂ ಇರುವವನೇ, ವೈರಿಗಳಿಗೆ ಭಯವುಂಟುಮಾಡುವವನೇ, ನಿದ್ರೆಯಿಂದ ಏಳುವಂತವನಾಗು….!

ಕಲಶದಂತಹ ಎದೆಯನ್ನೂ, ಕೆಂಪು ತುಟಿಗಳನ್ನೂ, ಸಣ್ಣ ನಡುವನ್ನೂ ಉಳ್ಳ ನೀಲಾದೇವಿಯೇ… ಮಹಾಲಕ್ಷ್ಮಿಯೇ ನಿದ್ರೆಯಿಂದ ಏಳುವಂತಾವಳಾಗು…!

ನಮ್ಮ ವ್ರತಕ್ಕೆ ಅಗತ್ಯವಾದ ಚಾಮರವನ್ನೂ, ಕನ್ನಡಿಯನ್ನೂ ನೀಡಿ, ನಿನ್ನ ಪತಿಯಾದ ಕೃಷ್ಣನನ್ನು ನಮ್ಮೊಂದಿಗೆ ಕಳುಹಿಸಿ ನಾವು ವ್ರತ ಆಚರಿಸಲು, ಮೀಯಲು ದಾರಿಮಾಡಿಕೊಡುವಂತಳಾಗು…! “

ಎಂದು ಹಾಡುತ್ತಾಳೆ ಗೋದೈ….!

“ಮೂವತ್ತು ಮೂರು ದೇವತೆಗಳಿಗು….” ಎಂದು ಇಂದಿನ ಪಾಶುರವನ್ನು ಪ್ರಾರಂಭಿಸುತ್ತಾಳೆ ಗೋದೈ. ಹಾಡೇನೋ ಸರಿ. ಆದರೆ ಲೆಕ್ಕ ತಪ್ಪುತ್ತಿದೆಯಲ್ಲಾ…! ಮೂವತ್ತು ಮೂರು ಕೋಟಿ ದೇವತೆಗಳು ಎಂದು ಹೇಳುವುದಲ್ಲವೇ ಪದ್ಧತಿ…? ಆದರೆ ಗೋದೈ ಬರೀ ಮೂವತ್ತ ಮೂರು ದೇವತೆಗಳು ಎನ್ನುತ್ತಾಳಲ್ಲಾ?

ಅಧ್ಯಯನ ಮಾಡಿ ನೋಡುವಾಗ, ಮೂವತ್ತು ಮುಕ್ಕೋಟಿ  ದೇವತೆಗಳು ಎಂಬ ಪದ;

‘ತ್ರೈಯತ್ ತಿರಿಸಂಶೈವ ದೇವಾ’

ಎಂಬ ವೇದ ವಾಕ್ಯದಿಂದ ತಮಿಳಿಗೆ ಬಂದದ್ದು. ಇವರಲ್ಲಿ ಏಕಾದಶ ರುದ್ರರು 11, ದ್ವಾದಶ ಆಧಿತ್ಯರು 12, ಅಷ್ಟವಸುಗಳು 8, ಅಶ್ವಿನಿ ದೇವತೆಗಳು 2 ಎಂದು ಒಟ್ಟು 33 ದೇವತೆಗಳು! ಇವರೊಬ್ಬಬ್ಬರಿಗೂ ಒಂದು ಕೋಟಿ ಪರಿವಾರಗಳು ಇರುವುದಾಗಿ ಲೆಕ್ಕ. ಒಟ್ಟು ಮೂವತ್ತುಮೂರು ಕೋಟಿ ದೇವತೆಗಳು ಎಂದು ಅವರನ್ನು ಕರೆಯಲ್ಪಡುತ್ತದೆ. ಗಮನಿಸಿ, ಇವರನ್ನು ದೇವತೆಗಳು ಅಥವಾ ಅಮರರು ಎಂದೇ ಕರೆಯಲಾಗುತ್ತದೆಯೇ ಹೊರತು ಭಗವಂತ ಎಂದು ಕರೆಯಲ್ಪಡುವುದಿಲ್ಲ.

