ನಮ್ಮೀ ಪವಿತ್ರ ವ್ರತವು ಸಾರ್ಥಕವು! : ಧನುರ್ ಉತ್ಸವ ~ 30

ಧನುರ್ ಉತ್ಸವ ವಿಶೇಷ ಸರಣಿಯ ಅಂತಿಮ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಮೂವತ್ತನೇಯ ದಿನ

ಹಡಗು ತುಂಬಿಹ ಕಡಲನು ಕಡೆದ ಮಾಧವನ ಕೇಶವನ

ಚಂದಿರನೊಲಿರ್ಪ ಸಿರಿಮೊಗದ ಅಂದದಾಭರಣಿಯರು ಬಂದು ತುತಿಸಿ

ಅಲ್ಲಿ ಇಷ್ಟಾರ್ಥವನು ಪಡೆದುದನು

ಚೆಲುವ ಪುತ್ತೂರ ಅಂದ ಕಮಲದ ತಂಪು ಜಪಸರವಿರ್ಪ ಭಟ್ಟನಾಥರ ಗೋದೆ ಪೇಳಿದ

ಸಂಘ ತಮಿಳಿನ ಮಾಲೆ ಮೂವತ್ತನುಂ ತಪ್ಪದೆಯೆ

ಇಲ್ಲಿ ಈ ರೀತಿಯೊಳು ಹೇಳ್ವವರು ಎರೆಡೆರಡು ದೊಡ್ಡ ಗಿರಿಯಂತಿರ್ಪ ತೋಳುಳ್ಳ

ರುಣಗಣ್ಣಿನ ಸಿರಿಮುಖದ ಐಸಿರಿಯ ಸಿರಿಪತಿಯೆಂದೆ

ಎಲ್ಲೆಡೆಯು ಪರಮ ಕೃಪೆಯನ ಪಡೆದು ಆನಂದ ಹೊಂದೆ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ  (ಸುರುಟಿ ರಾಗ – ರೂಪಕ ತಾಳ)

“ಅಲೆಗಳು ತುಂಬಿದ ಹಾಲ್ಗಡಲ ಕಡೆದ ಮಾದವನು, ಕೇಶಿ ಎಂಬ ಅಸುರನನ್ನು ಕೊಂದ ಕೇಶವನೂ ಆದ ಕೃಷ್ಣನನ್ನು, ಚಂದ್ರನಂತಹ ಸುಂದರ ರೂಪವುಳ್ಳ ಆಭರಣಗಳ ತೊಟ್ಟ ಯಾದವ ಕುಲದ ಹೆಣ್ಣುಗಳು ದರ್ಶಿಸಿ, ಗೋದಾ ವ್ರತದ ಫಲವಾಗಿ ಬಯಸಿದ ಮೋಕ್ಷವನ್ನು ಪಡೆಯುವ ಸುದ್ಧಿಯನ್ನು ಶ್ರೀವಿಲ್ಲಿಪ್ಪುತ್ತೂರಿನಲ್ಲಿ ಹುಟ್ಟಿದ, ತಂಪಾದ ತಾವರೆಯಂತಹ ಮುಖವನ್ನುಳ್ಳ ಪೆರಿಯಾಳ್ವಾರಿನ ಮಗಳಾದ ಆಂಡಾಳ್, ಇಂಪಾದ ತಮಿಳಿನಲ್ಲಿ ಮೂವತ್ತು ಹಾಡುಗಳನ್ನು ಹಾಡಿ ಕಾವ್ಯಮಾಲೆಯನ್ನು ಪೋಣಿಸಿದ್ದಾಳೆ.

ಇದನ್ನು ತಪ್ಪದೆ ಮೂವತ್ತು ದಿನಗಳೂ ಓದುವವರು, ಅಗಲವಾದ ತೋಳುಗಳನ್ನೂ, ಸುಂದರವಾದ ಕಣ್ಣುಗಳನ್ನೂ ಉಳ್ಳ ಶ್ರೀರಂಗನ ಆಶೀರ್ವಾದದೊಂದಿಗೆ, ಎಲ್ಲಿಗೆ ಹೋದರೂ ಸಿರಿಸಂಪತ್ತನ್ನು ಪಡೆದು ಸುಖದಿಂದ ಬದುಕುತ್ತಾರೆ…. ಎಂದು ಧನುರ್ ಉತ್ಸವವನ್ನು ಸಂಪೂರ್ಣಗೊಳಿಸುತ್ತಾಳೆ ಗೋದೈ…..!

“ಸಾತ್ತುಮುರೈ” * (ದೇವಸ್ಥಾನಗಳಲ್ಲಿ ವೈಷ್ಣವರು ದಿವ್ಯ ಪ್ರಬಂಧ ಓದಿದ ಮೇಲೆ ಕೆಲವು ಪಾಶುರಗಳನ್ನು ವಿಶೇಷವಾಗಿ ಓದುವ ಪದ್ಧತಿ)

ತಿರುಪ್ಪಾವೈಯನ್ನು ಸಂಪೂರ್ಣಗೊಳಿಸುವ ಈ ದಿನವನ್ನು ‘ಸಾತ್ತುಮುರೈ’ ಎಂದು ಕರೆಯುತ್ತಾರೆ.

