ಕದ್ರು – ವಿನತೆಯರ ಕಥೆ : ಧನುರ್ ಉತ್ಸವ ~ 23

ಧನುರ್ ಉತ್ಸವ ವಿಶೇಷ ಸರಣಿಯ ಇಪ್ಪತ್ಮೂರನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಇಪ್ಪತ್ತ ಮೂರನೇಯ ದಿನ

ಮಳೆಗಾಲದೊಳು ಗಿರಿಯ ಗುಹೆಯಲಿ ನೆಲಸಿ ಮಲಗಿ ನಿದ್ರಿಸುವ

ಶ್ರೇಷ್ಠ ಸಿಂಹವು ಎದ್ದು ಬೆಂಕಿಯನು ಕಾರುತ್ತ

ಬೆವರ ರೋಮಗಳೆದ್ದು ನಿಲ್ಲಲು ಎಲ್ಲೆಡೆ ಮೈಯನಾಡಿಸಿ ಒದರಿ

ಜೋರಾಗಿ ಮೈಮುರಿದು ಘರ್ಜಿಸುತ ಹೊರಹೊರಟು

ಬರುವಂದದಿಂ ನೀನು ನೀಲವರ್ಣದ ಹೂವಿನಂತಿರ್ಪನೇ

ನಿನ್ನ ಮನೆಯಂಗಳದಿಂ ಈ ಎಡೆಗೆ ದಯಮಾಡಿಸುತೆ

ಮಹಿಮಾನ್ವಿತ ದಿವ್ಯ ಸಿಂಹಾಸನದಿ ಕುಳಿತು

ನಾವ್ ಬಂದ ಕಾರ್ಯವನು ಪರಿಗಣಿಸಿ ಕೃಪೆಗೈಯ್ಯೆ ನಮ್ಮೀ ಪವತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ  (ಅಠಾಣಾ ರಾಗ – ಆದಿ ತಾಳ)

“ಮಳೆಗಾಲದಲ್ಲಿ ಬೆಟ್ಟದಲ್ಲಿರುವ ಗುಹೆಯೊಳಗೆ ನಿದ್ರಿಸುತ್ತಿರುವ ಸಿಂಹವೂ, ಮಳೆಗಾಲ ಮುಗಿದೊಡನೆ, ತನ್ನ ನಿದ್ದೆಯನ್ನು ಬಿಟ್ಟು, ಬೆಂಕಿಯಂತೆ ಎಚ್ಚರಗೊಂಡೆದ್ದು, ಕುತ್ತಿಗೆಯ ಮೇಲಿನ ರೋಮಗಳೆದ್ದು ಎಲ್ಲ ತಡೆಗಳನ್ನು ಒಡೆದುಕೊಂಡು, ಮೈ ಸೆಟೆದು ಘರ್ಜನೆ ಮಾಡಿಕೊಂಡು ಬರುವುದು.

ಆ ಸಿಂಹದಂತೆ, ನೀಲಿ ಬಣ್ಣದ ಹೂವಿನ ಕೃಷ್ಣ, ನೀನು ನಿನ್ನ ಮನೆಯಿಂದ ಹೊರಟು, ನಿನ್ನ ಅರಮನೆಗೆ ಬಂದು, ಶ್ರೇಷ್ಟವಾದ ನಿನ್ನ  ಸಿಂಹಾಸನದ ಮೇಲೆ ಕುಳಿತುಕೊಂಡು, ನಾವು ನಿನ್ನ ಬಳಿ ಬಂದ ಕಾರಣವನ್ನು  ಕೇಳಿ, ಪರಿಗಣಿಸಿ ನಮಗೆ ದಯಪಾಲಿಸುವಂತವನಾಗು…” ಎಂದು ಹಾಡುತ್ತಾಳೆ ಗೋದೈ!

“ನಾವ್ ಬಂದ ಕಾರ್ಯವನು ಪರಿಗಣಿಸಿ ಕೃಪೆಗೈಯ್ಯೆ….”

‘ನಾವು ಬಂದ ಕಾರ್ಯವನು ಕೇಳಿ, ಪರಿಗಣಿಸಿ, ಅದರಲ್ಲಿ ಸರಿಯಾದುದನ್ನು ದಯಪಾಲಿಸುವಂತವನಾಗು…’ ಎಂದು ಕೃಷ್ಣನ ಬಳಿ ಬೇಡುತ್ತಾಳೆ ಗೋದೈ.