ಸರಿ… ದೇವತೆಗಳು ಮೂವತ್ತಮೂರು ಕೋಟಿ ಎಂದರೆ, ಅಸುರರ ಲೆಕ್ಕ ಒಟ್ಟು ಎಷ್ಟು ಗೊತ್ತೇ? ಯಾವಾಗಲೂ ಒಳಿತಿಗಿಂತ ಕೆಟ್ಟದ್ದೆ ಸಂಖ್ಯೆಯಲ್ಲಿ ಹೆಚ್ಚಾಗಿರುತ್ತದೆ. ಹಾಗೆಯೇ ಅಸುರರು ಎರಡುಪಟ್ಟು ಅಧಿಕ, ಅಂದರೆ ಅರವತ್ತಾರು ಕೋಟಿಯಂತೆ….!

ಈ ಮೂವತ್ತಮೂರು ಕೋಟಿ ದೇವತೆಗಳೂ, ಅರವತ್ತಾರು ಕೋಟಿ ಅಸುರರು ಯಾವಾಗಲೂ ಎದುರುಬದುರಿದ್ದರೂ, ಇವರೆಲ್ಲರೂ ಒಟ್ಟಾಗಿ ಸೇರಿ ಮಾಡಿದ ಕಾರ್ಯ ಒಂದೇ ಒಂದು.

ಅದೇ ಅಮೃತ ಕಡೆದದ್ದು. ಹಾಗೆ ಮಂಥನ ಮಾಡುವಾಗ ಅಮೃತ ತೆಗೆಯಲು ನೆರವಾಗುವುದಕ್ಕಾಗಿ ನಾರಾಯಣ ತೆಗೆದ ಅವತಾರವೇ ಆಮೆಯ ರೂಪದ ಕೂರ್ಮಾವತಾರ. ಅದು ನಡೆದ ಕಥೆಯನ್ನು ಸ್ವಲ್ಪ ನೋಡೋಣ.

ಸತ್ಯ ಯುಗದಲ್ಲಿ ಒಂದು ದಿನ, ದುರ್ವಾಸ ಮುನಿ ವಿಷ್ಣುವನ್ನೂ, ಶ್ರೀದೇವಿಯನ್ನೂ ದರ್ಶಿಸಲು ವೈಕುಂಠಕ್ಕೆ ಹೋಗುತ್ತಾರೆ. ಅಂದು ಬಹಳ ಹರ್ಷದಿಂದ ಇದ್ದ ಶ್ರೀದೇವಿ ತನ್ನ ಬಳಿ ಇದ್ದ ಸುಂದರವಾದ ಬಂಗಾರದ ತಾವರೆ ಒಂದನ್ನು ಮುನಿಗೆ  ಬಳುವಳಿಯಾಗಿ ನೀಡುತ್ತಾಳೆ. ದೇವಿ ಕೊಟ್ಟ ಚಿನ್ನದ ತಾವರೆಯನ್ನು ಪಡೆದುಕೊಂಡರೂ, ಅದನ್ನಿಟ್ಟುಕೊಂಡು ತಾನೇನು ಮಾಡುವುದು ಎಂದುಕೊಂಡು ಹೋಗುತ್ತಿರುವಾಗ ತನ್ನೆದುರು ಐರಾವತದಲ್ಲಿ ಬಂದ ದೇವೇಂದ್ರನನ್ನು ನೋಡಿದಕೂಡಲೆ ತನಗೆ ದೊರೆತಿದ್ದ ತಾವರೆಯನ್ನು ಅವನಿಗೆ ಉಡುಗೊರೆಯಾಗಿ ಕೊಡುತ್ತಾರೆ.

