ಭಗವದ್ಗೀತೆ, ಭಾಗವತಗಳಿಂದಾಯ್ದ ಕೆಲವು ‘ಕೃಷ್ಣ ಸೂಕ್ತಿ’ಗಳು ಇಲ್ಲಿವೆ…
ಜನನ ಮರಣಗಳನ್ನು ದಾಟಿ ಅಮೃತತ್ವದ ದಡವನ್ನು ಸೇರುವುದೇ ಇಹಜೀವನದ ಗುರಿ.
~
ರಾಜ್ಯವೇ ಮೊದಲಾದ ಬಾಹ್ಯ ವಸ್ತುಗಳನ್ನು ತ್ಯಜಿಸುವುದರಿಂದ ಮೋಕ್ಷವು ಲಭಿಸಲಾರದು; ಇಂದ್ರಿಯಸುಖವನ್ನು ತಣಿಸುವ ವಿಷಯಗಳನ್ನು ತ್ಯಜಿಸುವುದರಿಂದ ಅದರ ಲಾಭವುಂಟಾಗುವುದು.
~
ಮಾನವ ದೇಹವು ದೋಣಿ ಇದ್ದಂತೆ. ಜನನ ಮರಣವೆಂಬ ಸಾಗರವನ್ನು ದಾಟಿಸಿ ಅಮೃತತ್ವದ ದಡವನ್ನು ತಲುಪಿಸುವುದೇ ಅದರ ಮೊದಲನೆಯ ಹಾಗೂ ಅತ್ಯತ್ತಮವಾದ ಉಪಯೋಗ.
~
ಗುರು ಸಮರ್ಥನಾದ ಅಂಬಿಗ; ಭಗವತ್ ಕೃಪೆ ಸಹಕಾರಿಯಾದ ಗಾಳಿ. ಇವೆರಡೂ ಇರುವಾಗ ಮನುಷ್ಯನು ಸಂಸಾರ ಸಾಗರವನ್ನು ದಾಟಲು ಯತ್ನಿಸದಿದ್ದರೆ, ಅವನು ಆಧ್ಯಾತ್ಮಿಕವಾಗಿ ಸತ್ತಂತೆ.
~
ಆಶೆಯಿಲ್ಲದಿರುವುದೇ ಅತ್ಯುತ್ತಮವಾದ ಗುಣ. ಆದ್ದರಿಂದ ಆಶಾರಹಿತನಾದವನೇ ಧನ್ಯನು.
~
ಸತ್ಯಕ್ಕೆ ಅನೇಕ ದೃಷ್ಟಿಕೋನಗಳಿವೆ. ಅನಂತ ಸತ್ಯ ಅನಂತ ರೀತಿಯಲ್ಲಿ ವ್ಯಕ್ತವಾಗುವುದು. ಋಷಿಗಳು ಒಂದೇ ಸತ್ಯವನ್ನು ಹಲವು ರೀತಿಯಲ್ಲಿ ಹೇಳುವರು.
~
ಅತ್ಯಂತ ಉತ್ತಮವಾದುದು ಬೇಕಿದ್ದರೆ ನಿಮ್ಮಲ್ಲಿ ಸಮತ್ವವಿರಬೇಕು. ಅತ್ಯಂತ ವಿರುದ್ಧವಾದ ಸನ್ನಿವೇಶ ಎದುರಾದರೂ ನಿಮ್ಮ ಸಮತೋಲನ ಕಾಪಾಡಿಕೊಳ್ಳಿ. ದ್ವೇಷಕ್ಕೆ ಪ್ರತಿಯಾಗಿ ದ್ವೇಷವನ್ನು, ಹಿಂಸೆಗೆ ಪ್ರತಿಯಾಗಿ ಹಿಂಸೆಯನ್ನು ಮಾಡದಿರಿ. ಅತ್ಯುತ್ತಮವಾದುದನ್ನೇ ಬಯಸುತ್ತಾ ನೀವು ಕೆಡುಕು ಹಾಗೂ ಅಜ್ಞಾನದಿಂದ ಮುಕ್ತರಾಗಲು ಪ್ರಯತ್ನಿಸಬೇಕು.
~
ಏಕಾಂತವನ್ನು ಪ್ರೀತಿಸಲು ಕಲಿ. ಸದಾ ಜಾಗೃತವಾಗಿರು.