ಬೇಡಿದ್ದೆಲ್ಲವನ್ನೂ ವರವಾಗಿ ಕೊಡುವವನೇ ಭಗವಂತ. ಅದಕ್ಕಾಗಿ ಅವನ ಬಳಿ ‘ಮನೆಯನ್ನು ಕೊಡು’, ‘ಸಂಪತ್ತನ್ನು ಕೊಡು’, ‘ಒಡವೆಯನ್ನು ಕೊಡು’ ಎಂದು ನಮ್ಮ ದುರಾಸೆಗಳನ್ನೆಲ್ಲ ಕೋರಿಕೆಯಾಗಿಡದೆ, ನ್ಯಾಯವಾದ, ಅತ್ಯಾವಶ್ಯಕವಾದ ಕೋರಿಕೆಗಳನ್ನು ಮಾತ್ರವೇ ಭಗವಂತನ ಬಳಿ ಕೇಳಬೇಕು ಎನ್ನುತ್ತಾಳೆ ಗೋದೈ.

‘ಹಾಗೆ ಅಗತ್ಯ ಎಂದು ನಾವು ಭಾವಿಸಿ ಕೇಳುವುದನ್ನೂ ಸಹ ನೀನು ಮಾಪನ ಮಾಡಿ ನ್ಯಾಯವಾದದ್ದನ್ನು ಮಾತ್ರ ನೆರವೇರಿಸಿಕೊಡು ಕೃಷ್ಣ…’ ಎಂದು ಕೃಷ್ಣನ ಬಳಿ ಕೇಳುತ್ತಾಳೆ ಗೋದೈ.

ಹೀಗೆಲ್ಲಾ ಕೇಳುತ್ತಾರಲ್ಲಾ ಈ ಯಾದವ ಕುಲದ ಹೆಣ್ಣುಗಳು, ಇವರು ಕೃಷ್ಣನ ಬಳಿ ಏನೋ ಮನೆ, ಸಂತಾನ ಬಾಗ್ಯ, ಸಂಪತ್ತು, ಆಯುಷ್ಯ ಎಂದು  ಯಾವುದನ್ನಾದರೂ ಕೇಳಿರುತ್ತಾರೆಯೇ  ಎಂದರೆ – ಇಲ್ಲ.

ತಮ್ಮ ಪ್ರಾರ್ಥನೆಗೆ ಫಲವಾಗಿ ಅವರು ಆ ಕೃಷ್ಣನೇ ತಮ್ಮೊಂದಿಗೆ ಬಂದು ವಾಸವಿರಬೇಕು ಎಂದಲ್ಲವೇ ಕೇಳುತ್ತಿದ್ದಾರೆ…!

ಇದು ನಿಜವಾಗಲೂ ನ್ಯಾಯವಾದ ಕೋರಿಕೆಯೇ? ಇಂತಹ ಕೋರಿಕೆಗಳನ್ನು ಕೃಷ್ಣ ನೆರವೇರಿಸುತ್ತಾನೆಯೇ? ಇದಕ್ಕೆ ಮೊದಲು ಇಂತಹ ಕೋರಿಕೆಗಳನ್ನು ಇಟ್ಟ ತನ್ನ ಭಕ್ತರಿಗೆ ಹಾಗೆ ಏನನ್ನಾದರೂ ನೀಡಿದ್ದಾನೆಯೇ ಆ ಪರಮಾತ್ಮ?

ಈ ಪ್ರಶ್ನೆಗಳಿಗೆ ಉತ್ತರ ನಮಗೆ ತಿಳಿದಿದ್ದರೆ, ಈಗ ಇವರಿಗೆ ಏನು ದೊರಕುತ್ತದೆ ಎಂಬುದು ನಮಗೆ ಅರ್ಥವಾಗುವುದಲ್ಲವೇ!

ಕಶ್ಯಪ ಮುನಿಗೆ, ಕದ್ರು, ವಿನತಾ (ಕಶ್ಯಪರ ಹದಿಮೂರು ಹೆಂಡತಿಯರಲ್ಲಿ ಇಬ್ಬರು) ಎಂಬ ಇಬ್ಬರು ಪತ್ನಿಯರು.  ಇದರಲ್ಲಿ ಹಿರಿಯವಳು ಕದ್ರು ಸ್ವಲ್ಪ ಗುಣಹೀನೆಯಾದವಳು. ಕಿರಿಯವಳು ವಿನತಾ. ಕದ್ರು ಸದಾ  ತನ್ನನ್ನು   ವೈರಿಯಾಗಿಯೇ ಕಾಣುತ್ತಿದ್ದಾಳೆ ಎಂಬುದನ್ನೂ ಸಹ ಅರ್ಥಮಾಡಿಕೊಳ್ಳಲಾಗದ ಮುಗ್ದೆ. ಗುಣದಲ್ಲಿ ಮಾತ್ರವಲ್ಲದೆ ಇವರಿಗೆ ಹುಟ್ಟಿದ ಮಕ್ಕಳೂ ತದ್ವಿರುದ್ಧವಾಗಿಯೇ ಹುಟ್ಟುತ್ತವೆ.