ಆದರೆ, ಅದನ್ನು ತೆಗೆದುಕೊಂಡ ದೇವೇಂದ್ರನು, ಅದರ ಮೌಲ್ಯ ತಿಳಿಯದೆ ಅಸಡ್ಡೆಯಾಗಿ ಅದನ್ನು ಆನೆಯ ಕುತ್ತಿಗೆಯ ಮೇಲಿದುತ್ತಾನೆ.  ಅದು ಅಲ್ಲೇ ದೂರ್ವಾಸರ ಕಣ್ಣ ಮುಂದೆಯೇ ಕೆಳಗೆ ಬಿದ್ದುಬಿಡುತ್ತದೆ.

ಅದನ್ನು ನೋಡಿದ ದೂರ್ವಾಸ ಮುನಿಗಳು ಕಡುಕೋಪದಿಂದ, “ದೇವೇಂದ್ರ ನೀನು ಎಚ್ಚರಿಕೆಯಿಲ್ಲದೆ ಮಹಾಲಕ್ಷ್ಮಿಯ ಉಡುಗೊರೆಯನ್ನು ನಿರ್ಲಕ್ಷ್ಯ ಮಾಡಿರುವೆ. ಆದ್ದರಿಂದ ನೀನು ಲಕ್ಷ್ಮಿ ಕಟಾಕ್ಷವನ್ನೂ, ದೇವ ಪದವಿಯನ್ನೂ ಕಳೆದುಕೊಳ್ಳುತ್ತೀಯ..” ಎಂದು ಶಪಿಸಲು, ಇಂದ್ರ ತನ್ನ ಪದವಿಯನ್ನು, ಸಂಪತ್ತನ್ನು ಕಳೆದುಕೊಳ್ಳುತ್ತಾನೆ.

ರಾಜನಿಲ್ಲದೆ ತಮ್ಮ ಬಲವನ್ನು ಕಳೆದುಕೊಂಡು, ಏನು ಮಾಡುವುದೆಂದು ದೇವತೆಗಳು ಗಾಬರಿಯಾಗಿ ನಿಂತಿರುವಾಗ, ಆ ಸಮಯಕ್ಕಾಗಿ ಕಾಯುತ್ತಿದ್ದ ಅಸುರರು ದೇವಲೋಕವನ್ನು ವಶಪಡಿಸಿಕೊಳ್ಳುತ್ತಾರೆ.

ಇದರಿಂದ, ಬ್ರಹ್ಮ, ದೇವೇಂದ್ರ ಮತ್ತುಳಿದ ದೇವತೆಗಳೆಲ್ಲರೂ ವಿಷ್ಣುವಿನ ಬಳಿ ಮೊರೆಹೋಗಲು, ವಿಷ್ಣುವೋ ಅಸುರರನ್ನು ಜಯಿಸಲು ದೇವರು ಹಿಂದಿನಂತೆಯೇ ಬಲ ಹೊಂದಬೇಕೆಂದರೆ ಕ್ಷೀರ ಸಾಗರವನ್ನು ಮಂಥನ ಮಾಡಿ ದೊರಕುವ ಅಮೃತವನ್ನು ಸೇವಿಸಬೇಕೆಂದೂ, ಈಗಿರುವ ಶಕ್ತಿಯಿಂದ ದೇವತೆಗಳು ಒಂಟಿಯಾಗಿ ಕ್ಷೀರಸಾಗರವನ್ನು ಕಡೆಯಲು ಸಾಧ್ಯವಿಲ್ಲವೆಂದೂ, ಅದಕ್ಕೆ ಅಸುರರ ದಯೆ ಬೇಕೆಂದೂ ಉಪದೇಶಮಾಡುತ್ತಾರೆ.