ಭಗವಂತನನ್ನು ಪಡೆಯಲು ವ್ರತ ಅನುಷ್ಟಾನಗಳನ್ನು ಆಚರಿಸಿ, ಮೂವತ್ತು ದಿನಗಳು ಅವನ ಸ್ತುತಿಹಾಡಿ, ಅವನನ್ನು ಪೂಜಿಸಿ, ಅವನ ಪಾದ ಸೇರುವ ವ್ರತವನ್ನು ಸಂಪೂರ್ಣಗೊಳಿಸುವ ಈ ದಿನವನ್ನೇ ‘ಸಾತ್ತುಮುರೈ’ ಎಂದು ಹೇಳಲ್ಪಡುತ್ತದೆ. ಇಲ್ಲಿಂದ ಪುಷ್ಯ ಮಾಸ ಹುಟ್ಟುತ್ತದೆ. ಈ ವ್ರತದ ಫಲವಾಗಿ ಇನ್ನೂ ಒಳ್ಳೆಯ ದಾರಿಯೂ ತೆರೆದುಕೊಳ್ಳುತ್ತದೆ ಎಂಬ ನಂಬಿಕೆಯನ್ನು ನಮಗೆ ಖಚಿತಪಡಿಸುತ್ತದೆ ಈ ಸಾತ್ತುಮುರೈ!

ಮೃಗಶಿರ ತಿಂಗಳು ಪೂರ್ತಿಯಾಗಿ ವ್ರತವಿದ್ದು ಭಕ್ತಿಯೂ, ಪ್ರೀತಿಯೂ, ಜೀವನ ಪದ್ಧತಿಯೂ, ಅದರಲ್ಲಿ ಧರ್ಮ, ವಿಜ್ಞಾನ ಎಂದು ಎಲ್ಲವನ್ನೂ ಒಟ್ಟಾಗಿ ಬೆರಸಿ, ಉತ್ಸವವಾಗಿ ನಡೆಯುವ ಗೋದಾ ವ್ರತದ ಹಬ್ಬ ಇಂದು ಸಂಪೂರ್ಣಗೊಳ್ಳುತ್ತದೆ.

ತಾನು ಬಹಳ ಪ್ರೀತಿಸಿದ ದೇವರನ್ನೇ, ತನ್ನ ಪತಿಯಾಗಿ ಪಡೆಯಬೇಕೆಂದು, ತನ್ನನ್ನು ಒಂದು ಯಾದವ ಕುಲದ ಹೆಣ್ಣಾಗಿ ಬದಲಾಯಿಸಿಕೊಂಡು, ವ್ರತವಿದ್ದ ಆಂಡಾಳ್ ಹಾಡಿದ ಹಾಡುಗಳೇ ‘ತಿರುಪ್ಪಾವೈ’ ಎಂಬುದನ್ನು ತಿಳಿಯೋಣ.

‘ಪಾವೈ ನೊಂಬು’ (ಗೋದಾ ವ್ರತ) ಎಂಬುದು ಸಾಮಾನ್ಯವಾಗಿ ಕನ್ಯೆಯರಿಗಾದದ್ದು. ಈ ವ್ರತವನ್ನು ಆಚರಿಸುವ ಹೆಣ್ಣುಗಳು ಕೃಷ್ಣನ ಕೃಪೆಯಿಂದ ಗೋದೈಯ ಹಾಗೆಯೇ, ತಮ್ಮ ಮನಸ್ಸಿಗೆ ಹಿಡಿಸಿದ ಪ್ರೀತಿ ತುಂಬಿದ ಪತಿಯನ್ನು ಪಡೆಯುತ್ತಾರೆ; ಮನಸ್ಸಿಗೆ ಹಿಡಿಸಿದಂತಹ ಒಂದು ಸಂತೋಷವಾದ ಬದುಕನ್ನು ಹೊಂದುತ್ತಾರೆ; ಅವರಿರುವ ಮನೆ, ದೇಶ ಮುಂತಾದ ಸುಬೀಕ್ಷತೆ ಗಳಿಸುತ್ತದೆ ಎಂಬುದೇ ಈ ಪಾವೈ ನೋಂಬಿನ ಅನನ್ಯವಾದ ಶ್ರೇಷ್ಠತೆ.

ಎಲ್ಲಕ್ಕೂ ಮಿಗಿಲಾಗಿ, ಮೃಗಶಿರ ತಿಂಗಳು ಎಂಬುದು ಶುಭ ಮುಹೂರ್ತಗಳನ್ನು ತುಂಬಿದ ಪುಷ್ಯ ತಿಂಗಳಿಗೆ ಮೊದಲ ತಿಂಗಳು ಎಂಬುದರಿಂದ, ಕನ್ಯೆಯರು ವಿವಾಹವಾಗುವ ಮುನ್ನ ವ್ರತವಿದ್ದು ಹೊಸ ಬದುಕನ್ನು ತೊಡಗಲು, ಸುಂದರವಾದ ಮಾರ್ಗವನ್ನು  ಕಲ್ಪಿಸುತ್ತದೆ ಎಂಬುದು ತಿಳಿಯುತ್ತದೆ.