ಹಿರಿಯಳಿಗೆ ಹುಟ್ಟಿದವರು ಸಾವಿರ ನಾಗರು. ಕಿರಿಯವಳಾದ ವಿನತಾಳಿಗೆ ಅರುಣ (ದಿವಸ್ವಂತ)  ಗರುಡ ಎಂಬ ಇಬ್ಬರು ಮಾತ್ರವೇ. ತನ್ನ ಮಕ್ಕಳು ನೆಲದ ಮೇಲೆ ತೆವಳಿಕೊಂಡು ಹೋಗಲು, ಕಿರಿಯವಳ ಮಕ್ಕಳು ಆಕಾಶದಲ್ಲಿ ಹಾರುವುದನ್ನು ನೋಡಿ ಕದ್ರು ಸಹಿಸಲಾಗದೆ  ಕೋಪದಲ್ಲಿ ತೊಳಲುತ್ತಿರುತ್ತಾಳೆ.

ಆ ಸಮಯದಲ್ಲೊಮ್ಮೆ ಕಶ್ಯಪ ಮುನಿ ನದಿಯಲ್ಲಿ ಮೀಯಲು ಮದಡಿಯರಿಬ್ಬರೊಂದಿಗೆ ಹೋಗುತ್ತಾರೆ. ಮದಡಿಯರಿಬ್ಬರನ್ನೂ ದಡದಲ್ಲಿ ಬಿಟ್ಟು ಅವರು ಮೀಯುತ್ತಿರುವಾಗ, ಆ ದಾರಿಯಲ್ಲಿ ಇಂದ್ರ, ಉಚ್ಚೈಶ್ರವಸ್ ಎಂಬ ತನ್ನ ಶ್ವೇತವರ್ಣದ ಕುದುರೆಯಲ್ಲಿ ಆಕಾಶಮಾರ್ಗವಾಗಿ ನದಿಯನ್ನು ದಾಟುತ್ತಿರುತ್ತಾನೆ. ಆಗ ಕುದುರೆಯ ಆಕಾರವನ್ನು ಕಂಡ ವಿನತಾ, “ಆಹಾ, ಎಂತಹ ಸುಂದರವಾದ ಬಿಳಿಯ ಕುದುರೆ…” ಎಂದು ವಿಸ್ಮಯಿಸಲು, ಅವಳನ್ನು ಸದಾ ವೈರಿಯಾಗಿಯೇ ನೋಡುತ್ತಿದ್ದ ಕದ್ರು ತಕ್ಷಣ, “ನಿನಗೆ ಕಣ್ಣು ಕಾಣಿಸದೇನು? ಇದನ್ನು ಹೋಗಿ ಬಿಳಿಯ ಕುದುರೆ ಎನ್ನುತ್ತೀಯಲ್ಲಾ? ಅದರ ಬಾಲ ಸಂಪೂರ್ಣ ಕಪ್ಪಾಗಿರುವುದು ಕಾಣಿಸುತ್ತಿಲ್ಲವೇ?”  ಎಂದು ವಿನತಾಳನ್ನು ಕೆಣಕುತ್ತಾಳೆ.

ಕದ್ರುಳ ದುರುದ್ದೇಶ ತಿಳಿಯದೆ, “ ಆ ಕುದುರೆ ಸ್ವಚ್ಛ ಬಿಳುಪಾಗಿಯೇ ಕಂಡಿತಲ್ಲಾ? ಎಲ್ಲೂ ಕಪ್ಪು ಬಣ್ಣ ಕಾಣಿಸಲಿಲ್ಲವಲ್ಲಾ…” ಎಂದು ವಿನತಾ ಹೇಳಲು, ಅವಳ ಮಾತನ್ನು ಕದ್ರು ನಿರಾಕರಿಸುತ್ತಾಳೆ. ಇಬ್ಬರ ಮಾತು ವಿವಾದಕ್ಕೆ ತಿರುಗಿ, ಕೊನೆಗೆ ವಾದವಿವಾದವಾಗಿ  ಬಲಿಯುತ್ತದೆ

ತಕ್ಷಣ ಕದ್ರು, “ಆ ಕುದುರೆಯ ಬಾಲ ಕಪ್ಪು ಎಂಬುದನ್ನು ನಿರೂಪಿಸಿದರೆ ನೀನು ನಿನ್ನ ಜೀವನ ಪರ್ಯಂತ ನನಗೆ ದಾಸಿಯಾಗಿ ಸೇವೆ ಮಾಡಬೇಕು. ಹಾಗಿಲ್ಲದಿದ್ದರೆ ನಾನು ನಿನ್ನ ಗುಲಾಮಳಾಗಿ ಸೇವೆ ಮಾಡುತ್ತೇನೆ” ಎಂಬ ನಿಬಂಧನೆ ವಿಧಿಸಲು, ವಿಷಯ ಅರ್ಥವಾಗದೆ ವಿನತಾ ಒಪ್ಪಿಕೊಳ್ಳುತ್ತಾಳೆ.