ತಕ್ಷಣ ದೇವತೆಗಳು ಸಮಯೋಚಿತವಾಗಿ, ಅಮೃತವನ್ನು ಪಡೆಯಲು ನೆರವಾದರೆ ಅವರಿಗೂ ಅಮೃತದಲ್ಲಿ ಪಾಲು ಕೊಡುವುದಾಗಿ ಹೇಳಿ, ಅಸುರರನ್ನೂ ತಮ್ಮೊಂದಿಗೆ ಕ್ಷೀರಸಾಗರವನ್ನು ಕಡೆಯಲು ಕರೆಯಲು, ಅಸುರರು ದೇವತೆಗಳು ಒಂದಾಗುತ್ತಾರೆ.

ಮೇರು ಪರ್ವತವನ್ನು ಅಗೆದು ತೆಗೆದು ಕಡಗೋಲಾಗಿಯೂ, ವಾಸುಕಿ ಎಂಬ ಹಾವನ್ನು ಹಗ್ಗವಾಗಿಯೂ ಬಳಸಿಕೊಂಡು 99 ಕೋಟಿ ದೇವ ಅಸುರರು ಒಟ್ಟುಗೂಡಿ ಹಾಲಿನ ಸಮುದ್ರವನ್ನು ಕಡೆಯಲು ತೊಡಗುತ್ತಾರೆ.

ಆದರೆ, ಮಂಥನ ಮಾಡುವಾಗ ಬಾರ ತಡೆಯಲಾಗದೆ ಆಗಾಗ ಮೇರು ಪರ್ವತ ಕಡಲಿನಲ್ಲಿ ಮುಳುಗಿ ಏಳುತ್ತದೆ. ಪರ್ವತ ಬೀಳುವುದು, ವಾಸುಕಿ ಅವಸ್ಥೆ ಪಡುವುದು ನಿರಂತರವಾಗಿ ಮುಂದುವರೆಯಲು, ದೇವರೂ ಅಸುರರೂ ದಣಿದು ಹೋಗುತ್ತಾರೆ. ಇದು ಸಾಧ್ಯವಿಲ್ಲದ ಕೆಲಸ, ವೃಥಾ ಶ್ರಮ ಎಂದು ಕ್ಷೀರ ಸಾಗರದ ಮಂಥನವನ್ನು  ಕೈಬಿಡಬೇಕೆಂದುಕೊಳ್ಳುತ್ತಾರೆ. ಆ ಸಮಯ ವಿಷ್ಣು ಕೂರ್ಮಾವತಾರ ಎಂಬ ಆಮೆಯ ರೂಪಾತಾಳಿ ಕಡಲಿನ ಒಳಗೆ ಇಳಿದು ತನ್ನ ಬೆನ್ನಿನ ಮೇಲೆ ಪರ್ವತವನ್ನು ಅಲುಗದಂತೆ ಹೊತ್ತುಕೊಳ್ಳುತ್ತಾನೆ. ಆಗ, ಕ್ಷೀರ ಸಾಗರವನ್ನು ಮಂಥನ ಮಾಡುವ ಕಾರ್ಯ ಸರಾಗವಾಗಿ ಸಾಗುತ್ತದೆ.

ಹಾಗೆ ಕಡೆಯುವಾಗ ಕ್ಷೀರಸಾಗರದಿಂದ ಕಾಮದೇನು, ಉಚ್ಹೈಶ್ರವಸ್ ಎಂಬ ಅತಿ ಶ್ರೇಷ್ಟವಾದ ಏಳುತಲೆಗಳುಳ್ಳ  ಹಾರುವ ಕುದುರೆ, ಪಂಚ ದರುಗಳು, ವಾರುಣಿದೇವಿ, ಮಹಾಲಕ್ಷ್ಮೀ, ಬಲಮುರಿ ಶಂಖ, ಕಲ್ಪಕ ವೃಕ್ಷ, ನೃತ್ಯಗಾತಿಯರು ಎಂಬ ಹದಿನಾರು ಸಂಪತ್ತುಗಳೂ, ಮಹಾವಿಷ್ಣುವಿನ ಅಂಶವಾದ ದನ್ವಂತ್ರಿ ಒಂದು ಚಿನ್ನದ ಕಲಶದಲ್ಲಿ ದೇವಾಮೃತವನ್ನೂ ಹೊತ್ತುಕೊಂಡು ಮೇಲೆ ಬರುತ್ತಾನೆ.

