
ಡಾ.ಸಚಿತ್ರ ದಾಮೋದರನ್ ಇವರು ಹೆರಿಗೆ ತಜ್ಞರು. ತಮಿಳುನಾಡಿನ ಕೊಯ್ಯಂಬತ್ತೂರ್ ಬಳಿ ಕಾರಮಡೈ ಎಂಬ ಸ್ಥಳದಲ್ಲಿ ಸವಿತಾ ಮೆಡಿಕಲ್ ಸೆಂಟರ್ ಮತ್ತು ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. ಇವರು ಸುಮಾರು 115 ಕಥೆಗಳನ್ನು, 15 ಅಂಕಣಗಳನ್ನು, 8 ವೈದ್ಯಕೀಯ ಅಂಕಣಗಳನ್ನೂ ಬರೆದಿದ್ದಾರೆ. ಅನೇಕ ವೈದ್ಯಕೀಯ ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಆಸ್ಪತ್ರೆಯಲ್ಲಿ ಒಂದು ಲೈಬ್ರರಿ ಇರುವುದು ವಿಶೇಷ.
ಅರಳಿಮರ ಜಾಲತಾಣದಲ್ಲಿ 30 ದಿನಗಳ ಕಾಲ 30 ಕಂತುಗಳಲ್ಲಿ ಪ್ರಕಟವಾದ ಧನುರ್ ಉತ್ಸವ ಸರಣಿ ಸಾಕಷ್ಟು ಜನಮೆಚ್ಚುಗೆ ಗಳಿಸಿದೆ. ಈ ಸಂದರ್ಭದಲ್ಲಿ ಈ ಕೃತಿರಚನೆಯ ಕುರಿತು ಮೂಲ ಲೇಖಕಿಯ ಮಾತುಗಳನ್ನು ಇಲ್ಲಿ ನೀಡಿದ್ದೇವೆ. ಇದನ್ನೂ ಕೂಡಾ ಲೇಖಕರೂ ಅನುವಾದಕರೂ ಆದ ಕೆ.ನಲ್ಲತಂಬಿಯವರು ಕನ್ನಡಕ್ಕೆ ಅನುವಾದಿಸಿ ಉಪಕರಿಸಿದ್ದಾರೆ. ಅವರಿಗೆ ಅರಳಿಬಳಗ ಮತ್ತು ಓದುಗರ ಪರವಾಗಿ ಕೃತಜ್ಞತೆಗಳು
“ತನ್ನ ಹಿರಿಮೆಯನ್ನು ನೆನೆದು ಉತ್ಸಾಹದಿಂದ ಬದುಕುವುದು ಉತ್ತಮ” [ಇನಿಯವೈ ನಾರ್ಪದು- (ಇಂಪಾದ ನಲವತ್ತು) ಕೃತಿ]
ತನ್ನ ಉನ್ನತಿಗೆ ಬೇಕಾದ ಉತ್ಸಾಹ ಇಂಪಾದದ್ದು….! ಆ ಸ್ಥಿತಿಯಲ್ಲಿ ನಿಂತು ಉಳಿದವರಿಗೆ ಉತ್ಸಾಹ ನೀಡುವುದು ಅದಕ್ಕಿಂತಲೂ ಇಂಪಾದದ್ದು!! ಇದು ಇಂಪಾದ ಸ್ನೇಹಿತರಿಗೆ ಇಂಪಾಗಿ ಹೊಂದಿಕೊಳ್ಳುವ ಸಾಲುಗಳು…!
ಒಮ್ಮೆ ಸವಿತಾ ಕುಟುಂಬದ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಚಿಮ್ಮಿದ್ದೆ’ಧನುರ್ ಉತ್ಸವ’ ಎಂಬ ಈ ಕೃತಿಗಾದ ಕಿಡಿ….
ಶಾಲಾ ಕಾಲದಲ್ಲಿ ಮೃಗಶಿರದ ಮುಂಜಾವಿನಲ್ಲಿ ಅಜ್ಜಿ ರಂಗನಾಯಕಿಯೊಂದಿಗೆ ದೇವಸ್ಥಾನಕ್ಕೆ ಹೋಗುವುದರ ಬಗ್ಗೆಯೂ, ಓದಿದ ‘ತಿರುಪ್ಪಾವೈ’ ಬಗ್ಗೆಯೂ ಅಂದು ಮಾತನಾಡುತ್ತಿದ್ದಾಗ, ‘ಒಬ್ಬಳ ಮಗನಾಗಿ ಹುಟ್ಟಿ’ ಹಾಡಿನಲ್ಲಿ ಕೃಷ್ಣ, ಬಲರಾಮರ ಇತಿಹಾಸ ಗರ್ಭ ಕಾಲದ ವಿಜ್ಞಾನದಿಂದ ಹೊಂದಿಕೊಂಡು ಹೋಗುವುದನ್ನು ನಾನು ಹೇಳಲು, ಆಗ ನನ್ನ ಆಪ್ತ ಗೆಳತಿ ಮೀನಾಕ್ಷಿ ಸುಂದರಮ್, “ಏನನ್ನು ಓದಿದರೂ ಅದನ್ನು ವೃತ್ತಿಯೊಂದಿಗೆ ಹೋಲಿಸಿ ನೋಡುವಂತೆಯೇ ಕಾಣುತ್ತದೆ! ಇಷ್ಟೇನಾ? ಇಲ್ಲ ಉಳಿದ ತಿರುಪ್ಪಾವೈ ಪಾಶುರಗಳಲ್ಲೂ ಇಂತಹದ್ದನ್ನು ಕಂಡಿದ್ದೀರಾ?” ಎಂದು ಕೇಳಲು, ಆಗ ನೆನಪಿನಲ್ಲಿದ್ದ ಕೆಲವು ಹಾಡುಗಳು, ಅದು ಹೇಳುವ ವೈಜ್ಞಾನಿಕ ವಿಷಯಗಳನ್ನು ಹೇಳಿದೆ.