ಕದ್ರು, ವಿನತಾಳನ್ನು ಜಯಿಸಬೇಕೆಂದು, ಇಂದ್ರನ ಕುದುರೆಯ ಬಾಲವನ್ನು ಕಪ್ಪಾಗಿ ಬದಲಾಯಿಸಲು, ತನ್ನ ಸರ್ಪ ಪುತ್ರರನ್ನು ಕರೆದು, “ನೀವೆಲ್ಲರೂ, ಕುದುರೆಯ ಬಾಲವನ್ನು ಹೋಗಿ ಸುತ್ತಿಕೊಳ್ಳಿ… ಆಗಲೇ ಕುದುರೆಯ ಬಿಳಿಯ ಬಣ್ಣದ ಬಾಲ, ಕಪ್ಪಾಗಿ ಕಾಣುತ್ತದೆ…” ಎಂದು ಹೇಳಲು, ಅದರಂತೆಯೇ ಸರ್ಪ ಪುತ್ರರು, ಕುದುರೆಯನ್ನು ಹುಡುಕಿಕೊಂಡು ಹೋಗಿ ಯಾರು ಅರಿಯದಂತೆ ಅದರ ಬಾಲಕ್ಕೆ ಅಂಟಿಕೊಳ್ಳುತ್ತಾರೆ.

ಇಂದ್ರ ವಾಯುವಿಹಾರ ಮುಗಿಸಿ ಹಿಂತಿರುಗುವಾಗ, ಕುದುರೆಯನ್ನು ನೋಡಿದ ವಿನತಾ ಕುದುರೆಯ ಬಾಲ ಸಂಪೂರ್ಣವಾಗಿ ಕಪ್ಪಾಗಿರುವುದನ್ನು ನೋಡಿ ಒಪ್ಪಿಕೊಳ್ಳಲು, ಕದ್ರು, ವಿನತಾಳನ್ನು ತನ್ನ ದಾಸಿಯಾಗಿಸಿಕೊಳ್ಳುತ್ತಾಳೆ.

ದಿನ ಕಳೆದಂತೆ, ಕದ್ರು ವಿನತಾಳನ್ನು ಬಹಳ ಹೀನವಾಗಿ ನಡೆಸಿಕೊಳ್ಳುವುದನ್ನು ಕಂಡ ಗರುಡ, ತನ್ನ ತಾಯಿ ಪಡುವ ಕಷ್ಟಗಳನ್ನು ಸಹಿಸಲಾಗದೆ ಬಹಳ ನೊಂದುಕೊಂಡು, ತನ್ನ ತಾಯನ್ನು ದಾಸ್ಯದಿಂದ ಬಿಡುಗಡೆ ಮಾಡಲು, ಕದ್ರುವಿನ ಬಳಿ ಬೇಡಿಕೊಳ್ಳುತ್ತಾನೆ. ಆದರೆ, ವಿನತಾಳನ್ನು ಅಷ್ಟು ಸುಲಭವಾಗಿ ಬಿಡಲು ಮನಸ್ಸಾಗದೆ, ಗರುಡನ ಬಳಿ, ತನ್ನ ಪುತ್ರರಿಗೆ ದೇವಲೋಕದಲ್ಲಿರುವ ಅಮೃತವನ್ನು ತಂದು ಕೊಟ್ಟರೆ ಅವನ ತಾಯನ್ನು ಬಿಡುಗಡೆ ಮಾಡಿ ಮುಕ್ತಗೊಳಿಸುವುದಾಗಿ ಹೇಳುತ್ತಾಳೆ.

ದೇವತೆಗಳು ತಮ್ಮವರ ಹೊರತು ಬೇರೆ ಯಾರಿಗೂ ಅಮೃತವನ್ನು ಕೊಡುವುದಿಲ್ಲ ಎಂದು ತಿಳಿದಿದ್ದರೂ, ತನ್ನ ತಾಯಿಯ ದಾಸ್ಯಮುಕ್ತಿಗಾಗಿ ಅಮೃತವನ್ನು ಬೇಡಿ, ಬ್ರಹ್ಮನನ್ನು ಉದ್ದೇಶಿಸಿ ಗರುಡ ಘೋರ ತಪಸ್ಸು ಮಾಡುತ್ತಾನೆ.