ಅಮೃತ ತಮ್ಮ ವಶದಲ್ಲಿ ಇದ್ದುದರಿಂದ ಮೊದಲು ಕುಡಿದ ದೇವತೆಗಳು ಹೊಸ ಶಕ್ತಿಯೂ, ಸಾಯದ ವರವನ್ನೂ ಪಡೆದುಕೊಳ್ಳಲು, ತಕ್ಷಣ ಅಸುರರ ಮೇಲೆ ದಾಳಿ ಮಾಡಿ ಜಯಿಸಿ ಮತ್ತೆ ದೇವಲೋಕವನ್ನು ವಶಪಡಿಸಿಕೊಳ್ಳುತ್ತಾರೆ.

ದೇವತೆಗಳು ಕರೆದರೆ ಒಂದು ಅವತಾರವನ್ನೇ ತಾಳಿ, ಅವರನ್ನು ರಕ್ಷಿಸುತ್ತಾನೆ ಶ್ರೀಮನ್ ನಾರಾಯಣ. ಆದರೆ ನಮ್ಮಂತಹ ಸಾಮಾನ್ಯರು ಕರೆದರೆ ಬರುತ್ತಾನೆಯೇ ಏನು ಎಂಬ ಸಂಶಯ ನಮಗೆ ಉಂಟಾಗಬಹುದು.

ಆದರೆ, ‘ಸಂಕಷ್ಟದಲ್ಲಿರುವಾಗ ಕೇಶವಾ ಎಂದು ಕರೆದರೆ……’  ಎಂದು ಹಾಡಿದ ನಮ್ಮಾಳ್ವಾರ್, ‘ಪಾಮರರ ದನಿಗೆ ಓಡಿಬರುವ ಆ ಪರಂದಾಮ, ಕೇಶವ’ ಎಲ್ಲರಿಗಾಗಿಯೂ ಬರುತ್ತಾನೆ ಎಂಬುದನ್ನೂ ಪಾಂಚಾಲಿ ಕಥೆಯಲ್ಲಿ ನಾವು ನೋಡಿದ್ದೇವೆ. ಆದರೆ, ಏನೂ ಇಲ್ಲದ ಬಡ ಮುದುಕಿಗೂ ನೆರವಾದ ಕಥೆಯೂ ಇಲ್ಲಿ ನಮ್ಮ ಕಣ್ಣ ಮುಂದೆ ಬರುತ್ತದೆ. ಅದನ್ನೂ ಕೇಳೋಣ ಬನ್ನಿ!

ಕೃಷ್ಣ ಮಗುವಾಗಿದ್ದಾಗ ನಡೆದದ್ದು ಇದು.

ಮಥುರಾ ಹತ್ತಿರದಲ್ಲಿ ಒಂದು ಬುಡಕಟ್ಟಿಗೆ ಸೇರಿದ ವೃದ್ಧೆ ಕಾಡುಗಳಲ್ಲಿ ದೊರಕುವ ನೇರಳೆಯ ಹಣ್ಣುಗಳನ್ನು ಶೇಕರಿಸಿ ಊರಿನೊಳಗೆ ಬಂದು ಮಾರಿ ಜೀವನ ನಡೆಸುತ್ತಿರುತ್ತಾಳೆ. ಹಾಗೆ ಒಂದು ದಿನ ಅವಳ ವ್ಯಾಪಾರದಲ್ಲಿ, ನೇರಳೆ ಹಣ್ಣುಗಳು ಮಾರಾಟವಾಗುವುದಿಲ್ಲ. ಬಿಸಿಲಿನಲ್ಲಿ ಅಲೆದು ತಿರುಗಾಡಿ ಬೀದಿ ಬೀದಿಯಲ್ಲಿ ಕೂಗಿ ಗಂಟಲಿನ ನೀರು ಒಣಗಿದರೂ ಯಾರು ಹಣ್ಣುಗಳನ್ನು ಕೊಳ್ಳಲಿಲ್ಲ.