ಭಗವಂತನ ಕೃಪೆ ದೊರಕಲು, ಬಯಸಿದ ಮೋಕ್ಷ ಪಡೆಯಲು, ವ್ರತವಿದ್ದು ಶ್ರಮಪಟ್ಟರೆ ಮಾತ್ರ, ಪಾವೈ ದಯೆಪಾಲಿಸಿದ ಮೂವತ್ತು ಹಾಡುಗಳನ್ನು ತಿರುಪ್ಪಾವೈ ಪಾಶುರಗಳು ಎನ್ನುತ್ತೇವೆ ಎಂದರೆ, ಇನ್ನೂ ಶ್ರೇಷ್ಠತೆ ತುಂಬಿದವು ಈ ಕಾವ್ಯಮಾಲೆ ಸಕಲವೂ!

ಗೋದೈ ಈ ಮೂವತ್ತು ಹಾಡುಗಳಲ್ಲೂ, ತನ್ನ ಬಯಕೆ, ತನ್ನ ಬದುಕು, ತನ್ನ ಸುಖ ಎಂದು ತನಗಾದ ಸ್ವಾರ್ಥವನ್ನು ಮಾತ್ರ ಹಾಡದೆ, ಗೃಹವೂ, ದೇಶವೂ ಸುಬೀಕ್ಷವಾಗಿರಬೇಕು ಎಂಬ ಸಾಮಾಜಿಕ ಒಳಿತನ್ನೂ ಸೇರಿಸಿಯೇ ಹಾಡಿದ್ದರಿಂದ ಈ ಸಂಗಮ್ ತಮಿಳು ಕಾವ್ಯ ಮಾಲೆಯನ್ನು, ಅವಳ ಹೆಸರಿನೊಂದಿಗೆ ಸೇರಿಸಿ “ತಿರು -ಪಾವೈ”, “ತಿರುಪ್ಪಾವೈ” ಎಂದು ಗೌರವದಿಂದ ಕರೆಯುತ್ತೇವೆ ಎಂದೇ ತೋರುತ್ತದೆ.

ಮೃಗಶಿರ ತಿಂಗಳಲ್ಲಿ ಯಾಕೆ ವ್ರತವಿರಬೇಕು ಎಂದರೆ, ‘ಮಾಸಗಳಲ್ಲಿ ನಾನು ಮ್ರಿಗಶಿರ..!’ ಎನ್ನುತ್ತಾನೆ ಭಗವಂತ.

ಅದಕ್ಕೆ ಬಹಳಷ್ಟು ಕಾರಣಗಳಿವೆ.

ಆದರೆ, ತಮಿಳರ ಮಟ್ಟಿಗೆ, ಮ್ರಿಗಶಿರ ತಿಂಗಳು ಎಂಬುದು ಫೆಬ್ರವರಿಯಂತೆಯೇ ಪ್ರೀತಿಯನ್ನು ಕೊಂಡಾಡುವ ತಿಂಗಳು.

ಮತ್ತೆ, ಇಂಗ್ಲೀಷ್ ತಿಂಗಳುಗಳಲ್ಲಿ ಹೇಗೆ ಫೆಬ್ರವರಿಗೆ ನಾಲ್ಕು ವರ್ಷಗಳಿಗೊಮ್ಮೆ Leap Year ಒಂದು ದಿನ ಸೇರಿಸಿ 28 ದಿನಗಳು 29 ದಿನಗಳಾಗಿ ಬರುತ್ತದೆಯೋ ಅದರಂತೆಯೇ, ತಮಿಳು ತಿಂಗಳುಗಳಲ್ಲಿ ಮ್ರಿಗಶಿರ (ಮಾರ್ಗಜ್ಹಿ) ಯಲ್ಲೇ ನಾಲ್ಕು ವರ್ಷಗಳಿಗೊಮ್ಮೆ ಒಂದು ದಿನ ಹೆಚ್ಚಾಗಿ 29 ಎಂಬುದು 30 ದಿನಗಳಾಗಿ ಬರುತ್ತದೆ.

ಗೋದೈ ಈ ತಿರುಪ್ಪಾವೈ ಹಾಡುಗಳನ್ನು ಹಾಡಲು, ಮ್ರಿಗಶಿರ 30 ದಿನಗಳಿರುವ ಒಂದು ತಮಿಳು ವರ್ಷವನ್ನು ಆಯ್ಕೆಮಾಡಿಕೊಂಡಿರುವುದೂ ಸಹ ಕೃಷ್ಣನನ್ನು ಒಂದು ದಿನ ಹೆಚ್ಚಾಗಿ ಪ್ರೀತಿಸಬಹುದು ಎಂಬುದರಿಂದ ಇರಬಹುದೇ ಎಂದು ತೋರುವಂತೆ ಮಾಡುತ್ತದೆ ಈ ಪಾಶುರಗಳು.

