ಶಾಸ್ತ್ರಗಳ ವ್ಯಾಲಿಡಿಟಿ: ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಗರುಡ ಪುರಾಣದಿಂದ…

ಅಭ್ಯಸ್ಯ ವೇದಶಾಸ್ತ್ರಾಣಿ ತತ್ವಂ ಜ್ಞಾತ್ವಾsಥ ಬುದ್ಧಿಮಾನ್ ।
ಪಲಾಲಮಿವ ಧಾನ್ಯಾರ್ಥೀ ಸರ್ವಶಾಸ್ತ್ರಾಣಿ ಸಂತ್ಯಜೇತ್ ॥ ಗರುಡ ಪುರಾಣ, 16.85 ॥
ಅರ್ಥ: ವೇದ – ಶಾಸ್ತ್ರಗಳನ್ನು ಅಭ್ಯಾಸ ಮಾಡಿ, ತತ್ತ್ವವನ್ನು ತಿಳಿದಾದ ಮೇಲೆ ಬುದ್ಧಿವಂತನಾದವನು ಕಾಳನ್ನು ಸಂಗ್ರಹಿಸಿ ಹೊಟ್ಟನ್ನು ಬಿಸಾಡುವಂತೆ ಎಲ್ಲ ಶಾಸ್ತ್ರಗಳನ್ನೂ ಬಿಟ್ಟುಬಿಡಬೇಕು. 

ತಾತ್ಪರ್ಯ: ಯಾವುದೇ ಸಂಗತಿಯನ್ನಾದರೂ ಆಯಾ ಸಂದರ್ಭಕ್ಕೆ ಅನುಸಾರವಾಗಿ ಬಳಸಬೇಕೇ ಹೊರತು ಅದಕ್ಕೆ ಜೋತುಬೀಳಬಾರದು ಅನ್ನುವುದು ಈ ಸುಭಾಷಿತದ ಸರಳ ಅರ್ಥ. ಶ್ರೀರಾಮಕೃಷ್ಣ ಪರಮಹಂಸರು ಇದನ್ನೇ ಇನ್ನೂ ಸರಳವಾಗಿ ಹೇಳುತ್ತಾರೆ. ನಮಗೆ ಮುಳ್ಳು ಚುಚ್ಚಿದಾಗ ಅದನ್ನು ತೆಗೆಯಲಿ ಮತ್ತೊಂದು ಮುಳ್ಳು ಅಥವಾ ಚೂಪಾದ ವಸ್ತುವನ್ನು ಬಳಸುತ್ತೇವೆ. ಆಮೇಲೆ ಆ ಮುಳ್ಳಿನಿಂದ ಸಹಾಯವಾಯಿತು ಎಂದು ಅದನ್ನು ನಮ್ಮಲ್ಲೇ ಇಟ್ಟುಕೊಂಡರೆ ಅದು ಇನ್ಯಾವುದೋ ಸಂದರ್ಭದಲ್ಲಿ ನಮಗೆ ಚುಚ್ಚಲೂಬಹುದು! ಆದ್ದರಿಂದ ಹೊಕ್ಕ ಮುಳ್ಳು ತೆಗೆದಾದ ಮೇಲೆ, ತೆಗೆಯಲು ಬಳಸಿದ ಮುಳ್ಳನ್ನೂ ಬಿಸಾಡಿಬಿಡಬೇಕು ಅನ್ನುತ್ತಾರೆ ಪರಮಹಂಸರು. ಗರುಡಪುರಾಣ ಶಾಸ್ತ್ರಗಳ ವಿಷಯದಲ್ಲೂ ಇದನ್ನೆ ಹೇಳುತ್ತದೆ. ನಮಗೆ ಸಂಗತಿಗಳು ಮನದಟ್ಟಾಗುವವರೆಗೆ ಮಾತ್ರ ಶಾಸ್ತ್ರಗಳ ವ್ಯಾಲಿಡಿಟಿ. ಅದರ ನಂತರವೂ ಅವಕ್ಕೆ ಜೋತುಬಿದ್ದರೆ ಅಡ್ಡಪರಿಣಾಮ ಖಾತ್ರಿ. ನಿರ್ದಿಷ್ಟ ಪ್ರಯೋಜನದ ನಂತರ ನಮ್ಮ ಸಹಾಯಕ್ಕೆ ಬರುವುದು ಶಾಸ್ತ್ರಾಭ್ಯಾಸದಿಂದ ದಕ್ಕಿಸಿಕೊಂಡ ಕಾಮನ್ ಸೆನ್ಸ್ ಹೊರತು ಶಾಸ್ತ್ರಗಳಲ್ಲ. ಇದು ಈ ಸುಭಾಷಿತದ ಒಟ್ಟು ಅರ್ಥ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.