ಅಂದು ಹೊಟ್ಟೆಯ ಹಸಿವು ಅವಳನ್ನು ಬಹಳ ಹಿಂಸಿಸುತ್ತದೆ. ಬಿಸಿಲಿನಲ್ಲಿ ಕುಕ್ಕೆಯನ್ನು ಹೊತ್ತುಕೊಂಡು ಬಹಳ ದೂರ ನಡೆದು ಅವಳು ಬೃಂದಾವನದವರೆಗೆ ಬಂದುಬಿಡುತ್ತಾಳೆ. ಆದರೂ ಅಲ್ಲೂ ಯಾರೂ ನೇರಳೆ ಹಣ್ಣನ್ನು ಕೊಂಡುಕೊಳ್ಳುವುದಿಲ್ಲ.

ಹಸಿವು, ಬಾಯಾರಿಕೆ, ಕುಕ್ಕೆಯಲ್ಲಿ ಹಣ್ಣುಗಳ ಬಾರ ಎಲ್ಲವೂ ಒಟ್ಟಾಗಿ ಸೇರಿ ವೃದ್ಧೆಯನ್ನು ದಣಿವು ಬಾಡಿಹೋಗುವಂತೆ ಮಾಡುತ್ತದೆ.  ಅಳುತ್ತಾ ದೇವರನ್ನು ನೆನೆಸಿಕೊಂಡು ‘ಕೇಶವಾ, ನನ್ನನ್ನು ಉಪವಾಸ ಇರಿಸಬೇಕೆಂಬುದು ನಿನ್ನ ಉದ್ದೇಶವೇ? ಹಸಿವು ತಡೆಯಲಾಗದೆ ನನ್ನ ಹೊಟ್ಟೆ ಅರಚುತಿದೆ…. ಅದು ನಿನ್ನ ಕಿವಿಗೆ ಬೀಳಲಿಲ್ಲವೇ?’ ಎಂದು ಮನಸ್ಸಿನೊಳಗೆ ಅಳುತ್ತಾ, ಹಣ್ಣಿನ ಕುಕ್ಕೆಯೊಂದಿಗೆ ಮನೆಯ ಕಡೆಗೆ ಮರಳಿ ಹೊರಡುತ್ತಾಳೆ.

ಹಸಿವಿನಿಂದ ಭಕ್ತ ಅತ್ತರೆ, ಪರಂದಾಮ ವೈಕುಂಠದಲ್ಲಿದ್ದರೂ ಬರುತ್ತಾನೆ. ಹಾಗಿರುವಾಗ ಬೃಂದಾವನದಲ್ಲಿ ಇರುವಾಗ ಪ್ರಿಯವಾದವರನ್ನು ಅಳಲು ಬಿಡುತ್ತಾನೆಯೇ?

ಸ್ವಲ್ಪ ದೂರವೇ ಹೋಗಿರಬಹುದು ಆ ವೃದ್ಧೆ. ಆಗ ಅಲ್ಲಿ ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದ ಬಾಲಕ ಕೃಷ್ಣ, ‘ಅಜ್ಜಿ, ಹಸಿವಾಗುತ್ತಿದೆ. ನಿನ್ನ ಕುಕ್ಕೆಯಲ್ಲಿರುವುದನ್ನು ತಿನ್ನಲು ನನಗೆ ಕೊಡುವೆಯಾ? ಎಂದು ಕೇಳುತ್ತಾನೆ.