“ಇಷ್ಟೊಂದು ವರ್ಷಗಳು ತಿರುಪ್ಪಾವೈ ಓದುತ್ತಿದ್ದೇನೆ ಎಂದು ಹೇಳುತ್ತಿದ್ದೀರಿ…. ಇದರಲ್ಲಿ ವಿಜ್ಞಾನವನ್ನು ಇಷ್ಟು ಸುಂದರವಾಗಿ ಹೇಳಲಾಗಿದೆ ಎಂದೂ ಹೇಳುತ್ತಿರೀ …ನಮಗೆ ಇವೆಲ್ಲಾ ಗೊತ್ತೇ ಇಲ್ಲ. ನಮಗೆಲ್ಲ ತಿರುಪ್ಪಾವೈ ಎಂದರೆ ಮೂವತ್ತು ದಿನಗಳಿಗಾದ ಹಾಡು, ಅದಕ್ಕಾದ ವ್ಯಾಖ್ಯಾನ ಅಷ್ಟೇ. ಹಾಗೆಯೇ ನಾವು ಅರಿತಿರುವುದು. ಇಷ್ಟೊಂದು ವಿಷಯಗಳು ಇದರಲ್ಲಿ ಅಡಗಿದೆ ಎಂದರೆ, ನಮಗಾಗಿ ಇದರ ಬಗ್ಗೆ, ನಿಮ್ಮ ಶೈಲಿಯಲ್ಲಿ ಬರೆಯಬಹುದಲ್ಲವೇ, ಸಚಿ..?”
ಗೆಳತಿಯರು ಕೇಳಿದ ತಕ್ಷಣ, ಮೊದಲು ನಿರಾಕರಿಸಿದೆ.
“ನೀವು ಹೇಳುವಂತೆ ಬರೆಯುವುದು ಅಷ್ಟು ಸುಲಭವಲ್ಲ ಮೀನಾಕ್ಷಿ ಇಷ್ಟೊಂದು ಕೆಲಸಗಳ ನಡುವೆ ನನ್ನಿಂದ ಬರೆಯಲು ಸಾಧ್ಯವೇ!” ಎಂದೆ.
“ಒಮ್ಮೆಯೇ ಬರೆಯಬೇಡಿ. ಬರುವ ಮೃಗಶಿರದಲ್ಲಿ ಪ್ರಾರಂಭಿಸಿ, ದಿನಕ್ಕೊಂದು ಹಾಡಿನಂತೆ ಸ್ವಲ್ಪ ಸ್ವಲ್ಪವಾಗಿ ಪ್ರಯತ್ನ ಮಾಡಿದರೆ, ಬರೆಯಬಹುದು!” ಎಂದು ಗೆಳತಿಯರು ಬಿಡದೆ ಒತ್ತಾಯಿಸಿ ಉತ್ಸಾಹ ನೀಡಲು, ಜತೆಯಲ್ಲಿದ್ದ ಗಂಡ ದಾಮೋದರ್, ಮಗ ವಿಷ್ಣು ಅದಕ್ಕೆ ತಲೆ ಅಲ್ಲಾಡಿಸಿದರು. ಒಳೊಗೊಳಗೆ ಒಂದು ಅಂಜಿಕೆ ಇದ್ದೇ ಇತ್ತು.
ಯಾಕೆಂದರೆ, ಒಬ್ಬ ವೈದ್ಯಳಿಗೆ ಒಂದು ದಿನಕ್ಕೆ 24ಗಂಟೆ ಸಮಯದಲ್ಲಿ ಒಂದು ನಿಮಿಷ ಸಹ ಅವಳಿಗೆ ಸ್ವಂತವಲ್ಲ. ಅವಳ ಕುಟುಂಬಕ್ಕೂ ಸ್ವಂತವಲ್ಲ. ಅವಳ ಪ್ರತಿ ನಿಮಿಷವೂ ಖಾಯಿಲೆಯಿಂದ ಬರುವ ರೋಗಿಗಳಿಗೆ ಸೇರಿದ್ದು. ಈ ಸ್ಥಿತಿಯಲ್ಲಿ ಮೂವತ್ತು ದಿನಗಳು ಒಂದು ದಾರಾವಾಹಿಗೆ ಸಮಯ ಮೀಸಲಿಡುವುದು ಸಾಧ್ಯವೇ ಎಂಬ ಸಂಶಯ ಇದ್ದುದ್ದರಿಂದ, ಏನನ್ನೂ ಮಾತನಾಡಲಿಲ್ಲ.