ಗರುಡ, ಅನ್ನ, ನೀರು ಸೇವಿಸದೆ, ಗಾಳಿಯನ್ನು ಮಾತ್ರ ಉಸಿರಾಡುತ್ತಾ ತಿಂಗಳುಗಟ್ಟಲೇ ಕಟು ತಪ್ಪಸ್ಸು ಮಾಡುತ್ತಾನೆ. ಗರುಡ ಶೀಘ್ರದಲ್ಲೇ ತಪಸ್ಸನ್ನು ನಿಲ್ಲಿಸಿಬಿಡುತ್ತಾನೆ ಎಂದುಕೊಂಡು ಬ್ರಹ್ಮ ಕಂಡು ಕಾಣದಂತೆ ಇರುತ್ತಾನೆ. ಆದರೆ ಗರುಡನ ಘೋರ ತಪಸ್ಸು ಮುಗಿಯುವಂತೆ ಕಾಣುವುದಿಲ್ಲ. ದೇಹ ಶಕ್ತಿಗುಂದಿ, ನೂಲಿನಂತೆ ಅಂಟಿಕೊಂಡಿದ್ದ ಅವನ ಪ್ರಾಣ ಹಾರಿಹೋಗುತ್ತದೆ ಎಂಬ ಸ್ಥಿತಿಯನ್ನು ಕಂಡ  ಬ್ರಹ್ಮ ಅವನ ಮುಂದೆ ಪ್ರತ್ಯಕ್ಷನಾಗಿ, “ನಿನಗೆ ಏನು ವರ ಬೇಕು..?” ಎಂದು ಕೇಳುತ್ತಾನೆ.

ಗರುಡ ಕಣ್ಣೀರು ಹಾಕುತ್ತಾ ತನ್ನ ತಾಯಿಯ ಸ್ಥಿತಿಯನ್ನು ಬ್ರಹ್ಮನ ಬಳಿ ಹೇಳಿ, “ನನ್ನ ತಾಯಿಯನ್ನು ದಾಸ್ಯದಿಂದ ಮುಕ್ತಗೊಳಿಸಲು ನೀವು ಆ ಅಮೃತವನ್ನು ದಯಪಾಲಿಸಬೇಕು” ಎಂದು ಬೇಡಿಕೊಳ್ಳುತ್ತಾನೆ.

‘ತನಗೆ ಮಹಾನ್ ಶಕ್ತಿ ಬೇಕು, ಮರಣವಿಲ್ಲದ ಹಿರಿಯ ಬದುಕು ಬೇಕು, ಎಲ್ಲರನ್ನೂ ಗೆಲ್ಲುವ ಅದ್ಭುತ ವರ ಬೇಕು’ ಎಂದು ಮಾತ್ರವೇ ಅಲ್ಲಿಯವರೆಗೆ ಕೇಳಿದ್ದ ಬ್ರಹ್ಮನ ಕಿವಿಗಳಿಗೆ, ತನಗೆಂದು ಏನನ್ನೂ ಕೇಳದೆ, ತನ್ನ ತಾಯಿಗಾಗಿ ವರ ಕೇಳಿದ ಗರುಡನ ಮಾತುಗಳು ಬಹಳ ಇಂಪಾಗಿರಲು, ಪುಳಕದಿಂದ, ತಾನು ಹೇಳಿದನೆಂದು ಹೋಗಿ, ಇಂದ್ರನ ಬಳಿ ಅಮೃತವನ್ನು ಪಡೆದುಕೊಳ್ಳಲು ಗರುಡನಿಗೆ ವರ ನೀಡುತ್ತಾನೆ.

ಬ್ರಹ್ಮನ ಮಾತಿನಂತೆ, ದೇವಲೋಕಕ್ಕೆ ಬಂದ ಗರುಡ, ಅಮೃತವನ್ನು ದೇವೇಂದ್ರನ ಬಳಿ ಕೇಳಲು, ಇಂದ್ರನೋ “ಅಮೃತವನ್ನು ಮನುಷ್ಯರಿಗೆ ನೀಡುವ ಅನುಮತಿ ಇಲ್ಲ… ಆದ್ದರಿಂದ ಬೇರೆಯ ರೀತಿಯಲ್ಲಿ ನಿನ್ನ ತಾಯಿಯನ್ನು ಕಾಪಾಡಿಕೋ…!” ಎಂದು ಅಮೃತವನ್ನು ಕೊಡಲು ನಿರಾಕರಿಸುತ್ತಾನೆ. ಇದರಿಂದ ಇಬ್ಬರ ನಡುವೆ ನಡೆದ ಮಾತಿನ ಚಕಮಕಿ, ಜಗಳವಾಗಿ ತಿರುಗುತ್ತದೆ.

ಬಲಶಾಲಿಯಾದ ಗರುಡನನ್ನು ಗೆಲ್ಲಲಾಗದ ಇಂದ್ರ, ಕೊನೆಗೆ ಮಹಾವಿಷ್ಣುವಿನ ಬಳಿ ಶರಣಾಗಲು, ತನ್ನ ತಾಯಿಗಾಗಿ ಬ್ರಹ್ಮನ ಬಳಿ ವರ ಬೇಡಿ ತಂದ ಗರುಡನೋ, ದೇವೇಂದ್ರನ ಪರವಾಗಿ ಬಂದ ವಿಷ್ಣುವನ್ನು ಎದುರಿಸಿ ನಿಲ್ಲುತ್ತಾನೆ.

ಹೋರಾಡಿ ನೋಡಿದ ವಿಷ್ಣು ಕೊನೆಗೆ ಗರುಡನನ್ನು ಕೊಲ್ಲಲು ಶ್ರೀ ಚಕ್ರವನ್ನು ಕಳುಹಿಸಲು, ಶ್ರೀಮನ್ ನಾರಾಯಣನ ಪಾದವನ್ನು ನಮಸ್ಕರಿಸಿದ ಗರುಡ, “ನನ್ನನ್ನು ಕೊಂದರೂ ಪರವಾಗಿಲ್ಲ. ನನ್ನ ತಾಯನ್ನು ಮುಕ್ತಿಗೊಳಿಸು ಭಗವಂತ..” ಎಂದು ಬೇಡಿಕೊಳ್ಳಲು, ಗರುಡನ ನಿಸ್ವಾರ್ಥ ಮಾತೃಪ್ರೇಮವನ್ನು ಕಂಡ ವಿಷ್ಣು, “ತಾಯಿಯ ಸುಖಕ್ಕಾಗಿ ಹಿಂಜರಿಯದೆ ನನ್ನನ್ನೇ ಎದುರಿಸಲು ಧೈರ್ಯಮಾಡಿದ ನಿನಗೆ, ದೇವೇಂದ್ರ ಅಮೃತ ನೀಡಿ ನಿನ್ನ ತಾಯನ್ನು ಮುಕ್ತಗೊಳಿಸಲು ನೆರವಾಗುತ್ತಾನೆ. ಈಗಲಾದರೂ ನಿನಗಾಗಿ ಒಂದು ವರವನ್ನು ಕೇಳು..” ಎನ್ನುತ್ತಾನೆ .

ಮಹಾವಿಷ್ಣುವಿನ ಕರುಣೆಗೆ ಮನ ಕರಗಿದ ಗರುಡ, ಭಗವಂತನನ್ನು ವಂದಿಸಿ “ಭಗವಂತನೇ, ನನ್ನ ಪ್ರೀತಿ, ನನ್ನ ಭಕ್ತಿಯನ್ನು ಮರೆಮಾಚಿತು. ಅದಕ್ಕೆ ಪ್ರಾಯಃಚಿತ್ತವಾಗಿ ಎಂದೆಂದಿಗೂ ತಮ್ಮೊಂದಿಗಿರುವ ವರ ಒಂದನ್ನು ದಯಪಾಲಿಸುವಂತವನಾಗು..” ಎಂದು ಕಣ್ಣೀರಿಡುತ್ತಾ ಕೇಳಲು, ಅಮೃತವನ್ನು ನೀಡಿ, ಅವನ ಕೋರಿಕೆಯನ್ನು ಒಪ್ಪಿಕೊಂಡ ವಿಷ್ಣು, ಗರುಡನನ್ನೇ ತನ್ನ ವಾಹನವಾಗಿ ಸ್ವೀಕರಿಸುತ್ತಾನೆ.