“ತಿನ್ನುವುದಕ್ಕೆ ಪದಾರ್ಥಗಳು ಏನೂ ಇಲ್ಲ. ಇಷ್ಟವಾದರೆ ನೇರಳೆ ಹಣ್ಣುಗಳಿವೆ? ಎಂದು ಕುಕ್ಕೆಯನ್ನು ಕೆಳಗಿಳಿಸಿ, ನೇರಳೆ ಹಣ್ಣುಗಳನ್ನು ಕೃಷ್ಣನಿಗೆ ತೋರಿಸುತ್ತಾಳೆ ಮುದುಕಿ.

ಹಣ್ಣುಗಳನ್ನು ನೋಡಿದ ಕೃಷ್ಣ, “ನೋಡಲು ಎಲ್ಲ ಚೆನ್ನಾಗಿಯೇ ಇವೆ. ಆದರೆ ಹಣ್ಣು ಕೊಂಡುಕೊಳ್ಳೋಣ ಎಂದರೆ ನನ್ನ ಬಳಿ ದುಡ್ಡಿಲ್ಲ!” ಎಂದು ನಟಿಸಲು. ಚಿಂತೆ ಏನು ಮಾಡದೆ ವೃದ್ಧೆ, “ಕಾಸಿಲ್ಲದಿದ್ದರೆ ಏನಂತೆ? ನಿನ್ನ ಅಜ್ಜಿ ಕೊಟ್ಟರೆ ತೆಗೆದುಕೊಳ್ಳುವುದಿಲ್ಲವೇ?” ಎಂದು ಕೃಷ್ಣನ ಪುಟ್ಟ ಕೈಗಳು ತುಂಬುವಷ್ಟು ಹಣ್ಣುಗಳನ್ನು ತೆಗೆದುಕೊಡುತ್ತಾಳೆ.

“ಕಾಸಿಲ್ಲ, ಆದರೆ ಅದಕ್ಕೆ ಬದಲಾಗಿ ನಾನು ಕೊಡುವುದನ್ನು ತೆಗೆದುಕೊಳ್ಳಬೇಕು. ಆಗಲೇ ನಾನು ಹಣ್ಣನ್ನು ತಿನ್ನುತ್ತೇನೆ” ಎನ್ನುತ್ತಾನೆ ಕೃಷ್ಣ. ನಂದಗೋಪನ ಮನೆಯ ಅಂಗಳದಲ್ಲಿ ಒಣಗುತ್ತಿದ್ದ ಭತ್ತದ ಕಾಳುಗಳನ್ನು, ತನ್ನ ಸಣ್ಣ ಕೈಗಳಿಂದ ಎಷ್ಟು ಸಾಧ್ಯವೋ ಅಷ್ಟು ಬಾಚಿಕೊಂಡು ತಂದು ಮುದುಕಿಯ ಬಳಿ ಕೊಡುತ್ತಾನೆ.

ಹಸಿವಿನ ಹಿಂಸೆಯನ್ನು ಅರಿತಿದ್ದ ಮುದುಕಿ, ಎಲ್ಲಿ ತಾನು ಇದನ್ನು ತೆಗೆದುಕೊಳ್ಳದೆ ಹೋದರೆ ಹಸಿವಾಗುತ್ತಿದೆ ಎಂದು ಹೇಳಿದ ಮಗು ಹಣ್ಣನ್ನು ತಿನ್ನದೆ ಹೋಗುತ್ತಾನೋ  ಎಂದು, ಆ ಭತ್ತದ ಕಾಳುಗಳನ್ನು ತೆಗೆದುಕೊಂಡು ಕೈಚೀಲದಲ್ಲಿ ಹಾಕಿ ಗಂಟುಹಾಕಿಕೊಳ್ಳುತ್ತಾಳೆ.