ಬೀಳ್ಕೊಡುವಾಗ, ಮೀನಾಕ್ಷಿ “ಸ್ವಲ್ಪ ಹಿಂದೆ ಮಾತನಾಡುವಾಗ ಬಡತನದಲ್ಲಿದ್ದಾಗಲೆಲ್ಲಾ, ‘ ಬರುವ ಶ್ರಮವನ್ನು ಒಪ್ಪಿಕೊಂಡರೆ ದುಃಖವಿಲ್ಲ” ಎಂದು ಅಮ್ಮ ಆಗಾಗ ಹೇಳುತ್ತಿದ್ದರು ಎಂದು ಹೇಳಿದರಲ್ಲ…ಅದನ್ನೇ ಇದಕ್ಕೂ ಹೇಳಬಹುದಲ್ಲ? ಆಂಡಾಳಿನ ಬಗ್ಗೆ, ಕೃಷ್ಣನ ಬಗ್ಗೆ ಇಷ್ಟೊಂದು ಮಾತನಾಡುತ್ತೀರಲ್ಲ…. ಹಾಗೆಯೇ ಆ ಆಂಡಾಳೊಂದಿಗೆ ಕೃಷ್ಣನ ಕೈಯಲ್ಲಿರುವ ಕೊಳಲಿನ ಬಗ್ಗೆಯೂ ಒಂದು ಕಥೆ ಇದೆ… ಸಾಧ್ಯವಾದರೆ ಓದಿ ನೋಡಿ!” ಎಂದು ಹೇಳಿ ಹೋದರು.
ಕೊಳಲಿನ ಬಗ್ಗೆ ಅಂತಹ ಹೊಸದಾದ ಕಥೆ ಏನಿರಬಹುದು ಎಂದು ಕೃಷ್ಣನ ಕೊಳಲಿನ ಬಗ್ಗೆ ಹುಡುಕಲು, ಅಲ್ಲಿತ್ತು ಒಂದು ಸುಂದರವಾದ ಕೊಳಲಿನ ಕಥೆ.
ಯಮುನಾ ನದಿಯ ದಂಡೆಯ ಪಕ್ಕದಲ್ಲಿ, ಎತ್ತರಕ್ಕೆ ಬೆಳೆದಿದ್ದ ಬಿದುರಿನ ಮರಗಳಿರುವ ಆ ಕಾಡಿಗೆ ಮಧುವನ ಎಂದು ಹೆಸರು.
ಅದರಲ್ಲಿ ಒಂದು ಎಳೆಯ ಬಿದುರಿನ ಗಿಡ…ಅವಳ ಹೆಸರು ಕುಳಲಿ… ಬಿದುರಿನ ಕುಳಲಿ!
ಗಾಳಿ ಬೀಸುವಾಗಲೆಲ್ಲ, ಬಳ್ಳಿಯಂತೆ ತಗ್ಗಿ ಬಗ್ಗಿ ರಾಗ ನುಡಿಸುವ ಬಾಲಕಿ ಅವಳು… ಆದರೆ ಆ ವಯಸ್ಸಿನಲ್ಲಿ ಅವಳಿಗೆ ಒಂದು ಕನಸಿತ್ತು.
“ಒಂದು ದಿನ ಈ ಲೋಕವೇ ನನ್ನನ್ನು ಪೂಜಿಸುವಂತೆ ಎತ್ತರಕ್ಕೆ ಬೆಳೆಯುತ್ತೇನೆ” ಎಂದು ತಾಯಿಯ ಬಳಿ ಹೇಳಿದಳು.
“ಬಿಸಿಲಿಗೂ, ಮಳೆಗೂ ಒಣಗಿ ಒಡೆದುಹೋಗುವ ಬರಿಯ ಬಿದುರುಗಳು ನಾವು. ಹೆಚ್ಚೆಂದರೆ, ಒಂದು ಮನೆಗೆ ಮರವಾಗಬಹುದು ಅಥವಾ ಬೆಂಕಿಗೆ ಸೌದೆಯಾಗಬಹುದು. ಅದಕ್ಕಿಂತ ಹೆಚ್ಚಿನ ಕನಸು ಕಾಣಬೇಡ. ನಮ್ಮಿಂದ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ.!” ಎನ್ನುತ್ತಾಳೆ ಅನುಭವಸ್ತೆಯಾದ ಆ ತಾಯಿ.
ಆದರೂ ತನ್ನ ಕನಸು ಫಲಿಸುತ್ತದೆ ಎಂಬ ಅಪಾರ ನಂಬಿಕೆ ಇತ್ತು ಆ ಬಿದುರಿನ ಕುಳಲಿಗೆ.
“ನನ್ನ ಕನಸು ಖಂಡಿತ ಫಲಿಸುತ್ತದೆ “ ಎಂದು ಸದಾ ನಂಬಿಕೆಯಿಂದ ಹೇಳುತ್ತಲೇ ಇರುತ್ತಾಳೆ.