ಗೋದೈಗೆ ಕೃಷ್ಣನ ಮೇಲೆ ಅಷ್ಟೊಂದು ಪ್ರೀತಿ ಎಲ್ಲಿಂದ ತೊಡಗಿತು ಎಂದು ತಿಳಿದುಕೊಳ್ಳಲು ಯತ್ನಿಸಿದರೆ, ಹಲವು ಯುಗಗಳ ಹಿಂದೆ ವರಾಹ ಅವತಾರದಲ್ಲಿ ತೊಡಗಿದ್ದು ಎನ್ನುತ್ತದೆ ಇತಿಹಾಸ.

ಒಮ್ಮೆ ವರಾಹ ಅವತಾರದಲ್ಲಿ, ವರಾಹ ಮೂರ್ತಿಯ ಬಳಿ ಭೂದೇವಿ ಮೋಕ್ಷಕ್ಕೆ ಮಾರ್ಗವನ್ನು ಕೇಳಲು, ಅವನು,

“ಭಗವಂತನ ಪಾದಗಳನ್ನು  ಪುಷ್ಪಗಳಿಂದ ಅರ್ಚನೆ ಮಾಡಬೇಕು….!

ಭಗವಂತನ ಶ್ರೀನಾಮವನ್ನು ಎತ್ತರದ ದನಿಯಲ್ಲಿ ಹೇಳಬೇಕು…!

ಭಗವಂತನ ಪಾದಕಮಲಗಳಲ್ಲಿ ಆತ್ಮ ಸಮರ್ಪಣೆ ಮಾಡಿಕೊಳ್ಳಬೇಕು…!

ಎಂದು ಮೂರು ನಿತ್ಯ ಕಟ್ಟಳೆಗಳನ್ನು ಮೋಕ್ಷಕ್ಕೆ ಆದ ಮಾರ್ಗವಾಗಿ ಹೇಳುತ್ತಾನೆ.

ನಂತರ ಒಂದು ದಿನ, ಆದಿಶೇಷನ ಮೇಲೆ ಶಯನನಾಗಿದ್ದ ಪರಂದಾಮನ ಬಳಿ ಭೂದೇವಿ, “ವರಾಹ ಅವತಾರದಲ್ಲಿ, ಹಿರಣ್ಯಾಕ್ಷ ನನ್ನನ್ನು ಕಡಲೊಳಗೆ ಮುಳುಗಿಸಿದಾಗ, ಕರೆದೊಡನೆ ಬಂದು ಕಾಪಾಡಿದೆಯಲ್ಲಾ ಕೃಷ್ಣ..ನನ್ನಂತೆಯೇ, ಹಲವು ಕೋಟಿ ಭಕ್ತರು ಇಂದು ಭೂಮಿಯ ಮೇಲೆ ಕಷ್ಟಪಡುತ್ತಿದ್ದಾರಲ್ಲಾ ಅವರು ಕರೆದರೂ ಬರುತ್ತೀಯಾ?” ಎಂದು ಕೇಳಲು,

ಪರಂದಾಮ ನಗುತ್ತಾ, “ನನ್ನನ್ನು ಕರೆವ ಮನುಷ್ಯರು ಪಕ್ವಗೊಂಡಿರಬೇಕು ಅಲ್ಲವೇ? ಅದಕ್ಕೆ ನೀನು ಒಮ್ಮೆ ಭೂಮಿಯಲ್ಲಿ ಅವತರಿಸಿ, ಗೀತಾರ್ಥವನ್ನು ಮತ್ತೊಮ್ಮೆ ಹೇಳುವಂತವಳಾಗು!” ಎಂದು ಭೂದೇವಿಯ ಬಳಿ ಕೇಳಿಕೊಂಡರಂತೆ.

ಅವನ ಆಜ್ಞೆಯಂತೆ ಭೂದೇವಿ, ಪರಂದಾಮ “ವಟಪತ್ರಸಾಯಿ’ ಎಂಬ ಹೆಸರನ್ನು ಪಡೆದು ಅವತರಿಸಿ ಶ್ರೀವಿಲ್ಲಿಪ್ಪುತ್ತೂರ್ ಆಷಾಡದ ಶುಕ್ಲ ಪಕ್ಷದಲ್ಲಿ, ಪುಬ್ಬ (ಪೂರ್ವ ಪಾಲ್ಗುಣಿ) ನಕ್ಷತ್ರದಲ್ಲಿ,

‘ತುಳಸಿಗಾನ ನೋದ್ಭವಂ ಪಾಂಡ್ಯೇ ವಿಶ್ವಂಬರಾಂ ಗೋದಾಂ ವಂದೇ..’ ಎಂದು ಭಗವಂತನಿಗೆ ವಿಷ್ಣು ಸಿದ್ಧರಾದ ಪೆರಿಯಾಳ್ವಾರ್ ಪರಾಮರಿಸಿದ ಪುಷ್ಪವನದಲ್ಲಿ ವಿಷ್ಣುವಿಗೆ ಬಹಳ ಪ್ರಿಯವಾದ ತುಳಸಿ ಗಿಡಗಳ ನಡುವೆ ಅವತರಿಸಿದಳಂತೆ.

ಅನಂತನ ಕೃಪೆಯಿಂದ, ಶ್ರೀವಿಲ್ಲಿಪ್ಪುತ್ತೂರ್ ಎಂಬ ಸ್ಥಳದಲ್ಲಿ ಅವತರಿಸಿದ ಮಗುವನ್ನು, ಆ ಪದ್ಮನಾಭನ ಕೃಪೆಯಿಂದ ನೋಡಿದ ಪೆರಿಯಾಳ್ವಾರ್, ಮಡದಿ ವಿರಜೆಯೊಂದಿಗೆ ವಟಪತ್ರಸಾಯಿಯ ಶ್ರೀಪಾದಗಳಲ್ಲಿ ಮಗಳನ್ನಿಟ್ಟು, ಅವಳಿಗೆ ಗೋದೈ ಎಂದು ನಾಮಕರಣ ಮಾಡಿ, ಅವಳಿಗೆ ಜ್ಞಾನವನ್ನು ಬೋಧಿಸಲು ತೊಡಗುತ್ತಾರೆ.

ಚಿಕ್ಕ ವಯಸ್ಸಿನಿಂದಲೇ ಕೃಷ್ಣನ ಹಿರಿಮೆಗಳನ್ನು ತಂದೆ ಹೇಳಲು ಕೇಳಿ ಬೆಳೆದ ಗೋದೈ, ಒಂದು ಹಂತದಲ್ಲಿ, ಆ ಅನಂತಪದ್ಮನಾಭನನ್ನು ತನ್ನ ಪತಿಯಾಗಿಯೇ ಮನಸ್ಸಿನಲ್ಲಿ ನೆನೆದು, ಆ ಶ್ರೀರಂಗನಾಥನನ್ನು ವರಿಸಲು ಹೂಮಾಲೆಯೊಂದಿಗೆ ಕಾವ್ಯ ಮಾಲೆಯನ್ನೂ ಸೇರಿಸಿಯೇ ದಿನನಿತ್ಯ ಎರಡು ಮಾಲೆಗಳನ್ನು ಹೆಣೆಯುತ್ತಿರುತ್ತಾಳೆ.

‘ಭೂಮಿ ಅಳೆದವನಿಗೆ ನಾಯಕಿಯಾಗಿ ಬರಲು ನಾನು ಸಂಪೂರ್ಣ ಅರ್ಹತೆಯುಳ್ಳವಳು’ ಎಂದು ತಾನು ಕಟ್ಟಿದ ಮಾಲೆಗಳನ್ನು ತಾನೇ ಮೊದಲು ತೊಟ್ಟು, ನಂತರ ಆ ಮಾಲೆಗಳನ್ನು ಅವಳು ಭಗವಂತನಿಗೆ ತೊಡಿಸುವುದನ್ನು ನೋಡಿ ವ್ಯಥೆಗೊಂಡ ಪೆರಿಯಾಳ್ವಾರ್, ಮಾರನೇಯ ದಿನ ಗೋದೈ ತೊಡದ ಮಾಲೆಯನ್ನು ತೆಗೆದುಕೊಂಡು ಹೋಗಲು, ಭಗವಂತನು ಅದನ್ನು ನಿರಾಕರಿಸಿ “ಗೋದೈ ತೊಟ್ಟ ಮಾಲೆಯೇ ನನಗೆ ಸೂಕ್ತವಾದದ್ದು, ಅದನ್ನು ತೆಗೆದುಕೊಂಡು ಬನ್ನಿ..” ಎಂದು ಹೇಳಲು ಅಂದಿನಿಂದ ‘ಸೂಡಿಕೊಟ್ಟ ಸೊಡರುಬಳ್ಳಿ’ ಆಗುತ್ತಾಳೆ ಗೋದೈ.

ಅವಳು ಆ ನಂದಗೋಪನ ಕುಮಾರನನ್ನು, ಕ್ಷೀರಸಾಗರದಲ್ಲಿ ಶಯನಿಸಿರುವ ಪರಮನನ್ನು, ಜಗವಳೆದ ಉತ್ತಮನನ್ನು, ಬಿರುಮಳೆಯ ಕೃಷ್ಣನನ್ನು, ದಾಮೋದರನನ್ನು, ನಾರಾಯಣನನ್ನು, ಮಾದವನನ್ನು, ಮಣಿವಣ್ಣನನ್ನು, ಕೇಶವನನ್ನು, ಕೊರೆಯೊಂದು ಇಲ್ಲದ ಗೋವಿಂದನನ್ನು ಎಂದು ಅವಳ ಮನಸ್ಸಿಗೆ ಇನಿಯನಾದ ಕೃಷ್ಣನನ್ನು ಹಾಡುವಾಗಲೆಲ್ಲಾ ಭಕ್ತಿ ಎಂದು ಹರ್ಷಗೊಂಡ ಪೆರಿಯಾಳ್ವಾರ್, ಮಗಳಿಗೆ ತಕ್ಕ ವಯಸ್ಸಿನಲ್ಲಿ ವಿವಾಹಮಾಡಿ ಸಂತೋಷಪಡಲು ಮುಂದಾಗುತ್ತಾರೆ.

ಆದರೆ, ಮದುವೆಯ ಮಾತೆತ್ತಿದ ಕೂಡಲೇ,

“ಮಾನವನನ್ನು ಮದುವೆಯಾಗಿ ಬದುಕಲಾರೆ,

ನಾನು ನಾರಾಯಣನ ನಾಯಕಿಯಾಗಿಯೇ ಜೀವಿಸಲು ಇರುವವಳು…!’ ಎಂದು ರಂಗನ ಮೇಲಿನ ತನ್ನ ಪ್ರೀತಿಯನ್ನು ಗೋದೈ ಹೇಳುವುದನ್ನು ಕೇಳಿ ಬಹಳ ನೊಂದುಕೊಂಡರಂತೆ ತಂದೆ ಪೆರಿಯಾಳ್ವಾರ್.

ಶ್ರೀರಂಗದಲ್ಲಿ ಶಯನಿಸಿರುವ ಶ್ರೀರಂಗನಾಥನೇ ತನ್ನ ಪತಿ ಎಂಬ ನಿರ್ಧಾರದಿಂದ ಇದ್ದ ಗೋದೈ, ‘ನಾಚ್ಚಿಯಾರ್ ತಿರುಮೊಳಿ’ ಯ ಮೂಲಕ ತನ್ನ ಮನಸ್ಸನ್ನು ಕದ್ದ ನಾಯಕನ ಬಗ್ಗೆ, ಅವನ ಮೇಲೆ ತನಗಿರುವ  ಪ್ರೇಮವನ್ನು, ಅವನಿಲ್ಲದೆ ತಾನು ಜೀವಿಸಲು ಸಾಧ್ಯವಿಲ್ಲ ಎಂಬುದನ್ನು ಹೇಳುವುದಲ್ಲದೆ, ಭಗವಂತನು ತನ್ನನ್ನು ವಿವಾಹವಾಗುವುದಾಗಿ ಕನಸಿನಲ್ಲಿ ವರ ನೀಡಿದ್ದನ್ನು ನೆನೆದು ‘ವಾರಣಮಾಯಿರಂ’*ಸಹ ಹಾಡಿದಳು.

(* ಸಾವಿರ ಆನೆಗಳ ಜತೆ ಬರುತ್ತಿದ್ದಾನೆ. ಅದನ್ನು ಅರಿತ ಊರಿನ ಜನಗಳೆಲ್ಲರೂ, ಬಂಗಾರದ ಬಿಂದಿಗೆಯಲ್ಲಿ ನೀರು ತುಂಬಿಟ್ಟು, ಎಲ್ಲ ದಿಕ್ಕುಗಳಲ್ಲಿ ತೋರಣಗಳನ್ನು ಕಟ್ಟಿ ಶ್ರೀನಿವಾಸನನ್ನು ಸ್ವಾಗತಿಸುವಂತೆ ನಾನು ಕನಸು ಕಂಡೆನು ಗೆಳತಿ) ಎಂಬುದೇ ಆ ಹಾಡಿನ ಅರ್ಥ.

ದಿನಗಳು ಮತ್ತಷ್ಟು ಕಳೆಯಲು, ಗೋದೈಯ ಬಗ್ಗೆ ಚಿಂತಾಗ್ರಸ್ತರಾದ ಪೆರಿಯಾಳ್ವಾರ್, ಒಮ್ಮೆ ಭಗವಂತನ ಬಳಿ ಹೋಗಿ ಈ ವಿಷಯವನ್ನು ಮುಂದಿಡಲು, ಅಂದು ರಾತ್ರಿ ಪೆರಿಯಾಳ್ವಾರಿನ ಕನಸಿನಲ್ಲಿ ಶಂಖ, ಚಕ್ರದೊಂದಿಗೆ ತೋರಿದ ಪರಂದಾಮ, ‘ನಾಳೆ ಗೋದೈಯನ್ನು ಶ್ರೀರಂಗಕ್ಕೆ ಕರೆ ತನ್ನಿ… ಅವಳನ್ನು ನಾನು ವಿವಾಹವಾಗಲು ಇಚ್ಚಿಸುತ್ತೇನೆ..’ ಎಂದು ಹೇಳಿದ್ದಲ್ಲದೆ, ಶ್ರೀರಂಗದ ದೇವಸ್ಥಾನದ ಅರ್ಚರಕರ ಕನಸಿನಲ್ಲೂ, ರಾಜ ವಲ್ಲಭ ದೇವನ ಕನಸಿನಲ್ಲೂ ತೋರಿ ತಾನು ಆಂಡಾಳನ್ನು ವಿವಾಹವಾಗುವ ಸುದ್ಧಿಯನ್ನು ಪ್ರತ್ಯೇಕವಾಗಿ ಹೇಳಿ ಮದುವೆಗೆ ಸಿದ್ದತೆ ಮಾಡುತ್ತಾನೆ.

ಭಗವಂತನ ಏರ್ಪಾಡುಗಳ ಬಗ್ಗೆ ಏನೂ ತಿಳಿಯದೆ, ಶ್ರೀವಿಲ್ಲಿಪ್ಪುತ್ತೂರಿನಿಂದ ಶ್ರೀರಂಗಕ್ಕೆ ಹೋಗಲು ಅಣಿಯಾಗುತ್ತಿದ್ದ ಪೆರಿಯಾಳ್ವಾರನ್ನೂ, ಗೋದೈಯನ್ನೂ ರಾಜನೇ ಬಂದು ಆನೆಯ ಮೇಲೆ ಕರೆದುಹೋಗಲು…..

ದೇವಸ್ಥಾನದಲ್ಲಿ ಎಲ್ಲ ಹಿರಿಯರ ಸನ್ನಿಧಿಯಲ್ಲಿ ವೇದಘೋಷಗಳು ಮೊಳಗಳು, ಗೋದೈ, ರಂಗನ ಮುಂದೆ ಕರೆತರಲ್ಪಡುತ್ತಾಳೆ.

ನಂತರ ಸಂತರ ಶಂಖ ಮೊಳಗಳು,

“ಮಾಲೆ ತೊಡಿಸಿದಳು, ಗೋದೈ ಮಾಲೆ ಬದಲಾಯಿಸಿದಳು..”  ಕಾವ್ಯ ಮಾಲೆ ತೊಡಿಸಿದಳು! ಹೂ ಮಾಲೆ ತೊಡಿಸಿದಳು..!” ಎಂದು ವಾಧ್ಯದ ದನಿಗಳು ಹಾಡಲು, ತಂದೆಯನ್ನು ನಮಸ್ಕರಿಸಿದ ನಂತರ, ರಂಗನನ್ನೂ ಕೈಮುಗಿದು, ತನ್ನ ಕೊರಳಿನ ಮಾಲೆಯನ್ನು ಶ್ರೀರಂಗನಿಗೆ ತೊಡಿಸಿದ ಗೋದೈ, ಆ ಕ್ಷಣವೇ ಎಲ್ಲರ ಮುಂದೆ ಜ್ಯೋತಿ ಸ್ವರೂಪಳಾಗಿ ಭಗವಂತನಲ್ಲಿ ಲೀನವಾಗುತ್ತಾಳೆ ಎಂದು ಹೇಳಲ್ಪಡುತ್ತದೆ.

ಹೀಗೆ ಭಗವಂತನ ನಾಮವನ್ನು ದಿನವೂ ಹೇಳಿ…. ಭಗವಂತನ ಶ್ರೀಪಾದಗಳಲ್ಲಿ ಪುಷ್ಪಗಳನ್ನು ಹರವಿ, ಭಗವಂತನ ಬಳಿಯೇ ಹೋಗಿ ಸೇರುವೆಯಂತೆ…” ಎಂದ ವರಾಹ ಮೂರ್ತಿ ನೀಡಿದ ವರವನ್ನು ಭೂದೇವಿ ಬದುಕಿ ತೋರಿಸಿದ್ದೇ ಗೋದೈಯ ಇತಿಹಾಸ ಎನ್ನುತ್ತಾರೆ.

“ತನ್ನದೆಲ್ಲವನ್ನೂ ನಮಗೆ ನೀಡಿ ತನ್ನನ್ನು ಅರಿಯಲು ಸಾಧ್ಯವಾಗಿಸುವನು ಪರಂದಾಮ..” ಎಂಬುದನ್ನು ತೋರಿದ್ದು ಗೋದೈಯ ಜೀವನ ಮಾತ್ರವಲ್ಲ… ಅವಳು ದಯಪಾಲಿಸಿದ ತಿರುಪ್ಪಾವೈಯೂ ಸಹ….

ತಿರುಪ್ಪಾವೈಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರ ಮೊದಲ ಹತ್ತು ಪಾಶುರಗಳು ‘ಭಗವಂತನ ನಾಮವನ್ನು ಹಾಡು’ ಎಂದು ಒತ್ತಾಯಿಸುತ್ತವೆ.

ಎರಡನೇಯ ಹತ್ತು ಪಾಶುರಗಳು ‘ ಭಗವಂತನ ಶ್ರೀಪಾದಗಳಲ್ಲಿ ಪುಷ್ಪಗಳನ್ನು ಸಮರ್ಪಿಸಿ ಅರ್ಚನೆ ಮಾಡು…’ ಎಂದು ಹೇಳುತ್ತವೆ.

ಮೂರನೇಯ ಹತ್ತು ಪಾಶುರಗಳು ‘ಭಗವಂತನ ಪಾದಕಮಲಗಳಲ್ಲಿ ಆತ್ಮ ಸಮರ್ಪಣೆ ಮಾಡು’ ಎಂದು ನಿವೇದಿಸುತ್ತವೆ.

‘ನನ್ನನ್ನು ಪಡೆಯಲು, ನನ್ನಲ್ಲಿ ಮನಸ್ಸಿಡು, ನನ್ನ ಭಕ್ತನಾಗಿರು, ನನ್ನನ್ನು ಪೂಜಿಸು… ನನ್ನನ್ನೇ ನಮಸ್ಕರಿಸು… ಇದನ್ನು ಸಾಧ್ಯವಾಗುವಂತೆ ಮಾಡಲು ನಿನಗೆ ಹೇಳುತ್ತೇನೆ…” ಎಂದು

‘ಮನ್ಮನಾ ಭವ ಮತ್ಭಕ್ತೋ ಮಧ್ಯಾಜಿ ಮಾಂ ನಮಸ್ಗುರು

ಮಾಮೆ ವೈಶ್ಯಸಿ ಸತ್ಯಂ ಡೇ ಪ್ರತಿಜಾನೆ ಪ್ರಿಯೋಸಿ ಮೇ….  (ಭಗವತ್ ಗೀತೆ 18:65)

ಭಗವಂತನು ಗೀತೆಯಲ್ಲಿ ಹೇಳಿದ ಉಪದೇಶಗಳನ್ನೇ, ಈ ಮೂವತ್ತು ಹಾಡಿನಲ್ಲಿ ಸರಳವಾಗಿ, ಇಂಪಾಗಿ ತಮಿಳಿನಲ್ಲಿ ನಮಗೆ ತಿಳಿಸಿ ಹೇಳಿದ್ದಾಳೆ ಗೋದೈ ಎಂದೇ ಹೇಳಬಹುದು!

ಗೋದೈ ಹೇಳಿದ ‘ಸಂಗತ್ತಮಿಳ್ ಮಾಲೈ’ ಮೂವತ್ತನ್ನೂ ತಪ್ಪದೆ ಹೇಳಿ ಧನುರ್ ಮಾಸದ ವ್ರತವನ್ನು ಆಚರಿಸುವವರು ವಿಷ್ಣುವಿನ ಕೃಪೆಯನ್ನೂ, ಸಕಲ ಸೌಭಾಗ್ಯಗಳನ್ನೂ ಒಟ್ಟಾಗಿ ಪಡೆದು ಸುಖವಾಗಿರುತ್ತಾರೆ ಎಂಬುದನ್ನು,

‘ರುಣಗಣ್ಣಿನ ಸಿರಿಮುಖದ ಐಸಿರಿಯ ಸಿರಿಪತಿಯೆಂದೆ, ಎಲ್ಲೆಡೆಯು ಪರಮ ಕೃಪೆಯನು ಪಡೆದು ಆನಂದ ಹೊಂದೆ’ ಎಂಬ ‘ಸಾತ್ತುಮುರೈ’ ಯ ಕೊನೆಯ ಸಾಲುಗಳು ನಮಗೆ ಪ್ರಮಾಣ ನೀಡುತ್ತದೆ.

ನಾವೂ, ಗೋದೈಯ ಹಾಗೆಯೇ ಧನುರ್ ಮಾಸದಲ್ಲಿ ಗೋದೈಯ ‘ತಿರುಪ್ಪಾವೈ’ ಯನ್ನು ತಪ್ಪದೆ ಹಾಡಿ….

ಭಗವಂತನ ಪಾದಗಳಲ್ಲಿ ನಮ್ಮನ್ನು ಸಮರ್ಪಿಸಿ…

ಅವನ ಕೃಪೆಯನ್ನು ಪಡೆದು ಸುಖದಿಂದ ಇರೋಣ ಬನ್ನಿ….!

‘ಭಾದೆಗಳನ್ನು ತೊಲಗಿಸುವ ಪರಂದಾಮನ ಪಾದಗಳು ಕಾಣಿಸುವ ವೇದಗಳೆಲ್ಲಕ್ಕೂ ಬೀಜವಾಗುವ ಗೋದೈ ತಮಿಳು ಐದೈದು ಐದು* (* ಐದೈದು 5 x 5= 25,  ಐದು 5 ಅಂದರೆ 25+5=30 ಬಾಸುರಗಳು)  ಅರಿಯದ ಮಾನವರಿಗೆ ಲೋಕವನ್ನು ಹೊರುವುದು ಶ್ರಮ..”

                                         ಶ್ರೀ ಆಂಡಾಳ್ ಶ್ರೀಪಾದಗಳಿಗೆ ಶರಣು….!

                                                                 ***

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು ಕಳೆದ 30 ದಿನಗಳಿಂದ ಅರಳಿಮರದಲ್ಲಿ ಪ್ರಕಟೀಸುತ್ತಿದ್ದೇವೆ. ಓದಿ, ಮೆಚ್ಚಿ, ಇತರರಿಗೂ ಓದಿಸಿದ ಓದುಗರಿಗೂ, ಮೂಲ ಲೇಖಕರು ಮತ್ತು ಅನುವಾದಕರಿಗೂ ಧನ್ಯವಾದಗಳು.

Leave a Reply