ಕೃಷ್ಣ ತಿನ್ನುವುದನ್ನು ಆಸೆಯಿಂದ ನೋಡುತ್ತಿದ್ದ ಅಜ್ಜಿಗೆ ಏನೋ ಹಸಿವು ಹಿಂಗಿದಂತೆ ಆಗುತ್ತದೆ. ಕೃಷ್ಣ ಹಣ್ಣುಗಳನ್ನು ತಿಂದು ಮುಗಿಸಿದ ಮೇಲೆ ನಡೆದು ಮನೆಗೆ ಬಂದು ಕೈಚೀಲವನ್ನು ತೆರೆದವಳಿಗೆ ಬಹಳ ದೊಡ್ಡ ಆಶ್ಚರ್ಯ ಕಾದಿರುತ್ತದೆ. ಅದರಲ್ಲಿ ಕೃಷ್ಣ ಕೊಟ್ಟ ಭತ್ತದ ಕಾಲುಗಳಿಗೆ ಬದಲಾಗಿ ತುಂಬಾ ಚಿನ್ನ, ರತ್ನಗಳಿರುತ್ತವೆ.

ಒಮ್ಮೆ ಕೃಷ್ಣನ ಬಳಿ ಮನ ತುಂಬಿ ವ್ಯಾಪಾರ ಮಾಡಿದವಳಿಗೆ, ತನ್ನ ಜೀವನವೆಲ್ಲ ಅಲೆದಾಡದೆ ಕುಳಿತು ಉಣುವಷ್ಟು ಒಂದು ಬದುಕನ್ನು ನಮ್ಮ ಪರಂದಾಮ ಕೃಷ್ಣ ರೂಪಿಸಿಕೊಡುತ್ತಾನೆ.  

ದುಃಖ ಎಂದು ಶರಣಾದರೆ, ಅವನಿಗೆ ದೇವತೆಗಳು, ಮಾನವರು ಎಲ್ಲರೂ ಒಂದೇ.

ಇದನ್ನೇ,

ಸರ್ವ ಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಾಪಾಚ್ರಯ  (ಭಗವತ್ ಗೀತೆ 18.56)

“ಒಬ್ಬನು ಯಾವ ಕೆಲಸವನ್ನು ನನ್ನನ್ನು ಸ್ಮರಿಸಿ ಮಾಡುತ್ತಾನೋ ಅವನು ಎಂದಿಗೂ ಪೂರ್ಣವಾಗಿ, ಕೊರತೆಯಿಲ್ಲದ ಸ್ಥಿತಿಯನ್ನು ನನ್ನ ಕೃಪೆಯಿಂದ ಪಡೆಯುತ್ತಾನೆ….” ಎಂದು ಭಗವಂತ ಹೇಳುವುದಾಗಿ ಗೀತೆಯಲ್ಲಿದೆ.

‘ಯಾದವ ಹೆಣ್ಣುಗಳಾದ ನಾವು ಕೃಷ್ಣನನ್ನು ಹುಡುಕಿಕೊಂಡು, ದುಃಖದಿಂದ ಇಲ್ಲಿಗೆ ಬಂದಿದ್ದೇವೆ. ನಮ್ಮ ವ್ಯಥೆ ತೀರಿಸಿ, ನಮಗೆ ಮೋಕ್ಷ ನೀಡಬೇಕಾಗಿ ನಿನ್ನ ಪತಿಯನ್ನು ಎಬ್ಬಿಸಿ ಅವನ ಕೈಗಳಲ್ಲಿ ಚಾಮರವನ್ನು, ಕನ್ನಡಿಯನ್ನು ಕೊಟ್ಟು ನಮ್ಮೊಂದಿಗೆ ಕಳುಹಿಸಿಕೊಡುವಂತವಳಾಗು…!” ಎಂದು ಇಪ್ಪತ್ತನೇಯ ದಿನ ನೀಲಾದೇವಿಯ ಬಳಿ ಆತಂಕದಿಂದ ಕೋರಿಕೆಯನ್ನು ಮುಂದಿಡುತ್ತಾಳೆ ಗೋದೈ ಆಂಡಾಳ್!


ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply