ಸಾವು ಕಲಿಸುವ ಬದುಕಿನ 7 ಸರಳ ಪಾಠಗಳು

ಸಾವಿಗಿಂತ ದೊಡ್ಡ ಶಿಕ್ಷಕ ಮತ್ತೊಂದಿಲ್ಲ. ಮಹಾಭಾರತದಲ್ಲಿ ಒಂದು ಮಾತು ಬರುತ್ತದೆ. “ದಿನದಿನವೂ ಜನ ಸಾಯುವುದನ್ನು ನೋಡಿದರೂ ತಮಗೆ ಸಾವೇ ಇಲ್ಲ ಅನ್ನುವಂತೆ ಆಡುವವರನ್ನು ನೋಡುವುದಕ್ಕಿಂತ ದೊಡ್ಡ ಆಶ್ಚರ್ಯವೇನಿದೆ?” ಎಂದು.

ಸಾವು ನಮ್ಮನ್ನು ವಿನಮ್ರರನ್ನಾಗಿಸಬೇಕು. ನಾವು ಬದುಕನ್ನು ಪ್ರೀತಿಸುವಂತೆ ಮಾಡಬೇಕು. ಆದರೆ ನಮ್ಮ ವರ್ತನೆ ಸಂಪೂರ್ಣ ವ್ಯತಿರಿಕ್ತ!
ಈ ನಿಟ್ಟಿನಲ್ಲಿ ನಾವು ಸಾವಿನಿಂದ ಕಲಿಯಬಹುದಾದ 7 ಸರಳ ಪಾಠಗಳು ಇಲ್ಲಿವೆ:
ಪ್ರೇಮದ ಶಕ್ತಿ
ಸಾವು ಎಲ್ಲದರ ಅಂತ್ಯ. ನಾವು ಬದುಕಿಡೀ ಮತ್ತೊಬ್ಬರೊಡನೆ ಜಿದ್ದಿಗೆ ಬಿದ್ದವರಂತೆ ವರ್ತಿಸುತ್ತೇವೆ. ಸ್ಪರ್ಧೆಗಿಳಿಯುತ್ತೇವೆ. ಇದು ಅತಿರೇಕಕ್ಕೆ ಹೋದಾಗ ಸಹಜೀವಿಗಳನ್ನು ದ್ವೇಷಿಸತೊಡಗುತ್ತೇವೆ. ದ್ವೇಷ ಬದುಕನ್ನೇ ತಿಂದುಹಾಕುತ್ತದೆ. ಸಾಯುವ ಘಳಿಗೆಯಲ್ಲಿ ನಮ್ಮನ್ನು ಕಾಡುವುದು ಈ ತಿಂದುಹೋದ ಬದುಕು. ನಾವು ಬದುಕಿಡೀ ಅಲಕ್ಷಿಸುವ ಪ್ರೇಮದ ಶಕ್ತಿ ಅರಿವಾಗುವುದೇ ಈ ಘಳಿಗೆಯಲ್ಲಿ.
ಅಂಗೀಕಾರ
ನಮ್ಮ ಬಹುದೊಡ್ಡ ದೌರ್ಬಲ್ಯವೆಂದರೆ, ಅದು ನಿರಾಕರಣೆ. ಬದುಕಿನ ಆತ್ಯಂತಿಕ ಸತ್ಯಗಳನ್ನೇ ನಾವು ನಿರಾಕರಿಸಿಬಿಡುತ್ತೇವೆ. ಆಸೆ ದುಃಖಕ್ಕೆ ಮೂಲವೆಂದು ತಿಳಿದಿರುತ್ತದೆ. ಅದನ್ನು ಅಂಗೀಕರಿಸಲು ನಾವು ಇಷ್ಟಪಡುವುದಿಲ್ಲ. ಅತಿಯಾಸೆ ಪಟ್ಟು ದುಃಖವನ್ನು ಆಹ್ವಾನಿಸುತ್ತೇವೆ. ಅಂತಿಮ ಕ್ಷಣಗಳಲ್ಲೂ ನಾವು ಕೈಗೂಡದ ನೂರಾರು ಆಸೆಗಳನ್ನು ನೆನೆದು ದುಃಖಿಸುತ್ತಲೇ ಇರುತ್ತೇವೆ
ಸಂಯಮ
ಸಂಯಮ ಕಳೆದುಕೊಳ್ಳುವ ವ್ಯಕ್ತಿ ಜೀವಿಸುತ್ತಾ ಇರುವುದಿಲ್ಲ. ಪ್ರತಿಕ್ರಿಯಿಸುತ್ತಾ ಇರುವುದೇ ಅವರ ಬದುಕಾಗಿಬಿಟ್ಟಿರುತ್ತದೆ. ಆಲಿಸುವ, ನೋಡುವ, ಪರಿಶೀಲಿಸುವ ವ್ಯವಧಾನವಿಲ್ಲದೆ, ಪ್ರತಿಕ್ರಿಯೆಯನ್ನೆ ಚಿಂತಿಸುತ್ತಾ ಕ್ರಿಯೆಯಿಂದಲೂ ವಂಚಿತರಾಗುತ್ತೇವೆ. ಮರಣಶಯ್ಯೆಯ ಮೇಲೆ ಮಲಗಿ ಸಂಪೂರ್ಣ ನಿಷ್ಕ್ರಿಯರಾಗುವ ಹೊತ್ತಲ್ಲಿ ನಮಗೆ ಕ್ರಿಯೆಯ ಮಹತ್ವ ತಿಳಿಯುತ್ತದೆ; ಸಂಯಮದ ಅಗತ್ಯವೂ.
ಬದಲಾವಣೆ
ಸೃಷ್ಟಿಯಲ್ಲಿ ಬದಲಾಗದ ಪ್ರಕ್ರಿಯೆ ಯಾವುದಾದರೂ ಇದ್ದರೆ, ಅದು ‘ಬದಲಾವಣೆ’ಯೊಂದೇ. ಕಾಲಕ್ಕೆ ತಕ್ಕಂತೆ ನಮ್ಮ ದೇಹ, ಅಂಗಾಗಂಗಳು ಬದಲಾದರೂ ನಮ್ಮ ಆಲೋಚನಕ್ರಮ ಬದಲಾಗದೆ ಹೋದರೆ ನಷ್ಟ ನಮಗೇ. ಕಾಲಕ್ಕೆ ತಕ್ಕಂತೆ ಚಿಂತನೆಯಲ್ಲೂ ಬದಲಾವಣೆ ತಂದುಕೊಂಡರೆ, ಸಾವನ್ನು ಸ್ವೀಕರಿಸುವುದು ಸುಲಭ, ಸಂತಸದಾಯಕ ಕೂಡಾ!
ಜಾಗೃತಿ
ಎಚ್ಚರ ಕಳೆದುಕೊಂಡವರಿಗೆ ಬದುಕು ಒಂದು ಸುದೀರ್ಘ ನಿದ್ರೆ. ಯಾರು ಜಾಗೃತರಾಗಿರುತ್ತಾರೋ ಅವರು ಮಾತ್ರ ನಿಜವಾಗಿಯೂ ಜೀವಿಸುತ್ತಾ ಇರುತ್ತಾರೆ. ಚಿರನಿದ್ರೆಗೆ ಜಾರುವ ಹೊತ್ತಲ್ಲಿ ನಾವು ಎಚ್ಚರವಿಲ್ಲದ ನಿದ್ರೆಯಲ್ಲಿದ್ದರೆ ಪಡೆದುಬಂದ ಹುಟ್ಟಿಗಾದರೂ ಏನರ್ಥ!? ಬದುಕಿನ ದಣಿವಿನ ಸಂತಸವನ್ನು ಅನುಭವಿಸಲಿಕ್ಕಾದರೂ ಜಾಗೃತರಾಗಿರಬೇಕು. ನಿದ್ರೆಗೆ ಜಾರುವ ನೆಮ್ಮದಿಗಾದರೂ ನಾವು ಬದುಕಿರಬೇಕು.
ವರ್ತಮಾನದ ಪ್ರಾಮುಖ್ಯ
“ಭೂತದ ಚಿಂತೆ ಬೇಡ, ಭವಿಷ್ಯದ ಆಲೋಚನೆ ಬೇಡ, ವರ್ತಮಾನದಲ್ಲಿ ನೆಲೆಸು” ಅನ್ನುತ್ತಾನೆ ಬುದ್ಧ. ಆದರೆ ನಾವು ನಮ್ಮ ಈ ದಿನವನ್ನು ನೆನ್ನೆ ಮತ್ತು ನಾಳೆಗಳ ಪ್ರಭಾವದಲ್ಲಿ ಜೀವಿಸುತ್ತೇವೆ. ಸಾವನ್ನು ನೆನೆಯುತ್ತಲೇ, ಅದಕ್ಕೆ ಅಂಜುತ್ತಲೇ ಬದುಕುವ ನಾವು, ಅದಾಗಲೇ ಆಲೋಚನೆಗಳಲ್ಲಿ ಸತ್ತುಹೋಗಿರುತ್ತೇವೆ! ನಿಜವಾದ ಸಾವು ನಮಗೆ ವರ್ತಮಾನದಲ್ಲಿ ಬದುಕುವುದರ ಪ್ರಾಮುಖ್ಯವನ್ನು ಮನದಟ್ಟು ಮಾಡಿಸುತ್ತದೆ.
ಒಡನಾಟ
ಸಾಯುವಾಗ ನಾವೆಲ್ಲರೂ ಒಂಟಿ. ಹುಟ್ಟುವಾಗಲಾದರೂ ಒಂದು ಜೀವಕ್ಕೆ ಹೊಕ್ಕುಳಬಳ್ಳಿಯಲ್ಲಿ ಅಂಟಿಕೊಂಡಿರುತ್ತೇವೆ. ಸಾಯುವಾಗ ನಮ್ಮ ಜೊತೆ ಯಾರೂ ಇರುವುದಿಲ್ಲ. ಆದ್ದರಿಂದ, ಇರುವಷ್ಟು ದಿನ ಒಂಟಿತನಕ್ಕೆ ಅಂಟಿಕೊಳ್ಳದೆ, ಒಡನಾಡಿಗಳ ಜೊತೆ ಸಂತಸದಿಂದ ಇರಬೇಕಾದುದು ಮುಖ್ಯ.

Leave a Reply