ಇವರು ಮಾತನಾಡುವುದನ್ನೆಲ್ಲಾ ಕೇಳಿಸಿಕೊಳ್ಳುತ್ತಲೇ, ಆ ಬಿದುರಿನ ನೆರಳಿನಲ್ಲಿ ಏನೂ ತಿಳಿಯದಂತೆ ನಗುತ್ತಲೇ ಮಲಗಿರುತ್ತಾನೆ ಮಧುವನದಲ್ಲಿ ಹಸುಗಳನ್ನು ಮೇಯಿಸಲು ಬಂದಿರುವ ಬಾಲಕನಾದ ನಮ್ಮ ಮಾಯಕೃಷ್ಣ.
ಒಂದು ದಿನ, ಬಿದುರಿನ ಕಾಡಿಗೆ ಬಂದ ಕೃಷ್ಣನ ಮುಖದಲ್ಲಿ ಎಂದೂ ಇಲ್ಲದ ಗೊಂದಲ. ಅದನ್ನು ಅವನು ಬೇಕಂತಲೇ ಮುಖದಲ್ಲಿ ತೋರಿದ ಗೊಂದಲ ಎಂದು ಆ ಬಿದುರಿಗೆ ತಿಳಿಯಲಿಲ್ಲಾ!
ಸದಾ ನಗುಮೊಗದೊಂದಿಗೆ ಇರುವ ಕೃಷ್ಣ, ಅಂದು ಮಾತ್ರ ಯಾಕೋ ಬಾಡಿರುವುದನ್ನು ಕಂಡ ಬಿದಿರುಗಳು, ‘ಏನಾಯಿತು ಕೃಷ್ಣ.. ಯಾಕೆ ಚಿಂತಾಗ್ರಸ್ತನಾಗಿರುವೆ?” ಎಂದು ಕೇಳಲು, ಕೃಷ್ಣ, “ಒಂದು ಸಹಾಯ ಬೇಕಾಗಿದೆ. ನಿಮ್ಮ ಬಳಿ ಅದನ್ನು ಕೇಳಲು ಮನಸ್ಸಿಲ್ಲ. ಈ ಹಸುಗಳನ್ನೆಲ್ಲಾ ಹದ್ದುಬದ್ದಿನಲ್ಲಿಟ್ಟುಕೊಳ್ಳಲು ನನಗೆ ಒಂದು ಬಿದುರು ಬೇಕು. ನಿಮ್ಮಲ್ಲಿ ಯಾರಾದರೂ ಅದನ್ನು ನನಗೆ ಕೊಡಲು ಸಾಧ್ಯವೇ?” ಎಂದು ಕೇಳುತ್ತಾನೆ.
ಹಸುಗಳನ್ನು ಹೊಡೆಯುವ ಕೋಲಾಗಿ ನಾವು ಆಗಬೇಕೆ ಎಂದು ಉಳಿದ ಬಿದಿರುಗಳು, ತಮ್ಮಿಂದ ಆಗದು ಎಂದು ನಿರಾಕರಿಸುತ್ತಾರೆ. ತನ್ನಂತಹ ಬಾಲಕ ನೊಂದಿರುವುದನ್ನು ಕಾಣಲು ಸಹಿಸದ ಬಿದಿರಿನ ಕುಳಲಿ ಮಾತ್ರ ‘ನನ್ನನ್ನು ತೆಗೆದುಕೋ ಕೃಷ್ಣ, ಆದರೆ, ನನ್ನನ್ನು ಇಟ್ಟುಕೊಂಡು ಹಸುಗಳನ್ನು ಹೊಡೆಯಬಾರದು’ ಎನ್ನುತ್ತಾಳೆ.
ಕೃಷ್ಣ ಮನಸ್ಸಿನೊಳಗೆ ನಕ್ಕರೂ, ಮುಖದಲ್ಲಿ ಚಿಂತೆಯನ್ನು ವ್ಯಕ್ತಪಡಿಸುತ್ತ, “ಅದಕ್ಕೆ ನಿನ್ನನ್ನು ಕಡಿಯಬೇಕಾಗುತ್ತದಲ್ಲಾ!” ಎಂದು ಮುಂದಿನ ಪ್ರಶ್ನೆಯನ್ನು ಕೇಳುತ್ತಾನೆ.
ಬಿದಿರಿನ ಕುಳಲಿ, “ಬೇರೆ ಮಾರ್ಗ ಏನೂ ಇಲ್ಲ ಎಂದರೆ ಅದಕ್ಕೆ ನಾನು ಸಿದ್ಧ ಕೃಷ್ಣ!” ಎನ್ನುತ್ತಾಳೆ.
ತಾಯಿ ಬಿದಿರಿಗೋ, ತನ್ನ ಮಗಳ ಬದುಕು, ಅವಳ ಕನಸು ವೃಥಾ ಹಾಳಾಗುತ್ತದಲ್ಲಾ ಎಂಬ ಚಿಂತೆ.
ಅವಳು ಕಣ್ಣೀರಿನೊಂದಿಗೆ,”ಬೇಡ, ಬೇಡ..” ಎಂದು ಬೇಡಿಕೊಂಡರೂ ಸ್ವಲ್ಪವೂ ಕೇಳದ ಬಿದಿರಿನ ಕುಳಲಿ….
“ಆಗಲಿ ಕೃಷ್ಣ, ನೀನು ನಿನ್ನ ಕೆಲಸದಲ್ಲಿ ತೊಡಗು!” ಎಂದು ತಲೆಯಾಡಿಸುತ್ತಾಳೆ.
ತಾಯಿ ಬಿದಿರು ಉಳಿದ ಬಿದುರಿನ ಮರಗಳೂ ಕಣ್ಣೀರು ಹಾಕುತ್ತಾ ನೋಡುತ್ತಿರುವಾಗ, ಕೃಷ್ಣ ಆ ಬಿದಿರಿನ ಕುಳಲಿಯನ್ನು ಕಡಿಯುತ್ತಾನೆ. ಹಿಂದೆ ಮುಂದೆ ಕತ್ತರಿಸಿ, ಸೂಕ್ತವಾದ ಭಾಗವನ್ನು ಆರಿಸಿ, ರಂಧ್ರಗಳನ್ನು ಕೊರೆಯುತ್ತಾನೆ. ಅವಳ ತೊಗಟನ್ನು ಕೀಳುತ್ತಾನೆ. ಬೆಂಕಿಯಲ್ಲಿಟ್ಟು ಬೇಯಿಸುತ್ತಾನೆ.
ಅವನ ಪ್ರತಿಯೊಂದು ಕಾರ್ಯದಲ್ಲೂ ನೋವೂ, ಉರಿಯೂ ತಡೆಯಲಾಗದಿದ್ದರೂ ಕುಳಲಿ ಅಳುತ್ತಲೇ ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ.
ಕೊನೆಗೆ ಕೃಷ್ಣ, ಬೆಂಕಿಯಲ್ಲಿ ಕಬ್ಬಿಣದ ಸಲಾಕೆಯನ್ನು ಕೆಂಪಗೆ ಕಾಯಿಸಿ ಬಿದಿರಿನ ದೇಹದಲ್ಲಿ ರಂಧ್ರಗಳನ್ನು ಕೊರೆಯಲು ತೊಡಗುತ್ತಾನೆ.
ಉಳಿದ ಬಿದಿರಿನ ಮರಗಳು, “ಬಾಲಕನಿಗೆ ನೆರವಾಗಲು ತನ್ನನ್ನು ನೀಡುವುದಾಗಿ ಹೇಳಿದ ಈ ಬಿದಿರಿನ ಮಗಳನ್ನು ಎಷ್ಟೊಂದು ಪರೀಕ್ಷಿಸುತ್ತಿದ್ದೀಯಾ ಭಗವಂತನೇ! ನಿನಗೆ ಕರುಣೆಯೇ ಇಲ್ಲವೇ? ಎಂದು ಕಣ್ಣೀರಿಟ್ಟು ಅಳುತ್ತಿದ್ದವು.
ಆದರೆ, ಎಲ್ಲ ನೋವನ್ನೂ, ವೇಧನೆಯನ್ನೂ ಸಹಿಸಿಕೊಂಡ ಬಿದುರಿನ ಕುಳಲಿ ಈಗ ತನ್ನನ್ನು ತಾನೇ ವಿಸ್ಮಯದಿಂದ ನೋಡುಕೊಂಡಳು.
ಈಗ ಕೃಷ್ಣ ಅವಳನ್ನು ನುಡಿಸುತ್ತಾ ಮುಂದೆ ನಡೆಯಲು, ಗೋಕುಲದಲ್ಲಿ ಹಸುಗಳೆಲ್ಲವೂ ಅವನ ಮಂತ್ರದ ಸಂಗೀತಕ್ಕೆ ಇಷ್ಟಪಟ್ಟು, ಮೇಯುತ್ತಾ ಒಟ್ಟಾಗಿ ಅವನನ್ನು ಹಿಂಬಾಲಿಸಿದವು. ಬಿದುರಿನ ಕುಳಲಿಯ ಆಸೆಯಂತೆ ಅವನು ಹಸುಗಳನ್ನು ಹೊಡೆಯಲಿಲ್ಲ. ನಿಜವಾಗಲೂ ಅವಳಿಂದ ಅವುಗಳನ್ನು ಮರುಳು ಮಾಡಿದ ಮಾಯಕೃಷ್ಣ.
ಎಷ್ಟೋ ಬಿದುರುಗಳು ವನದಲ್ಲಿದ್ದಾಗಲೂ, ಉಳಿದವರ ಸುಖಕ್ಕಾಗಿ ತನ್ನ ಸಂತೋಷವನ್ನು ಕಳೆದುಕೊಳ್ಳಲು ಸಿದ್ಧವಾದುದ್ದಲ್ಲದೆ, ಅದರಿಂದ ಉಂಟಾದ ನೋವುಗಳನ್ನೂ ಬಯಸಿ ಒಪ್ಪಿಕೊಂಡಿದ್ದರ ಫಲವಾಗಿಯೇ, ಕೃಷ್ಣನ ಕೈ ಬೆರಳುಗಳಲ್ಲಿ ಎಂದಿಗೂ ಕೊಳಲಾಗಿ .ನಲಿಯುತ್ತಾಳೆ ಈ ಬಿದುರಿನ ಕುಳಲಿ.
ಕೃಷ್ಣ ಎಂದರೆ ರಾಧೆಯೋ, ರುಕ್ಮಣಿಯೋ ನಮ್ಮ ನೆನಪಿಗೆ ಬಾರದೇ, ಕೃಷ್ಣ ಎಂದರೆ ಕೊಳಲು, ಕೊಳಲು ಎಂದರೆ ಕೃಷ್ಣ ಎಂದು ನಾವು ಅಂದುಕೊಳ್ಳುವಂತೆ ತನ್ನ ಪತ್ನಿಯರಿಗೂ ನೀಡದ ಸ್ಥಾನವನ್ನು ಈ ಬಿದುರಿನ ಕುಳಲಿಗೆ ನೀಡಿದನು ಕೃಷ್ಣ.
ನನ್ನ ಪ್ರೀತಿಯ ಮೀನಾಕ್ಷಿ ನೆನಪು ಮಾಡಿದಂತೆ, ಕೊಳಲಿನ ಕಥೆ, ‘ದುಃಖವನ್ನು ಭರಿಸಿದರೆ ದುಃಖವಲ್ಲ, ಉನ್ನತಿ ಖಚಿತ’ ಎಂಬುದನ್ನೂ ಹೇಳಲು, ನನ್ನೊಳಗೆ ತಕ್ಷಣ ಮೂಡಿತು ಈ ಧನುರ್ ಉತ್ಸವ ಎಂಬ ಬರವಣಿಗೆಯ ವೈಭವ.
ನಿರಂತರವಾದ ಕೆಲಸಗಳ ನಡುವೆ ಒಂದೊಂದು ಹಾಡನ್ನೂ ಓದಿ, ರಾತ್ರಿಯೋ, ಹಗಲೋ ಸಮಯ ದೊರಕುವಾಗಲೆಲ್ಲಾ ಗೆಳಯರ ನೆರವಿನಿಂದ ಅದಕ್ಕೆ ತಕ್ಕ ಕಥೆಯನ್ನು ಹುಡುಕಿ, ಆ ಹಾಡಿನೊಳಗೆ ಕಾಣುವ ವೈಜ್ಞಾನ , ವೈದ್ಯಕೀಯ ಸತ್ಯಗಳನ್ನೆಲ್ಲಾ ಸೇರಿಸಿ ಬರೆದು, ಅದನ್ನು ತಿದ್ದಿ, ಮೆರುಗೇರಿಸಿ, ‘ಧನುರ್ ಉತ್ಸವ’ ಎಂದು ತಿಂಗಳ ಮೂವತ್ತು ದಿನವೂ ಆನಂದ ವಿಕಟನ್ ಆನ್ ಲೈನ್-ನಲ್ಲಿ ಪ್ರಕಟವಾಗಿ, ಎಲ್ಲರನ್ನೂ ತಲುಪಿದಾಗ, ಪಟ್ಟ ಎಲ್ಲ ಶ್ರಮಗಳು ಹಾರಿಹೋದವು.
ಬರೆಯುವಾಗ ಸಣ್ಣ ಸಣ್ಣ ವಿಷಯಗಳಾಗಿ ಕಂಡ ಈ ಧನುರ್ ಉತ್ಸವವನ್ನು ಸಂಪೂರ್ಣವಾಗಿ ಓದಿ,
“ಆಹಾ.. ಇದರಲ್ಲಿ ಇಷ್ಟೊಂದು ವಿಷಯಗಳು ಅಡಗಿವೆಯೇ?”
“ಅದ್ಭುತವಾದ ಪ್ರಯತ್ನ…”
“ಆ ಶ್ರೀರಂಗ ನಿನ್ನ ಅಮ್ಮನ ಗರ್ಭದಲ್ಲಿ ನಿನಗೆ ಕೃಪೆ ತೋರಿದ್ದಾನೆ…ಇಲ್ಲದಿದ್ದರೆ ಇಷ್ಟು ಆತ್ಮಾರ್ಥವಾಗಿ ಬರೆಯಲು ಸಾಧ್ಯವಿಲ್ಲ.”
ಎಂದು ಕಲಿತ ಹಿರಿಯರು ಹೇಳಿದ್ದನ್ನು ಕೇಳಲು, ಇಲ್ಲೂ ಒಬ್ಬ ಬಿದಿರನ್ನು ಕೊಳಲು ಮಾಡಿದ್ದಾನೆ ಕೃಷ್ಣ ಎಂಬುದು ತಿಳಿಯಿತು. “ಧನುರ್ ಉತ್ಸವ” ಎಂಬ ಈ ಕೃತಿಯ ಮೂಲಕ.
ಅಮ್ಮನಿಗೆ, ನಾನು ಬರೆದ ಪುಸ್ತಕವನ್ನು ನೋಡಲು ಎಲ್ಲರಿಗಿಂತಲೂ ಹೆಚ್ಚು ಆಸೆ ಇತ್ತು.
“ಪುಸ್ತಕ ಎಲ್ಲ ಬೇಡಾಮ್ಮ!” ಎಂದು ನಾನು ನಿರಾಕರಿಸುತ್ತಾ ಇರಲು, ಒಂದು ದಿನ ಅಮ್ಮ ಕೇಳಿದರು, “ಎಲ್ಲ ದೇವರೂ ತಲೆಯಲ್ಲಿ ಕಿರೀಟ ಧರಿಸಿರುವಾಗ, ಕೃಷ್ಣ ಮಾತ್ರ ಯಾಕೆ ನವಿಲು ಗರಿಯೊಂದಿಗೆ ಇದ್ದಾನೆ ಗೊತ್ತಾ ಸಚಿಯಮ್ಮ?” ಎಂದು!
ಕೇಳಿದಾಗಲೆ ತಿಳಿಯಿತು, ಇಷ್ಟೊಂದು ದಿನ, ಎಷ್ಟೋ ಸಲ ಕೃಷ್ಣನ ಚಿತ್ರಗಳನ್ನು ನೋಡಿದ್ದರೂ ಈ ಪ್ರಶ್ನೆ ನನ್ನೊಳಗೆ ಏಳಲಿಲ್ಲವಲ್ಲಾ ಎಂದು. ಆಸಕ್ತಿಯಿಂದ ಅದಕ್ಕಾದ ಕಾರಣವನ್ನು ನಾನು ಹುಡುಕಲು, ಕೃಷ್ಣ ನವಿಲು ಗರಿಯನ್ನು ಮುಡಿದುಕೊಳ್ಳುವ ಕಥೆಯನ್ನು ಅಮ್ಮನೇ ಹೇಳಿದಳು.
ಅದೇ ಮಧುವನದ ಕಾಡು. ಒಂದು ಸಂಜೆಯ ವೇಳೆಯಲ್ಲಿ ಕೃಷ್ಣ, ಬಿದಿರಿನ ಕೊಳಲನ್ನು ಮೋಹನ ನುಡಿಸುತ್ತಿದ್ದಾಗ, ಆ ರಾಗಕ್ಕೆ ಇಡೀ ವನವೇ ಮರುಳಾಗಿತ್ತು.
ಅವನ ಕೊಳಲಿನ ಸಂಗೀತ, ಆ ವನದ ಜೀವರಾಶಿಗಳನ್ನು, ಬಿದಿರಿನ ಮರದ ಎಲೆಗಳನ್ನು, ಹರಿಯುತ್ತಿದ್ದ ಯಮುನೆ ನದಿಯನ್ನು ಸಹ ಸ್ತಬ್ಧಗೊಳಿಸಿತು.
ಆಗ ತನ್ನ ವರ್ಣರಂಜಿತ ಗರಿಗಳನ್ನು ಬಿರಿದುಕೊಂಡು ಹಾರಿ ಬಂದ ನವಿಲುಗಳ ರಾಜ ‘ಎಳಿಲನ್’ (ಸುಂದರಾಂಗ) ತನ್ನನ್ನು ಮರೆತು ಕುಣಿಯಲು ತೊಡಗಿದ. ಅವನನ್ನು ಅನುಕರಿಸುತ್ತಾ ಒಟ್ಟು ನವಿಲಿನ ಗುಂಪೇ ಕೃಷ್ಣನ ಸಂಗೀತಕ್ಕೆ ಅವನ ಮುಂದೆ ನಲಿದು ಕುಣಿಯುತ್ತಿದ್ದವು.
ಕೃಷ್ಣ ನುಡಿಸಲು, ಅದಕ್ಕೆ ತಕ್ಕಂತೆ ಎಳಿಲನ್ ಮತ್ತು ಉಳಿದ ನವಿಲುಗಳು ಗರಿ ಬಿಚ್ಚಿ ನಾಟ್ಯವಾಡಲು, ಆ ಕುಳಲಿ ಬಿದಿರಿನ ನಾಧದಲ್ಲಿ ಕಾಲ ಸ್ಥಗ್ದವಾಯಿತು.
ಸಂಜೆ ರಾತ್ರಿಯಾಯಿತು….
ರಾತ್ರಿ ಹಗಲಾಯಿತು….
ದಿನಗಳು ವಾರವಾದವು
ಆದರೆ ನೃತ್ಯವೂ ಸಂಗೀತವೂ ಅಲ್ಲಿ ಮುಂದುವರೆಯುತ್ತಿತ್ತು.
ಗೋಕುಲ ಸಂಪೂರ್ಣವಾಗಿ ಸಂಗೀತದಲ್ಲಿ ಮುಳುಗಿತು. ಎಳಿಲನನ್ನೂ ನವಿಲಿನ ಗುಂಪನ್ನೂ ಎಲ್ಲರೂ ಮೆಚ್ಚಿ ಕೊಂಡಾಡುತ್ತಿದ್ದರು.
ಕೊನೆಗೆ ಎಳಿಲನ್ ತನ್ನ ನೀಳವಾದ ಕುತ್ತಿಗೆಯನ್ನು ತಗ್ಗಿಸಿ, ಕೃಷ್ಣನ ಪಾದಗಳಿಗೆರಗಿ, “ಕೃಷ್ಣ…ಕಾರ್ಮುಗಿಲ ಬಣ್ಣದವನೇ, ನಿನ್ನ ಸಂಗೀತ ನಮ್ಮೆಲ್ಲರನ್ನೂ ಇಂಪಾದ ಲೋಕಕ್ಕೆ ಕೊಂಡೊಯ್ಯಿತು. ನಮ್ಮ ಉಡುಗೊರೆಯಾಗಿ ಇದನ್ನು ಸ್ವೀಕರಿಸಿಕೊಳ್ಳುವಂತವನಾಗು!” ಎಂದು ತನ್ನ ಗರಿಯಿಂದ ಒಂದು ಅಂದವಾದ ಗರಿಯನ್ನು ತೆಗೆದು ನೀಡಲು, ಹೃದಯ ತುಂಬಿ ಒಪ್ಪಿಕೊಳ್ಳುತ್ತಾನೆ ಕೃಷ್ಣ. ವರ್ಣ ರಂಜಿತವಾದ, ನವಿರಾದ, ಆ ಅಂದದ ಗರಿ ತನ್ನ ತಲೆಯ ಕಿರೀಟದಲ್ಲಿ ಮುಡಿದುಕೊಳ್ಳುತ್ತಾನೆ ಕೃಷ್ಣ.
ಬದುಕು ವರ್ಣ ರಂಜಿತವಾದದ್ದು… ಅದರಲ್ಲಿ ಉಂಟಾಗುವ ಸುಖ ದುಃಖಗಳು, ನವಿಲು ಗರಿಯಂತೆ ಮುಡಿದುಕೊಂಡರೆ ಮನಸ್ಸಿಗೆ ಭಾರವಾಗುದಿಲ್ಲ. ಮಾನವ ಜೀವನ ಎಂದಿಗೂ ಹೊರೆಯಾಗಿರುವುದಿಲ್ಲ!” ಎಂದು ಅಮ್ಮ ಕಥೆಯನ್ನು ಹೇಳಿ ಮುಗಿಸಲು, ಇಷ್ಟೆಲ್ಲ ತಿಳಿದಿದ್ದರೂ ನವಿಲು ಗರಿಯ ಬಗ್ಗೆ ನನ್ನ ಬಳಿ ಯಾಕೆ ಕೇಳಿದರು ಎಂದು ಅರ್ಥವಾಗದೆ ಅಮ್ಮನ ಬಳಿ ಕೇಳಿದೆ,
ಅಮ್ಮ ನಗುತ್ತಲೇ ಹೇಳಿದರು,
“ನೀನು ಡಾಕ್ಟರ್ ಆಗಬೇಕು ಅಂತ ನಿನ್ನ ಅಪ್ಪ ಆಸೆ ಪಟ್ಟರಮ್ಮ… ನಿನ್ನ ಅಜ್ಜಿ ಅದನ್ನು ಸಾಧಿಸಿ ತೋರಿಸಿದರು… ಡಾಕ್ಟರ್ ಎಂಬ ಕಿರೀಟ ತೊಟ್ಟು ನೀನು ಬಂದ ಅಂದೆ ನಾವು ಬದುಕಿದ ಬದುಕಿಗೆ ಒಂದು ಅರ್ಥ ದೊರಕಿತು. ಆದರೆ, ಎಷ್ಟೋ ಡಾಕ್ಟರುಗಳು ಇದ್ದರೂ ನನ್ನ ಮಗಳಿಗೆ ಬರೆಯಲೂ ಸಹ ಬರುತ್ತದೆ ಎಂಬ ನವಿಲುಗರಿಯನ್ನು ಮುಡಿದು ನೋಡಬೇಕು. ಇನ್ನೂ ಮುಂದೆ ಬರುವ ಕಾಲದಲ್ಲಿ ನೀನು ಬಹಳಷ್ಟು ಪುಸ್ತಕಗಳನ್ನು ಬರೆಯಬಹುದು…. ಆದರೆ, ನನಗೆ ಈ ಪುಸ್ತಕವೇ ನಿನ್ನ ಮೊದಲ ಕೃತಿಯಾಗಿ ಬರಬೇಕು. ಅದಕ್ಕೆ ಆ ಕಾರಮಡೈ ಆರಂಗನಾಥ, ನಿನ್ನೊಂದಿಗೆ ಇದ್ದು ಕೃಪೆ ನೀಡಲಿ…” ಎಂದರು.
ವೈದ್ಯಕೀಯ ವೃತ್ತಿಯಲ್ಲೂ, ಬರವಣಿಗೆಯ ಕೆಲಸದಲ್ಲೂ ತನ್ನ ಪ್ರೀತಿಯ ಮಗಳು ಉನ್ನತಿ ಪಡೆಯಲು ಬಹಳ ತಪಸ್ಸು ಮಾಡಿದವಳು, ಇಂದು ಅವಳ ಮಗಳ ಕನಸು ನೆನಸಾಗುವಾಗ, ದೇವರಾಗಿ, ಆ ದೇವರ ಜತೆ ನಿಂತು ಹೃತ್ಪೂರ್ವಕವಾಗಿ ಆಶೀರ್ವದಿಸುತ್ತಿದ್ದಾಳೆ ಎಂದು ಮನಸಾರೆ ನಂಬುತ್ತೇನೆ.
ನನ್ನ ಜತೆ ಪಯಣಿಸಿದ ಎಲ್ಲರಿಗೂ ಕೋಟಿ ನಮನಗಳು!