ವಿನತಾಳ ಮಗನಾದ ಗರುಡ ವಿಷ್ಣುವಿನ ವಾಹನವಾದ ಕಥೆ ಇದಾದರೆ, ಮಹಾವಿಷ್ಣುವಿನ ಶಯನವಾದ ಆದಿಶೇಷ ಎಂಬ ಕದ್ರುವಿನ ಮಗನ ಕಥೆ, ಇದರ ಉಪಕತೆಯಾಗಿ ಬರುತ್ತದೆ. ವಿನತಾಳನ್ನು ಹೇಗಾದರೂ ಗುಲಾಮಳಾಗಿಸಬೇಕೆಂಬ ಭಾವನೆಯಿಂದ, ಕದ್ರು ತನ್ನ ಪುತ್ರರುಗಳಾದ ನಾಗಗಳನ್ನು,  ಉಚ್ಚೈಶ್ರವಸ್ ನ ಬಾಲಕ್ಕೆ ಅಂಟಿಕೊಂಡು, ಬಾಲವನ್ನು ಕಪ್ಪು ಬಣ್ಣವಾಗಿ ಕಾಣುವಂತೆ ಮಾಡಬೇಕೆಂದು ಆಜ್ಞೆ ನೀಡಿದಳಲ್ಲವೇ? ಕದ್ರುವಿನ ಸಂಚಿಗೆ ವಿರೋಧವಾಗಿ ಕೆಲವು ನಾಗಗಳಿದ್ದವು.

ತನ್ನ ಮಾತನ್ನು ಕೇಳದ ತನ್ನ ಅಂತಹ ಮಕ್ಕಳ ಮೇಲೆ ಕೋಪಗೊಂಡ ಕದ್ರು, ಆ ಮಕ್ಕಳನ್ನು ಮಾತ್ರ ಮುಂದೆ ಜನಮೇಜಯ ಎಂಬ ರಾಜನೂ ಮಾಡುವ ಸರ್ಪ ಯಾಗದ ಅಗ್ನಿಯಲ್ಲಿ ಬಿದ್ದು ಸಾಯುವಂತೆ ಶಪಿಸುತ್ತಾಳೆ. ಹಾಗೆ ಶಪಿಸಲ್ಪಟ್ಟವನಲ್ಲಿ ಒಬ್ಬನೇ, ಕದ್ರುವಿನ ಹಿರಿಯ ಮಗನಾದ ಆದಿಶೇಷ.

ತನ್ನ ತಾಯಿಯ ಅಧರ್ಮ ಕಾರ್ಯಕ್ಕೆ ಕೈಜೋಡಿಸದ ತನಗೆ ಶಿಕ್ಷೆ ಎಂಬುದು ತಪ್ಪು ಎಂದು ಶಾಪವಿಮೋಚನೆ ಬೇಡಿ ಅಧಿಶೇಷ ಘೋರ ತಪಸ್ಸು ಮಾಡುತ್ತಾನೆ, ಅವನ ನ್ಯಾಯವಾದ ತಪಸ್ಸಿಗೆ ಫಲ ನೀಡಲು, ಪರಂದಾಮನೇ ಅವನ ಮುಂದೆ ಬಂದು ಪ್ರತ್ಯಕ್ಷನಾಗುತ್ತಾನೆ.

ಆಗ ಆದಿಶೇಷ ಶ್ರೀಮನ್ ನಾರಾಯಣನ ಬಳಿ, “ದೇವದೇವ! ನನ್ನ ಮನಸ್ಸು ಎಂದಿಗೂ ಧರ್ಮದಲ್ಲೂ, ತಪಸ್ಸಿನಲ್ಲೂ ಲೀನವಾಗಿ ಸಂತೋಷಗೊಳ್ಳಬೇಕು. ತಾಯಿಯಿಂದ ದೊರಕದ ಪ್ರೀತಿ ತಮ್ಮಿಂದ ದೊರಕುತ್ತದೆ ಎಂಬುದನ್ನು ನಾನು ಅರಿತಿದ್ದೇನೆ. ಆದ್ದರಿಂದ ಗರುಡನಂತೆಯೇ ನನಗೂ ತಮ್ಮನ್ನು ಕ್ಷಣವೂ ಅಗಲದ ಕೃಪೆಯನ್ನು ನೀಡಬೇಕು..” ಎಂದು ಬೇಡಿಕೊಳ್ಳುತ್ತಾನೆ.  ವಿಷ್ಣುವೂ ಬಹಳ ಹರ್ಷಿತನಾಗಿ, ಆದಿಶೇಷನಿಗೂ ಅವನ ನ್ಯಾಯವಾದ ಕೋರಿಕೆಯನ್ನು ದಯಪಾಲಿಸುತ್ತಾನೆ.

ತನ್ನ ತಾಯಿಯ ಸುಖಕ್ಕಾಗಿ, ದೇವರೇ ಆದರೂ ತನ್ನನ್ನೇ ಎದುರಿಸಲು ಧೈರ್ಯ ಮಾಡಿದ ಗರುಡನನ್ನೂ ತನಗೆ ವಾಹನವಾಗಿ ಸ್ವೀಕರಿಸಿದ್ದಲ್ಲದೆ, ತನ್ನ ತಲೆಯ ಮೇಲೆ ಹಾರುವ ಗರುಡ ಧ್ವಜವಾಗಿಯೂ ಒಪ್ಪಿಕೊಳ್ಳುತ್ತಾನೆ ಭಗವಂತ.

ಅದೇ ಸಮಯ, ಅನ್ಯಾಯ ಎಂಬುದಕ್ಕಾಗಿ, ತನ್ನ ತಾಯೇ ಆದರೂ ವಿರೋಧಿಸಿ, ಸಾವಿರ ತಲೆಗಳನ್ನುಳ್ಳ ಆದಿಶೇಷನನ್ನು, “ನಡೆದರೆ ಕೊಡೆ, ಕೂತರೆ ಸಿಂಹಾಸನ, ನಿಂತರೆ ಮರಹಾವುಗೆ..” ಎಂದು ತನ್ನ ಶಯನವಾಗಿಯೂ, ಸಿಂಹಾಸನವಾಗಿಯೂ, ಕೊಡೆಯಾಗಿಯೂ ಸದಾ ತನ್ನೊಂದಿಗಿರುವ ಕೃಪೆಯನ್ನು ದಯಪಾಲಿಸುತ್ತಾನೆ ಪರಂದಾಮ.

ಪ್ರಕೃತಿ ಗುಣದ ಪ್ರಕಾರ ಗರುಡನೂ, ಸರ್ಪವೂ ವೈರಿಗಳು. ಇಬ್ಬರನ್ನೂ ತನ್ನೊಂದಿಗೆ ಇರಿಸಿಕೊಂಡು, ಅವರೊಂದಿಗೆ ವಿಹರಿಸುವುದು ಲೋಕದಲ್ಲಿ ಎಲ್ಲ ಜೀವರಾಶಿಗಳೂ ಒಗ್ಗಟ್ಟಿನಿಂದ ಜೀವಿಸಬೇಕು ಎಂದು ನಮಗೆ ತಿಳಿಸಿ ಹೇಳುವುದಕ್ಕಾಗಿಯೇ ಎನ್ನುತ್ತದೆ ಪುರಾಣ.

ಭಕ್ತ ಎಂದಿಗೂ ತನ್ನ ದೇವರ ಜತೆಯಲ್ಲಿಯೇ ಇರಬೇಕು. ಎಂದರೂ, ಅಥವಾ ದೇವರು ಸದಾ ತನ್ನೊಂದಿಗೆ ಇರಬೇಕು ಎಂದರೂ ಅನ್ಯಾಯವಾದ ಕೋರಿಕೆಯನ್ನು ಭಕ್ತಿಯ ಕಾರಣ, ನ್ಯಾಯವಾದ ಕೋರಿಕೆಯಾಗಿ ಒಪ್ಪಿಕೊಂಡು ನೆರವೇರಿಸುವವನೇ ನಮ್ಮ ಪರಂದಾಮ.

“ಯಾರು ಎಲ್ಲದರಲ್ಲೂ ನನ್ನನ್ನೂ, ಎಲ್ಲವನ್ನೂ ನನ್ನೊಳಗೆ ಕಾಣುತ್ತಾನೋ, ಅವನಿಗೆ ನಾನು ಮರೆಯಾಗುವುದಿಲ್ಲ. ಅವನೂ ನನಗೆ ಮರೆಯಾಗುವುದಿಲ್ಲ.,

ಯೋ ಮಾಂ ಪಶ್ಚ್ಯಮಿ ಸರ್ವತ್ರ ಸರ್ವಂ ಚ ಮಾಯಿ ಪಶ್ಚ್ಯತಿ – ಭಗವತ್ ಗೀತೆ 6:30

ಎಂಬ ನಿನ್ನ ಮಾತಿನಂತೆ, ಎಲ್ಲದರಲ್ಲೂ ನಿನ್ನನ್ನೇ ಕಾಣುವ ನಮ್ಮ ನ್ಯಾಯವಾದ ಕೋರಿಕೆಯನ್ನು ಪರಿಗಣಿಸಿ, ನಮ್ಮನ್ನು ಸ್ವೀಕರಿಸುವಂತವನಾಗು ಕೃಷ್ಣ…” ಎಂದು ಇಪ್ಪತ್ತ ಮೂರನೇಯ ದಿನದಂದು ಪರಂದಾಮನನ್ನು ಬೇಡಿ ಹಾಡುತ್ತಾಳೆ ಗೋದೈ ನಾಯಕಿ!

                                                                    ***

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply